ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಭಕ್ತಿ ಎಂದರೆ ಆಡಂಬರವಲ್ಲ, ಅಂತರಂಗದ ಶುದ್ಧತೆ ಮತ್ತು ಬದುಕಿನ ನೈತಿಕತೆ: ಡಾ. ಬಸವರಾಜಪ್ಪ

On: November 25, 2026 12:16 PM
Follow Us:

ಹರಮಘಟ್ಟ: ದೇವರನ್ನು ಹುಡುಕಿಕೊಂಡು ಗುಡಿ, ಗುಂಡಾರಗಳನ್ನು ಸುತ್ತುವುದಷ್ಟೇ ಭಕ್ತಿಯಲ್ಲ, ಹಣ, ಆಭರಣಗಳನ್ನು ಅರ್ಪಿಸಿ ಆಡಂಬರ ಪ್ರದರ್ಶಿಸುವುದೂ ನಿಜವಾದ ಭಕ್ತಿಯಲ್ಲ. ನಮ್ಮ ಅಂತರಂಗ ಶುದ್ಧವಾಗಿರಬೇಕು, ನುಡಿದಂತೆ ನಡೆಯಬೇಕು, ಮಾಡಿದ ಕಾಯಕದಲ್ಲಿ ಪ್ರಾಮಾಣಿಕತೆ ಇರಬೇಕು. ಮನುಷ್ಯನ ಬದುಕೇ ಪೂಜೆಯಾಗಬೇಕು, ಕಾಯಕವೇ ಕೈಲಾಸವಾಗಬೇಕು. ಇಂತಹ ಅದ್ಭುತ ಭಕ್ತಿ ತತ್ವವನ್ನು 12ನೇ ಶತಮಾನದಲ್ಲಿಯೇ ಜಗತ್ತಿಗೆ ಸಾರಿದವರು ಬಸವಣ್ಣನವರು. ಆದರೆ ದುರಂತವೆಂದರೆ, 12ನೇ ಶತಮಾನದಿಂದ 21ನೇ ಶತಮಾನಕ್ಕೆ ಬಂದರೂ ಬಸವಣ್ಣನವರನ್ನು, ಶರಣರ ಬದುಕಿನ ಮೌಲ್ಯಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ ಎಂದು ಉಪನ್ಯಾಸಕರಾದ ಡಾ. ಬಸವರಾಜಪ್ಪ ವಿಷಾದಿಸಿದರು.

ಶಿವಮೊಗ್ಗ ತಾಲ್ಲೂಕಿನ ಹರಮಘಟ್ಟದ ಶ್ರೀ ರಾಮಾಂಜನೇಯ ರಂಗಮಂದಿರದಲ್ಲಿ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು, ಬಸವಕೇಂದ್ರ, ಶಿವಮೊಗ್ಗ, ಅರಳಿಕಟ್ಟೆ ಅನುಭವ ಮಂಟಪ–6 ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಇವರ ಆಶ್ರಯದಲ್ಲಿ, ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುತ್ತಿರುವ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮದ 11ನೇ ದಿನದ ಚಿಂತನಗೋಷ್ಠಿಯಲ್ಲಿ ‘ಬಸವಣ್ಣ – ಭಕ್ತಿ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ನಮ್ಮ ಬೌದ್ಧಿಕ ದಾರಿದ್ರ್ಯ ಎಷ್ಟರಮಟ್ಟಿಗೆ ನಮ್ಮನ್ನು ಆವರಿಸಿಕೊಂಡಿದೆ ಎಂದರೆ, ನಮ್ಮ ನೆಲದಲ್ಲಿ ಜನಿಸಿದ ಬಸವಣ್ಣನವರ ಬಗ್ಗೆಯೇ ಇಂದಿಗೂ ಪ್ರಶ್ನೆಗಳು, ಅನುಮಾನಗಳು ವ್ಯಕ್ತವಾಗುತ್ತಿವೆ. ಬಸವಣ್ಣ ಯಾರು? ಅವರು ಏನು ಮಾಡಿದರು? ಶರಣ ಚಳವಳಿಯ ಉದ್ದೇಶವೇನು? ಸಮಾಜಕ್ಕೆ ಅವರು ನೀಡಿದ ಕೊಡುಗೆ ಏನು? ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವ ಉದ್ದೇಶದಿಂದಲೇ ಪೂಜ್ಯ ಸ್ವಾಮೀಜಿಗಳು ಕಾರ್ತಿಕ ಚಿಂತನದ ಮೂಲಕ ಪ್ರತಿದಿನ ಊರುಗಳಲ್ಲಿ, ಮನೆಬಾಗಿಲುಗಳಲ್ಲಿ ಬಸವಣ್ಣನವರ ವಿಚಾರಧಾರೆಯನ್ನು ಜನರಿಗೆ ತಲುಪಿಸುತ್ತಿದ್ದಾರೆ. ಈ ಮಹತ್ವದ ಕಾರ್ಯಕ್ಕಾಗಿ ಬಸವಕೇಂದ್ರ ಶ್ರೀಗಳಿಗೆ ಎಲ್ಲರ ಪರವಾಗಿ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಎಂದರು.

ಭಾರತದ ಇತಿಹಾಸದಲ್ಲಿ 12ನೇ ಶತಮಾನದಲ್ಲಿ ನಡೆದ ಶರಣ ಚಳವಳಿಯಂತಹ ಸಾಮಾಜಿಕ, ಧಾರ್ಮಿಕ ಹಾಗೂ ವೈಚಾರಿಕ ಕ್ರಾಂತಿ ಮತ್ತೊಂದಿಲ್ಲ. ಅಂದು ಸಮಾಜದಲ್ಲಿ ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಇಂದಿನ ಸಂಸತ್ತಿನ ಪರಿಕಲ್ಪನೆಗೆ ಹೋಲಿಕೆಯಾಗುವಂತಹ ಚರ್ಚೆ, ಸಂವಾದ ಮತ್ತು ವಿಚಾರ ವಿನಿಮಯದ ವೇದಿಕೆಯನ್ನು ನಿರ್ಮಿಸಿದರು. ಎಲ್ಲ ವರ್ಗದ ಜನರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ಕಲ್ಪಿಸಿದರು.

ಬಸವಣ್ಣನವರು ಕೇವಲ ಧಾರ್ಮಿಕ ಸುಧಾರಕರಲ್ಲ. ಅವರು ಮನುಷ್ಯನ ನಡೆ, ನುಡಿ, ಆಚಾರ, ವಿಚಾರ ಹಾಗೂ ಬದುಕಿನ ಮೌಲ್ಯಗಳಿಗೆ ಹೊಸ ಭಾಷ್ಯ ಬರೆದ ಮಹಾನ್ ಚಿಂತಕರು. ‘ಕಳಬೇಡ, ಕೊಲಬೇಡ, ಹುಸಿ ನುಡಿಯಲುಬೇಡ’ ಎಂಬಂತಹ ಮೌಲ್ಯಗಳ ಮೂಲಕ ಸಮಾಜಕ್ಕೆ ನೈತಿಕ ಬದುಕಿನ ಮಾರ್ಗ ತೋರಿದರು. ‘ನಡೆದಂತೆ ನುಡಿಯಬೇಕು, ನುಡಿದಂತೆ ನಡೆಯಬೇಕು’ ಎಂಬ ಜೀವನಪಾಠ ಕಲಿಸಿದರು.

ಇಂದು ಬಸವಣ್ಣನವರ ವಿಚಾರಗಳ ಕುರಿತು ಚರ್ಚೆಗಳು, ಭಿನ್ನಾಭಿಪ್ರಾಯಗಳು ನಡೆಯುತ್ತಿವೆ. ಆದರೆ ಇಂತಹ ಚರ್ಚೆಗಳು ಹೊಸತಲ್ಲ. ಶರಣರ ಕಾಲದಲ್ಲಿಯೇ ಶರಣರು ಪರಸ್ಪರರ ವಿಚಾರಗಳನ್ನು ವಿಮರ್ಶಿಸುತ್ತಿದ್ದರು. ವಚನಗಳಲ್ಲಿಯೇ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ, ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುತ್ತಿದ್ದರು. ಇತ್ತೀಚೆಗೆ ಪೂಜ್ಯ ಸ್ವಾಮೀಜಿಗಳು ‘ಬೆರಗು’ ಎಂಬ ನಾಟಕ ಕೃತಿಯ ವಾಚಿಕಾಭಿನಯದ ಮೂಲಕ ಬಸವಣ್ಣನವರ ಕಾಲದ 25 ಶರಣರ ದೃಷ್ಟಿಕೋನದಲ್ಲಿ ಅವರ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದಾರೆ. ಚಿಂತನ, ಮಂಥನ ಮತ್ತು ಆರೋಗ್ಯಕರ ವಿಮರ್ಶೆಗಳು ಯಾವತ್ತಿಗೂ ಸ್ವಾಗತಾರ್ಹ. ಆದರೆ ಅರ್ಥವಿಲ್ಲದ ಮಾತುಗಳು ಹಾಗೂ ಗೌರವಕ್ಕೆ ಧಕ್ಕೆ ತರುವ ನಡವಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಸವರಾಜಪ್ಪ ಹೇಳಿದರು.

ಭಕ್ತಿ ಎಂದರೆ ಏನು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಭಕ್ತಿ ಎನ್ನುವುದು ಪ್ರತಿಯೊಬ್ಬರ ವೈಯಕ್ತಿಕ ಹಾಗೂ ಅಂತರಂಗದ ಅನುಭೂತಿ. ಅಲ್ಲಿ ಭಾವನೆ ಮುಖ್ಯವೇ ಹೊರತು ಬಾಹ್ಯ ಪ್ರದರ್ಶನವಲ್ಲ. ದೇವರಿಗೆ ವಜ್ರದ ಕಿರೀಟ ಅರ್ಪಿಸುವುದು, ದೊಡ್ಡ ದೊಡ್ಡ ಪೂಜೆಗಳನ್ನು ಮಾಡಿಸುವುದು ಅಥವಾ ಗುಡಿ, ಗುಂಡಾರಗಳನ್ನು ಸುತ್ತುವುದೇ ಭಕ್ತಿಯ ಮಾನದಂಡವಾಗಬಾರದು.

ತನ್ನ ಹಸಿವನ್ನು ತಾನು ಊಟ ಮಾಡುವುದರಿಂದಲೇ ನೀಗಿಸಿಕೊಳ್ಳಬೇಕು. ಹಾಗೆಯೇ ತನ್ನ ಭಕ್ತಿಯನ್ನು ತಾನೇ ಅರ್ಪಿಸಬೇಕು. ಬೇರೆಯವರು ಪೂಜೆ ಮಾಡಿದರೆ ನಮ್ಮ ಭಕ್ತಿ ದೇವರನ್ನು ತಲುಪುವುದಿಲ್ಲ. ಜನಪದ ಹೆಣ್ಣುಮಗಳೊಬ್ಬಳು ಹೇಳುವಂತೆ, ‘ಏ ದಾರಿ ಬಿಡು ಪೂಜಾರಿ, ನನಗೂ ದೇವರಿಗೂ ಒಳಮಾತು’ ಎಂಬ ಮಾತು ಭಕ್ತಿಯ ನಿಜವಾದ ಸ್ವರೂಪವನ್ನು ತಿಳಿಸುತ್ತದೆ. ದೇವರು ಮತ್ತು ಭಕ್ತನ ನಡುವೆ ಮಧ್ಯವರ್ತಿಗಳ ಅಗತ್ಯವಿಲ್ಲ. ಭಕ್ತಿಯು ನೇರವಾಗಿ ಅಂತರಂಗದಿಂದ ವ್ಯಕ್ತವಾಗಬೇಕು ಎಂದರು.

ಬಸವಣ್ಣನವರು ದೇವರನ್ನು ದೂರದ ಸ್ವರ್ಗದಲ್ಲೋ, ಯಾವುದೋ ಗುಡಿಯಲ್ಲೋ ಹುಡುಕಬೇಡಿ, ನಿಮ್ಮೊಳಗೇ ಕಾಣಿರಿ ಎಂಬ ಸಂದೇಶ ನೀಡಿದರು. ‘ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ’ ಎಂಬ ವಚನದ ಮೂಲಕ ಮನುಷ್ಯನ ದೇಹವನ್ನೇ ದೇವಾಲಯವನ್ನಾಗಿ ರೂಪಿಸಿದರು.

‘ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ? ಎನ್ನ ಕಾಲೇ ಕಂಬ, ದೇಹವೇ ದೇಗುಲ’ ಎಂಬ ವಚನದಲ್ಲಿ ಬಡವನಿಗೂ ದೇವರನ್ನು ಆರಾಧಿಸುವ ಸಮಾನ ಅವಕಾಶವಿದೆ ಎಂಬುದನ್ನು ಸಾರಿದರು. ದೇವರನ್ನು ಒಲಿಸಿಕೊಳ್ಳಲು ಹಣ, ಆಸ್ತಿ, ಆಡಂಬರದ ಅಗತ್ಯವಿಲ್ಲ. ಶುದ್ಧ ಮನಸ್ಸು ಮತ್ತು ಪ್ರಾಮಾಣಿಕ ಬದುಕು ಇದ್ದರೆ ಸಾಕು.

ದೇವರು ನಮ್ಮೊಳಗೇ ಇದ್ದಾನೆ ಎಂಬ ಅರಿವು ಬಂದರೆ ನಾವು ಸುಳ್ಳು ಹೇಳಲು, ಮೋಸ ಮಾಡಲು, ಕಳ್ಳತನ ಮಾಡಲು ಸಾಧ್ಯವೇ? ಯಾರೂ ನೋಡುತ್ತಿಲ್ಲ, ಯಾರೂ ಕೇಳುತ್ತಿಲ್ಲ ಎಂದು ತಪ್ಪು ಮಾಡುವ ಮನುಷ್ಯನಿಗೆ ತನ್ನೊಳಗೇ ದೇವರಿದ್ದಾನೆ ಎಂಬ ಅರಿವು ಬಂದಾಗ ಆತ್ಮಸಾಕ್ಷಿಯೇ ಎಚ್ಚರಿಸುತ್ತದೆ. ಇದೇ ಬಸವಣ್ಣನವರ ಭಕ್ತಿಯ ಮಹತ್ವ ಎಂದು ಹೇಳಿದರು.

‘ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ಎಂಬ ವಚನದ ಮೂಲಕ ಸ್ವರ್ಗ ಮತ್ತು ನರಕಗಳು ಬೇರೆಲ್ಲೋ ಇಲ್ಲ, ನಮ್ಮ ಮಾತು ಮತ್ತು ನಡವಳಿಕೆಯಲ್ಲಿಯೇ ಇವೆ ಎಂದು ಶರಣರು ತಿಳಿಸಿದರು. ಒಳ್ಳೆಯ ಮಾತು, ಒಳ್ಳೆಯ ನಡೆ, ಪರಸ್ಪರ ಗೌರವ ಮತ್ತು ಮಾನವೀಯತೆಯ ಬದುಕು ಸ್ವರ್ಗಕ್ಕೆ ಸಮಾನ. ಕೆಟ್ಟ ನಡವಳಿಕೆ, ದ್ವೇಷ, ಅಸೂಯೆ ಮತ್ತು ಮೋಸವೇ ನರಕಕ್ಕೆ ಕಾರಣವಾಗುತ್ತವೆ.

‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವನು ಅಲ್ಲಿಯೂ ಸಲ್ಲುವನಯ್ಯ’ ಎಂಬ ವಚನದ ಮೂಲಕ ಈ ಭೂಮಿಯ ಮೇಲಿನ ಬದುಕೇ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಕಮ್ಮಟ ಎಂಬುದನ್ನು ವಿವರಿಸಿದರು. ಇಲ್ಲಿನ ಬದುಕಿನಲ್ಲಿ ಸತ್ಯ, ಧರ್ಮ, ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ಪಾಲಿಸುವವನೇ ನಿಜವಾದ ಅರ್ಥದಲ್ಲಿ ಸಾರ್ಥಕ ಬದುಕು ನಡೆಸಿದವನು ಎಂದರು.

ಬಸವಣ್ಣನವರು ಬಾಹ್ಯ ಆಚರಣೆಗಳಿಗಿಂತ ಅಂತರಂಗದ ಶುದ್ಧತೆಗೆ ಹೆಚ್ಚಿನ ಮಹತ್ವ ನೀಡಿದರು. ‘ಏತ ತಲೆವಾಗಿದರೇನು, ಗುರುಭಕ್ತನಾಗಬಲ್ಲುದೆ?
ಇಕ್ಕುಳ ಕೈಮುಗಿದರೇನು? ಭೃತ್ಯಾಚಾರಿಯಾಗಬಲ್ಲುದೆ?
ಗಿಳಿಯೋದಿದರೇನು, ಲಿಂಗವೇದಿಯಾಗಬಲ್ಲುದೆ?
ಕೂಡಲಸಂಗನ ಶರಣರ ಬಂದ ಬರವ, ನಿಂದ ನಿಲವ
ಅನಂಗಸಂಗಿಗಳೆತ್ತ ಬಲ್ಲರು?
‘ ಎಂಬ ವಚನದ ಮೂಲಕ ಕೇವಲ ದೇಹವನ್ನು ಬಾಗಿಸುವುದರಿಂದ ಅಥವಾ ಕೈಮುಗಿಯುವುದರಿಂದ ಭಕ್ತಿ ಸಿದ್ಧಿಸುವುದಿಲ್ಲ. ಮನಸ್ಸು ಬದಲಾಗಬೇಕು, ನಡವಳಿಕೆ ಬದಲಾಗಬೇಕು ಎಂಬುದನ್ನು ತಿಳಿಸಿದರು.

‘ನಂಬರು, ನೆಚ್ಚರು, ಬರಿದೆ ಕರೆವರು,
ನಂಬಲರಿಯರೀ ಲೋಕದ ಮನುಜರು.
ನಂಬಿ ಕರೆದಡೆ ಓ ಎನ್ನನೇ ಶಿವನು?
ನಂಬದೆ, ನೆಚ್ಚದೆ, ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ?’ ಎಂಬ ವಚನದಲ್ಲಿ ದೇವರ ಮೇಲಿನ ನಂಬಿಕೆ ಮತ್ತು ವಿಶ್ವಾಸದ ಮಹತ್ವವನ್ನು ಸಾರಿದರು. ಪ್ರೀತಿ, ನಂಬಿಕೆ ಮತ್ತು ಶ್ರದ್ಧೆಯಿಲ್ಲದ ಪೂಜೆ ಕೇವಲ ಬಾಹ್ಯ ಪ್ರದರ್ಶನವಾಗುತ್ತದೆ. ‘ಒಲವಿಲ್ಲದ ಪೂಜೆ, ನೇಮವಿಲ್ಲದ ಮಾಟ’ ಎಂಬ ವಚನದ ಮೂಲಕ ನಿಜವಾದ ಭಾವನೆ ಇಲ್ಲದ ಭಕ್ತಿ ಕೇವಲ ಚಿತ್ರರೂಪದಂತೆ ನಿರರ್ಥಕ ಎಂದು ಎಚ್ಚರಿಸಿದರು.

ಕಲ್ಲಿನ ನಾಗರನಿಗೆ ಹಾಲೆರೆಯುವವರು ನಿಜವಾದ ಹಾವು ಕಂಡಾಗ ಅದನ್ನು ಕೊಲ್ಲಲು ಮುಂದಾಗುತ್ತಾರೆ. ಕಲ್ಲಿನ ಲಿಂಗಕ್ಕೆ ಪೂಜೆ ಮಾಡುವವರು ಜೀವಂತ ಜಂಗಮನಿಗೆ ಗೌರವ ನೀಡುವುದಿಲ್ಲ. ಗಣಪನನ್ನು ಪೂಜಿಸುವವರು ಆನೆ ಕಂಡರೆ ಓಡುತ್ತಾರೆ. ಹನುಮನನ್ನು ಆರಾಧಿಸುವವರು ಕೋತಿಯನ್ನು ಕಂಡರೆ ದೂರ ಸರಿಯುತ್ತಾರೆ. ಇಂತಹ ವೈರುಧ್ಯಗಳು ನಮ್ಮ ಭಕ್ತಿಯಲ್ಲಿರಬಾರದು. ದೇವರ ಹೆಸರಿನಲ್ಲಿ ಮಾಡುವ ಆಚರಣೆಗಳಿಗಿಂತ ಜೀವಂತ ಜೀವಿಗಳಲ್ಲಿ ದೇವರನ್ನು ಕಾಣುವ ಗುಣ ಬೆಳೆಸಿಕೊಳ್ಳಬೇಕು ಎಂದು ಬಸವರಾಜಪ್ಪ ಹೇಳಿದರು.

ಬಸವಣ್ಣನವರ ಭಕ್ತಿ ತತ್ವದಲ್ಲಿ ಕಾಯಕಕ್ಕೆ ಅತ್ಯಂತ ಮಹತ್ವವಿದೆ. ಕೆಲಸ ಕಾರ್ಯಗಳನ್ನು ಬಿಟ್ಟು ಪೂಜೆ, ಧ್ಯಾನವೆಂದು ಕುಳಿತುಕೊಳ್ಳುವುದಲ್ಲ. ಪ್ರಾಮಾಣಿಕವಾಗಿ ಮಾಡುವ ಪ್ರತಿಯೊಂದು ಕಾಯಕವೂ ದೇವರ ಪೂಜೆಯೇ ಎಂಬುದು ಶರಣರ ಸಂದೇಶ.

ಇದಕ್ಕೆ ಕುಂಬಾರ ಗುಂಡಯ್ಯನ ಪ್ರಸಂಗವನ್ನು ಉದಾಹರಿಸಿದರು. ಕುಂಬಾರ ಗುಂಡಯ್ಯ ಮಡಿಕೆ ತಯಾರಿಸಿ, ಅದರ ಗುಣಮಟ್ಟ ಪರೀಕ್ಷಿಸಲು ತಾಳಬದ್ಧವಾಗಿ ಬಡಿಯುತ್ತಿದ್ದ. ಆ ಬಡಿತದ ನಾದಕ್ಕೆ ಶಿವನೇ ಕೈಲಾಸದಲ್ಲಿ ಸಂತೋಷದಿಂದ ಕುಣಿದನೆಂಬ ಪ್ರಸಂಗವಿದೆ. ಏಕೆಂದರೆ ತನ್ನ ಭಕ್ತನ ಕಾಯಕದಲ್ಲಿಯೇ ದೇವರು ಸಂತೋಷ ಕಂಡಿದ್ದ.

ಅದೇ ರೀತಿ ನುಲಿಯ ಚಂದಯ್ಯ ಹಗ್ಗ ಹೊಸೆಯುವ ಕಾಯಕದಲ್ಲಿ ತೊಡಗಿದ್ದಾಗ ಶಿವಲಿಂಗವೇ ಅಡ್ಡಬಂದರೂ ಅದನ್ನು ಒಪ್ಪಲಿಲ್ಲ. ತನ್ನ ಕಾಯಕಕ್ಕೆ ಅಡ್ಡಿಯಾಗುವ ದೇವರೂ ತನಗೆ ಬೇಡ ಎಂಬಷ್ಟು ಕಾಯಕನಿಷ್ಠೆ ಆತನಲ್ಲಿತ್ತು. ಕೊನೆಗೆ ದೇವರೇ ಆತನ ಕಾಯಕಕ್ಕೆ ಸಹಕರಿಸುವ ಸ್ಥಿತಿ ನಿರ್ಮಾಣವಾಯಿತು. ಕಾಯಕದಲ್ಲಿ ಪ್ರಾಮಾಣಿಕತೆ, ವ್ಯವಹಾರದಲ್ಲಿ ಸತ್ಯನಿಷ್ಠೆ ಮತ್ತು ದುಡಿಮೆಯಲ್ಲಿ ಶ್ರದ್ಧೆ ಇರಬೇಕು ಎಂಬುದನ್ನು ಈ ಪ್ರಸಂಗಗಳು ಸಾರುತ್ತವೆ.

ಶರಣರು ತಮ್ಮ ಕಾಯಕವನ್ನು ನಿಲ್ಲಿಸಿ ದೇವರ ಹಿಂದೆ ಹೋಗಲಿಲ್ಲ. ಬದಲಾಗಿ ಕಾಯಕವನ್ನೇ ಆರಾಧನೆಯನ್ನಾಗಿ ಮಾಡಿಕೊಂಡರು. ದುಡಿಮೆಯ ಮೂಲಕವೇ ಬದುಕಿನಲ್ಲಿ ದೇವರನ್ನು ಕಾಣುವ ಮಾರ್ಗವನ್ನು ತೋರಿಸಿದರು ಎಂದು ಹೇಳಿದರು.

ಅನುಭವ ಮಂಟಪದ ವಿಶೇಷತೆಯೆಂದರೆ ಅಲ್ಲಿ ಜಾತಿ, ವರ್ಗ, ವೃತ್ತಿ, ಲಿಂಗದ ಭೇದವಿರಲಿಲ್ಲ. ಚಮ್ಮಾರ, ಕುಂಬಾರ, ನೇಕಾರ, ಕ್ಷೌರಿಕ, ಹಗ್ಗ ಹೊಸೆಯುವವರು ಸೇರಿದಂತೆ ಎಲ್ಲ ವೃತ್ತಿಯ ಜನರಿಗೂ ತಮ್ಮ ವಿಚಾರಗಳನ್ನು ಮಂಡಿಸಲು ಅವಕಾಶವಿತ್ತು. ಅಕ್ಕಮಹಾದೇವಿ, ಸತ್ಯಕ್ಕ ಸೇರಿದಂತೆ ಮಹಿಳಾ ಶರಣೆಯರಿಗೂ ತಮ್ಮ ಅನುಭವ ಮತ್ತು ಚಿಂತನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನೀಡಲಾಗಿತ್ತು.

ಆಧ್ಯಾತ್ಮಿಕ ಚಿಂತನೆ ಮತ್ತು ಸಾಹಿತ್ಯದ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಕಲ್ಪಿಸುವ ಮೂಲಕ ಶರಣರು ಹೊಸ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ ಕಾಣಾ, ರಾಮನಾಥಾ!‘ ಎಂಬ ವಚನದ ಮೂಲಕ ದಾಂಪತ್ಯ ಜೀವನದಲ್ಲಿಯೂ ಸಮಾನತೆ ಮತ್ತು ಪರಸ್ಪರ ಗೌರವದ ಮಹತ್ವವನ್ನು ಸಾರಿದರು.

‘ಭಕ್ತನಾದಡೆ ಬಸವಣ್ಣನಂತಾಗಬೇಕು,
ಜಂಗಮವಾದಡೆ ಪ್ರಭುವಿನಂತಾಗಬೇಕು,
ಭೋಗಿಯಾದಡೆ ನಮ್ಮ ಗುರು ಚೆನ್ನಬಸವಣ್ಣನಂತಾಗಬೇಕು,
ಯೋಗಿಯಾದಡೆ ನನ್ನಂತಾಗಬೇಕು ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.’

ಎಂಬ ನುಡಿಯ ಮೂಲಕ ಭಕ್ತಿಗೆ ಬಸವಣ್ಣನವರು, ಜಂಗಮ ತತ್ವಕ್ಕೆ ಅಲ್ಲಮಪ್ರಭು, ವೈರಾಗ್ಯಕ್ಕೆ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು, ಜ್ಞಾನಕ್ಕೆ ಚನ್ನಬಸವಣ್ಣನವರು ಮಾದರಿಯಾಗಿದ್ದಾರೆ ಎಂಬುದನ್ನು ವಿವರಿಸಿದರು.

ಆಧ್ಯಾತ್ಮಿಕ ಚಿಂತನೆ, ದೇವರು ಮತ್ತು ಧರ್ಮದ ಬಗ್ಗೆ ಮಾತನಾಡಲು ವಯಸ್ಸಾದ ಮೇಲೆ ಸಮಯ ಮೀಸಲಿಡಬೇಕು ಎಂಬ ಮನೋಭಾವ ಸರಿಯಲ್ಲ. ಬದುಕಿನ ಕೊನೆಯ ಹಂತದಲ್ಲಿ ದೇವರನ್ನು ನೆನಪಿಸಿಕೊಳ್ಳುವುದಕ್ಕಿಂತ ಯೌವನದಲ್ಲಿಯೇ ಉತ್ತಮ ನಡವಳಿಕೆ ಮತ್ತು ಸತ್ಕರ್ಮಗಳನ್ನು ರೂಢಿಸಿಕೊಳ್ಳಬೇಕು.

‘ನರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ, ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ, ಕಾಲ ಮೇಲೆ ಕೈಯನೂರಿ, ಕೋಲ ಹಿಡಿಯದ ಮುನ್ನ, ಮುಪ್ಪಿಂದೊಪ್ಪವಳಿಯದ ಮುನ್ನ,
ಮೃತ್ಯು ಮುಟ್ಟದ ಮುನ್ನ, ಪೂಜಿಸು ಕೂಡಲಸಂಗಮದೇವನ.’

ಎಂಬ ವಚನದ ಮೂಲಕ ವಯಸ್ಸು, ಅನಾರೋಗ್ಯ ಮತ್ತು ಅಸಹಾಯಕತೆ ಆವರಿಸುವ ಮುನ್ನವೇ ಸಾರ್ಥಕ ಬದುಕಿನ ಹಾದಿಯಲ್ಲಿ ನಡೆಯುವಂತೆ ಬಸವಣ್ಣನವರು ಎಚ್ಚರಿಸಿದ್ದಾರೆ ಎಂದು ಹೇಳಿದರು.

ಶರಣರು ತಿಳಿಸಿರುವ ಷಟ್‌ಸ್ಥಲಗಳಾದ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಆರು ಹಂತಗಳು ಮನುಷ್ಯನ ಆಧ್ಯಾತ್ಮಿಕ ಬೆಳವಣಿಗೆಯ ಮಾರ್ಗಗಳಾಗಿವೆ. ಭಕ್ತಿಯಿಂದ ಆರಂಭವಾಗಿ ಐಕ್ಯದ ಸ್ಥಿತಿಯನ್ನು ತಲುಪುವ ಈ ಪಯಣದಲ್ಲಿ ಪ್ರತಿಯೊಬ್ಬರೂ ಒಂದೊಂದೇ ಹಂತವನ್ನು ದಾಟುತ್ತಾ ಮುನ್ನಡೆಯಬೇಕು ಎಂದು ಹೇಳಿದರು.

ಬಸವಣ್ಣನವರ ‘ಭಕ್ತಿ ಸುಭಾಷೆಯ ನುಡಿಯ ನುಡಿವೆ,
ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ.
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ. ಒಂದು ಜವೆ ಕೊರತೆಯಾದಡೆ ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ.’ ಎಂಬ ವಚನವು ವ್ಯಕ್ತಿಯ ನುಡಿ ಮತ್ತು ನಡೆಯ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸುತ್ತದೆ. ನಾವು ಮಾತನಾಡುವುದಕ್ಕೂ ಬದುಕುವುದಕ್ಕೂ ವ್ಯತ್ಯಾಸವಿರಬಾರದು. ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನೈತಿಕತೆಯೇ ನಿಜವಾದ ಭಕ್ತಿಯ ಅಡಿಪಾಯ.

‘ಕಾಗೆ ಒಂದು ಗುಟುಕ ಕಂಡರೆ ಕರೆಯದೆ ತನ್ನ ಬಳಗವನ್ನ, ಕೋಳಿ ಒಂದು ಗುಟುಕ ಕಂಡರೆ ಕರೆಯದೆ ತನ್ನ ಬಳಗವನ್ನ, ಶಿವಭಕ್ತನಾಗಿ ಭಕ್ತಿ ಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಗಿಂತ ಕರಕಷ್ಟ’ ಎಂಬ ವಚನದ ಮೂಲಕ ಹಂಚಿಕೊಂಡು ಬದುಕುವ ಗುಣವನ್ನು ಶರಣರು ಕಲಿಸಿಕೊಟ್ಟಿದ್ದಾರೆ. ಸಹಬಾಳ್ವೆ, ಸಹಕಾರ ಮತ್ತು ಪರಸ್ಪರ ಪ್ರೀತಿಯಿಂದ ಬದುಕುವುದೇ ಮನುಷ್ಯನ ನಿಜವಾದ ಧರ್ಮವಾಗಬೇಕು ಎಂದು ಹೇಳಿದರು.

‘ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು,
ಆಚಾರವೆಂಬ ಕಾಯಾಯಿತ್ತು.
ನಿಷ್ಪತ್ತಿಯೆಂಬ ಹಣ್ಣಾಯಿತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ!’

ಎಂಬ ವಚನದಲ್ಲಿ ಗುರು, ಲಿಂಗ, ಜಂಗಮ, ವಿಚಾರ, ಆಚಾರ ಮತ್ತು ಸಾಧನೆಯ ಮಹತ್ವವನ್ನು ವಿವರಿಸಲಾಗಿದೆ.

‘ನಾದಪ್ರಿಯ ಶಿವನೆಂಬರು; ನಾದಪ್ರಿಯ ಶಿವನಲ್ಲಯ್ಯಾ. ವೇದಪ್ರಿಯ ಶಿವನೆಂಬರು; ವೇದಪ್ರಿಯ ಶಿವನಲ್ಲಯ್ಯಾ. ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾಯಿತ್ತು; ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು. ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ, ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ’ ಎಂಬ ವಚನದ ಮೂಲಕ ದೇವರಿಗೆ ಮುಖ್ಯವಾಗಿರುವುದು ಸಂಗೀತ, ವೇದಗಳ ಪಾಂಡಿತ್ಯ ಅಥವಾ ಬಾಹ್ಯ ಆಡಂಬರವಲ್ಲ, ನಿಷ್ಕಲ್ಮಶವಾದ ಭಕ್ತಿ ಎಂಬುದನ್ನು ಬಸವಣ್ಣನವರು ಸಾರಿದ್ದಾರೆ.

ಬಸವಣ್ಣನವರ ಬದುಕು ಮತ್ತು ವಚನಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಬೇಕು. ಶರಣರ ವಿಚಾರಗಳಿಗೆ ಎದುರಾಗುವ ಪ್ರಶ್ನೆಗಳಿಗೆ ಕೇವಲ ಮಾತಿನ ಮೂಲಕವಲ್ಲ, ನಮ್ಮ ಬದುಕಿನ ಮೂಲಕವೇ ಉತ್ತರ ನೀಡಬೇಕು. ನಮ್ಮ ನಡೆ, ನುಡಿ, ಕಾಯಕ ಮತ್ತು ಸಾಮಾಜಿಕ ಹೊಣೆಗಾರಿಕೆಗಳಲ್ಲಿ ಬಸವಣ್ಣನವರ ಆದರ್ಶಗಳು ಪ್ರತಿಫಲಿಸಬೇಕು. ಅಂತಹ ಬದುಕನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ಬಸವರಾಜಪ್ಪನವರು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲವಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಡಾ. ಎಂ. ಬಸವರಾಜಪ್ಪ, ಖ್ಯಾತ ಗಾಯಕರಾದ ಕೆ. ಯುವರಾಜ್, ಹನುಮಂತಪ್ಪ, ಚಂದ್ರಶೇಖರಪ್ಪ ಸೇರಿದಂತೆ ಹರಮಘಟ್ಟ ಗ್ರಾಮದ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಧರ್ಮದ ಬೆಳಕಿನಲ್ಲಿ ಸಮಾಜದ ಉನ್ನತಿಗೆ ಸತ್ಕಾರ್ಯಗಳ ಹೊಸ ಸಂಕಲ್ಪ: ಶ್ರೀ ರಂಭಾಪುರಿ ಜಗದ್ಗುರುಗಳು

ಬಸವಣ್ಣನವರ ವಚನಗಳು ಕೇವಲ ಪಠಣಕ್ಕಲ್ಲ, ಬದುಕಿನಲ್ಲಿ ಅಳವಡಿಸಿಕೊಳ್ಳುವ ಜೀವನಸೂತ್ರಗಳು: ಜಿ. ನಟೇಶ್

ಭೇದಗಳ ಗೋಡೆ ಕೆಡವಿ, ಮಾನವೀಯತೆಯ ಸೇತುವೆ ನಿರ್ಮಿಸುವುದೇ ಬಸವಣ್ಣನವರ ಸಮನ್ವಯ ದೃಷ್ಟಿ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ಅಂತರಂಗದ ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಜ್ಯೋತಿ ಬೆಳಗಿಸುವುದೇ ಕಾರ್ತಿಕ ದೀಪೋತ್ಸವದ ನಿಜವಾದ ಆಶಯ: ಶ್ರೀ ರಂಭಾಪುರಿ ಜಗದ್ಗುರುಗಳು

ಲಾಂಛನ ಧರಿಸುವುದಷ್ಟೇ ಧರ್ಮವಲ್ಲ; ವಿಭೂತಿ, ರುದ್ರಾಕ್ಷಿ ಧರಿಸಿದರೆ ಸಾಲದು, ಅವುಗಳ ತತ್ವದಂತೆ ಬದುಕುವುದೇ ನಿಜವಾದ ಬಸವತತ್ವದ ಆಚರಣೆ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ಸ್ಥಾವರದ ವೈಭವ ಕ್ಷಣಿಕ, ಜಂಗಮದ ಜ್ಞಾನ ಶಾಶ್ವತ; ಮನುಷ್ಯನ ಅಂತರಂಗದಲ್ಲೇ ದೇವರನ್ನು ಕಂಡುಕೊಳ್ಳುವ ಮಾರ್ಗ ತೋರಿದವರು ಬಸವಣ್ಣ: ಡಾ. ಜಿ.ಎ. ಮಂಜುನಾಥ

Leave a Comment