ಜಾತಿ, ವರ್ಗ, ಲಿಂಗ ತಾರತಮ್ಯಗಳನ್ನು ತೊಡೆದುಹಾಕಿ ಸಮಾನತೆಯ ಸಮಾಜ ಕಟ್ಟುವುದೇ ಬಸವಣ್ಣನವರ ಸಮನ್ವಯ ದೃಷ್ಟಿ
ಶಿವಮೊಗ್ಗ: ಎಂಟು ಶತಮಾನಗಳ ಹಿಂದಿನ ಸಾಮಾಜಿಕ ಕತ್ತಲೆಯನ್ನು ಜ್ಞಾನದ ಜ್ಯೋತಿಯಿಂದ ಬೆಳಗಿಸಿದ ಮಹಾನ್ ಚೇತನ ಬಸವಣ್ಣನವರು. ಅವರ ವಚನಗಳು ಕೇವಲ ಅಕ್ಷರಗಳಲ್ಲ, ಮನುಷ್ಯನ ಬದುಕನ್ನು ತಿದ್ದುವ ದಾರಿದೀಪಗಳು. ಜಾತಿ, ವರ್ಗ, ಲಿಂಗಭೇದಗಳ ಗೋಡೆಗಳನ್ನು ಕೆಡವಿ, ಮನುಷ್ಯರೆಲ್ಲರೂ ಒಂದೇ ಎಂಬ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ವಿಚಾರಧಾರೆ ಇಂದಿಗೂ ಸಮಾಜಕ್ಕೆ ಅತ್ಯಗತ್ಯ. ಅವರ ವಚನಗಳನ್ನು ಬಾಯಿಪಾಠ ಮಾಡುವುದಕ್ಕಿಂತ ಅವುಗಳ ಆಶಯವನ್ನು ನಮ್ಮ ನಡೆ, ನುಡಿ ಮತ್ತು ಚಿಂತನೆಗಳಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಪರಿವರ್ತನೆ ಸಾಧ್ಯ ಎಂದು ಖ್ಯಾತ ವಾಗ್ಮಿ ಜಿ. ನಟೇಶ್ ಅವರು ಹೇಳಿದರು.
ಶಿವಮೊಗ್ಗದ ತರಳಬಾಳು ಬಡಾವಣೆಯ ಶುಭಶ್ರೀ ಕಲ್ಯಾಣ ಮಂದಿರದ ಆವರಣದಲ್ಲಿ ತರಳಬಾಳು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.), ಬಸವಕೇಂದ್ರ, ಶಿವಮೊಗ್ಗ ಹಾಗೂ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಆಶ್ರಯದಲ್ಲಿ ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುತ್ತಿರುವ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮದ ಹತ್ತನೇ ದಿನದ ಚಿಂತನಗೋಷ್ಠಿಯಲ್ಲಿ ‘ಬಸವಣ್ಣ – ಸಮನ್ವಯ ದೃಷ್ಟಿ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಬಸವಣ್ಣನವರ ಮಹತ್ವವನ್ನು ಅವರ ವಚನಗಳೇ ನಮಗೆ ಮನವರಿಕೆ ಮಾಡಿಕೊಡುತ್ತವೆ. ಒಬ್ಬ ಮಹಾತ್ಮನ ಹೆಸರನ್ನು ಉಚ್ಚರಿಸುವುದರ ಹಿಂದೆ ಅವರ ತಪಸ್ಸು, ಅನುಷ್ಠಾನ, ಸಾಧನೆ ಮತ್ತು ಜೀವನದ ಆದರ್ಶಗಳು ಅಡಕವಾಗಿರುತ್ತವೆ. ಶರಣರ ಸಂಗದಿಂದ ಮನುಷ್ಯನ ಬದುಕಿನ ಕೇಡುಗಳು ದೂರವಾಗುತ್ತವೆ ಎಂಬ ಬಸವಣ್ಣನವರ ಆಶಯದಲ್ಲಿ ಆಳವಾದ ಅಧ್ಯಾತ್ಮಿಕ ಚಿಂತನೆಯಿದೆ.
‘ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ; ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯಾ; ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯಾ: ಪರುಷದ ಬಲದಿಂದ ಅವಲೋಹದ ಕೇಡ ನೋಡಯ್ಯಾ! ಕೂಡಲಸಂಗನ ಶರಣರ ಅನುಭಾವದಿಂದ ಎನ್ನ ಮನದ ಕೇಡ ನೋಡಯ್ಯಾ!’ ಎಂಬ ವಚನವು ಮನುಷ್ಯನ ಅಂತರಂಗದ ಪರಿವರ್ತನೆಗೆ ಜ್ಞಾನದ ಬೆಳಕು ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ. ಪ್ರಾಪಂಚಿಕ ಸುಖ-ದುಃಖಗಳ ನಡುವೆ ಸಿಲುಕಿರುವ ಮನುಷ್ಯ ಅವುಗಳ ನಿಜವಾದ ಅರ್ಥವನ್ನು ಅರಿತುಕೊಳ್ಳಬೇಕು. ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿಲ್ಲ. ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ನಮ್ಮ ಬದುಕಿನ ಉದ್ದೇಶವೇನು, ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಅಜ್ಞಾನದ ಕತ್ತಲಲ್ಲಿ ಬಸವಣ್ಣನವರು ಜ್ಞಾನದ ಆಕಾಶದೀಪ
ಕುವೆಂಪು ಅವರು ಬಸವಣ್ಣನವರನ್ನು ಸ್ಮರಿಸುತ್ತಾ, “ಕಾರ್ತಿಕದ ಕತ್ತಲಲ್ಲಿ
ಆಕಾಶ ದೀಪವಾಗಿ ನೀ ಬಂದೆ
ಬಟ್ಟೆಗೆಟ್ಟವರಿಗೊಂದು
ದೊಂದು ದಿಕ್ಕಾಗಿ
ಎಂಟು ಶತಮಾನಗಳ ಹಿಂದೆ
ಅಗ್ನಿ ಖಡ್ಗವನಾಂತು
ಓ ಆಧ್ಯಾತ್ಮ ಕ್ರಾಂತಿ ವೀರ
ದೇವ ದಯೆಯೊಂದು ಹೇ ಧೀರಾವತಾರ
ಶ್ರೀ ಗುರು ಬಸವೇಶ್ವರ“
ಎಂದು ವರ್ಣಿಸಿರುವುದನ್ನು ಉಲ್ಲೇಖಿಸಿದ ನಟೇಶ್ ಅವರು, ಹನ್ನೆರಡನೇ ಶತಮಾನದಲ್ಲಿ ಸಮಾಜ ಜಾತಿ, ವರ್ಗ ಮತ್ತು ಲಿಂಗ ತಾರತಮ್ಯಗಳಿಂದ ಕೂಡಿತ್ತು. ಇಂತಹ ಸಾಮಾಜಿಕ ಅಸಮಾನತೆಗಳ ವಿರುದ್ಧ ಬಸವಣ್ಣನವರು ಧ್ವನಿ ಎತ್ತಿದರು. ಹೆಣ್ಣಿಗೆ ಒಂದು ನ್ಯಾಯ, ಗಂಡಿಗೆ ಮತ್ತೊಂದು ನ್ಯಾಯ ಏಕೆ? ಎಲ್ಲರಲ್ಲಿಯೂ ಇರುವುದು ಒಂದೇ ಆತ್ಮವಾದರೆ ಭೇದಭಾವ ಏಕೆ? ದುಡಿಯುವವರು ಕಷ್ಟಪಡುತ್ತಿದ್ದರೆ ದುಡಿಯದೆ ಬದುಕುವ ವ್ಯವಸ್ಥೆ ಏಕೆ? ಎಂಬ ಪ್ರಶ್ನೆಗಳನ್ನು ತಮ್ಮೊಳಗೆ ತಾವೇ ಕೇಳಿಕೊಂಡು, ಅವುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಆ ಚಿಂತನೆಯ ಫಲವೇ ಸಮಾಜಕ್ಕೆ ದಾರಿದೀಪವಾದ ವಚನಗಳ ಸರಮಾಲೆ ಎಂದು ಹೇಳಿದರು.
ವೇದ, ಉಪನಿಷತ್ತುಗಳಲ್ಲಿರುವ ತತ್ವಸಾರವನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾದ ಅಚ್ಚಗನ್ನಡದಲ್ಲಿ ಬಸವಣ್ಣನವರು ವಚನಗಳ ಮೂಲಕ ನೀಡಿದ್ದಾರೆ. ಅಧ್ಯಾತ್ಮದ ವಿಚಾರಗಳು ಜನಸಾಮಾನ್ಯರ ಬದುಕಿಗೂ ತಲುಪಬೇಕು ಎಂಬ ಉದ್ದೇಶದಿಂದ ಸರಳ ಭಾಷೆಯನ್ನು ಆಯ್ಕೆ ಮಾಡಿಕೊಂಡರು. ಹೀಗಾಗಿ ಅವರ ವಚನಗಳು ಇಂದಿಗೂ ಜನರ ನಾಲಿಗೆಯಲ್ಲಿವೆ, ಮನಸ್ಸಿನಲ್ಲಿ ನೆಲೆಗೊಂಡಿವೆ ಎಂದರು.

ಜಾತಿಯಲ್ಲ, ಗುಣವೇ ಮನುಷ್ಯನ ಶ್ರೇಷ್ಠತೆಗೆ ಮಾನದಂಡ
‘ಆವ ಕುಲವಾದಡೇನು? ಶಿವಲಿಂಗವಿದ್ದವನೆ ಕುಲಜನು. ಕುಲವನರಸುವರೆ ಶರಣರಲ್ಲಿ, ಜಾತಿ ಸಂಕರನಾದ ಬಳಿಕ? ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ. ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣರನು.’ ಎಂಬ ವಚನವನ್ನು ಉಲ್ಲೇಖಿಸಿದ ಅವರು, ಯಾವ ಕುಲದಲ್ಲಿ ಹುಟ್ಟಿದ್ದಾನೆ ಎಂಬುದಕ್ಕಿಂತ ವ್ಯಕ್ತಿಯಲ್ಲಿರುವ ಸದ್ಗುಣ, ಭಕ್ತಿ ಮತ್ತು ನಡವಳಿಕೆ ಮುಖ್ಯ ಎಂಬುದನ್ನು ಬಸವಣ್ಣನವರು ಸಾರಿದ್ದಾರೆ. ಮಾನವ ಜಾತಿ ಒಂದೇ, ಮಾನವ ಧರ್ಮ ಒಂದೇ ಎಂಬ ಭಾವನೆ ಸಮಾಜದಲ್ಲಿ ಬೇರೂರಬೇಕು. ಜಾತಿಯ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ಮನೋಭಾವ ದೂರವಾಗಬೇಕು. ಅನುಭವ ಮಂಟಪದಲ್ಲಿ ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರಿಗೂ ವಿಚಾರ ಮಂಡಿಸಲು ಅವಕಾಶ ಕಲ್ಪಿಸುವ ಮೂಲಕ ಬಸವಣ್ಣನವರು ಸಮಾನತೆಯ ಮೌಲ್ಯಕ್ಕೆ ಮಹತ್ವ ನೀಡಿದ್ದರು. ಅಂದಿನ ಕಾಲದಲ್ಲಿಯೇ ಎಲ್ಲರಿಗೂ ಸಮಾನ ಗೌರವ ಮತ್ತು ಸ್ಥಾನಮಾನ ನೀಡಿದ ಅವರ ಚಿಂತನೆ ಇಂದಿನ ಸಮಾಜಕ್ಕೂ ಮಾದರಿಯಾಗಿದೆ ಎಂದು ತಿಳಿಸಿದರು.
ಬಸವಣ್ಣನವರ ಅತ್ಯಂತ ಪ್ರಸಿದ್ಧ ವಚನವಾದ,
‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ಕೂಡಲಸಂಗಮನೊಲಿಸುವ ಪರಿ’
ಎಂಬ ವಚನದಲ್ಲಿ ಮನುಷ್ಯನ ಬದುಕಿಗೆ ಬೇಕಾದ ಸಂಪೂರ್ಣ ನೀತಿ ಸಂಹಿತೆಯಿದೆ. ಕಳ್ಳತನ ಮಾಡಬಾರದು, ಹಿಂಸೆ ಮಾಡಬಾರದು, ಸುಳ್ಳು ಹೇಳಬಾರದು, ಕೋಪ ಮಾಡಿಕೊಳ್ಳಬಾರದು, ಇತರರನ್ನು ತಾತ್ಸಾರ ಮಾಡಬಾರದು, ತನ್ನನ್ನು ತಾನು ಹೊಗಳಿಕೊಳ್ಳಬಾರದು, ಬೇರೆಯವರನ್ನು ನಿಂದಿಸಬಾರದು ಎಂಬ ಸರಳ ಸಂದೇಶಗಳೇ ಜೀವನದ ಶ್ರೇಷ್ಠ ಮೌಲ್ಯಗಳಾಗಿವೆ. ಈ ವಚನವನ್ನು ಎಷ್ಟು ಬಾರಿ ಹೇಳಿದರೂ ಸಾಲದು. ಆದರೆ ಅದನ್ನು ನಮ್ಮ ಬದುಕಿನಲ್ಲಿ ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುದೇ ಮುಖ್ಯ ಎಂದು ನಟೇಶ್ ಅವರು ಹೇಳಿದರು.
ಮಹಾತ್ಮ ಗಾಂಧೀಜಿಯವರೂ ಬಸವಣ್ಣನವರ ತತ್ವಗಳನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಕೇವಲ ವಚನಗಳನ್ನು ಪಠಿಸುವುದರಿಂದ ಪ್ರಯೋಜನವಿಲ್ಲ. ಅವುಗಳ ಆಶಯವನ್ನು ನಮ್ಮ ನಿತ್ಯದ ಬದುಕಿನಲ್ಲಿ ಅನುಸರಿಸಬೇಕು. ಪ್ರತಿಯೊಬ್ಬರೂ ಪ್ರತಿದಿನ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು. ಬಸವಣ್ಣನವರ ಒಂದೊಂದು ವಚನವನ್ನಾದರೂ ಜೀವನದಲ್ಲಿ ಪಾಲಿಸುವ ಸಂಕಲ್ಪ ಮಾಡಿದರೆ ಸಮಾಜದಲ್ಲಿ ದೊಡ್ಡ ಬದಲಾವಣೆ ಸಾಧ್ಯ ಎಂದರು.

ಮೃದು ಮಾತೇ ಶ್ರೇಷ್ಠ ಜಪ, ಅದುವೇ ನಿಜವಾದ ತಪಸ್ಸು
‘ಕಂಡ ಭಕ್ತರಿಗೆ ಕೈಮುಗಿಯುವಾತನೇ ಭಕ್ತ, ಮೃದು ವಚನವೇ ಸಕಲ ಜಪಂಗಳಯ್ಯ, ಮೃದು ವಚನವೇ ಸಕಲ ತಪಂಗಳಯ್ಯ’ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಅವರು, ಭಕ್ತಿಗೆ ಜಾತಿ, ಕುಲದ ಮಿತಿಯಿಲ್ಲ. ನಿಜವಾದ ಭಕ್ತಿಯನ್ನು ಹೊಂದಿರುವ ವ್ಯಕ್ತಿಗೆ ಗೌರವ ಸಲ್ಲಿಸುವ ಮನೋಭಾವ ನಮ್ಮಲ್ಲಿರಬೇಕು. ಬೇರೆಯವರಿಗೆ ನೋವಾಗುವಂತೆ ಮಾತನಾಡುವುದಕ್ಕಿಂತ ಮೃದುವಾಗಿ ಮಾತನಾಡುವುದೇ ದೊಡ್ಡ ಸಾಧನೆ. ಎಷ್ಟೇ ಪೂಜೆ, ಪುನಸ್ಕಾರಗಳನ್ನು ಮಾಡಿದರೂ ಮಾತಿನಲ್ಲಿ ಸೌಜನ್ಯವಿಲ್ಲದಿದ್ದರೆ ಅವುಗಳಿಗೆ ಅರ್ಥವಿಲ್ಲ. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವುದು ನಮ್ಮ ಸಂಸ್ಕೃತಿಯಾಗಬೇಕು ಎಂದು ಹೇಳಿದರು.
‘ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ಎಂಬ ಮಾತಿನಲ್ಲಿಯೂ ಬಸವಣ್ಣನವರು ಮಾನವ ಸಂಬಂಧಗಳ ಮಹತ್ವವನ್ನು ಸಾರಿದ್ದಾರೆ. ಒಬ್ಬರನ್ನು ಗೌರವದಿಂದ ಮಾತನಾಡಿಸುವುದರಿಂದ ನಮ್ಮ ಸಂಪತ್ತು ಕಡಿಮೆಯಾಗುವುದಿಲ್ಲ. ‘ಏನ ಬಂದಿರಿ, ಹದುಳವಿದ್ದಿರೆ ಎಂದರೆ ನಿಮ್ಮ ಮೈಸಿರಿ ಹಾರಿಹೋಹುದೇ?
ಕುಳ್ಳಿರೆಂದರೆ ನೆಲ ಕುಳಿಹೋಹುದೇ?
ಒಡನೆ ನುಡಿದರೆ ಶಿರ-ಹೊಟ್ಟೆಯೊಡೆವುದೇ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ,
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮದೇವನು.‘ ಎಂಬ ವಚನದ ಮೂಲಕ ಆತಿಥ್ಯ, ಸೌಜನ್ಯ ಮತ್ತು ಗೌರವದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಮನೆ ದೊಡ್ಡದಾಗಿದ್ದರೆ ಸಾಲದು, ಅದರಲ್ಲಿ ಹೃದಯವಂತಿಕೆ ಇರಬೇಕು. ಪ್ರೀತಿಯಿಂದ ಸ್ವಾಗತಿಸುವ ಮನೆಗೆ ಬಂಧುಗಳು, ಸ್ನೇಹಿತರು ಮತ್ತೆ ಮತ್ತೆ ಬರುತ್ತಾರೆ. ಹೃದಯವಿಲ್ಲದ ಕಟ್ಟಡ ಎಂದಿಗೂ ನಿಜವಾದ ಮನೆಯೆನಿಸಿಕೊಳ್ಳುವುದಿಲ್ಲ ಎಂದರು.
ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ ಸಾಲುಗಳಾದ,
‘ಗೌರವಿಸು ಜೀವನವ, ಗೌರವಿಸು ಚೇತನವ, ಆರದೋ ಜಗವೆಂದು ಭೇದವೆಣಿಸದಿರು, ಹೋರುದು ಜೀವನ ಸಮೃದ್ಧಿಗೋಸುಗ ನಿನಗೆ, ದಾರಿ ಆತ್ಮೋನ್ನತಿಗೆ ಮಂಕುತಿಮ್ಮ’
ಎಂಬ ಸಾಲುಗಳನ್ನು ಪ್ರಸ್ತಾಪಿಸಿದ ಅವರು, ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೂ ಗೌರವ ನೀಡಬೇಕು. ಜೀವನದ ಬಗ್ಗೆ ನಿರಾಸೆ ಹೊಂದದೆ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಸಮಸ್ಯೆಗಳು ಬಂದಾಗ ಕುಗ್ಗದೆ ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು. ನಮ್ಮ ಜೀವನ ಸಮೃದ್ಧಿಯಾಗುವುದರ ಜತೆಗೆ ಇತರರ ಬದುಕಿಗೂ ಬೆಳಕಾಗಬೇಕು. ಇದೇ ಆತ್ಮೋನ್ನತಿಯ ನಿಜವಾದ ದಾರಿ ಎಂದು ಹೇಳಿದರು.
ಮುಖದಲ್ಲಿ ಮಂದಹಾಸ, ಮಾತಿನಲ್ಲಿ ಸತ್ಯ, ಮನಸ್ಸಿನಲ್ಲಿ ಮಿತಿ ಇರಲಿ
‘ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ, ಹಿತವಿರಲಿ ವಚನದಲಿ, ಋತವ ಬಿಡದಿರಲಿ, ಮಿತವಿರಲಿ ಮನಸಿನ ಉದ್ವೇಗದಲಿ, ಭೋಗದಲಿ, ಅತಿಬೇಡವೆಲ್ಲಿಯುಂ ಮಂಕುತಿಮ್ಮ’ ಎಂಬ ಕಗ್ಗದ ಸಾಲುಗಳನ್ನು ವಿವರಿಸಿದ ಅವರು, ಮುಖದಲ್ಲಿ ಮಂದಹಾಸ, ಮಾತಿನಲ್ಲಿ ಹಿತ, ನಡವಳಿಕೆಯಲ್ಲಿ ಸತ್ಯ ಮತ್ತು ಮನಸ್ಸಿನಲ್ಲಿ ಸಂಯಮ ಇರಬೇಕು. ನಗು ಅನೇಕ ಸಮಸ್ಯೆಗಳನ್ನು ಸರಳಗೊಳಿಸುವ ಶಕ್ತಿ ಹೊಂದಿದೆ. ನಾಯಕತ್ವ ವಹಿಸುವವರು ಜನರನ್ನು ನಗುನಗುತ್ತಾ ಮಾತನಾಡಿಸಿ, ಅವರ ಸಮಸ್ಯೆಗಳನ್ನು ಆಲಿಸುವ ಗುಣ ಬೆಳೆಸಿಕೊಳ್ಳಬೇಕು. ಚುನಾವಣೆಯ ಸಂದರ್ಭದಲ್ಲಿ ಮಾತ್ರ ನಗುವ ನಾಯಕರು ಸಾಲದು, ಜನರೊಂದಿಗೆ ಸದಾ ಆತ್ಮೀಯತೆಯಿಂದ ವರ್ತಿಸಬೇಕು ಎಂದು ಹೇಳಿದರು.
ಮಾತು ಹಿತವಾಗಿರಬೇಕು ಎಂಬ ಕಾರಣಕ್ಕೆ ಸುಳ್ಳು ಹೇಳಬಾರದು. ಸತ್ಯವನ್ನು ಬಿಟ್ಟು ಮಾತನಾಡಬಾರದು. ತಮ್ಮನ್ನು ತಾವು ಹೊಗಳಿಕೊಳ್ಳುವುದು, ಎದುರಿಗಿರುವವರನ್ನು ಹೀಯಾಳಿಸುವುದು ಸರಿಯಲ್ಲ. ಮನಸ್ಸಿನ ಉದ್ವೇಗವನ್ನು ನಿಯಂತ್ರಿಸಬೇಕು. ಅತಿಯಾದ ಆಸೆ, ಅತಿಯಾದ ಭೋಗ ಮತ್ತು ಅತಿಯಾದ ಕೋಪ ಬದುಕಿನ ನೆಮ್ಮದಿಯನ್ನು ಹಾಳುಮಾಡುತ್ತವೆ. ಮಾತು, ಕೃತಿ ಮತ್ತು ಚಿಂತನೆ ಈ ಮೂರೂ ಪರಿಶುದ್ಧವಾಗಿದ್ದಾಗ ಮಾತ್ರ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ ಎಂದರು.
ಸಂಘಟನೆಯಲ್ಲಿ ಅಧಿಕಾರಕ್ಕಿಂತ ಒಗ್ಗಟ್ಟಿಗೆ ಆದ್ಯತೆ ಇರಲಿ
ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳ ನಡುವೆ ಅಸಮಾಧಾನ, ಸ್ಥಾನಮಾನಗಳ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ. ಆದರೆ ಎಲ್ಲರೂ ಒಂದೇ ಉದ್ದೇಶಕ್ಕಾಗಿ ಸೇರಿದ್ದೇವೆ ಎಂಬ ಭಾವನೆ ಬೆಳೆಸಿಕೊಂಡರೆ ಇಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ. ಶಿವನಿಗಾಗಿ, ಬಸವಣ್ಣನವರ ವಿಚಾರಧಾರೆಗಾಗಿ, ಸಮಾಜದ ಒಳಿತಿಗಾಗಿ ಒಂದಾಗಿದ್ದೇವೆ ಎಂಬ ಭಾವನೆ ಮುಖ್ಯ. ಯಾರೂ ಕಿರಿಯರಲ್ಲ, ಯಾರೂ ಹಿರಿಯರಲ್ಲ ಎಂಬ ಸಮಾನತೆಯ ಮನೋಭಾವ ಸಂಘಟನೆಯ ಶಕ್ತಿಯಾಗಬೇಕು. ಸ್ಥಾನಮಾನಗಳಿಗಿಂತ ಸೇವೆ ಮತ್ತು ಸಹಕಾರಕ್ಕೆ ಆದ್ಯತೆ ನೀಡಿದಾಗ ಸಂಘಟನೆ ಬಲಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾಜವನ್ನು ಒಡೆಯುವವರಲ್ಲ, ಬೆಸೆಯುವವರಾಗೋಣ
ಸಮಾಜದಲ್ಲಿ ಭಿನ್ನಾಭಿಪ್ರಾಯಗಳು, ನಿಂದನೆಗಳು ಮತ್ತು ಟೀಕೆಗಳು ಸಹಜ. ಆದರೆ ಅವುಗಳನ್ನು ದೊಡ್ಡದಾಗಿಸಿಕೊಂಡು ಪರಸ್ಪರ ದ್ವೇಷ ಬೆಳೆಸಿಕೊಳ್ಳಬಾರದು. ಒಬ್ಬ ವ್ಯಕ್ತಿಯ ಬಗ್ಗೆ ವೈಯಕ್ತಿಕ ಅಭಿಪ್ರಾಯ ಭಿನ್ನವಾಗಿರಬಹುದು. ಆದರೆ ಕೋಟ್ಯಂತರ ಜನರು ಗೌರವಿಸುವ ಮಹಾತ್ಮರ ವಿಚಾರಧಾರೆಗೆ ಅವಮಾನ ಮಾಡುವ ಮೂಲಕ ಸಮಾಜದಲ್ಲಿ ವೈಷಮ್ಯ ಮೂಡಿಸುವ ಕೆಲಸ ಮಾಡಬಾರದು. ಸಮಾಜವನ್ನು ಒಗ್ಗೂಡಿಸುವುದು ನಮ್ಮ ಕರ್ತವ್ಯವೇ ಹೊರತು ಒಡೆಯುವುದಲ್ಲ ಎಂದು ನಟೇಶ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾವಿನ ಮರ, ಪಕ್ಷಿ ಮತ್ತು ಕಾಡ್ಗಿಚ್ಚಿನ ಕಥೆಯನ್ನು ವಿವರಿಸಿದ ನಟೇಶ್ ಅವರು, ಹಲವು ವರ್ಷಗಳಿಂದ ನೆರಳು, ಹಣ್ಣು ಮತ್ತು ಆಶ್ರಯ ನೀಡಿದ ಮರಕ್ಕೆ ಕೃತಜ್ಞತೆ ಸಲ್ಲಿಸಲು ಒಂದು ಪುಟ್ಟ ಪಕ್ಷಿ ತನ್ನ ಕೊಕ್ಕಿನಲ್ಲಿ ನೀರನ್ನು ತಂದು ಕಾಡಿನ ಬೆಂಕಿಯನ್ನು ಆರಿಸಲು ಪ್ರಯತ್ನಿಸುತ್ತದೆ. ಅದನ್ನು ಕಂಡ ಮಂಗವೊಂದು, ನಿನ್ನ ಒಂದು ಹನಿ ನೀರಿನಿಂದ ಬೆಂಕಿ ಆರಿಸಲು ಸಾಧ್ಯವೇ ಎಂದು ಪ್ರಶ್ನಿಸುತ್ತದೆ. ಆಗ ಪಕ್ಷಿ, ಬೆಂಕಿ ಆರಿಸುವುದು ನನ್ನಿಂದ ಸಾಧ್ಯವಾಗದಿರಬಹುದು. ಆದರೆ ನನಗೆ ಇಷ್ಟು ವರ್ಷ ಆಶ್ರಯ ನೀಡಿದ ಮರಕ್ಕೆ ಕೃತಜ್ಞತೆ ಸಲ್ಲಿಸುವುದು ನನ್ನ ಕರ್ತವ್ಯ. ಕನಿಷ್ಠ ಪಕ್ಷ ನಾನು ಬೆಂಕಿ ಆರಿಸುವವರ ಗುಂಪಿನಲ್ಲಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ ಎಂದು ಉತ್ತರಿಸುತ್ತದೆ.
ಈ ಕಥೆಯ ಮೂಲಕ ಸಮಾಜದಲ್ಲಿ ಎರಡು ರೀತಿಯ ಜನರಿರುತ್ತಾರೆ. ಕೆಲವರು ಬೆಂಕಿ ಆರಿಸಲು ಪ್ರಯತ್ನಿಸುತ್ತಾರೆ, ಇನ್ನು ಕೆಲವರು ಬೆಂಕಿ ಹಚ್ಚುತ್ತಾರೆ. ನಾವು ಯಾವ ಗುಂಪಿಗೆ ಸೇರಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಒಗ್ಗಟ್ಟು ಮೂಡಿಸುವ ಕೆಲಸದಲ್ಲಿ ಪ್ರತಿಯೊಬ್ಬರೂ ತಮ್ಮಿಂದಾದ ಕೊಡುಗೆ ನೀಡಬೇಕು. ಟೀಕೆ, ದ್ವೇಷ ಮತ್ತು ವೈಷಮ್ಯಗಳನ್ನು ಹರಡುವ ಬದಲು ಪ್ರೀತಿ, ಕೃತಜ್ಞತೆ ಮತ್ತು ಸಹಬಾಳ್ವೆಯನ್ನು ಬೆಳೆಸಬೇಕು ಎಂಬ ಸಂದೇಶವನ್ನು ಈ ಕಥೆ ನೀಡುತ್ತದೆ ಎಂದರು.
ಸಮಾನತೆಯೇ ಬಸವಣ್ಣನವರ ಸಮನ್ವಯ ದೃಷ್ಟಿಯ ಜೀವಾಳ
‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ;
ಜಲವೊಂದೆ ಶೌಚಾಚಮನಕ್ಕೆ;
ಕುಲವೊಂದೆ ತನ್ನ ತಾನರಿದವಂಗೆ;
ಫಲವೊಂದೆ ಷಡುದರುಶನ ಮುಕ್ತಿಗೆ;
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ’
ಎಂಬ ಬಸವಣ್ಣನವರ ವಚನವನ್ನು ವಿವರಿಸಿದ ಅವರು, ಶಿವಾಲಯಕ್ಕೂ ಹೊಲಗೇರಿಗೂ ಆಧಾರವಾಗಿರುವುದು ಒಂದೇ ನೆಲ. ಶೌಚಕ್ಕೂ ಆಚಮನಕ್ಕೂ ಬಳಕೆಯಾಗುವುದು ಒಂದೇ ಜಲ. ಹಾಗಿದ್ದಾಗ ಮನುಷ್ಯರ ನಡುವೆ ಜಾತಿ, ಕುಲಗಳ ಹೆಸರಿನಲ್ಲಿ ಭೇದಭಾವ ಏಕೆ? ಎಲ್ಲರೂ ಒಂದೇ ಭೂಮಿಯ ಮೇಲೆ ಬದುಕುತ್ತಿದ್ದೇವೆ, ಒಂದೇ ಗಾಳಿಯನ್ನು ಉಸಿರಾಡುತ್ತಿದ್ದೇವೆ, ಒಂದೇ ನೀರನ್ನು ಕುಡಿಯುತ್ತಿದ್ದೇವೆ. ಇಷ್ಟಾದರೂ ಮನುಷ್ಯರ ನಡುವೆ ವೈಷಮ್ಯ ಏಕೆ ಎಂಬ ಪ್ರಶ್ನೆಯನ್ನು ಬಸವಣ್ಣನವರು ಸಮಾಜದ ಮುಂದಿಟ್ಟಿದ್ದಾರೆ.
ಡಿ.ವಿ.ಜಿ. ಅವರ,
‘ಒಂದೇ ಗಗನವ ಕಾಣುತ್ತ ಒಂದೇ ನೆಲವನ್ನು ತುಳಿಯುತ್ತ ಒಂದೇ ಧಾನ್ಯವನ್ನುಣ್ಣುತ್ತ ಒಂದೇ ನೀರ್ಕುಡಿದು, ಒಂದೇ ಗಾಳಿಯನುಸಿರ್ವ ನರಜಾತಿಯೊಳಗೆಂತು ಬಂದುದೀ ವೈಷಮ್ಯ ಮಂಕುತಿಮ್ಮ?’
ಎಂಬ ಸಾಲುಗಳೂ ಇದೇ ಸಮಾನತೆಯ ಆಶಯವನ್ನು ಪ್ರತಿಪಾದಿಸುತ್ತವೆ ಎಂದರು.
ಬೇರೆಯವರ ತಪ್ಪುಗಳನ್ನು ಹುಡುಕುವ ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ‘ಬೇರೆಯ ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ’ ಎಂಬ ಬಸವಣ್ಣನವರ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ನಮ್ಮ ನಡೆ-ನುಡಿ, ಆಲೋಚನೆ ಮತ್ತು ವರ್ತನೆಗಳಲ್ಲಿ ಬದಲಾವಣೆ ತಂದುಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ.
‘ನಿಂದಿಸುವನೊಬ್ಬ, ಸ್ತುತಿಸುವನೊಬ್ಬ,
ಇವರಿಬ್ಬರು ನಮ್ಮ ಶಿವಯೋಗಿಯ ಪರಮಬಂಧುಗಳಯ್ಯಾ.
ಪಾಪವನೊಬ್ಬ ಕೊಂಬ, ಪುಣ್ಯವನೊಬ್ಬ ಕೊಂಬ,
ಕೂಡಲಸಂಗಮದೇವಾ, ನಿಮ್ಮ ಶರಣರು ನಿತ್ಯಮುಕ್ತರು’ ಎಂಬ ವಚನದ ಮೂಲಕ ನಿಂದಿಸುವವರು ಮತ್ತು ಸ್ತುತಿಸುವವರು ಇಬ್ಬರೂ ಸಮಾಜದಲ್ಲಿ ಇರುತ್ತಾರೆ. ಅವರ ಮಾತುಗಳಿಗೆ ಅತಿಯಾಗಿ ತಲೆಕೆಡಿಸಿಕೊಳ್ಳದೆ, ನಮ್ಮ ಕರ್ತವ್ಯ ಮತ್ತು ಆದರ್ಶಗಳ ಹಾದಿಯಲ್ಲಿ ಮುನ್ನಡೆಯಬೇಕು. ಬಸವಣ್ಣನವರ ಸಮನ್ವಯ ದೃಷ್ಟಿಯು ಎಲ್ಲರನ್ನೂ ಒಳಗೊಳ್ಳುವ, ಎಲ್ಲರಿಗೂ ಗೌರವ ನೀಡುವ ಮತ್ತು ಭೇದಭಾವವಿಲ್ಲದ ಸಮಾಜ ನಿರ್ಮಿಸುವ ಉನ್ನತ ಚಿಂತನೆಯಾಗಿದೆ ಎಂದು ತಿಳಿಸಿದರು.
ಕೊನೆಯಲ್ಲಿ ಬಸವಣ್ಣನವರ ವಚನಗಳನ್ನು ಮಕ್ಕಳಿಗೂ ಕಲಿಸಬೇಕಾದ ಅಗತ್ಯವನ್ನು ಹೇಳಿದ ನಟೇಶ್ ಅವರು, ತಂದೆ-ತಾಯಿಯರೇ ಮಕ್ಕಳ ಎದುರು ಸುಳ್ಳು ಹೇಳಿದರೆ ಮಕ್ಕಳು ಅದನ್ನೇ ಕಲಿಯುತ್ತಾರೆ. ಆದ್ದರಿಂದ ಹಿರಿಯರು ಮೊದಲು ತಮ್ಮ ಬದುಕಿನಲ್ಲಿ ಸತ್ಯ, ಪ್ರಾಮಾಣಿಕತೆ ಮತ್ತು ಸೌಜನ್ಯವನ್ನು ಅಳವಡಿಸಿಕೊಳ್ಳಬೇಕು. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ’ ಎಂಬ ಬಸವಣ್ಣನವರ ವಚನವನ್ನು ಪ್ರತಿಯೊಬ್ಬರೂ ತಮ್ಮ ಜೀವನದ ಸಂಕಲ್ಪವನ್ನಾಗಿ ಮಾಡಿಕೊಳ್ಳಬೇಕು. ವಚನಗಳನ್ನು ಕೇವಲ ಹೇಳುವುದಲ್ಲ, ಅವುಗಳಂತೆ ಬದುಕುವುದೇ ಬಸವಣ್ಣನವರಿಗೆ ಸಲ್ಲಿಸುವ ನಿಜವಾದ ಗೌರವ. ಅಂತರಂಗ ಮತ್ತು ಬಹಿರಂಗ ಶುದ್ಧಿಯ ಮೂಲಕ ಸಮಾನತೆ, ಸಾಮರಸ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳೋಣ ಎಂದು ಕರೆ ನೀಡಿದರು.








