ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹಾವೇರಿ ಮೆಡಿಕಲ್ ಕಾಲೇಜಿಗೆ ಸಂತ ಕನಕದಾಸರ ಹೆಸರು: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

On: November 27, 2026 6:44 PM
Follow Us:

(ಹಾವೇರಿ), ನ.27: ಭಕ್ತ ಕನಕದಾಸರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಹಾವೇರಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸಂತ ಕನಕದಾಸರ ಹೆಸರನ್ನು ನಾಮಕರಣ ಮಾಡಲಾಗುವುದು. ಕಾಗಿನೆಲೆ ಕ್ಷೇತ್ರದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ 5 ಕೋಟಿ ರೂ. ಅನುದಾನ ನೀಡಲಾಗುವುದು. ಶ್ರೀಗಳು ಮುಂದಿಟ್ಟಿರುವ ಭೂಮಿಗೆ ಸಂಬಂಧಿಸಿದ ಬೇಡಿಕೆಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.

ಹಾವೇರಿ ಜಿಲ್ಲೆಯ ಸುಕ್ಷೇತ್ರ ಕಾಗಿನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಭಕ್ತಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಕನಕ ಎಂದರೆ ಚಿನ್ನ. ಕನಕದಾಸರ ವ್ಯಕ್ತಿತ್ವವೂ ಚಿನ್ನದಂತೆ ಶ್ರೇಷ್ಠವಾದದ್ದು. ಭಕ್ತಿಯ ಮೂಲಕ ದೇವರನ್ನೇ ಒಲಿಸಿಕೊಂಡ ಮಹಾನ್ ಸಂತ ಕನಕದಾಸರು. ಇದಕ್ಕೆ ಉಡುಪಿಯ ಶ್ರೀಕೃಷ್ಣನ ದೇಗುಲವೇ ಸಾಕ್ಷಿಯಾಗಿದೆ. ದೇವಾಲಯದ ಒಳಗೆ ಪ್ರವೇಶ ನಿರಾಕರಿಸಿದಾಗ ಅವರು ಸಂಘರ್ಷದ ಹಾದಿ ಹಿಡಿಯಲಿಲ್ಲ. ಬದಲಾಗಿ ತಮ್ಮ ಅಚಲ ಭಕ್ತಿಯ ಶಕ್ತಿಯಿಂದ ಶ್ರೀಕೃಷ್ಣನ ದರ್ಶನ ಪಡೆದರು. ಕನಕದಾಸರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣನೇ ಅವರತ್ತ ತಿರುಗಿದ ಘಟನೆ ಇಂದಿಗೂ ಭಕ್ತಿಯ ಮಹತ್ವವನ್ನು ಸಾರುತ್ತಿದೆ ಎಂದು ಹೇಳಿದರು.

ಕನಕದಾಸರು ವಿಜಯನಗರ ಸಾಮ್ರಾಜ್ಯದಲ್ಲಿ ಸೇನಾಧಿಕಾರಿಯಾಗಿದ್ದವರು. ಯುದ್ಧಭೂಮಿಯಲ್ಲಿ ಹೋರಾಡಿದ ಅವರು, ನಂತರ ತಮ್ಮ ಬದುಕನ್ನೇ ಕೀರ್ತನೆಗಳ ರಚನೆಗೆ ಅರ್ಪಿಸಿದರು. ಕೀರ್ತನೆಗಳ ಮೂಲಕ ಸಮಾಜಕ್ಕೆ ಶಾಂತಿ, ನೆಮ್ಮದಿ ಹಾಗೂ ಮಾನವೀಯತೆಯ ಸಂದೇಶ ಸಾರಿದರು. ಆಡಳಿತ ನಡೆಸುವವರು, ರಾಜಕಾರಣಿಗಳು ಧರ್ಮದ ಅರಿವು ಮತ್ತು ಮಾತಿನಲ್ಲಿ ಮೌಲ್ಯಗಳನ್ನು ಹೊಂದಿರಬೇಕು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.

ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ‘ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ’ ಎಂದು ಹಾಡಿದ್ದಾರೆ. ಅದರಂತೆ ಪವಿತ್ರ ಕಾಗಿನೆಲೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಕನಕ ಜಯಂತಿ ಆಚರಿಸುವ ಅವಕಾಶ ದೊರೆತಿರುವುದು ನನ್ನ ಭಾಗ್ಯ. ಕನಕದಾಸರು ಹಾಕಿಕೊಟ್ಟ ಸಮಾನತೆಯ ಮಾರ್ಗದಲ್ಲಿ ಕಾಗಿನೆಲೆ ಪೀಠದ ಶ್ರೀಗಳು ಸಮಾಜವನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ. ಕನಕದಾಸರ ಪುಣ್ಯಭೂಮಿಯಲ್ಲಿ ನಾವೆಲ್ಲರೂ ಒಂದಾಗಿ ಸೇರಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ತಿಳಿಸಿದರು.

ಕನಕದಾಸರು ಕೇವಲ ಭಕ್ತಿಯ ಪ್ರತಿಪಾದಕರಾಗಿರಲಿಲ್ಲ. ಕೀರ್ತನೆಗಳ ಮೂಲಕ ಸಮಾಜದಲ್ಲಿದ್ದ ಜಾತಿ ತಾರತಮ್ಯ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಮಹಾನ್ ಕ್ರಾಂತಿಕಾರಿಯಾಗಿದ್ದರು. ಕುಲದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸಬಾರದು ಎಂಬ ಸಂದೇಶವನ್ನು ತಮ್ಮ ಸಾಹಿತ್ಯದ ಮೂಲಕ ಸಾರಿದರು.

ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ, ಕನಕದಾಸರು ಒಂದು ಜಾತಿಗೆ, ಡಾ. ಬಿ.ಆರ್. ಅಂಬೇಡ್ಕರ್ ಅವರು ಒಂದು ವರ್ಗಕ್ಕೆ ಸೀಮಿತರಾದವರಲ್ಲ. ಇವರೆಲ್ಲರೂ ಇಡೀ ಸಮಾಜದ ಆಸ್ತಿಯಾಗಿದ್ದಾರೆ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ ಎಂಬ ಉದಾತ್ತ ಸಂದೇಶವನ್ನು ಅರಿತುಕೊಳ್ಳಬೇಕು. ಆತ್ಮಕ್ಕೆ ಯಾವುದೇ ಜಾತಿ ಅಥವಾ ಕುಲದ ಹಂಗಿಲ್ಲ ಎಂದು ಹೇಳಿದರು.

ಕನಕದಾಸರು ಹಸಿದವರಿಗೆ ಅನ್ನ ನೀಡುವ ಮತ್ತು ಸಮಾಜದಲ್ಲಿ ಸಮಾನತೆ ಕಾಪಾಡುವ ಸಂದೇಶವನ್ನು ನೀಡಿದ್ದಾರೆ. ಅವರ ಆಶಯದಂತೆ ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಬಸವ ಜಯಂತಿಯಂದು ಅನ್ನಭಾಗ್ಯ ಯೋಜನೆಗೆ ಅನುಮೋದನೆ ನೀಡಿದರು.

ಪ್ರಸ್ತುತ ರಾಜ್ಯದ 4.21 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯಡಿ ನೆರವು ನೀಡಲಾಗುತ್ತಿದ್ದು, ಇದಕ್ಕಾಗಿ ವಾರ್ಷಿಕ 8,500 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಬೆಲೆ ಏರಿಕೆಯ ಸಂದರ್ಭದಲ್ಲಿ ಜನಸಾಮಾನ್ಯರ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ಸಿದ್ದರಾಮಯ್ಯ ಮತ್ತು ನಾನು ಚರ್ಚಿಸಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 136 ಸ್ಥಾನಗಳನ್ನು ನೀಡಿ ಅಧಿಕಾರಕ್ಕೆ ತಂದ ಜನರಿಗೆ ನೀಡಿದ ಭರವಸೆಯಂತೆ ಸರ್ಕಾರ ನಡೆದುಕೊಂಡಿದೆ. ರೈತರ ಹಿತದೃಷ್ಟಿಯಿಂದ ನೇಗಿಲ ಯೋಗಿ, ತೇಗ ಸಿರಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಭಕ್ತಿ ಕನಕದಾಸರ ಸಾಧನವಾದರೆ, ಸಮಾನತೆ ಅವರ ಬದುಕಿನ ಸಂದೇಶವಾಗಿತ್ತು. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನ ಬದುಕಿಗೆ ನಂಬಿಕೆಯೂ ಅಷ್ಟೇ ಮುಖ್ಯ. ಕನ್ನಡದ ದಾಸ ಸಾಹಿತ್ಯದಲ್ಲಿ ಭಕ್ತಿಯ ಭಾವಸಾಗರವನ್ನು ಕನಕದಾಸರ ಕೀರ್ತನೆಗಳಲ್ಲಿ ಕಾಣಬಹುದು.

ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ. ಈ ಮೂರರ ಸ್ಮರಣೆ ಮನುಷ್ಯತ್ವಕ್ಕೆ ದಾರಿ ಮಾಡಿಕೊಡುತ್ತದೆ. ಮನುಷ್ಯತ್ವವೇ ಮೋಕ್ಷದ ಮಾರ್ಗ ಎಂಬ ಕನಕದಾಸರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ. ದಾನ, ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ವೀರ ಗಂಗಾಧರ ಅಜ್ಜಯ್ಯ ಅವರು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಸಂದೇಶ ನೀಡಿದ್ದಾರೆ. ಮಾನವೀಯತೆಯೇ ಎಲ್ಲ ಧರ್ಮಗಳ ಸಾರ ಎಂಬುದನ್ನು ಇದು ಸಾರುತ್ತದೆ. ಕನಕದಾಸರು 300ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅಕ್ಷರಗಳ ಮೂಲಕ ಅರಿವು, ಕೀರ್ತನೆಗಳ ಮೂಲಕ ಭಕ್ತಿ ಹಾಗೂ ವಿಚಾರಗಳ ಮೂಲಕ ಜಾಗೃತಿ ಮೂಡಿಸಿದ ಮಹಾನ್ ಚೇತನ ಅವರು ಎಂದು ಸ್ಮರಿಸಿದರು.

ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದಡಿ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಎಲ್ಲರಿಗೂ ಆಹಾರ, ಬಟ್ಟೆ ಹಾಗೂ ಮೂಲಭೂತ ಸೌಲಭ್ಯ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಕಾಗಿನೆಲೆ ಕ್ಷೇತ್ರದಲ್ಲಿ ಉತ್ತಮ ವಿದ್ಯಾರ್ಥಿ ನಿಲಯ ನಿರ್ಮಿಸುವಂತೆ ಶ್ರೀಗಳು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ 5 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಭೂಮಿಗೆ ಸಂಬಂಧಿಸಿದ ಬೇಡಿಕೆಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಈಗಾಗಲೇ 35 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ವಿವಿಧ ನಿಗಮಗಳ ಮೂಲಕವೂ ಅನುದಾನ ನೀಡಲಾಗಿದೆ. ಕನಕದಾಸರ ಕರ್ಮಭೂಮಿ ಕಾಗಿನೆಲೆಯನ್ನು ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕುರಿತು ಶ್ರೀಗಳು ಮತ್ತು ಸಮಿತಿಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕನಕದಾಸರ ಪುತ್ಥಳಿಯನ್ನು ಅನಾವರಣಗೊಳಿಸಿರುವುದು ಸಂತಸ ತಂದಿದೆ ಎಂದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಪ್ರವೇಶದಲ್ಲಿ ನೀಡಲಾಗುತ್ತಿದ್ದ ಶೇ.15ರಷ್ಟು ಮೀಸಲಾತಿಯಲ್ಲಿ ಶೇ.7.5ರಷ್ಟು ಮೀಸಲಾತಿಯನ್ನು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ವರ್ಷ ಸರ್ಕಾರದ ವತಿಯಿಂದ ಕನಕ ಉತ್ಸವ ಆಚರಿಸಲಾಗುತ್ತಿದೆ. ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದಷ್ಟೇ ನಮ್ಮ ಕರ್ತವ್ಯವಾಗಬಾರದು. ಅವರ ಸಮಾನತೆಯ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಹಾವೇರಿ ಜಿಲ್ಲೆಯಿಂದ ಏಳು ಶಾಸಕರನ್ನು ಆಯ್ಕೆ ಮಾಡಿ ರಾಜ್ಯಕ್ಕೆ ಉತ್ತಮ ಸಂದೇಶ ನೀಡಿದ್ದೀರಿ. ಜಿಲ್ಲೆಯ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಬ್ಯಾಡಗಿ ಕ್ಷೇತ್ರದ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯಡಿ 137 ಕೆರೆಗಳಿಗೆ ನೀರು ತುಂಬಿಸುವಂತೆ ಶಾಸಕರು ಮನವಿ ಸಲ್ಲಿಸಿದ್ದರು. ಈ ಯೋಜನೆಗೆ ಈಗಾಗಲೇ 115 ಕೋಟಿಗೂ ಹೆಚ್ಚು ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.

ರಾಜ್ಯದಲ್ಲಿ ಬರಗಾಲ ಎದುರಾದ ಸಂದರ್ಭದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಕೇಂದ್ರ ಸರ್ಕಾರದಿಂದ ಬರ ಪರಿಹಾರ ದೊರೆಯದಿದ್ದರೂ ರಾಜ್ಯ ಸರ್ಕಾರ ಪ್ರತಿ ರೈತರ ಖಾತೆಗೆ 5 ಸಾವಿರ ರೂ. ಪರಿಹಾರ ನೀಡಲು ಮುಂದಾಗಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕೆಲಸ ಮಾಡಿರುವ ನಾನು, ಅವರ ಆಡಳಿತಾವಧಿಯಲ್ಲಿ ಯಾವುದೇ ಲೋಪವಾಗದಂತೆ ಬೆಂಬಲವಾಗಿ ನಿಂತಿದ್ದೆ. ಪಕ್ಷದ ಹಿರಿಯ ನಾಯಕರ ನಿರ್ಧಾರದಂತೆ ಅವರು ನನಗೆ ಜವಾಬ್ದಾರಿ ವಹಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸರ್ಕಾರ ಮುನ್ನಡೆಯುತ್ತಿದೆ. ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುತ್ತಾ ಜನಸೇವೆ ಮುಂದುವರಿಸುವುದು ನನ್ನ ಕರ್ತವ್ಯ. ನನ್ನನ್ನು ನಾಡಿನ ದೊರೆ ಅಥವಾ ರಾಜ ಎಂದು ಕರೆಯುವುದಕ್ಕಿಂತ ಪ್ರಜಾಸೇವಕ ಎಂದು ಕರೆಯಬೇಕು. ಜನರ ಸೇವಕನಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದ ಬಳಿಕ ಹಾವೇರಿ ಜಿಲ್ಲೆಯ ಕೊಳ್ಳಿ ಪಾಲಿಟೆಕ್ನಿಕ್ ಆವರಣದ ಹೆಲಿಪ್ಯಾಡ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಸಂತ ಕನಕದಾಸರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ತತ್ವ ಮತ್ತು ಸಂದೇಶಗಳನ್ನು ಎಲ್ಲರೂ ಗೌರವಿಸಬೇಕು. ಕನಕದಾಸರಿಗೆ ಜಾತಿಯ ಬಣ್ಣ ಬಳಿಯುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.

ಕನಕದಾಸರು ತಮ್ಮ ಭಕ್ತಿಯ ಮೂಲಕ ಶ್ರೀಕೃಷ್ಣನನ್ನೇ ಒಲಿಸಿಕೊಂಡವರು. ಜಾತಿ, ಕುಲದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸಬಾರದು ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ಅಂಥ ಮಹಾನ್ ವ್ಯಕ್ತಿತ್ವವನ್ನು ಜಾತಿಯ ಚೌಕಟ್ಟಿನಲ್ಲಿ ನೋಡುವುದು ಸರಿಯಲ್ಲ. ಅವರು ಇಡೀ ಸಮಾಜಕ್ಕೆ ಸೇರಿದವರು ಎಂದು ಸ್ಪಷ್ಟಪಡಿಸಿದರು.

ಕನಕ ಜಯಂತಿ ಕಾರ್ಯಕ್ರಮಕ್ಕೆ ದಿಢೀರ್ ಯೋಜನೆ ರೂಪಿಸಲಾಗಿದೆಯೇ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ದಿಢೀರ್ ಯೋಜನೆ ಇಲ್ಲ. ನಿನ್ನೆ ಸಂವಿಧಾನ ದಿನ ಆಚರಿಸಿದ್ದೇವೆ. ಬೆಂಗಳೂರಿನಲ್ಲಿಯೂ ಕಾರ್ಯಕ್ರಮ ನಡೆಯುತ್ತಿದೆ. ಕಾಗಿನೆಲೆ ಪೀಠದ ಶ್ರೀಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದರು. ಹೀಗಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.

ಉತ್ತರ ಕರ್ನಾಟಕ ಭಾಗದಲ್ಲಿ ಕುರುಬ ಸಮುದಾಯದ ಜನಸಂಖ್ಯೆ ಹೆಚ್ಚಿದ್ದರೂ ಸಚಿವ ಸ್ಥಾನ ನೀಡುವಲ್ಲಿ ಅನ್ಯಾಯವಾಗಿದೆ ಎಂಬ ಅಸಮಾಧಾನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಪರಿಸ್ಥಿತಿ ಹೇಗಿತ್ತು ಎಂಬುದನ್ನೂ ಗಮನಿಸಬೇಕು. ಈಗಲೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಿದ್ದಾರೆ. ಸಮಾಜದಲ್ಲಿ ಹಲವು ಗಣ್ಯರು ಮತ್ತು ನಾಯಕರು ಇದ್ದಾರೆ. ಈ ವಿಚಾರ ನನ್ನ ಗಮನದಲ್ಲಿದೆ. ಶಿವಣ್ಣ ಅವರನ್ನು ನಾನೇ ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಸೋನಿಯಾ ಗಾಂಧಿ ಅವರ ಬಳಿಗೆ ಕರೆದೊಯ್ದಿದ್ದೆ ಎಂದು ಹೇಳಿದರು.

ವರದಾ-ಬೇಡ್ತಿ ನದಿ ಜೋಡಣೆ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ ಸಹಮತಿ ನೀಡಿದೆ. ಪ್ರಕ್ರಿಯೆ ಮುಂದುವರಿದಿದೆ. ಈ ಸಂಬಂಧ ಮೂವರು ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದೇವೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಾದ ಕೆಲವು ವಿಚಾರಗಳಿವೆ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರ ಸಭೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಮುಂದಿನ ಕ್ರಮಗಳನ್ನು ನೋಡೋಣ. ಅವರೊಂದಿಗೆ ಏನೇನು ಮಾತನಾಡಿದ್ದೇನೋ ಅದು ಅವರಿಗೆ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ಆದರೆ ಕೆಲವು ನಾಯಕರು ಮತ್ತು ಸಂಘಟನೆಗಳ ಒತ್ತಡದಿಂದಾಗಿ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಆಶಾ ಕಾರ್ಯಕರ್ತೆಯರೆಲ್ಲರೂ ಒಳ್ಳೆಯವರೇ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಪೂಜ್ಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಸರೂರು ಶ್ರೀಕ್ಷೇತ್ರದ ಶಾಂತ ಸಿಂಹಾಸನಾರೂಢ ಶ್ರೀ ರೇವಣಸಿದ್ದೇಶ್ವರ ಮಹಾಸ್ವಾಮಿಗಳು, ಸಚಿವರಾದ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಯು.ಬಿ. ಬಣಕಾರ್, ಪ್ರಕಾಶ್ ಕೋಳಿವಾಡ್, ಯಾಸಿರ್ ಖಾನ್ ಪಠಾಣ್, ಉಮೇಶ್ ಮೇಟಿ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷ ಎಸ್.ಆರ್. ಪಾಟೀಲ್, ರಾಜ್ಯ ಪರಿಸರ ಮೌಲ್ಯಮಾಪನ ಅಧ್ಯಕ್ಷ ಉಮೇಶ್, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧ್ಯಕ್ಷ ಸೈಯದ್ ಅಜೀಂಪೀರ್ ಎಸ್. ಖಾದ್ರಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಪ್ರದೀಪ್ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ರಿಯಲ್ ಎಸ್ಟೇಟ್ ಉದ್ಯಮಿಗಳ ಒಗ್ಗಟ್ಟಿಗೆ ಈ ವಿಶ್ವಾಸ್ ಸಾರಥ್ಯ; ಯಶಸ್ವಿಯಾಗಿ ನಡೆದ ಬಿಸಿನೆಸ್ ಮೀಟ್! ಸಂಘಟಿತ ಪ್ರಯತ್ನದಿಂದ ಉದ್ಯಮ ಕ್ಷೇತ್ರದ ಪ್ರಗತಿ ಸಾಧ್ಯ: ಸಿ.ಎಸ್. ಷಡಾಕ್ಷರಿ

ನ.30ರಿಂದ ಸಂಸತ್‌ನ ವಿಶೇಷ ಅಧಿವೇಶನ ಆರಂಭ; ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಮಂಡನೆಗೆ ಸಿದ್ಧತೆ!

ಗೋಹತ್ಯೆ ತಡೆಯುವವರನ್ನೇ ಗುರಿಯಾಗಿಸಲಾಗುತ್ತಿದೆ; ಸುಳ್ಳು ಮೊಕದ್ದಮೆ ದಾಖಲಿಸಿದರೆ ರಾಜ್ಯಾದ್ಯಂತ ಹೋರಾಟ: ಬಿಜೆಪಿ ನಾಯಕರ ಎಚ್ಚರಿಕೆ

ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ₹5,000 ಭತ್ಯೆ; 25 ಲಕ್ಷ ಸರ್ಕಾರಿ ಉದ್ಯೋಗಗಳ ಭರವಸೆ! ಮಹಿಳೆಯರಿಗೆ ವಾರ್ಷಿಕ ₹40 ಸಾವಿರ ನೆರವು, ರೈತರ ಸಾಲಮನ್ನಾ, 300 ಯೂನಿಟ್ ಉಚಿತ ವಿದ್ಯುತ್: 2027ರ ಯುಪಿ ಚುನಾವಣೆಗೆ ಅಖಿಲೇಶ್ ಯಾದವ್ ಭರ್ಜರಿ ಪ್ರಣಾಳಿಕೆ

ಸಂವಿಧಾನದ ಆಶಯ, ಮೂಲಭೂತ ಹಕ್ಕುಗಳ ಬೋಧನೆಗೆ ಪ್ರತ್ಯೇಕ ಸಮಿತಿ ರಚನೆ; ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ ಶಾಲೆಗಳಲ್ಲೂ ಸಂವಿಧಾನ ಪಾಠ: ಸಿಎಂ ಡಿ.ಕೆ. ಶಿವಕುಮಾರ್

ಅಂಬೇಡ್ಕರ್ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್‌ಗೆ ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಬಿ.ವೈ. ವಿಜಯೇಂದ್ರ

Leave a Comment