ಕಾರ್ತಿಕ ದೀಪೋತ್ಸವ ಕೇವಲ ದೀಪ ಬೆಳಗಿಸುವ ಆಚರಣೆಯಲ್ಲ, ಪ್ರತಿಯೊಬ್ಬರ ಬದುಕಿನಲ್ಲಿ ಜ್ಞಾನ, ಭಕ್ತಿ, ಸಂಸ್ಕಾರ ಮತ್ತು ಸಮಾಜಮುಖಿ ಚಿಂತನೆಯ ಜ್ಯೋತಿ ಬೆಳಗಿಸುವ ಪವಿತ್ರ ಸಂಕಲ್ಪವಾಗಿದೆ. ದೇಗುಲದ ಅಂಗಳದಲ್ಲಿ ಬೆಳಗುವ ದೀಪದ ಬೆಳಕು ಕ್ಷಣಿಕವಾಗಿರಬಹುದು, ಆದರೆ ಅದು ಮನದೊಳಗೆ ಮೂಡಿಸುವ ಧರ್ಮಪ್ರಜ್ಞೆ, ಮಾನವೀಯತೆ ಮತ್ತು ಸತ್ಕಾರ್ಯದ ಪ್ರೇರಣೆ ಜೀವನದುದ್ದಕ್ಕೂ ಬೆಳಕು ನೀಡಬಲ್ಲದು. ಪ್ರತಿಯೊಂದು ಜ್ಯೋತಿಯೂ ಹೊಸ ಆಶಯಕ್ಕೆ ನಾಂದಿಯಾಗಲಿ, ಪ್ರತಿಯೊಂದು ಸಂಕಲ್ಪವೂ ಸಮಾಜದ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಲಿ ಎಂಬ ಆಶಯದೊಂದಿಗೆ ಕಾರ್ತಿಕ ಮಾಸದ ಧಾರ್ಮಿಕ ಸಂಭ್ರಮಕ್ಕೆ ಹೊಸ ಅರ್ಥ ತುಂಬಿದವರು ಶ್ರೀ ರಂಭಾಪುರಿ ಜಗದ್ಗುರುಗಳು.

ಶ್ರೀ ರಂಭಾಪುರಿ ಪೀಠ (ಬಾಳೆಹೊನ್ನೂರು),: ಭಾರತೀಯ ಸನಾತನ ಧರ್ಮ ಪರಂಪರೆಯಲ್ಲಿ ಕಾರ್ತಿಕ ಮಾಸ ಅತ್ಯಂತ ಪವಿತ್ರವಾದದ್ದು. ದೀಪಾರಾಧನೆ, ಭಕ್ತಿ, ಶ್ರದ್ಧೆ, ಆತ್ಮಶುದ್ಧಿ ಹಾಗೂ ಧಾರ್ಮಿಕ ಚಿಂತನೆಗಳ ಮೂಲಕ ಮನುಷ್ಯನ ಬದುಕಿನಲ್ಲಿ ಜ್ಞಾನ ಮತ್ತು ಸಂಸ್ಕಾರದ ಬೆಳಕನ್ನು ಮೂಡಿಸುವುದೇ ಕಾರ್ತಿಕ ದೀಪೋತ್ಸವದ ಮೂಲ ಉದ್ದೇಶವಾಗಿದೆ ಎಂದು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ಮಂಗಳವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಮಾಜಕ್ಕೆ ಧಾರ್ಮಿಕ ಮಾರ್ಗದರ್ಶನ, ನೈತಿಕ ಮೌಲ್ಯಗಳ ಜಾಗೃತಿ, ಶೈಕ್ಷಣಿಕ ಪ್ರಗತಿ, ಸಾಂಸ್ಕೃತಿಕ ಸಂರಕ್ಷಣೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಒದಗಿಸುವ ಶ್ರದ್ಧಾಕೇಂದ್ರಗಳಾಗಿ ಪೀಠ, ಮಠ ಮತ್ತು ಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಧರ್ಮದ ಮೌಲ್ಯಗಳು, ಭಾರತೀಯ ಪವಿತ್ರ ಪರಂಪರೆ, ಆಚಾರ-ವಿಚಾರಗಳು ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಯುವ ಪೀಳಿಗೆಗೆ ಪರಿಚಯಿಸುವುದು ಅತ್ಯಂತ ಮುಖ್ಯವಾಗಿದೆ. ಧರ್ಮದ ತಾತ್ವಿಕ ವಿಚಾರಗಳನ್ನು ಜನಸಾಮಾನ್ಯರ ಬದುಕಿಗೆ ಅನ್ವಯಿಸುವಂತೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಪ್ರತಿಯೊಂದು ದೀಪವೂ ಒಂದು ಹೊಸ ಆಶಯದ ಸಂಕೇತ. ಪ್ರತಿಯೊಂದು ಜ್ಯೋತಿಯೂ ಒಂದು ಸತ್ಕಾರ್ಯಕ್ಕೆ ಪ್ರೇರಣೆ. ಪ್ರತಿಯೊಂದು ಸಂಕಲ್ಪವೂ ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ತರಬಲ್ಲ ಶಕ್ತಿಯನ್ನು ಹೊಂದಿದೆ. ದೀಪದ ಬೆಳಕು ದೇವಾಲಯದ ಆವರಣವನ್ನು ಮಾತ್ರ ಬೆಳಗಿಸದೆ, ಜ್ಞಾನದೀಪವಾಗಿ ಪ್ರತಿಯೊಬ್ಬರ ಬದುಕಿನ ಶ್ರೇಯಸ್ಸಿಗೆ ಸ್ಫೂರ್ತಿಯಾಗಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ನೂರೊಂದು ಸ್ಥಳಗಳ ಜ್ಞಾನಬೆಳಕನ್ನು ಬೋಧಿಸಿ ಉದ್ಧರಿಸಿರುವುದನ್ನು ಸ್ಮರಿಸಬಹುದು. ಕಾರ್ತಿಕ ಧರ್ಮ ದೀಪೋತ್ಸವದಲ್ಲಿ ಪಾಲ್ಗೊಂಡ ಸಮಸ್ತ ಭಕ್ತರಿಗೂ ಶುಭವಾಗಲಿ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹಾರೈಸಿದರು.

ಯುವಜನರಲ್ಲಿ ಧರ್ಮದ ಅರಿವು ಮೂಡಲಿ
ಕಾರ್ತಿಕ ದೀಪೋತ್ಸವ ಉದ್ಘಾಟಿಸಿದ ಚಿಕ್ಕಮಗಳೂರು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಬಿ.ಎ. ಶಿವಶಂಕರ್ ಮಾತನಾಡಿ, ಕಾರ್ತಿಕ ದೀಪಾರಾಧನೆ ಪ್ರತಿಯೊಬ್ಬರಲ್ಲೂ ಹೊಸ ಜವಾಬ್ದಾರಿಯ ಅರಿವು ಮೂಡಿಸುವ ಪವಿತ್ರ ಆಚರಣೆಯಾಗಿದೆ. ಯುವಜನರಲ್ಲಿ ಉತ್ಸಾಹ ತುಂಬಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಹೊಸ ಕಾರ್ಯಯೋಜನೆಗಳನ್ನು ರೂಪಿಸಲು ಪ್ರೇರಣೆ ನೀಡುವ ಮಹತ್ವದ ಸಂದರ್ಭ ಇದಾಗಿದೆ. ಮಠ-ಮಂದಿರಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬರುತ್ತಿರುವ ಪವಿತ್ರ ತಾಣಗಳಾಗಿವೆ. ದೇವರಲ್ಲಿ ನಂಬಿಕೆ, ಗುರುವಿನಲ್ಲಿ ಶ್ರದ್ಧೆ ಹಾಗೂ ಕಾಯಕದಲ್ಲಿ ನಿಷ್ಠೆ ಹೊಂದಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಪೂಜ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಾರ್ತಿಕ ಸಂಭ್ರಮ
ಕಾರ್ತಿಕ ದೀಪೋತ್ಸವ ಸಮಾರಂಭದಲ್ಲಿ ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಹುಡಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಸಿಂದಗಿ ಆದಿಶೇಷ ಮಠದ ವೀರರಾಜೇಂದ್ರ ಶ್ರೀಗಳು, ಹನುಮಾಪುರದ ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ತಡವಲಗ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ನೀಲೂರು ಶಿವರುದ್ರ ಶಿವಾಚಾರ್ಯ ಸ್ವಾಮಿಗಳು, ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು, ಹೆಡಗಾಪುರದ ದಾರುಕಲಿಂಗ ಶಿವಾಚಾರ್ಯ ಸ್ವಾಮಿಗಳು, ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಅಗರ್ಖೇಡದ ಪ್ರಭುಲಿಂಗ ಸ್ವಾಮಿಗಳು ಹಾಗೂ ಹುಬ್ಬಳ್ಳಿಯ ರೇಣುಕ ಪ್ರಸಾದ ಸ್ವಾಮಿಗಳು ಉಪಸ್ಥಿತರಿದ್ದರು.
ಚಿಕ್ಕಮಗಳೂರಿನ ಉಪ್ಪಳ್ಳಿ ಬಸವರಾಜ್, ಆಲೂರಿನ ಪ್ರಶಾಂತ್, ಹುಬ್ಬಳ್ಳಿಯ ಸಿದ್ದು ಪಾಟೀಲ್, ನ್ಯಾಯಮೂರ್ತಿ ಬಸವರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.



ಜಗದ್ಗುರುಗಳಿಗೆ ಗೌರವ ಸಮರ್ಪಣೆ
ಇದೇ ಸಂದರ್ಭದಲ್ಲಿ ಎನ್.ಆರ್.ಪುರ ನಗರದ ವಿಶ್ವಕರ್ಮ ಸಮಾಜದ ಸ್ವಾಮಿಗಳು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಸಮರ್ಪಿಸಿದರು. ಜಮಖಂಡಿ ನಗರದ ಮಹದೇವಪ್ಪ ಇಟ್ಟಿ ಹಾಗೂ ಇತರರು ಜಗದ್ಗುರುಗಳಿಗೆ ಗೌರವ ಸಲ್ಲಿಸಿದರು. ಹಾಸನ ನಗರದ ವೀರಶೈವ ಲಿಂಗಾಯತ ಸಮಾಜದ ಬಾಂಧವರು ಹಾಸನದಲ್ಲಿ ನಡೆಯಲಿರುವ ಧರ್ಮ ಸಮಾರಂಭಕ್ಕೆ ಆಗಮಿಸುವಂತೆ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಆಹ್ವಾನ ನೀಡಿ, ದಯಮಾಡಿಸಿ ಸಾನ್ನಿಧ್ಯ ವಹಿಸಬೇಕೆಂದು ವಿನಂತಿಸಿಕೊಂಡರು.


ಶಿಗ್ಗಾವಿ ಸುರಗಿಮಠದ ಶ್ರೀಮತಿ ಲಲಿತಾದೇವಿ ಶಿವಪುತ್ರಯ್ಯ ಮತ್ತು ಮಕ್ಕಳು ದೀಪಾರಾಧನೆ ಸೇವೆ ಸಲ್ಲಿಸಿದರು. ವಿದ್ಯುತ್ ದೀಪಾಲಂಕಾರ ಸೇವೆಯನ್ನು ಹುಬ್ಬಳ್ಳಿಯ ಗುತ್ತಿಗೆದಾರ ವೀರೇಶ್ ಪಾಟೀಲ್ ಮತ್ತು ಕುಟುಂಬದವರು ನೆರವೇರಿಸಿದರು. ಸಿಡಿಮದ್ದಿನ ಸೇವೆಯನ್ನು ದಾವಣಗೆರೆಯ ಕೊಟ್ರೇಶ್ ಮತ್ತು ಗೀತಾ ದಂಪತಿಗಳು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವವು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ನೆರವೇರಿತು. ಬಾಳೆಹೊನ್ನೂರು, ಬಾಸಾಪುರ, ಕಡವಂತಿ, ಆಲ್ದೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಮಾರಂಭದ ನಂತರ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.







