ಸಂಸಾರ ಮತ್ತು ಸನ್ಯಾಸ ಎರಡರಲ್ಲೂ ಕಷ್ಟಗಳಿವೆ; ಇಷ್ಟಪಟ್ಟು ಸ್ವೀಕರಿಸಿದ ಬದುಕೇ ಸುಖಮಯ – ಬಸವಕೇಂದ್ರ ಶ್ರೀಗಳು
ಶಿವಮೊಗ್ಗ: ಭಕ್ತಿ ಎನ್ನುವುದು ಕೇವಲ ಪೂಜೆ, ಪುನಸ್ಕಾರ, ಆಚರಣೆ, ಜಪ-ತಪ ಅಥವಾ ಹೊರಗಿನ ಪ್ರದರ್ಶನಕ್ಕೆ ಸೀಮಿತವಾದುದಲ್ಲ. ನಮ್ಮ ಅಂತರಂಗದ ನಿರ್ಮಲತೆ, ನೈತಿಕ ಬದುಕು, ನಿಷ್ಕಳಂಕ ಪ್ರೀತಿ ಹಾಗೂ ಸದ್ಗುಣಗಳ ಮೂಲಕ ವ್ಯಕ್ತವಾಗುವ ಭಾವವೇ ನಿಜವಾದ ಭಕ್ತಿ. ದೇವರಿಗೆ ನಾದವೂ ಮುಖ್ಯವಲ್ಲ, ವೇದವೂ ಮುಖ್ಯವಲ್ಲ, ಭಕ್ತನ ಶುದ್ಧ ಹೃದಯವೇ ಮುಖ್ಯ. ಬಸವಣ್ಣನವರ ವಚನಗಳಲ್ಲಿನ ಈ ಜೀವನದರ್ಶನವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಕರೆ ನೀಡಿದರು.
ಶಿವಮೊಗ್ಗ ತಾಲ್ಲೂಕಿನ ಹರಮಘಟ್ಟ ಗ್ರಾಮದ ಶ್ರೀ ರಾಮಾಂಜನೇಯ ರಂಗಮಂದಿರದಲ್ಲಿ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು, ಬಸವಕೇಂದ್ರ, ಶಿವಮೊಗ್ಗ, ಅರಳಿಕಟ್ಟೆ ಅನುಭವ ಮಂಟಪ–6 ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಇವರ ಆಶ್ರಯದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕದ 11ನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬಸವಾದಿ ಪ್ರಮಥರು ಹಾಗೂ ವಿಶ್ವದ ಎಲ್ಲ ದಾರ್ಶನಿಕರನ್ನು ಸ್ಮರಿಸಿದ ಸ್ವಾಮೀಜಿಗಳು, ಹರಮಘಟ್ಟದ ಗ್ರಾಮಸ್ಥರು, ಮಲ್ಲಿಕಾರ್ಜುನ ಭಜನಾ ಸಂಘದ ಪದಾಧಿಕಾರಿಗಳು, ಕಾರ್ಯಕ್ರಮದ ಸೇವಾರ್ಥಿಗಳು ಹಾಗೂ ಉಪಸ್ಥಿತರಿದ್ದ ಗಣ್ಯರಿಗೆ ಶರಣು ಶರಣಾರ್ಥಿ ಸಲ್ಲಿಸಿ ತಮ್ಮ ಮಾತು ಆರಂಭಿಸಿದರು.

ಸಂಸಾರವೂ ಕಷ್ಟವಲ್ಲ, ಸನ್ಯಾಸವೂ ಸುಲಭವಲ್ಲ!
ಸನ್ಯಾಸಿಗಳ ಜೀವನ ಕಷ್ಟವೋ, ಸಂಸಾರಿಗಳ ಜೀವನ ಕಷ್ಟವೋ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿಗಳು, ಕಷ್ಟಗಳು ಯಾರ ಬದುಕಿನಲ್ಲೂ ತಪ್ಪಿದ್ದಲ್ಲ. ಆನೆಯ ಭಾರ ಆನೆಗೆ, ಇರುವೆಯ ಭಾರ ಇರುವೆಗೆ ಎಂಬ ಗಾದೆಯಂತೆ ಪ್ರತಿಯೊಬ್ಬರಿಗೂ ಅವರದೇ ಆದ ಜವಾಬ್ದಾರಿ ಮತ್ತು ಸಂಕಷ್ಟಗಳಿರುತ್ತವೆ ಎಂದು ವಿವರಿಸಿದರು.
ಆನೆಯನ್ನು ಕಂಡ ಇರುವೆ, ಆನೆಯಷ್ಟು ದೊಡ್ಡದಾಗಿ ಆರಾಮವಾಗಿ ಬದುಕಬೇಕೆಂದು ಬಯಸಿದರೆ, ಇರುವೆಯನ್ನು ಕಂಡ ಆನೆ, ಸಣ್ಣ ಸಣ್ಣ ಸಂದಿಗಳಲ್ಲೂ ಸುಲಭವಾಗಿ ನುಸುಳಿಕೊಂಡು ಹೋಗುವ ಇರುವೆಯ ಬದುಕು ಎಷ್ಟು ಸುಂದರ ಎಂದುಕೊಳ್ಳುತ್ತದೆ. ಆದರೆ ಆನೆಯ ಭಾರವನ್ನು ಆನೆಯೇ ಹೊರಬೇಕು; ಇರುವೆಯ ಭಾರವನ್ನು ಇರುವೆಯೇ ಹೊರಬೇಕು. ಹೀಗಾಗಿ ಯಾರ ಬದುಕು ಸುಖ, ಯಾರ ಬದುಕು ಕಷ್ಟ ಎಂದು ಹೊರಗಿನಿಂದ ನಿರ್ಧರಿಸಲು ಸಾಧ್ಯವಿಲ್ಲ. ನಮ್ಮ ಬದುಕಿನ ಜವಾಬ್ದಾರಿಗಳನ್ನು ಯಾವ ಮನೋಭಾವದಿಂದ ಸ್ವೀಕರಿಸುತ್ತೇವೆ ಎಂಬುದರ ಮೇಲೆ ಸುಖ-ದುಃಖ ನಿರ್ಧಾರವಾಗುತ್ತದೆ ಎಂದರು.
ಬಸವಣ್ಣನವರ ‘”ಹೊರಿಸಿಕೊಂಡು ಹೋದ ನಾಯಿ: ಮೊಲನೇನ ಹಿಡಿಯುವುದಯ್ಯಾ?
ಇರಿಯದ ವೀರ; ಇಲ್ಲದ ಸೊಬಗುವ ಹೇಳುವುದೇ ನಾಚಿಕೆ! ಆನು ಭಕ್ತನೆಂತಪ್ಪೆನಯ್ಯಾ, ಕೂಡಲಸಂಗಮದೇವಾ?”
ಎಂಬ ವಚನವನ್ನು ಉಲ್ಲೇಖಿಸಿದ ಅವರು, ಬಲವಂತವಾಗಿ ಯಾರನ್ನಾದರೂ ಸನ್ಯಾಸಿಯನ್ನಾಗಿ ಮಾಡಿದರೆ ಆ ಬದುಕು ಅವರಿಗೆ ಹೊರೆಯಾಗುತ್ತದೆ. ಆದರೆ ಸ್ವಯಂ ಸಂಕಲ್ಪದಿಂದ, ಸಂಸ್ಕಾರ ಮತ್ತು ಆಧ್ಯಾತ್ಮಿಕ ಒಲವಿನಿಂದ ಸನ್ಯಾಸ ಸ್ವೀಕರಿಸಿದವರಿಗೆ ಎಂತಹ ಕಷ್ಟಗಳೂ ದೊಡ್ಡದಾಗಿ ಕಾಣುವುದಿಲ್ಲ. ಅದೇ ರೀತಿ ಸಂಸಾರ ಜೀವನವನ್ನೂ ಇಷ್ಟಪಟ್ಟು, ಪರಸ್ಪರ ಹೊಂದಾಣಿಕೆ ಮತ್ತು ಪ್ರೀತಿಯಿಂದ ಸ್ವೀಕರಿಸಿದರೆ ಅದು ಸುಖಮಯವಾಗುತ್ತದೆ ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.
ಸಮಾಜದ ನಡುವೆ ಬದುಕುವ ಸನ್ಯಾಸಿಗಳ ಜವಾಬ್ದಾರಿಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಎರಡು ಕಂಬಗಳ ನಡುವೆ ಕಟ್ಟಿದ ಹಗ್ಗದ ಮೇಲೆ ಸಮತೋಲನ ಕಾಯ್ದುಕೊಂಡು ನಡೆಯುವ ಸರ್ಕಸ್ ಕಲಾವಿದನ ಬದುಕಿನಂತೆ ಸನ್ಯಾಸಿಗಳ ಬದುಕು. ಸಣ್ಣದೊಂದು ಅಪಪ್ರಚಾರ, ತಪ್ಪು ತಿಳಿವಳಿಕೆ ಅಥವಾ ಅನಗತ್ಯ ಆರೋಪ ಅವರ ಬದುಕಿನ ಮೇಲೆ ಪರಿಣಾಮ ಬೀರಬಹುದು. ಜನರಿಗೆ ಬೇಕಾದಾಗ ಸ್ವಾಮೀಜಿಗಳು ಒಳ್ಳೆಯವರು, ಜನರ ಹಿತದೃಷ್ಟಿಯಿಂದ ಯಾವುದಾದರೂ ಕಹಿ ಸತ್ಯ ಹೇಳಿದಾಗ ಅವರೇ ಕೆಟ್ಟವರಾಗುತ್ತಾರೆ. ಆದರೂ ನಿಜವಾದ ಸನ್ಯಾಸಿಗಳು ಇಂತಹ ಸವಾಲುಗಳಿಗೆ ವಿಚಲಿತರಾಗದೆ ತಮ್ಮ ಕರ್ತವ್ಯದಲ್ಲಿ ಮುಂದುವರಿಯುತ್ತಾರೆ ಎಂದು ತಿಳಿಸಿದರು.

ಜನಪದ ಸಾಹಿತ್ಯ ಉಳಿಸಿದ ಕೆ. ಯುವರಾಜ್ ಅವರ ಸೇವೆ ಅನನ್ಯ: ಬಸವಕೇಂದ್ರ ಶ್ರೀಗಳು
ಖ್ಯಾತ ಗಾಯಕ ಕೆ. ಯುವರಾಜ್ ಅವರ ಜನಪದ ಸಾಹಿತ್ಯದ ಸಂಗ್ರಹ, ಸಂರಕ್ಷಣೆ ಮತ್ತು ಸಂಗೀತ ಸೇವೆಯನ್ನು ಸ್ಮರಿಸಿದ ಸ್ವಾಮೀಜಿಗಳು, ‘ಸೋಜುಗದ ಸೂಜಿಮಲ್ಲಿಗೆ’ ಸೇರಿದಂತೆ ಅನೇಕ ಜನಪದ ಗೀತೆಗಳ ಮೂಲ ಸಾಹಿತ್ಯ ಮತ್ತು ರಾಗಗಳನ್ನು ಸಂಗ್ರಹಿಸಿ ಜನರಿಗೆ ಪರಿಚಯಿಸುವಲ್ಲಿ ಯುವರಾಜ್ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.
ವಾಣಿಜ್ಯ ಉಪನ್ಯಾಸಕರಾಗಿದ್ದರೂ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಹಳೆಯ ಜನಪದ ಹಾಡುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಶಿವಮೊಗ್ಗದಲ್ಲಿ 1,381 ಜನರಿಂದ ವಚನ ಗಾಯನ ಕಾರ್ಯಕ್ರಮ ಆಯೋಜಿಸುವ ಪ್ರಯತ್ನದಲ್ಲಿಯೂ ಯುವರಾಜ್ ಅವರ ಸಹಕಾರ ಮತ್ತು ಪ್ರೇರಣೆ ಮಹತ್ವದ್ದಾಗಿತ್ತು. ನಂತರ ಬೆಳಗಾವಿಯ ಕೆಎಲ್ಇ ಸಂಸ್ಥೆಯಲ್ಲಿ 1,000 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಿಂದ ವಚನ ಗಾಯನ ಹಾಗೂ ದಾವಣಗೆರೆಯಲ್ಲಿ 3,642 ಜನರಿಂದ ವಚನ ಗಾಯನ ಕಾರ್ಯಕ್ರಮ ನಡೆಸಲು ಈ ಪ್ರಯತ್ನ ಪ್ರೇರಣೆಯಾಯಿತು ಎಂದು ನೆನಪಿಸಿಕೊಂಡರು.
‘ನಿಮಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ, ನಿಮ್ಮ ಶರಣರಿಗೆ ಶರಣ ಎಂಬುದ ಕರಣಿಸು ಕೂಡಲಸಂಗಮದೇವ‘ ಎಂಬ ಬಸವಣ್ಣನವರ ವಚನವನ್ನು ಪ್ರತಿದಿನ ಸ್ಮರಿಸುವಂತೆ ಯುವರಾಜ್ ನೀಡಿದ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ನಿವೃತ್ತಿಯ ನಂತರವೂ ಸಮಾಜಮುಖಿ ಚಟುವಟಿಕೆ: ಲವಕುಮಾರಸ್ವಾಮಿ ತಂಡಕ್ಕೆ ಮೆಚ್ಚುಗೆ
ನಿವೃತ್ತಿಯ ನಂತರ ಕೆಲವರು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲೇ ಸಮಯ ಕಳೆಯುತ್ತಿದ್ದರೆ, ಲವಕುಮಾರಸ್ವಾಮಿ ಅವರ ನೇತೃತ್ವದ ತಂಡ ನಿವೃತ್ತ ಜೀವನವನ್ನು ಶರಣ ಸಾಹಿತ್ಯದ ಪ್ರಸಾರಕ್ಕೆ ಮೀಸಲಿಟ್ಟಿರುವುದು ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿ ಶರಣರ ವಿಚಾರಧಾರೆಗಳನ್ನು ತಲುಪಿಸಬೇಕು ಎಂಬ ಉದ್ದೇಶದಿಂದ ತಂಡ ಕೈಗೊಂಡಿರುವ ಪ್ರಯತ್ನದಿಂದಲೇ ಹರಮಘಟ್ಟದಲ್ಲಿ 20ನೇ ವರ್ಷದ ಚಿಂತನ ಕಾರ್ತಿಕ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈವರೆಗೆ ಹಲವು ಗ್ರಾಮಗಳಲ್ಲಿ ಅರಳಿಕಟ್ಟೆ ಅನುಭವ ಮಂಟಪದ ಕಾರ್ಯಕ್ರಮಗಳು ನಡೆದಿದ್ದರೂ, ನೈಜ ಅರಳಿಕಟ್ಟೆಯ ಪರಿಸರದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಿರುವ ಹೆಗ್ಗಳಿಕೆ ಹರಮಘಟ್ಟಕ್ಕಿದೆ. ಗ್ರಾಮದ ಮಧ್ಯದಲ್ಲಿರುವ ಪುರಾತನ ಮರವನ್ನು ಸಂರಕ್ಷಿಸಿರುವ ಗ್ರಾಮಸ್ಥರ ಶ್ರದ್ಧೆಯನ್ನು ಪ್ರಶಂಸಿಸಿದ ಅವರು, ಯಾವುದೇ ಕಾರಣಕ್ಕೂ ಆ ಮರವನ್ನು ಕಡಿಯದೆ ಮುಂದಿನ ಪೀಳಿಗೆಗೂ ಉಳಿಸಬೇಕು ಎಂದು ಮನವಿ ಮಾಡಿದರು.
ಹರಮಘಟ್ಟದಲ್ಲಿ ಈ ಹಿಂದೆ ಚಿಂತನ ಕಾರ್ತಿಕದ ದಶಮಾನೋತ್ಸವ, ನಂತರ ಶಿಕ್ಷಕ ಮಲ್ಲಿಕಾರ್ಜುನ ಅವರ ಮನೆಯಲ್ಲಿ ಕಾರ್ಯಕ್ರಮ ನಡೆದಿದ್ದನ್ನು ಸ್ಮರಿಸಿದ ಅವರು, ಇದೀಗ ಗ್ರಾಮದ ಸಹಕಾರದಿಂದ 20ನೇ ವರ್ಷದ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.

ಭಕ್ತಿ ಎಂದರೆ ನೈತಿಕತೆಯೊಂದಿಗೆ ಬದುಕುವ ಕಲೆ
ಬಸವಣ್ಣನವರ “ಭಕ್ತಿಯೆಂಬುದ ಮಾಡಬಾರದು.
ಗರಗಸದಂತೆ ಹೋಗುತ್ತ ಕೊರೆವುದು; ಬರುತ್ತ ಕೊಯ್ವುದು. ಘಟಸರ್ಪನಲ್ಲಿ ಕೈದುಡುಕಿದರೆ ಹಿಡಿಯದೆ ಮಾಬುದೆ? ಕೂಡಲಸಂಗಮದೇವ.” ಎಂಬ ವಚನವನ್ನು ವಿಶ್ಲೇಷಿಸಿದ ಬಸವಕೇಂದ್ರ ಶ್ರೀಗಳು, ಭಕ್ತಿ ಎನ್ನುವುದು ಅತ್ಯಂತ ಎಚ್ಚರಿಕೆ ಮತ್ತು ಏಕಾಗ್ರತೆಯಿಂದ ಪಾಲಿಸಬೇಕಾದ ಮಾರ್ಗವಾಗಿದೆ. ಗರಗಸವನ್ನು ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಸಂಭವಿಸುವಂತೆ, ನೈತಿಕತೆ ಇಲ್ಲದ ಭಕ್ತಿಯೂ ಮನುಷ್ಯನಿಗೆ ತೊಂದರೆ ಉಂಟುಮಾಡುತ್ತದೆ. ಆದ್ದರಿಂದ ಭಕ್ತಿಯ ಜೊತೆಗೆ ನೈತಿಕ ಶುದ್ಧತೆ ಇರಬೇಕು ಎಂದು ಹೇಳಿದರು.
‘ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲಯ್ಯಾ; ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯಾ; ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾಯಿತ್ತು, ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು! ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ, ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ’
ಎಂಬ ವಚನದ ಮೂಲಕ ಬಸವಣ್ಣನವರು ಭಕ್ತಿಯ ನಿಜವಾದ ಅರ್ಥವನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ರಾವಣ ಅತ್ಯುತ್ತಮ ಸಂಗೀತಗಾರನಾಗಿದ್ದರೂ ಪರಸ್ತ್ರೀಯಾದ ಸೀತೆಯನ್ನು ಅಪಹರಿಸಿದ ಅನೈತಿಕ ನಡವಳಿಕೆಯಿಂದ ಅವನ ಪತನವಾಯಿತು. ಬ್ರಹ್ಮನೂ ವೇದಜ್ಞಾನದಿಂದ ಅಹಂಕಾರ ಬೆಳೆಸಿಕೊಂಡು ತನ್ನ ಶಿರವನ್ನು ಕಳೆದುಕೊಳ್ಳಬೇಕಾಯಿತು ಎಂಬ ಪೌರಾಣಿಕ ಪ್ರಸಂಗಗಳನ್ನು ವಿವರಿಸಿದ ಅವರು, ಜ್ಞಾನ, ಸಂಗೀತ, ಆಚರಣೆಗಳಿಗಿಂತ ವ್ಯಕ್ತಿಯ ಅಂತರಂಗದ ಗುಣ ಮತ್ತು ನೈತಿಕತೆಯೇ ದೇವರಿಗೆ ಪ್ರಿಯವಾದದ್ದು ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.
ಭಕ್ತಿ ಎಂದರೆ ನಮ್ಮೊಳಗಿರುವ ಪ್ರೀತಿ, ವಾತ್ಸಲ್ಯ ಮತ್ತು ಆತ್ಮೀಯತೆಯನ್ನು ಪರಮಾತ್ಮನ ಕಡೆಗೆ ಹರಿಸುವುದು. ಹಣ, ಆಸ್ತಿ, ವ್ಯಕ್ತಿ, ಪದವಿ ಹಾಗೂ ಪ್ರತಿಷ್ಠೆಗಳ ಮೇಲೆ ಪ್ರೀತಿ ತೋರುವ ಮನುಷ್ಯ ಅದೇ ಪ್ರೀತಿಯನ್ನು ಭಗವಂತನ ಕಡೆಗೆ ತಿರುಗಿಸಿದಾಗ ಅದು ಭಕ್ತಿಯಾಗುತ್ತದೆ. ಪ್ರೀತಿಯೇ ಇಲ್ಲದವನಲ್ಲಿ ಭಕ್ತಿ ಹೇಗೆ ಹುಟ್ಟಲು ಸಾಧ್ಯ? ಎಂದು ಪ್ರಶ್ನಿಸಿದ ಅವರು, ಭಕ್ತಿ ಹೃದಯದಿಂದ ಸಹಜವಾಗಿ ಹೊರಹೊಮ್ಮಬೇಕೇ ಹೊರತು ಬಾಹ್ಯ ಒತ್ತಡದಿಂದಲ್ಲ ಎಂದು ವಿವರಿಸಿದರು.
ಬಸವಣ್ಣನವರ ‘ಏತ ತಲೆವಾಗಿದರೇನು, ಗುರುಭಕ್ತನಾಗಬಲ್ಲುದೆ? ಇಕ್ಕುಳ ಕೈಮುಗಿದರೇನು, ಭೃತ್ಯಾಚಾರಿಯಾಗಬಲ್ಲುದೆ? ಗಿಳಿಯೋದಿದರೇನು, ಲಿಂಗವೇದಿಯಾಗಬಲ್ಲುದೆ? ಕೂಡಲಸಂಗನ ಶರಣರ ಬಂದ ಬರವ, ನಿಂದ ನಿಲವ ಅನಂಗಸಂಗಿಗಳೆತ್ತ ಬಲ್ಲರು? ಎಂಬ ವಚನವನ್ನು ಉಲ್ಲೇಖಿಸಿ, ಬಲವಂತವಾಗಿ ತಲೆಬಾಗುವುದರಿಂದ ಗುರುಭಕ್ತಿ ಮೂಡುವುದಿಲ್ಲ. ಗಿಳಿ ಪದಗಳನ್ನು ಪುನರಾವರ್ತಿಸಿದಂತೆ ಯಾಂತ್ರಿಕವಾಗಿ ಮಂತ್ರಗಳನ್ನು ಹೇಳುವುದರಿಂದ ನಿಜವಾದ ಭಕ್ತಿ ಸಿದ್ಧಿಸುವುದಿಲ್ಲ. ಹೃದಯದ ಪ್ರಾಮಾಣಿಕತೆ, ಪ್ರೀತಿ ಮತ್ತು ವಿನಯದಿಂದ ಮಾಡುವ ಆರಾಧನೆಯೇ ನಿಜವಾದ ಭಕ್ತಿ ಎಂದರು.
ಮಾದಾರ ಚೆನ್ನಯ್ಯನ ಭಕ್ತಿಯ ಪ್ರಸಂಗವನ್ನು ವಿವರಿಸಿದ ಅವರು, ಭಕ್ತಿಯಲ್ಲಿ ಅರ್ಪಿಸುವ ವಸ್ತುವಿನ ಮೌಲ್ಯಕ್ಕಿಂತ ಅರ್ಪಿಸುವ ಮನಸ್ಸಿನ ಶುದ್ಧತೆ ಮುಖ್ಯ. ಅಂತರಂಗದ ಭಕ್ತಿಯಿಂದ ಸಲ್ಲಿಸುವ ಸರಳ ಅರ್ಪಣೆಯನ್ನೂ ಶಿವ ಸ್ವೀಕರಿಸುತ್ತಾನೆ. ಆದ್ದರಿಂದ ಮಾದಾರ ಚೆನ್ನಯ್ಯ ಮತ್ತು ದೇವರ ದಾಸಿಮಯ್ಯನವರ ಭಕ್ತಿಯ ಮಾದರಿಯನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಕರೆ ನೀಡಿದರು.

ಹರಮಘಟ್ಟದ ದಾಸೋಹ ಪರಂಪರೆ ಸಮಾಜಕ್ಕೆ ಮಾದರಿ
ಹರಮಘಟ್ಟದಲ್ಲಿ ನಡೆಯುವ ಸಾಮೂಹಿಕ ಪರ್ವದ ವಿಶಿಷ್ಟ ಪರಂಪರೆಯನ್ನು ಸ್ಮರಿಸಿದ ಬಸವಕೇಂದ್ರ ಶ್ರೀಗಳು, ಪ್ರತಿಯೊಂದು ಮನೆಯಿಂದಲೂ ಅನ್ನ, ಸಾರು, ಹೋಳಿಗೆ, ಕರಿಗಡಬು, ತುಪ್ಪ, ಸಿಹಿ ತಿನಿಸುಗಳನ್ನು ತಂದು ಒಂದೆಡೆ ಸೇರಿಸಿ ದೇವರಿಗೆ ನೈವೇದ್ಯ ಅರ್ಪಿಸಿದ ನಂತರ ಎಲ್ಲರೂ ಒಟ್ಟಾಗಿ ಪ್ರಸಾದ ಸ್ವೀಕರಿಸುವ ಪದ್ಧತಿ ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.
ಇದು ಒಬ್ಬರ ಮನೆಯ ಊಟವಲ್ಲ, ಇಡೀ ಗ್ರಾಮದ ಸಾಮೂಹಿಕ ದಾಸೋಹ. ಯಾರು ಏನು ತಂದಿದ್ದಾರೆ ಎಂಬ ಲೆಕ್ಕಾಚಾರವಿಲ್ಲದೆ ಎಲ್ಲರೂ ಒಂದಾಗಿ ಕುಳಿತು ಪ್ರಸಾದ ಸ್ವೀಕರಿಸುವ ಈ ಪರಂಪರೆ 12ನೇ ಶತಮಾನದ ಶರಣರ ದಾಸೋಹ ಸಂಸ್ಕೃತಿಯನ್ನು ನೆನಪಿಸುತ್ತದೆ. ಇಂತಹ ಸಂಪ್ರದಾಯಗಳು ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಸಹಕಾರದ ಭಾವನೆಯನ್ನು ಬೆಳೆಸುತ್ತವೆ ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.
ಹರಮಘಟ್ಟದ ಗ್ರಾಮಸ್ಥರು ಶ್ರೀ ತರಳಬಾಳು ಜಗದ್ಗುರುಗಳ ತಾಯಿ ತವರು ಮನೆಯನ್ನು ಸಂರಕ್ಷಿಸಿ, ಪ್ರೇಕ್ಷಣೀಯ ಸ್ಥಳದ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತಿರುವುದು ಗುರುಭಕ್ತಿ ಮತ್ತು ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಳೆಯ ಭಜನೆಗಳ ಮಟ್ಟು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸಿ
ಮಲ್ಲಿಕಾರ್ಜುನ ಭಜನಾ ಸಂಘದ ಸದಸ್ಯರು ಹಳೆಯ ಭಜನೆಗಳ ರಾಗ ಮತ್ತು ಮಟ್ಟುಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದನ್ನು ಬಸವಕೇಂದ್ರ ಶ್ರೀಗಳು ವಿಶೇಷವಾಗಿ ಶ್ಲಾಘಿಸಿದರು. ‘ಇದು ಬಾಪೂಜಿ ಬೆಳಗಿದ ಭಾರತ’, ‘ನದಿ ಕಾವೇರಿ ಹರಿಯುವ ಭಾರತ’, ‘ನಾವು ಮೈಸೂರು ಮೆರೆದಿದೆ ನೋಡು ಬಾ’, ‘ನೀರಿಗೆ ನೈದಿಲೆ ಶೃಂಗಾರ, ಸಮುದ್ರಕ್ಕೆ ತೆರೆಯೇ ಶೃಂಗಾರ‘ ಸೇರಿದಂತೆ ಹಳೆಯ ಕಾಲದ ಹಾಡುಗಳನ್ನು ತಂಡದವರು ಸುಮಧುರವಾಗಿ ಹಾಡಿರುವುದು ಸಂತಸ ತಂದಿದೆ ಎಂದರು.
ಪ್ರಸ್ತುತ ಭಜನಾ ತಂಡದಲ್ಲಿ ಹಿರಿಯರೇ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಯುವಕರು, ಮಹಿಳೆಯರು ಹಾಗೂ ಮಕ್ಕಳೂ ತಂಡಕ್ಕೆ ಸೇರಬೇಕು. ಇಲ್ಲದಿದ್ದರೆ ಇಂತಹ ಅಪರೂಪದ ಭಜನಾ ಕಲೆ ಮುಂದಿನ ಪೀಳಿಗೆಗೆ ತಲುಪುವುದು ಕಷ್ಟವಾಗಬಹುದು. ಹೀಗಾಗಿ ಗ್ರಾಮಸ್ಥರು ಈ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊರಬೇಕು ಎಂದು ಬಸವಕೇಂದ್ರ ಶ್ರೀಗಳು ಕರೆ ನೀಡಿದರು.
ಡಿಸೆಂಬರ್ 14, 15ರಂದು ಚಿಂತನ ಕಾರ್ತಿಕ ಸಮಾರೋಪ
ಶಿವಮೊಗ್ಗ ನಗರದ ಬಸವನಗುಡಿಯಲ್ಲಿರುವ ಸರ್ಕಾರಿ ನೌಕರರ ವಿಕಾಸ ಕೇಂದ್ರದ ಆವರಣದಲ್ಲಿ ಡಿಸೆಂಬರ್ 14 ಮತ್ತು 15ರಂದು ಚಿಂತನ ಕಾರ್ತಿಕದ ಸಮಾರೋಪ ಸಮಾರಂಭ ನಡೆಯಲಿದೆ. ಎರಡು ದಿನಗಳ ಕಾಲ ಸಾಣೇಹಳ್ಳಿ ಶ್ರೀಗಳ ಮಾರ್ಗದರ್ಶನದಲ್ಲಿ ಶಿವಸಂಚಾರ ನಾಟಕಗಳ ಪ್ರದರ್ಶನವೂ ಇರಲಿದೆ. ಮೊದಲ ದಿನ ಬೆಕ್ಕಿನಕಲ್ಮಠ ಜಗದ್ಗುರುಗಳು ಹಾಗೂ ಎರಡನೇ ದಿನ ಸಾಣೇಹಳ್ಳಿ ಶ್ರೀಗಳು ಆಗಮಿಸಲಿದ್ದಾರೆ. ಹರಮಘಟ್ಟ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಹ್ವಾನಿಸಿದರು.
ಬಸವಣ್ಣನವರ ವಿರುದ್ಧದ ಆರೋಪಗಳಿಗೆ ಸಂಶೋಧನಾ ದಾಖಲೆಗಳ ಮೂಲಕ ಉತ್ತರ
ಇತ್ತೀಚೆಗೆ ಬಸವಣ್ಣನವರ ಕುರಿತು ಕೆಲವು ಕೃತಿಗಳು ಮತ್ತು ಲೇಖನಗಳಲ್ಲಿ ವ್ಯಕ್ತವಾಗಿರುವ ಅವಹೇಳನಕಾರಿ ಅಭಿಪ್ರಾಯಗಳ ಕುರಿತು ಮಾತನಾಡಿದ ಬಸವಕೇಂದ್ರ ಶ್ರೀಗಳು, ಬಸವಣ್ಣನವರು ಕಳ್ಳತನ ಮಾಡುತ್ತಿದ್ದರು, ಬಿಜ್ಜಳನ ಕೊಲೆಗೆ ಕಾರಣರಾದರು ಎಂಬಂತಹ ಆರೋಪಗಳಿಗೆ ಯಾವುದೇ ಆಧಾರರಹಿತ ಮಾತುಗಳಿಂದ ಉತ್ತರಿಸುವುದಕ್ಕಿಂತ ಐತಿಹಾಸಿಕ ದಾಖಲೆಗಳು ಮತ್ತು ಸಂಶೋಧನೆಗಳ ಮೂಲಕ ಉತ್ತರಿಸುವುದು ಅಗತ್ಯ ಎಂದರು.
ಬಿಜ್ಜಳನ ಸಾವಿಗೆ ಧಾರ್ಮಿಕ ಕಾರಣಗಳಿಗಿಂತ ರಾಜಕೀಯ ಕಾರಣಗಳೇ ಹಿನ್ನೆಲೆಯಾಗಿದ್ದವು ಎಂಬುದನ್ನು ರಾಷ್ಟ್ರಕವಿ ಗೋವಿಂದ ಪೈ, ಬಿ.ಜಿ.ಎಲ್. ಸ್ವಾಮಿ, ಪಿ.ಬಿ. ದೇಸಾಯಿ, ಎಂ. ಕುಮಾರ್ ಹಾಗೂ ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ವಿದ್ವಾಂಸರು ತಮ್ಮ ಸಂಶೋಧನಾ ಬರಹಗಳಲ್ಲಿ ಚರ್ಚಿಸಿದ್ದಾರೆ ಎಂದು ತಿಳಿಸಿದರು.
ಈ ವಿಚಾರಕ್ಕೆ ಸಂಬಂಧಿಸಿದ ಸಂಶೋಧನಾ ಲೇಖನಗಳನ್ನು ಸಂಗ್ರಹಿಸಿ ಕೃತಿಯ ರೂಪದಲ್ಲಿ ಪ್ರಕಟಿಸುವ ಪ್ರಯತ್ನ ನಡೆದಿದೆ. ಬೆಳಗಾವಿಯ ವಿದ್ವಾಂಸ ಪ್ರಕಾಶ್ ಗಿರಿಮಲ್ಲ ಅವರು ಈ ಕುರಿತು ಅಗತ್ಯ ಸಂಶೋಧನಾ ಬರಹಗಳನ್ನು ಸಿದ್ಧಪಡಿಸಿ ನೀಡುವ ಭರವಸೆ ನೀಡಿದ್ದಾರೆ. ಡಿಸೆಂಬರ್ 15ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡುವ ಉದ್ದೇಶವಿದೆ. ಆ ಮೂಲಕ ಬಸವಣ್ಣನವರ ಕುರಿತು ಎದ್ದಿರುವ ಪ್ರಶ್ನೆಗಳಿಗೆ ದಾಖಲೆ ಆಧಾರಿತ ಉತ್ತರ ನೀಡಲಾಗುವುದು ಎಂದು ತಿಳಿಸಿದರು.
ಬಸವಣ್ಣನವರ ವಿಚಾರಧಾರೆಗಳನ್ನು ಅರಿಯಲು, ಶರಣ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ತನು, ಮನ, ಧನದಿಂದ ಸಹಕರಿಸಬೇಕು ಎಂದು ಬಸವಕೇಂದ್ರ ಶ್ರೀಗಳು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲವಕುಮಾರಸ್ವಾಮಿ, ಖ್ಯಾತ ಗಾಯಕರಾದ ಕೆ. ಯುವರಾಜ್, ಡಾ. ಎಂ. ಬಸವರಾಜಪ್ಪ, ಹನುಮಂತಪ್ಪ, ಚಂದ್ರಶೇಖರಪ್ಪ ಸೇರಿದಂತೆ ಹರಮಘಟ್ಟದ ಗ್ರಾಮಸ್ಥರು, ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಶರಣ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.







