ಇಂಜಿನಿಯರ್ ಸಂತೋಷ್ ವಿರುದ್ಧ ಕ್ರಮಕ್ಕೆ ಆಗ್ರಹ; ರಾಮಣ್ಣನವರ ಜೀವಕ್ಕೆ ಅಪಾಯವಾದರೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ
ಶಿವಮೊಗ್ಗ: ರಸ್ತೆ ಸಾರ್ವಜನಿಕರ ಸಂಚಾರಕ್ಕೆ ಇರಬೇಕೇ ಹೊರತು, ಕೆಲವರ ಅಕ್ರಮ ಒತ್ತುವರಿಗೆ ರಕ್ಷಣೆ ನೀಡುವ ವೇದಿಕೆಯಾಗಬಾರದು. ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಕಾಮಗಾರಿಗಳು ನಡೆಯುತ್ತಿದ್ದರೂ, ಸಾರ್ವಜನಿಕ ರಸ್ತೆಯನ್ನೇ ಒತ್ತುವರಿಯಿಂದ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸಾಧ್ಯವಾಗದಿದ್ದರೆ ಇಂತಹ ಕಾಮಗಾರಿಗಳಿಂದ ಜನರಿಗೆ ಸಿಗುವ ಪ್ರಯೋಜನವಾದರೂ ಏನು? ಶಿವಮೊಗ್ಗ ನಗರದ ರಾಗಿಗುಡ್ಡ (ಶಾಂತಿನಗರ) 4ನೇ ಕ್ರಾಸ್‌ನಲ್ಲಿ ನಡೆಯುತ್ತಿರುವ ಯುಜಿಡಿ, ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಇದೀಗ ಇಂತಹ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ವಾರ್ಡ್ ನಂ.8ರ ವ್ಯಾಪ್ತಿಯ ರಾಗಿಗುಡ್ಡ (ಶಾಂತಿನಗರ) 4ನೇ ಕ್ರಾಸ್‌ನಲ್ಲಿ ಮಹಾನಗರ ಪಾಲಿಕೆ ವತಿಯಿಂದ ಯುಜಿಡಿ, ಚರಂಡಿ ಮತ್ತು ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕಾಮಗಾರಿ ಆರಂಭಿಸುವ ಮುನ್ನ ರಸ್ತೆಯ ಹಾಗೂ ಚರಂಡಿಯ ಜಾಗದಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಬೇಕೆಂಬುದು ಸ್ಥಳೀಯರ ಪ್ರಮುಖ ಆಗ್ರಹವಾಗಿದೆ. ಈ ವಿಚಾರವನ್ನು ನಿರ್ಲಕ್ಷಿಸಿ, ಹಿಂದಿನ ಸ್ಥಿತಿಯಲ್ಲಿಯೇ ಕಾಮಗಾರಿ ಮುಂದುವರಿಸಲು ಪಾಲಿಕೆಯ ಇಂಜಿನಿಯರ್ ಸಂತೋಷ್ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಒತ್ತುವರಿ ತೆರವುಗೊಳಿಸದೆ ಕಾಮಗಾರಿಗೆ ಮುಂದಾಗಿದ್ದೇಕೆ?
ರಸ್ತೆ ಮತ್ತು ಚರಂಡಿ ಜಾಗದ ಒತ್ತುವರಿಯನ್ನು ತೆರವುಗೊಳಿಸದೆ ಕಾಮಗಾರಿ ನಡೆಸಲು ಮುಂದಾದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮು ಅವರು ಆಕ್ಷೇಪ ವ್ಯಕ್ತಪಡಿಸಿ ಕಾಮಗಾರಿಯನ್ನು ತಡೆದು ಕೆಲಸ ನಿಲ್ಲಿಸಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ನಡೆಯುವ ಅಭಿವೃದ್ಧಿ ಕಾಮಗಾರಿಯಲ್ಲಿ ಮೊದಲು ಒತ್ತುವರಿ ತೆರವುಗೊಳಿಸಿ, ನಂತರ ಕಾನೂನುಬದ್ಧವಾಗಿ ರಸ್ತೆ ಮತ್ತು ಚರಂಡಿ ನಿರ್ಮಿಸಬೇಕು ಎಂಬುದು ಅವರ ಒತ್ತಾಯವಾಗಿದೆ.
ಆದರೆ, ಒತ್ತುವರಿ ತೆರವುಗೊಳಿಸದೆ ಹಿಂದಿನಂತೆಯೇ ಕಾಮಗಾರಿ ಮುಂದುವರಿಸಲು ಇಂಜಿನಿಯರ್ ಸಂತೋಷ್ ಅವರಿಗೆ ಸೂಚನೆ ನೀಡಿದವರು ಯಾರು? ಒತ್ತುವರಿ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದ್ದ ಪಾಲಿಕೆ ಆಯುಕ್ತರು ಇದೀಗ ಮೌನ ವಹಿಸಿರುವುದೇಕೆ? ಅಧಿಕಾರಿಗಳ ಈ ದ್ವಂದ್ವ ನಿಲುವಿನ ಹಿಂದೆ ಯಾರ ಪ್ರಭಾವವಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಕರವೇ ಕಾವಲು ಪಡೆ ಪ್ರಶ್ನಿಸಿದೆ.
ಅಧಿಕಾರಿಗಳ ಮೌನದ ಹಿಂದೆ ಯಾರ ಪ್ರಭಾವ?
ಈ ಹಿಂದೆ ರಸ್ತೆ ಅಗಲೀಕರಣ ಮತ್ತು ಒತ್ತುವರಿ ತೆರವು ವಿಚಾರವಾಗಿ ಸ್ಥಳೀಯರಲ್ಲಿ ಹಲವು ಬಾರಿ ಗೊಂದಲ ಹಾಗೂ ವಾಗ್ವಾದಗಳು ನಡೆದಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಇದೀಗ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಸ್ಯೆ ಬಗೆಹರಿಸುವ ಬದಲು, ಏಕಾಏಕಿ ಕಾಮಗಾರಿ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಪ್ರದೇಶದ ಜನರ ನೆಮ್ಮದಿಗೆ ಭಂಗ ಉಂಟುಮಾಡಲಾಗುತ್ತಿದೆ ಎಂಬುದು ಸಂಘಟನೆಯ ಆರೋಪವಾಗಿದೆ.
ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ಒಂದು ರೀತಿಯ ಭರವಸೆ ನೀಡಿ, ಕಾಮಗಾರಿ ಸಂದರ್ಭದಲ್ಲಿ ಮತ್ತೊಂದು ರೀತಿಯ ನಡೆ ಅನುಸರಿಸುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಂಜಿನಿಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಧಾರದ ಹಿಂದೆ ಯಾರಾದರೂ ಪ್ರಭಾವ ಬೀರುತ್ತಿದ್ದಾರೆಯೇ ಎಂಬ ಪ್ರಶ್ನೆಗೂ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಸ್ಪಷ್ಟ ಉತ್ತರ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ.
ರಾಮಣ್ಣನವರ ಜೀವಕ್ಕೆ ಅಪಾಯವಾದರೆ ಅಧಿಕಾರಿಗಳೇ ಹೊಣೆ!
ಇದೇ ರಸ್ತೆಯಲ್ಲಿ ವಾಸವಾಗಿರುವ ರಾಮಣ್ಣ ಅವರಿಗೆ ಜೀವಕ್ಕೆ ಯಾವುದೇ ರೀತಿಯ ತೊಂದರೆ ಉಂಟಾದರೆ ಅದಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಕರವೇ ಕಾವಲು ಪಡೆ ಎಚ್ಚರಿಕೆ ನೀಡಿದೆ.
ಪ್ರದೇಶದಲ್ಲಿ ಈಗಾಗಲೇ ಹಲವು ಬಾರಿ ಗೊಂದಲ ಮತ್ತು ವಾಗ್ವಾದಗಳು ನಡೆದಿದ್ದರೂ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿಲ್ಲ. ಬದಲಾಗಿ, ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಸ್ಥಳೀಯ ನಿವಾಸಿಗಳ ನಡುವೆ ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಇಂಜಿನಿಯರ್ ವಿರುದ್ಧ ಕ್ರಮಕ್ಕೆ ಆಗ್ರಹ
ಕಾಮಗಾರಿಯಲ್ಲಿ ನಿಯಮಾನುಸಾರ ನಡೆದುಕೊಳ್ಳದೆ, ಒತ್ತುವರಿ ತೆರವುಗೊಳಿಸುವ ವಿಚಾರವನ್ನು ನಿರ್ಲಕ್ಷಿಸಿ ಗೊಂದಲಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿರುವ ಇಂಜಿನಿಯರ್ ಸಂತೋಷ್ ಅವರನ್ನು ತಕ್ಷಣವೇ ಕರ್ತವ್ಯದಿಂದ ವಜಾಗೊಳಿಸಬೇಕು ಅಥವಾ ಅವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಆಗ್ರಹಿಸಿದೆ.
ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳ ಪರಿಶೀಲನೆ ನಡೆಸಬೇಕು. ರಸ್ತೆಯ ಮತ್ತು ಚರಂಡಿಯ ನೈಜ ಅಳತೆಯನ್ನು ಸರ್ವೇ ಮೂಲಕ ಗುರುತಿಸಿ, ಅಕ್ರಮ ಒತ್ತುವರಿ ಕಂಡುಬಂದಲ್ಲಿ ಕಾನೂನು ಪ್ರಕಾರ ತೆರವುಗೊಳಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ಅಗಲೀಕರಣ ಸೇರಿದಂತೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ನಿಯಮಾನುಸಾರ ಪೂರ್ಣಗೊಳಿಸಬೇಕು. ಕಾಮಗಾರಿಯ ಗುಣಮಟ್ಟ, ನಕ್ಷೆ ಹಾಗೂ ಅನುಮೋದಿತ ಯೋಜನೆಯ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಉಗ್ರ ಪ್ರತಿಭಟನೆಯ ಎಚ್ಚರಿಕೆ
ಈ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಶಿವಮೊಗ್ಗ ಜಿಲ್ಲಾ ಘಟಕವು, ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಬಗೆಹರಿಸದಿದ್ದರೆ ಪಾಲಿಕೆ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಕೆಲವರ ಅನುಕೂಲಕ್ಕೆ ಸೀಮಿತವಾಗದೆ, ಇಡೀ ಪ್ರದೇಶದ ಜನರಿಗೆ ಅನುಕೂಲವಾಗುವಂತಿರಬೇಕು. ಒತ್ತುವರಿ ತೆರವು, ರಸ್ತೆ ಅಗಲೀಕರಣ ಮತ್ತು ಚರಂಡಿ ನಿರ್ಮಾಣದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಪಾರದರ್ಶಕವಾಗಿ ಕಾಮಗಾರಿ ನಡೆಸಬೇಕು ಎಂಬುದು ಸಂಘಟನೆಯ ಪ್ರಮುಖ ಆಗ್ರಹವಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ಶಿವಮೊಗ್ಗ ಜಿಲ್ಲಾಧ್ಯಕ್ಷ ಎಸ್.ಬಿ. ಶಿವಕುಮಾರ್ ಹಾಗೂ ಪದಾಧಿಕಾರಿಗಳು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಿ, ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಉಮೇಶ್ ಕೆ.ಬಿ., ರಮೇಶ್, ರಾಮಣ್ಣ, ಮಾಲತೇಶ್, ಗಣೇಶ್, ರಾಮು ಸೇರಿದಂತೆ ಹಲವರು ಉಪಸ್ಥಿತರಿದ್ದರು.






