ಟೊಯೋಟಾ, ಪ್ಯಾನಾಸೋನಿಕ್, ಮಿತ್ಸುಬಿಷಿ ಸೇರಿದಂತೆ ಪ್ರಮುಖ ಕಂಪನಿಗಳೊಂದಿಗೆ ಹೂಡಿಕೆ ಮಾತುಕತೆ; 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ
ಬೆಂಗಳೂರು: ಕರ್ನಾಟಕದಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವುದು ಹಾಗೂ ಬೆಂಗಳೂರಿನ ನಗರಾಭಿವೃದ್ಧಿಗೆ ಜಾಗತಿಕ ಮಟ್ಟದ ಯೋಜನಾ ಮಾದರಿಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 23ರಿಂದ 25ರವರೆಗೆ ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಮಟ್ಟದ ನಿಯೋಗ ಜಪಾನ್‌ಗೆ ತೆರಳಲಿದ್ದು, ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು, ಜಪಾನ್‌ನ ಪ್ರಮುಖ ಉದ್ಯಮಗಳೊಂದಿಗೆ ಹೂಡಿಕೆ ಸಂಬಂಧಗಳನ್ನು ಬಲಪಡಿಸುವುದು ಹಾಗೂ ಅಲ್ಲಿನ ಸುಧಾರಿತ ನಗರಾಭಿವೃದ್ಧಿ ವ್ಯವಸ್ಥೆಗಳನ್ನು ಅಧ್ಯಯನ ಮಾಡುವುದು ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ.

ನವೆಂಬರ್ 23ರಂದು ನಗೋಯಾ, ನವೆಂಬರ್ 24ರಂದು ಒಸಾಕಾ ಹಾಗೂ ನವೆಂಬರ್ 25ರಂದು ಟೋಕಿಯೊದಲ್ಲಿ ಮುಖ್ಯಮಂತ್ರಿ ವಿವಿಧ ಕಾರ್ಯಕ್ರಮಗಳು ಮತ್ತು ಮಹತ್ವದ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಯೋಗದಲ್ಲಿ ಜಪಾನ್‌ನ ಪ್ರಮುಖ ಉದ್ಯಮ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಹೂಡಿಕೆ ಕುರಿತ ಚರ್ಚೆ ನಡೆಯಲಿದೆ. ಮತ್ತೊಂದೆಡೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳ ತಂಡವು ಜಪಾನ್‌ನ ನಗರ ಯೋಜನೆ, ಸಾರಿಗೆ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರ ನಗರಾಭಿವೃದ್ಧಿ ಯೋಜನೆಗಳನ್ನು ಅಧ್ಯಯನ ಮಾಡಲಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಮುಖ್ಯಮಂತ್ರಿಗಳೊಂದಿಗೆ ಪ್ರವಾಸದಲ್ಲಿ ಭಾಗವಹಿಸಲಿದ್ದು, ಕೈಗಾರಿಕಾ ವಲಯದ ಸಭೆಗಳನ್ನು ಮುನ್ನಡೆಸಲಿದ್ದಾರೆ. ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಕರ್ನಾಟಕದ ಹೂಡಿಕೆ ಆಕರ್ಷಣಾ ಕಾರ್ಯಕ್ರಮಗಳ ನೇತೃತ್ವವನ್ನೂ ವಹಿಸಲಿದ್ದಾರೆ.
ನಿಯೋಗದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಹಾಗೂ ಇನ್ವೆಸ್ಟ್ ಕರ್ನಾಟಕ ಫೋರಂನ ಸಿಇಒ ಖುಷ್ಬೂ ಗೋಯೆಲ್ ಚೌಧರಿ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ-1 ಯತೀಶ್ ಆರ್. ಸೇರಿದಂತೆ ಮುಖ್ಯಮಂತ್ರಿಗಳ ಕಚೇರಿ, ಜಿಬಿಎ ಹಾಗೂ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಜಪಾನ್ ಕಂಪನಿಗಳಿಂದ ಕರ್ನಾಟಕದಲ್ಲಿ ಹೂಡಿಕೆಗೆ ಆಹ್ವಾನ
ಜಪಾನ್‌ನ ಪ್ರಮುಖ ಕೈಗಾರಿಕಾ ಸಂಸ್ಥೆಗಳೊಂದಿಗೆ ನೇರ ಮಾತುಕತೆ ನಡೆಸುವ ಮೂಲಕ ಕರ್ನಾಟಕದಲ್ಲಿ ಹೊಸ ಹೂಡಿಕೆ ಅವಕಾಶಗಳನ್ನು ಪರಿಚಯಿಸಲು ಸರ್ಕಾರ ಉದ್ದೇಶಿಸಿದೆ. ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಇಲಾಖೆಯ ನಿಯೋಗವು ಟೊಯೋಟಾ, ಪ್ಯಾನಾಸೋನಿಕ್ ಆಟೋಮೋಟಿವ್ ಸಿಸ್ಟಮ್ಸ್, ಮಿತ್ಸುಬಿಷಿ ಕೆಮಿಕಲ್ ಗ್ರೂಪ್, ಟಕೆಡಾ ಫಾರ್ಮಾಸ್ಯುಟಿಕಲ್ಸ್, ಯೊಕೊಗಾವಾ ಎಲೆಕ್ಟ್ರಿಕ್ ಮತ್ತು ಸುಮಿಟೊಮೊ ಕಾರ್ಪೊರೇಷನ್ ಸೇರಿದಂತೆ ಪ್ರಮುಖ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳನ್ನು ಭೇಟಿ ಮಾಡಲಿದೆ.
ವಾಹನ ಉತ್ಪಾದನೆ, ವಿದ್ಯುತ್ ವಾಹನಗಳ ಬಿಡಿಭಾಗಗಳು, ವಿಶೇಷ ರಾಸಾಯನಿಕಗಳು, ಸುಧಾರಿತ ಸಾಮಗ್ರಿಗಳು, ಔಷಧ ಉತ್ಪಾದನೆ, ಕೈಗಾರಿಕಾ ಸ್ವಯಂಚಾಲಿತ ತಂತ್ರಜ್ಞಾನ ಹಾಗೂ ಉತ್ಪಾದನಾ ವಲಯಗಳಲ್ಲಿ ಹೂಡಿಕೆ ಸಾಧ್ಯತೆಗಳ ಕುರಿತು ಚರ್ಚೆ ನಡೆಯಲಿದೆ.
ಈ ಸಭೆಗಳ ಮೂಲಕ ಕರ್ನಾಟಕದ ಕೈಗಾರಿಕಾ ಸಾಮರ್ಥ್ಯ, ಸುಧಾರಿತ ಮೂಲಸೌಕರ್ಯ, ನುರಿತ ಮಾನವ ಸಂಪನ್ಮೂಲ ಹಾಗೂ ಹೂಡಿಕೆ ಸ್ನೇಹಿ ನೀತಿಗಳನ್ನು ಜಪಾನ್ ಉದ್ಯಮಿಗಳಿಗೆ ಪರಿಚಯಿಸಲಾಗುವುದು. ಅಲ್ಲದೆ, 2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ಜಾಗತಿಕ ಹೂಡಿಕೆದಾರರ ಸಮಾವೇಶ-2027’ಕ್ಕೆ ಪ್ರತಿಯೊಂದು ಕಂಪನಿಯ ಪ್ರಮುಖ ಪ್ರತಿನಿಧಿಗಳಿಗೂ ಅಧಿಕೃತ ಆಹ್ವಾನ ನೀಡಲಾಗುವುದು.
ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಕೈಗಾರಿಕಾ ನೀತಿಗಳು, ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ನೀತಿ, ಹಿಂದುಳಿದ ಹಾಗೂ ಆದ್ಯತಾ ತಾಲ್ಲೂಕುಗಳಲ್ಲಿ ಹೂಡಿಕೆ ಮಾಡುವವರಿಗೆ ಶೇ.20ರವರೆಗೆ ಹೆಚ್ಚುವರಿ ಬಂಡವಾಳ ಸಬ್ಸಿಡಿ ಸೇರಿದಂತೆ ವಿವಿಧ ಪ್ರೋತ್ಸಾಹಕ ಕ್ರಮಗಳನ್ನು ವಿವರಿಸಲಾಗುವುದು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ರೂಪಿಸಿರುವ ಡಿಜಿಟಲ್ ಇಂಡಸ್ಟ್ರಿಯಲ್ ಲ್ಯಾಂಡ್ ಬ್ಯಾಂಕ್ ಹಾಗೂ ಹೂಡಿಕೆ ಪ್ರಸ್ತಾವನೆಗಳಿಗೆ ಏಕಗವಾಕ್ಷಿ ವ್ಯವಸ್ಥೆಯ ಬಗ್ಗೆಯೂ ಉದ್ಯಮಿಗಳಿಗೆ ಮಾಹಿತಿ ನೀಡಲಾಗುತ್ತದೆ. ಜಪಾನ್ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಅಗತ್ಯವಿರುವ ಸಾಂಸ್ಥಿಕ ಸಹಕಾರ ಮತ್ತು ಬೆಂಬಲವನ್ನು ಬಲಪಡಿಸುವ ಕುರಿತು ಜಪಾನ್ ಎಕ್ಸ್‌ಟರ್ನಲ್ ಟ್ರೇಡ್ ಆರ್ಗನೈಸೇಷನ್ (ಜೆಟ್ರೋ) ಕಾರ್ಯನಿರ್ವಾಹಕ ಉಪಾಧ್ಯಕ್ಷರೊಂದಿಗೂ ಸಭೆ ನಡೆಸಲಾಗುವುದು.
ಬೆಂಗಳೂರು ಅಭಿವೃದ್ಧಿಗೆ ಜಪಾನ್ ನಗರಗಳ ಮಾದರಿ ಅಧ್ಯಯನ
ಬೆಂಗಳೂರು ಸೇರಿದಂತೆ ಕರ್ನಾಟಕದ ವೇಗವಾಗಿ ಬೆಳೆಯುತ್ತಿರುವ ನಗರಗಳ ಭವಿಷ್ಯದ ಅಭಿವೃದ್ಧಿಗೆ ಜಪಾನ್‌ನ ನಗರ ಯೋಜನಾ ಮಾದರಿಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳ ಕುರಿತು ನಿಯೋಗ ಅಧ್ಯಯನ ನಡೆಸಲಿದೆ.
ಹೆಚ್ಚಿನ ಜನಸಾಂದ್ರತೆಯ ನಡುವೆಯೂ ಸುಸಜ್ಜಿತ ಸಾರಿಗೆ ವ್ಯವಸ್ಥೆ, ವೈಜ್ಞಾನಿಕ ನಗರ ಯೋಜನೆ, ತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆ ಹಾಗೂ ಆಧುನಿಕ ಮೂಲಸೌಕರ್ಯವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಜಪಾನ್ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಒಸಾಕಾ ಮತ್ತು ಟೋಕಿಯೊ ನಗರಗಳ ಅಭಿವೃದ್ಧಿ ಮಾದರಿಗಳನ್ನು ನೇರವಾಗಿ ವೀಕ್ಷಿಸಿ, ಬೆಂಗಳೂರಿನ ಅಗತ್ಯಗಳಿಗೆ ಅನುಗುಣವಾಗಿ ಅನುಸರಿಸಬಹುದಾದ ಯೋಜನೆಗಳನ್ನು ಗುರುತಿಸುವುದು ನಿಯೋಗದ ಉದ್ದೇಶವಾಗಿದೆ.
ನಗರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು, ತ್ಯಾಜ್ಯದಿಂದ ವಿದ್ಯುತ್ ಮತ್ತು ಇಂಧನ ಉತ್ಪಾದನೆ, ಸಮಗ್ರ ಸಾರಿಗೆ ವ್ಯವಸ್ಥೆ, ವಾಹನ ಸಂಚಾರ ನಿರ್ವಹಣೆ, ನಗರ ಪುನರಾಭಿವೃದ್ಧಿ, ಆಧುನಿಕ ವಾಸ್ತುಶಿಲ್ಪ ಹಾಗೂ ಹಸಿರು ಪ್ರದೇಶಗಳ ಸಂರಕ್ಷಣೆ ಸೇರಿದಂತೆ ಹಲವು ವಿಷಯಗಳ ಕುರಿತು ಅಧ್ಯಯನ ನಡೆಯಲಿದೆ.
ವಿಶ್ವದ ಪ್ರಮುಖ ಮಹಾನಗರಗಳಲ್ಲಿ ಒಂದಾಗಿರುವ ಟೋಕಿಯೊ, ಸಮಗ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ರೈಲು ನಿಲ್ದಾಣಗಳನ್ನು ಕೇಂದ್ರವಾಗಿಟ್ಟುಕೊಂಡ ನಗರ ಪುನರಾಭಿವೃದ್ಧಿಗೆ ಮಾದರಿಯಾಗಿದೆ. ಅದೇ ರೀತಿ, ಜಪಾನ್‌ನ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರವಾಗಿರುವ ಒಸಾಕಾ ನಗರವು ಬೃಹತ್ ಪ್ರಮಾಣದ ನಗರ ನವೀಕರಣ ಹಾಗೂ ಮಹಾನಗರ ಯೋಜನೆಗಳಲ್ಲಿ ಗಮನಾರ್ಹ ಅನುಭವ ಹೊಂದಿದೆ. ಈ ನಗರಗಳ ಅಭಿವೃದ್ಧಿ ಕಾರ್ಯವೈಖರಿ ಬೆಂಗಳೂರಿನ ಭವಿಷ್ಯದ ಯೋಜನೆಗಳಿಗೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಇದೆ.
ಟೋಕಿಯೊ ಮಿಡ್‌ಟೌನ್ ಯೋಜನೆ ವೀಕ್ಷಣೆ
ಜಪಾನ್‌ನ ಪ್ರಮುಖ ವಾಸ್ತುಶಿಲ್ಪ ಮತ್ತು ನಗರ ವಿನ್ಯಾಸ ಸಂಸ್ಥೆಯಾದ ನಿಕ್ಕೆನ್ ಸೆಕ್ಕೆಯ್ ಪ್ರತಿನಿಧಿಗಳೊಂದಿಗೆ ನಿಯೋಗವು ಟೋಕಿಯೊದ ‘ಮಿಡ್‌ಟೌನ್ ರೊಪ್ಪೋಂಗಿ’ ಯೋಜನಾ ಪ್ರದೇಶಕ್ಕೆ ಭೇಟಿ ನೀಡಲಿದೆ.
ನಗರ ಪುನರಾಭಿವೃದ್ಧಿ, ಸಾರಿಗೆ ಆಧಾರಿತ ಅಭಿವೃದ್ಧಿ, ಭೂಮಿಯ ಮರುಹೊಂದಾಣಿಕೆ, ವಸತಿ ಮತ್ತು ವಾಣಿಜ್ಯ ಉದ್ದೇಶಗಳ ಮಿಶ್ರ ಭೂ ಬಳಕೆ ಹಾಗೂ ನಗರ ಪ್ರದೇಶಗಳಲ್ಲಿ ಹಸಿರು ವಲಯಗಳ ನಿರ್ವಹಣೆಗೆ ಈ ಯೋಜನೆ ಉತ್ತಮ ಉದಾಹರಣೆಯಾಗಿದೆ. ವೇಗವಾಗಿ ವಿಸ್ತರಿಸುತ್ತಿರುವ ಬೆಂಗಳೂರು ಸೇರಿದಂತೆ ಭಾರತೀಯ ನಗರಗಳ ಅಭಿವೃದ್ಧಿಯಲ್ಲಿ ಇಂತಹ ಯೋಜನಾ ಮಾದರಿಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳ ಕುರಿತು ಅಧಿಕಾರಿಗಳು ಚರ್ಚಿಸಲಿದ್ದಾರೆ.
ತ್ಯಾಜ್ಯದಿಂದ ಇಂಧನ ಉತ್ಪಾದನೆಗೆ ಆದ್ಯತೆ
ನಗರ ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯದಿಂದ ಇಂಧನ ಉತ್ಪಾದನೆಯಲ್ಲಿ ಜಾಗತಿಕ ಅನುಭವ ಹೊಂದಿರುವ ಜೆಎಫ್‌ಇ ಎಂಜಿನಿಯರಿಂಗ್ ಕಾರ್ಪೊರೇಷನ್‌ನ ಯೋಜನೆಗಳು ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಅಧ್ಯಯನ ಮಾಡಲು ಟೋಕಿಯೊದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಗೆ ನಿಯೋಗ ಭೇಟಿ ನೀಡಲಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿ, ಆಧುನಿಕ ತ್ಯಾಜ್ಯ ಸಂಸ್ಕರಣಾ ತಂತ್ರಜ್ಞಾನ, ತ್ಯಾಜ್ಯದಿಂದ ಇಂಧನ ಉತ್ಪಾದನೆ ಹಾಗೂ ನಗರ ಮೂಲಸೌಕರ್ಯ ನಿರ್ಮಾಣಕ್ಕೆ ಸಂಬಂಧಿಸಿದ ಯೋಜನೆಗಳ ಕುರಿತು ಮಾಹಿತಿ ಪಡೆಯಲಾಗುವುದು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜಪಾನ್ ಪ್ರವಾಸವು ಕರ್ನಾಟಕಕ್ಕೆ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದರ ಜತೆಗೆ ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳ ಅಭಿವೃದ್ಧಿಗೆ ಹೊಸ ತಂತ್ರಜ್ಞಾನ ಮತ್ತು ಯೋಜನಾ ಮಾದರಿಗಳನ್ನು ಪರಿಚಯಿಸುವ ಮಹತ್ವದ ಪ್ರಯತ್ನವಾಗಿದೆ. ಜಪಾನ್ ಉದ್ಯಮಗಳೊಂದಿಗೆ ಬಲವಾದ ಆರ್ಥಿಕ ಸಂಬಂಧ ಬೆಳೆಸುವ ಮೂಲಕ ಕೈಗಾರಿಕಾ ಬೆಳವಣಿಗೆ, ಉದ್ಯೋಗ ಸೃಷ್ಟಿ ಹಾಗೂ ಸುಸ್ಥಿರ ನಗರಾಭಿವೃದ್ಧಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹೊಂದಿದೆ.






