ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನೌಕರರ ಬೇಡಿಕೆಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಅಸ್ತು; ₹50 ಸಾವಿರ ಹಬ್ಬದ ಮುಂಗಡ ಘೋಷಣೆ, ಒಪಿಎಸ್-ಎನ್‌ಪಿಎಸ್ ಕುರಿತು ಮಹತ್ವದ ಭರವಸೆ

On: November 21, 2026 10:17 PM
Follow Us:

ಹಿರಿಯೂರು, ನ.21: ಸರ್ಕಾರಿ ನೌಕರರ ಹಿತಾಸಕ್ತಿ ಮತ್ತು ಸ್ವಾಭಿಮಾನಕ್ಕೆ ಸರ್ಕಾರ ಸದಾ ಬದ್ಧವಾಗಿದ್ದು, ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಕುರಿತ ಬೇಡಿಕೆಗಳ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಈ ಕುರಿತು ಹಣಕಾಸು ಇಲಾಖೆ, ಸಚಿವ ಸಂಪುಟ, ನೌಕರರ ಸಂಘಟನೆ ಹಾಗೂ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಇದರೊಂದಿಗೆ ಸರ್ಕಾರಿ ನೌಕರರಿಗೆ ನೀಡಲಾಗುವ ಹಬ್ಬದ ಮುಂಗಡ ಮೊತ್ತವನ್ನು ₹25 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.

ಹಿರಿಯೂರಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಮ್ಮೇಳನ, ಅಭಿನಂದನಾ ಕಾರ್ಯಕ್ರಮ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಒಪಿಎಸ್ ಮತ್ತು ಎನ್‌ಪಿಎಸ್ ವಿಚಾರದಲ್ಲಿ ನೌಕರರ ಸಂಘದ ಅಭಿಪ್ರಾಯ ಪಡೆದು, ಪಕ್ಷದ ಪದಾಧಿಕಾರಿಗಳು ಹಾಗೂ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಿದವರೊಂದಿಗೂ ಚರ್ಚೆ ನಡೆಸಲಾಗುವುದು. ಎಲ್ಲರ ಅಭಿಪ್ರಾಯಗಳನ್ನು ಪರಿಗಣಿಸಿ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಸರ್ಕಾರಿ ನೌಕರರ ವೇತನವನ್ನು ಶೇ.27ರಷ್ಟು ಹೆಚ್ಚಿಸಲಾಗಿದೆ. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ಬದ್ಧತೆ ಸರ್ಕಾರಕ್ಕಿದೆ. ನೌಕರರು ಮತ್ತು ಸರ್ಕಾರದ ನಡುವೆ ಪರಸ್ಪರ ವಿಶ್ವಾಸ ಹಾಗೂ ಸಹಕಾರ ಇರಬೇಕು. ನಿಮ್ಮ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಎಲ್ಲದಕ್ಕೂ ಒಂದು ಕಾಲಾವಕಾಶವಿರುತ್ತದೆ ಎಂದು ಹೇಳಿದರು.

ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಹಬ್ಬದ ಮುಂಗಡ ಮೊತ್ತವನ್ನು ₹25 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಗೆ ಸ್ಥಳದಲ್ಲಿಯೇ ಸ್ಪಂದಿಸಿದ ಡಿ.ಕೆ. ಶಿವಕುಮಾರ್, ಪೆನ್ನು ನನ್ನ ಕೈಯಲ್ಲಿದೆ. ಹಿರಿಯೂರಿನಲ್ಲಿ ವಿಶೇಷ ಘೋಷಣೆ ಮಾಡುತ್ತಿದ್ದೇನೆ ಎಂದು ಪ್ರಕಟಿಸಿದರು.

ಇದಲ್ಲದೆ, ಹಿರಿಯೂರಿನಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ₹3 ಕೋಟಿ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಸಮುದಾಯ ಭವನ ನಿರ್ಮಾಣ, ಗುರುಭವನ ನವೀಕರಣ ಹಾಗೂ ಅರ್ಧಕ್ಕೆ ನಿಂತಿರುವ ನೌಕರರ ಭವನದ ಕಾಮಗಾರಿ ಪೂರ್ಣಗೊಳಿಸುವಂತೆ ಸಂಘದ ಪದಾಧಿಕಾರಿಗಳು ಸಲ್ಲಿಸಿದ ಮನವಿಗೆ ವೇದಿಕೆಯಲ್ಲಿಯೇ ಸಹಿ ಹಾಕುವ ಮೂಲಕ ಸಮ್ಮತಿ ಸೂಚಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳು ರಥದ ಎರಡು ಚಕ್ರಗಳಿದ್ದಂತೆ. ಸರ್ಕಾರ ರೂಪಿಸುವ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮಹತ್ವದ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ. ಜನರ ಕಷ್ಟ-ಸುಖಗಳನ್ನು ಅರಿತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯ ಎಂದರು.

ವಿಧಾನಸೌಧದಲ್ಲಿ ಕೆತ್ತಲಾಗಿರುವ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಸಂದೇಶವನ್ನು ಪ್ರತಿಯೊಬ್ಬ ನೌಕರರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಾಯಿಯ ಮೇಲೆ ಮಗುವಿಗೆ ಎಷ್ಟು ನಂಬಿಕೆ ಇರುತ್ತದೆಯೋ, ಮರಕ್ಕೆ ಬೇರಿನ ಮೇಲೆ ಎಷ್ಟು ವಿಶ್ವಾಸವಿರುತ್ತದೆಯೋ ಅಷ್ಟೇ ನಂಬಿಕೆ ನನಗೆ ಸರ್ಕಾರಿ ನೌಕರರ ಮೇಲೂ ಇದೆ. ನಾಡಿನ ಅಭಿವೃದ್ಧಿಯ ರಥವನ್ನು ಮುನ್ನಡೆಸುವ ಸಾರಥಿಗಳು ನೀವೇ. ಆಡಳಿತ ಯಂತ್ರ ಮತ್ತು ಅಭಿವೃದ್ಧಿಯ ಮಂತ್ರ ಒಟ್ಟಿಗೆ ಸಾಗಬೇಕು ಎಂದು ಹೇಳಿದರು.

ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ನಾಡಿನ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡುತ್ತಾರೆ. ನಿವೃತ್ತಿಯ ನಂತರವೂ ಅನೇಕರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕರಿಗೆ ‘ಟಿಆರ್’, ಎಂಜಿನಿಯರ್‌ಗಳಿಗೆ ‘ಇಆರ್’ ಎಂಬ ಗೌರವಸೂಚಕ ಪದಗಳನ್ನು ಬಳಸುತ್ತಿರುವುದು ಅವರ ವೃತ್ತಿಪರ ಸೇವೆಗೆ ಗೌರವ ನೀಡುವ ಉದ್ದೇಶದಿಂದ ಎಂದು ತಿಳಿಸಿದರು.

ನನ್ನ ಗೌರವ ಕಾಪಾಡಬೇಕಾದವರು ನೀವೇ, ನಿಮ್ಮನ್ನು ರಕ್ಷಿಸಬೇಕಾದವರು ನಾವೇ. ನಮ್ಮ ನಡುವೆ ಪರಸ್ಪರ ತಿಳಿವಳಿಕೆ, ವಿಶ್ವಾಸ ಮತ್ತು ಗೌರವ ಇರಬೇಕು. ನಾನು ನಿಮ್ಮ ಗೌರವವನ್ನು ಕಾಪಾಡುತ್ತೇನೆ, ನೀವು ನನ್ನ ಗೌರವವನ್ನು ಕಾಪಾಡಿ. ಪ್ರೀತಿ, ವಿಶ್ವಾಸ ಮತ್ತು ಸ್ನೇಹದ ಸಂಬಂಧವನ್ನು ಉಳಿಸಿಕೊಂಡು ಒಟ್ಟಾಗಿ ಕೆಲಸ ಮಾಡೋಣ ಎಂದು ನೌಕರರಲ್ಲಿ ಮನವಿ ಮಾಡಿದರು.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದಲ್ಲಿ ಸಂಘಟನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನೌಕರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಹಿರಿಯೂರಿನ ದಿವಂಗತ ಶಾಸಕ ಸುಧಾಕರ್ ಅವರ ಸೇವೆಯನ್ನು ಸ್ಮರಿಸಿದ ಅವರು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಜಾತಿ ಮತ್ತು ಧರ್ಮದ ಬಲಕ್ಕಿಂತ ಜನರ ಪ್ರೀತಿ ಹಾಗೂ ಬೆಂಬಲದೊಂದಿಗೆ ಅವರು ಕೆಲಸ ಮಾಡಿದ್ದರು. ಅವರ ಸಮಾಜಮುಖಿ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮುಂದಿನ ವರ್ಷ ರಾಜ್ಯ ಸರ್ಕಾರದ ವತಿಯಿಂದ ಮೂರು ದಿನಗಳ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಕುರಿತು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಈಗಾಗಲೇ ಸಹೋದ್ಯೋಗಿಗಳೊಂದಿಗೆ ಚರ್ಚಿಸಲಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ಕನ್ನಡ ಸಂಘಟನೆಗಳು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಾಗೂ ಸರ್ಕಾರಿ ನೌಕರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸಮ್ಮೇಳನ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು.

ಜಾತಿ, ಧರ್ಮದ ಭೇದಗಳನ್ನು ಮರೆತು ವಿದೇಶಗಳಲ್ಲಿಯೂ ಕನ್ನಡಿಗರು ಭಾಷೆಯ ಹೆಸರಿನಲ್ಲಿ ಒಂದಾಗುತ್ತಿರುವುದು ಹೆಮ್ಮೆಯ ಸಂಗತಿ. ಅಂತಹ ಎಲ್ಲ ಕನ್ನಡಿಗರನ್ನು ಆಹ್ವಾನಿಸಿ ಗೌರವಿಸುವ ಆಶಯವಿದೆ. ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ತಮ್ಮ ನಿವಾಸದ ನವೀಕರಣಕ್ಕೆ ₹100 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆರೋಪಕ್ಕೆ ತಿರುಗೇಟು ನೀಡಿದರು.

ನನ್ನ ಮನೆಯ ನವೀಕರಣಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಲು ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವುದಕ್ಕೆ ನಾನು ಸಿದ್ಧನಿದ್ದೇನೆ. ಎರಡು ದಿನಗಳಲ್ಲಿ ತನಿಖಾ ತಂಡ ರಚಿಸಲಿ. ಅದರಲ್ಲಿ ನಮ್ಮ ಪಕ್ಷದವರು ಯಾರೂ ಸದಸ್ಯರಾಗುವುದು ಬೇಡ. ಜೆಡಿಎಸ್ ಮತ್ತು ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ವಿಜಯೇಂದ್ರ ಅವರಿಗೆ ಬೇಕಾದವರನ್ನು ಸಮಿತಿಗೆ ಸೇರಿಸಿಕೊಂಡು ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.

ನಾನು 224 ಶಾಸಕರಿಗೂ ಮುಖ್ಯಮಂತ್ರಿಯಾಗಿದ್ದೇನೆ. ವಿಜಯೇಂದ್ರ ಸೇರಿದಂತೆ ಎಲ್ಲ ಶಾಸಕರನ್ನೂ ನನ್ನ ನೂತನ ಮನೆಯ ಗೃಹಪ್ರವೇಶಕ್ಕೆ ಆಹ್ವಾನಿಸಿದ್ದೆ. ನವೀಕರಣಕ್ಕೆ ₹100 ಕೋಟಿ ಖರ್ಚಾಗಿದೆ ಎಂದು ಆರೋಪಿಸುತ್ತಿರುವ ಅವರೇ ತಮ್ಮ ಅಧ್ಯಕ್ಷತೆಯಲ್ಲಿ ತನಿಖೆ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸಲಿ. ತನಿಖಾ ವರದಿಯನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ಚರ್ಚೆ ನಡೆಸಲಿ. ಇದರಿಂದ ರಾಜ್ಯದ ಜನತೆಗೆ ಸತ್ಯ ತಿಳಿಯಲಿದೆ ಎಂದು ಹೇಳಿದರು.

ಮತಾಂತರ ನಿಷೇಧ ಕಾಯ್ದೆ ರದ್ದತಿ ವಿಚಾರವಾಗಿ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಗೋವಿನ ಹೆಸರಿನಲ್ಲಿ ಯಾರೂ ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ. ನಮ್ಮ ಪಕ್ಷಕ್ಕೂ ತನ್ನದೇ ಆದ ಸಿದ್ಧಾಂತವಿದೆ. ಗೋವಿನ ರಕ್ಷಣೆ ಮಾಡುವುದು ಮತ್ತು ಗೌರವದಿಂದ ಕಾಣುವುದು ನಮ್ಮ ನಿಲುವು. ಈಗಾಗಲೇ ಹಲವು ಕಾನೂನುಗಳು ಜಾರಿಯಲ್ಲಿವೆ. ಕಾನೂನುಗಳನ್ನು ಜಾರಿಗೊಳಿಸುವ ಉದ್ದೇಶ ಸಮಾಜದಲ್ಲಿ ದ್ವೇಷ ಹರಡುವುದಲ್ಲ. ಎಲ್ಲ ಧರ್ಮ ಮತ್ತು ಸಮುದಾಯಗಳ ಜನರು ಪರಸ್ಪರ ಸೌಹಾರ್ದದಿಂದ ಬದುಕಬೇಕು ಎಂದರು.

ಉತ್ತರ ಪ್ರದೇಶದಲ್ಲಿ ಗೋಮಾಂಸ ರಫ್ತು ಮಾಡುವ ಕಾರ್ಖಾನೆಗಳು ಸಾಕಷ್ಟಿವೆ. ಅವುಗಳನ್ನು ಏಕೆ ಮುಚ್ಚಿಲ್ಲ? ಮೊದಲು ಅಲ್ಲಿನ ಕಾರ್ಖಾನೆಗಳ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.

ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸುವ ಉದ್ದೇಶದಿಂದ ಪ್ರತಿ ತಿಂಗಳು ಪ್ರಜಾಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಎಲ್ಲ ಸಚಿವರು ತಿಂಗಳಿಗೆ ಎರಡು ಶನಿವಾರ ಜನರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡುವ ವ್ಯವಸ್ಥೆ ರೂಪಿಸಲಾಗುವುದು ಎಂದು ತಿಳಿಸಿದರು.

ನಾನು ಪ್ರತಿ ತಿಂಗಳು ಎರಡು-ಮೂರು ಸ್ಥಳಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುತ್ತೇನೆ. ಜನರ ಬದುಕಿನಲ್ಲಿ ಬದಲಾವಣೆ ತರುವುದು, ಅವರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಕಡೆಗಣಿಸಿ ಹಿರಿಯೂರಿನಲ್ಲಿ ₹2 ಸಾವಿರ ಕೋಟಿ ಮೊತ್ತದ ಯೋಜನೆಗಳನ್ನು ಘೋಷಿಸುತ್ತಿರುವುದು ಕೇವಲ ಪ್ರಚಾರದ ಗಿಮಿಕ್ ಎಂಬ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷಗಳು ಏನು ಬೇಕಾದರೂ ಆರೋಪ ಮಾಡಲಿ. ಜನರ ಋಣ ತೀರಿಸುವ ಕೆಲಸವನ್ನು ಸರ್ಕಾರ ಶ್ರದ್ಧೆಯಿಂದ ಮಾಡಲಿದೆ ಎಂದರು.

ಕಬ್ಬಿನ ಕನಿಷ್ಠ ಬೆಲೆ ನಿಗದಿ ಮಾಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ. ಕಳೆದ 10 ವರ್ಷಗಳಿಂದ ಬೆಲೆ ನಿಗದಿಪಡಿಸಿಲ್ಲ. ಈ ನಡುವೆ ರಾಜ್ಯದ ಸಚಿವರೇ ಮುಂಚೂಣಿಯಲ್ಲಿ ನಿಂತು ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಮಾತುಕತೆ ನಡೆಸಿ ಕಬ್ಬಿನ ಬೆಲೆ ನಿಗದಿಪಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಟಿ. ರಘುಮೂರ್ತಿ ಹಾಗೂ ಬಿ.ಜೆಡ್. ಜಮೀರ್ ಅಹಮದ್ ಖಾನ್, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಸುಹಾಸ್ ಸುಧಾಕರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾಧಿಕಾರಿ ರಮ್ಯಾ ಎಸ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್. ಆಕಾಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಲ್ ಚೌಕ್ಸೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಹಿರಿಯೂರು ಶಾಖೆಯ ಅಧ್ಯಕ್ಷ ಆರ್. ರಮೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

.

K.M.Sathish Gowda

Join WhatsApp

Join Now

Facebook

Join Now

Read more

2.5 ಲಕ್ಷ ನೌಕರರ ಭವಿಷ್ಯಕ್ಕೆ ಡಿ.ಕೆ. ಶಿವಕುಮಾರ್ ಅವರೇ ಆಶಾಕಿರಣ; ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೆ ತರಲು ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಒತ್ತಾಯ

ಬಸವಣ್ಣನವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನ ಸಹಿಸಲಾಗದು; ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಕಠಿಣ ಕ್ರಮಕ್ಕೆ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹ

15 ಲಕ್ಷ ಕುಟುಂಬಗಳಿಗೆ ಉಚಿತ ನಿವೇಶನ, ಒಂದು ಲಕ್ಷ ಹೊಸ ಮನೆ ನಿರ್ಮಾಣಕ್ಕೆ ಸಂಪುಟ ಅಸ್ತು!

ಅಧಿಕಾರದ ವೈಭವಕ್ಕಿಂತ ಸರಳ ಬದುಕಿನ ಘನತೆ ದೊಡ್ಡದು; ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕುಟುಂಬದ ಜೀವನಶೈಲಿ ರಾಜಕಾರಣಿಗಳಿಗೆ ಮಾದರಿಯಾಗಲಿ

ಭಕ್ತಿ ಭಂಡಾರಿ ಬಸವಣ್ಣನವರ ಕುರಿತು ಹಗುರವಾದ ಮಾತುಗಳನ್ನಾಡುವುದು ಸಲ್ಲದು; ಮಹಾತ್ಮರ ಘನತೆಗೆ ಧಕ್ಕೆ ತರುವ ಹೇಳಿಕೆಗಳಿಗೆ ಪಂಚಪೀಠಾಧೀಶ್ವರರ ಖಂಡನೆ

ನವೆಂಬರ್ 23ರಿಂದ 25ರವರೆಗೆ ಜಪಾನ್ ಪ್ರವಾಸಕ್ಕೆ ಸಜ್ಜಾದ ಸಿಎಂ ಡಿ.ಕೆ. ಶಿವಕುಮಾರ್; ನಗರಾಭಿವೃದ್ಧಿ ಮಾದರಿ ಅಧ್ಯಯನದ ಜತೆಗೆ ಜಾಗತಿಕ ಹೂಡಿಕೆ ಆಕರ್ಷಣೆಗೆ ಮಹತ್ವದ ಹೆಜ್ಜೆ

Leave a Comment