ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಇಂದಿನ ಬೆಂಗಳೂರಿನ ಅಭಿವೃದ್ಧಿಗೆ ಭದ್ರ ಬುನಾದಿ; ಇತಿಹಾಸ, ಸ್ಮಾರಕಗಳ ಸಂರಕ್ಷಣೆಗೆ ಸರ್ಕಾರದಿಂದ ಬೃಹತ್ ಯೋಜನೆ: ಸಿಎಂ ಡಿ.ಕೆ. ಶಿವಕುಮಾರ್

On: November 20, 2026 7:53 PM
Follow Us:

ಬೆಂಗಳೂರು, ನ.20: ನಾಡಪ್ರಭು ಕೆಂಪೇಗೌಡರು ಒಕ್ಕಲಿಗ ಸಮುದಾಯದಲ್ಲಿ ಜನಿಸಿದರೂ ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಎಲ್ಲ ಜಾತಿ, ಧರ್ಮ ಹಾಗೂ ವರ್ಗಗಳ ಜನರ ಬದುಕಿಗೆ ಭದ್ರ ಬುನಾದಿ ಹಾಕಿದ ವಿಶ್ವಮಾನವ ತತ್ವದ ಪ್ರತಿಪಾದಕರು. ಅವರ ಆಡಳಿತ ವೈಖರಿ, ದೂರದೃಷ್ಟಿ ಮತ್ತು ಸಮಾನತೆಯ ಚಿಂತನೆ ಇಂದಿನ ಸಮಾಜಕ್ಕೂ ಮಾದರಿಯಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ನಗರದ ಲಗ್ಗೆರೆ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಕಾವೇರಿ ಮಾತೆಯ ಪ್ರತಿಮೆಯನ್ನು ಅನಾವರಣಗೊಳಿಸಿ, ಕೆಂಪೇಗೌಡ ಸಭಾಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಕೆಂಪೇಗೌಡರ ಕೊಡುಗೆಗಳು ಕೇವಲ ಒಂದು ಸಮುದಾಯದ ಇತಿಹಾಸವಲ್ಲ. ಅದು ಇಡೀ ಕರ್ನಾಟಕದ ಹೆಮ್ಮೆಯ ಇತಿಹಾಸ. ಅವರ ಸಾಧನೆ ಮತ್ತು ಜನಪರ ಆಡಳಿತವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕೆಂಪೇಗೌಡರು ತಮ್ಮ ಕಾಲದಲ್ಲಿಯೇ ಭವಿಷ್ಯದ ಬೆಂಗಳೂರಿನ ಅಭಿವೃದ್ಧಿಯನ್ನು ಮನಗಂಡು ಕೆರೆಗಳನ್ನು ನಿರ್ಮಿಸಿದರು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರು. ವ್ಯಾಪಾರ-ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಪೇಟೆಗಳನ್ನು ನಿರ್ಮಿಸಿ, ವಿವಿಧ ವೃತ್ತಿ ಮತ್ತು ಉದ್ಯೋಗಗಳಲ್ಲಿ ತೊಡಗಿದ್ದ ಜನರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಎಲ್ಲ ವರ್ಗದ ಜನರು ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲವಾಗುವ ಆಡಳಿತ ವ್ಯವಸ್ಥೆಯನ್ನು ರೂಪಿಸಿದ್ದರು. ಅವರು ಹಾಕಿಕೊಟ್ಟ ಅಭಿವೃದ್ಧಿಯ ಅಡಿಪಾಯದ ಮೇಲೆಯೇ ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಹಾನಗರವಾಗಿ ಬೆಳೆದಿದೆ ಎಂದು ಹೇಳಿದರು.

ಕುವೆಂಪು ಅವರು ಸಾರಿದ ವಿಶ್ವಮಾನವ ಸಂದೇಶದಂತೆ ಜಾತಿ, ಧರ್ಮ, ಭಾಷೆ ಹಾಗೂ ವರ್ಗಗಳ ಭೇದ ಮರೆತು ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕು. ಸಮಾಜದಲ್ಲಿ ಪರಸ್ಪರ ಗೌರವ, ಸಹಕಾರ ಮತ್ತು ಸಾಮರಸ್ಯ ಬೆಳೆಸಿಕೊಳ್ಳುವುದು ಅತ್ಯಗತ್ಯ. ಬಾಲಗಂಗಾಧರನಾಥ ಸ್ವಾಮೀಜಿಗಳು ಎಲ್ಲ ವರ್ಗಗಳ ಜನರಿಗೆ ಮಾರ್ಗದರ್ಶನ ನೀಡುವ ಮೂಲಕ ಸಮಾಜದಲ್ಲಿ ಶಿಕ್ಷಣ ಮತ್ತು ಸೇವಾ ಚಟುವಟಿಕೆಗಳಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಇಂದು ಮಠಗಳು ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಅವರ ಭವಿಷ್ಯ ರೂಪಿಸುತ್ತಿವೆ. ಹೀಗಾಗಿ ಮಠ-ಮಾನ್ಯಗಳನ್ನು ಉಳಿಸಿ ಬೆಳೆಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ನಾಡಪ್ರಭು ಕೆಂಪೇಗೌಡರ ಇತಿಹಾಸ, ಸ್ಮಾರಕಗಳು ಹಾಗೂ ಅವರ ಆಡಳಿತದ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಬಾಬು ಜಗಜೀವನ ರಾಮ್ ಭವನದ ಪಕ್ಕದಲ್ಲಿ ಐದು ಎಕರೆ ಜಮೀನನ್ನು ಕೆಂಪೇಗೌಡರ ಹೆಸರಿನಲ್ಲಿ ಪ್ರಾಧಿಕಾರ ರಚನೆಗಾಗಿ ಮಂಜೂರು ಮಾಡಲಾಗಿದೆ. ಈ ಯೋಜನೆಗೆ ಸುಮಾರು ₹103 ಕೋಟಿ ವೆಚ್ಚವಾಗಲಿದ್ದು, ಈಗಾಗಲೇ ಭೂಮಿಪೂಜೆ ನೆರವೇರಿಸಲಾಗಿದೆ.

ಇದರ ಜತೆಗೆ ಮಾಗಡಿ ಕೋಟೆಯ ಅಭಿವೃದ್ಧಿಗೆ ₹67 ಕೋಟಿ ಅನುದಾನ ಒದಗಿಸಲಾಗಿದೆ. ವೀರಾಪುರದಲ್ಲಿರುವ ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೂ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಸುಮಾರು ₹100 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ಸ್ಥಾಪಿಸಲಾಗಿದೆ. ಕೆಂಪೇಗೌಡರ ಸಾಧನೆಗಳನ್ನು ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತಗೊಳಿಸದೆ, ಅವರ ಅಭಿವೃದ್ಧಿ ಚಿಂತನೆಗಳನ್ನು ಇಂದಿನ ಆಡಳಿತ ಮತ್ತು ನಗರ ಯೋಜನೆಗಳಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಹಳ್ಳಿಗಳಿಂದ ನಗರಗಳಿಗೆ ಜನರ ವಲಸೆ ಹೆಚ್ಚುತ್ತಿರುವುದು ಗಂಭೀರ ಸವಾಲಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕಾಗಿ ಗ್ರಾಮೀಣ ಪ್ರದೇಶದ ಜನರು ನಗರಗಳನ್ನು ಅವಲಂಬಿಸುವ ಪರಿಸ್ಥಿತಿ ಬದಲಾಗಬೇಕು. ಇದಕ್ಕಾಗಿ ಹಳ್ಳಿಗಳಲ್ಲಿಯೇ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಯೋಜನೆ ರೂಪಿಸುತ್ತಿದೆ.

ಈ ನಿಟ್ಟಿನಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯದ 1,000 ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ. ಬೆಂಗಳೂರು ದಕ್ಷಿಣ ಭಾಗದಲ್ಲಿ 30 ಶಾಲೆಗಳನ್ನು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತಮ ಕಟ್ಟಡ, ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಿದ ಪರಿಣಾಮ ಹಿಂದೆ ಸುಮಾರು 400 ವಿದ್ಯಾರ್ಥಿಗಳಿದ್ದ ಕೆಲವು ಶಾಲೆಗಳಲ್ಲಿ ಈಗ ವಿದ್ಯಾರ್ಥಿಗಳ ಸಂಖ್ಯೆ 2,000ಕ್ಕೆ ಏರಿಕೆಯಾಗಿದೆ. ಇದೇ ಮಾದರಿಯನ್ನು ಗ್ರಾಮೀಣ ಪ್ರದೇಶಗಳಲ್ಲಿಯೂ ಜಾರಿಗೆ ತರಬೇಕು. ಶಿಕ್ಷಣಕ್ಕಾಗಿ ಮಕ್ಕಳು ಹಾಗೂ ಪೋಷಕರು ಬೆಂಗಳೂರಿಗೆ ವಲಸೆ ಬರುವುದನ್ನು ತಡೆಯಬೇಕು ಎಂದು ಹೇಳಿದರು.

ಈ ಕಾರ್ಯದಲ್ಲಿ ಮಠಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಠಗಳು ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದರಿಂದ ನಗರಗಳ ಮೇಲಿನ ಒತ್ತಡ ಕಡಿಮೆಯಾಗುತ್ತಿದೆ. ಮಠಗಳು ಇಲ್ಲದಿದ್ದರೆ ನಗರಗಳ ಮೇಲೆ ಇನ್ನಷ್ಟು ಒತ್ತಡ ಉಂಟಾಗುತ್ತಿತ್ತು. ಹಿರಿಯರು ‘ಮನೆ ಹುಷಾರು, ಮಠ ಹುಷಾರು’ ಎಂದು ಹೇಳಿದ್ದಾರೆ. ನಮ್ಮ ಮನೆಗೆ ನೀಡುವ ಕಾಳಜಿಯನ್ನೇ ಮಠಗಳಿಗೂ ನೀಡಬೇಕು. ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ತೊಡಗಿರುವ ಮಠಗಳನ್ನು ಎಲ್ಲರೂ ಗೌರವಿಸಿ ಸಂರಕ್ಷಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮೆಟ್ರೋ ವಿಸ್ತರಣೆ ಹಾಗೂ ಡಬಲ್ ಡೆಕ್ಕರ್ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದೆ. ಮಾಗಡಿ ರಸ್ತೆಯಿಂದ ತಾವರೆಕೆರೆವರೆಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಸಿದ್ಧತೆ ನಡೆದಿದೆ. ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ವ್ಯವಸ್ಥೆ ಜಾರಿಗೆ ತರುವ ಕುರಿತು ಪ್ರಧಾನಮಂತ್ರಿಗಳೊಂದಿಗೂ ಚರ್ಚಿಸಲಾಗಿದೆ. ಆರಂಭದಲ್ಲಿ ಇದಕ್ಕೆ ಒಪ್ಪಿಗೆ ದೊರೆಯದಿದ್ದರೂ ಇದೀಗ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ನಗರದ ಸಂಚಾರ ವ್ಯವಸ್ಥೆ ಸುಧಾರಿಸಲು ಜಪಾನ್ ಪ್ರವಾಸ ಕೈಗೊಂಡು ಅಲ್ಲಿನ ನಗರ ಯೋಜನೆಗಳು ಮತ್ತು ಸಾರಿಗೆ ವ್ಯವಸ್ಥೆಯನ್ನು ಅಧ್ಯಯನ ಮಾಡುವ ಉದ್ದೇಶವಿದೆ. ಅಲ್ಲಿನ ಉತ್ತಮ ಮಾದರಿಗಳನ್ನು ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗುವುದು. ನಗರಾಭಿವೃದ್ಧಿ ಎಂದರೆ ಕೇವಲ ಕಟ್ಟಡ ಮತ್ತು ರಸ್ತೆ ನಿರ್ಮಾಣವಲ್ಲ. ಜನರ ಸುಗಮ ಸಂಚಾರ, ಪರಿಸರ ಸಂರಕ್ಷಣೆ ಹಾಗೂ ಜೀವನಮಟ್ಟ ಸುಧಾರಿಸುವುದೂ ಅಭಿವೃದ್ಧಿಯ ಪ್ರಮುಖ ಭಾಗವಾಗಿದೆ ಎಂದರು.

ಬೆಂಗಳೂರು ನಗರದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ಉದ್ದೇಶದಿಂದ ಕಾವೇರಿ ಆರನೇ ಹಂತದ ಯೋಜನೆಗೆ ಅನುಮೋದನೆ ದೊರಕಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ನಗರದ ನೀರಿನ ಅಗತ್ಯವನ್ನು ಸಮರ್ಪಕವಾಗಿ ಪೂರೈಸಲು ಈ ಯೋಜನೆ ನೆರವಾಗಲಿದೆ.

ನಗರ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವುದರ ಜತೆಗೆ ಗ್ರಾಮೀಣ ಭಾಗದ ಕೆರೆಗಳ ಅಭಿವೃದ್ಧಿ, ಕೃಷಿ ಹಾಗೂ ನೀರಾವರಿ ಯೋಜನೆಗಳಿಗೂ ಸರ್ಕಾರ ಆದ್ಯತೆ ನೀಡುತ್ತಿದೆ. ಮೇಕೆದಾಟು ಯೋಜನೆ ಸೇರಿದಂತೆ ಹಲವು ಮಹತ್ವದ ಯೋಜನೆಗಳ ಮೂಲಕ ರೈತರ ಬದುಕಿಗೆ ನೀರಿನ ಭದ್ರತೆ ಒದಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ₹441 ಕೋಟಿ ವೆಚ್ಚ ಮಾಡಲಾಗುತ್ತಿದೆ. ಮಳೆನೀರು ಚರಂಡಿ ಅಭಿವೃದ್ಧಿಗೆ ₹190 ಕೋಟಿ, ರಸ್ತೆ ಅಭಿವೃದ್ಧಿಗೆ ₹40 ಕೋಟಿ ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿನ ಅಭಿವೃದ್ಧಿಯಿಂದ ಸಂಗ್ರಹವಾಗುವ ತೆರಿಗೆ ಸಂಪನ್ಮೂಲವನ್ನು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೂ ಬಳಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡೂ ಸಮಾನವಾಗಿ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.

ಸಾಮಾನ್ಯ ಜನರ ಆಸ್ತಿಗಳಿಗೆ ಕಾನೂನುಬದ್ಧ ಮಾನ್ಯತೆ ದೊರೆಯಬೇಕು ಹಾಗೂ ಆಸ್ತಿಯ ಮೌಲ್ಯ ಹೆಚ್ಚಳಕ್ಕೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಭೂಮಿ ಗ್ಯಾರಂಟಿ ಯೋಜನೆಯಡಿ ಬಿ ಖಾತಾ ನಿವೇಶನಗಳನ್ನು ಎ ಖಾತಾ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಕೇವಲ ಶೇ.5ರಷ್ಟು ಮೊತ್ತ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಆಸ್ತಿಗಳಿಗೆ ಸೂಕ್ತ ಕಾನೂನು ಮಾನ್ಯತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ವಿವಿಧ ಸಮುದಾಯಗಳ ಸಂಘ-ಸಂಸ್ಥೆಗಳ ಅಭಿವೃದ್ಧಿಗೂ ಸರ್ಕಾರ ಸಮಾನ ಆದ್ಯತೆ ನೀಡುತ್ತಿದೆ. ಒಕ್ಕಲಿಗರ ಸಂಘವು ಬಿಡಿಎಗೆ ಪಾವತಿಸಬೇಕಿದ್ದ ₹93 ಕೋಟಿ ಮೊತ್ತಕ್ಕೆ ಸಂಬಂಧಿಸಿದ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಇದೇ ರೀತಿ ವಿವಿಧ ಸಮುದಾಯಗಳ ಸಂಘ-ಸಂಸ್ಥೆಗಳು ಬಿಡಿಎಗೆ ಪಾವತಿಸಬೇಕಿರುವ ಸುಮಾರು ₹300ರಿಂದ ₹400 ಕೋಟಿ ಬಾಕಿ ಮೊತ್ತದ ಮೇಲಿನ ಬಡ್ಡಿ ಮನ್ನಾ ಮಾಡುವ ಕುರಿತು ಸರ್ಕಾರ ತೀರ್ಮಾನಿಸಿದೆ.

ಈ ನಿರ್ಧಾರ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಕುರುಬರು ಸೇರಿದಂತೆ ವಿವಿಧ ಸಮುದಾಯಗಳ ಸಂಘ-ಸಂಸ್ಥೆಗಳಿಗೂ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಸಮಾಜಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಸರ್ಕಾರ ಬೆಂಬಲ ನೀಡಲಿದೆ ಎಂದು ಸ್ಪಷ್ಟಪಡಿಸಿದರು.

ಜನರು ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿ ಸರ್ಕಾರ ರಚಿಸಲು ಅವಕಾಶ ಕಲ್ಪಿಸಿದ್ದಾರೆ. ಜನರು ಇಟ್ಟಿರುವ ಈ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ನೋಡುವ ಬದಲು ಅವರ ಕ್ರಿಯಾಶೀಲತೆ, ಗೌರವ ಮತ್ತು ಸ್ವಾಭಿಮಾನಕ್ಕೆ ಆದ್ಯತೆ ನೀಡಬೇಕು. ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಲಗ್ಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ನನಗೆ ಬಹಳ ಹಿಂದಿನಿಂದಲೂ ನಂಟಿದೆ. ವಿದ್ಯಾರ್ಥಿಯಾಗಿದ್ದ ದಿನಗಳಿಂದಲೂ ಈ ಭಾಗದ ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ. ಹಿಂದೆ ಇಲ್ಲಿ ಕೋಳಿ ಫಾರಂ ಕೂಡ ಹೊಂದಿದ್ದೆ. ಈ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸದ ಬಗ್ಗೆ ನನಗೆ ಅಪಾರ ನಂಬಿಕೆಯಿದೆ. ಮುಂದಿನ ಚುನಾವಣೆಯಲ್ಲಿಯೂ ಈ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗೆ ಜನರ ಬೆಂಬಲ ದೊರೆಯಲಿದೆ ಎಂಬ ವಿಶ್ವಾಸವಿದೆ. ಜನರ ಗೌರವ, ಸ್ವಾಭಿಮಾನ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇವೆ ಎಂದರು.

ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಆದರೆ ಸಮಾಜಕ್ಕೆ ಸಲ್ಲಿಸಿದ ಸೇವೆ ಮತ್ತು ಮಾಡಿದ ದಾನ ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಸಭಾಭವನ ನಿರ್ಮಾಣಕ್ಕೆ ಉದಾರವಾಗಿ ದೇಣಿಗೆ ನೀಡಿರುವ ವೇದಮೂರ್ತಿ ಮತ್ತು ಅವರ ಕುಟುಂಬದವರನ್ನು ಅಭಿನಂದಿಸುತ್ತೇನೆ. ಇಂತಹ ಸಮಾಜಮುಖಿ ಕಾರ್ಯಗಳು ಇತರರಿಗೂ ಪ್ರೇರಣೆಯಾಗಬೇಕು. ಕೆಂಪೇಗೌಡರ ಆಶಯಗಳನ್ನು ಉಳಿಸಿ ಬೆಳೆಸುವ ಮೂಲಕ ಅವರ ಹೆಸರನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಠದ ಡಾ. ನಂಜಾವಧೂತ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಕಾಂಗ್ರೆಸ್ ನಾಯಕಿ ಕುಸುಮ ಹನುಮಂತರಾಯಪ್ಪ, ಶ್ರೀಮತಿ ವೇದಾವತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ನವೆಂಬರ್ 23ರಿಂದ 25ರವರೆಗೆ ಜಪಾನ್ ಪ್ರವಾಸಕ್ಕೆ ಸಜ್ಜಾದ ಸಿಎಂ ಡಿ.ಕೆ. ಶಿವಕುಮಾರ್; ನಗರಾಭಿವೃದ್ಧಿ ಮಾದರಿ ಅಧ್ಯಯನದ ಜತೆಗೆ ಜಾಗತಿಕ ಹೂಡಿಕೆ ಆಕರ್ಷಣೆಗೆ ಮಹತ್ವದ ಹೆಜ್ಜೆ

ನ.25ರಂದು ಬೆಂಗಳೂರಿನಲ್ಲಿ ಅಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಸಮಿತಿಯಿಂದ ಚಿಂತನ-ಮಂಥನ ಸಭೆ; ಬಸವತತ್ವದ ಮೇಲಿನ ಸಾಂಸ್ಕೃತಿಕ ದಾಳಿಗೆ ಸಂಘಟಿತ ವೈಚಾರಿಕ ಉತ್ತರ ನೀಡಲು ಮಠಾಧಿಪತಿಗಳು, ಚಿಂತಕರು, ಸಂಶೋಧಕರ ಮಹತ್ವದ ಸಮಾಗಮ

ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ₹16 ಸಾವಿರ ಕೋಟಿ ಅನುದಾನ; ಗ್ರಾಮೀಣ ಕರ್ನಾಟಕದ ಚಿತ್ರಣ ಬದಲಿಸಲು ಸರ್ಕಾರದ ಮಹಾಸಂಕಲ್ಪ: 15 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

ಘೋಷಣೆಗಳ ಸರಮಾಲೆಯೇ ಕಾಂಗ್ರೆಸ್ ಸರ್ಕಾರದ ಸಾಧನೆ; ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ: ಬಿ.ವೈ. ವಿಜಯೇಂದ್ರ ವಾಗ್ದಾಳಿ

ರಾಗಿಗುಡ್ಡದ ರಸ್ತೆ ಕಾಮಗಾರಿಯಲ್ಲಿ ಅಕ್ರಮ ಒತ್ತುವರಿಗೆ ಅಧಿಕಾರಿಗಳ ರಕ್ಷಣೆ ಆರೋಪ! ಒತ್ತುವರಿ ತೆರವುಗೊಳಿಸದೆ ಕಾಮಗಾರಿ ನಡೆಸಲು ಮುಂದಾದ ಇಂಜಿನಿಯರ್; ಪಾಲಿಕೆ ಅಧಿಕಾರಿಗಳ ನಡೆಗೆ ಕರವೇ ಕಾವಲು ಪಡೆ ಆಕ್ರೋಶ

ಬಸವಣ್ಣನವರ ಗೌರವಕ್ಕೆ ಧಕ್ಕೆ ತರುವ ಕೃತಿಗಳ ವಿರುದ್ಧ ಕಾನೂನು ಕ್ರಮ; ‘ಬಸವ ಮಂಟಪ’ ಪುಸ್ತಕ ಮುಟ್ಟುಗೋಲಿಗೆ ಸರ್ಕಾರ ನಿರ್ಧಾರ: ಸಿಎಂ ಡಿ.ಕೆ. ಶಿವಕುಮಾರ್

Leave a Comment