ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಬಸವಣ್ಣನವರ ತೇಜೋವಧೆ ಸಹಿಸಲ್ಲ; ಶರಣ ಸಮುದಾಯ ಸಂಘಟಿತ ಹೋರಾಟಕ್ಕೆ ಸಜ್ಜಾಗಲಿ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

On: November 26, 2026 11:07 PM
Follow Us:

ಶಿವಮೊಗ್ಗ: ಶರಣರ ಚಿಂತನೆಗಳು ಕೇವಲ ಇತಿಹಾಸದ ಪುಟಗಳಿಗೆ ಸೀಮಿತವಾಗಬಾರದು, ಅವು ಪ್ರತಿಯೊಂದು ಮನೆಯ ಸಂಸ್ಕಾರವಾಗಿ, ಪ್ರತಿಯೊಬ್ಬರ ಬದುಕಿನ ನಡವಳಿಕೆಯಾಗಿ ರೂಪುಗೊಳ್ಳಬೇಕು. ಬಸವಣ್ಣನವರ ಸಮಾನತೆ, ಮಾನವೀಯತೆ ಮತ್ತು ಕಾಯಕ-ದಾಸೋಹದ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕಾದ ಸಮಾಜದಲ್ಲಿ, ಅವರ ವ್ಯಕ್ತಿತ್ವ ಮತ್ತು ಚಾರಿತ್ರ್ಯವನ್ನೇ ಪ್ರಶ್ನಿಸುವ ಪ್ರಯತ್ನಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂತಹ ಅಪಪ್ರಚಾರದ ವಿರುದ್ಧ ಕೇವಲ ಪ್ರತಿಭಟನೆ ನಡೆಸಿ ಸುಮ್ಮನಾಗದೆ, ಶರಣ ಸಂಸ್ಕೃತಿಯ ರಕ್ಷಣೆಗೆ ಇಡೀ ಸಮಾಜ ಸಂಘಟಿತವಾಗಿ ಧ್ವನಿ ಎತ್ತಬೇಕು ಎಂದು ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಕರೆ ನೀಡಿದರು.

ನಗರದ ವಿದ್ಯಾನಗರದಲ್ಲಿ ಅಲ್ಲಮ ಅಕ್ಕ ಚಿಂತನ ಬಳಗ, ಬಸವಕೇಂದ್ರ, ಶಿವಮೊಗ್ಗ ಹಾಗೂ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಆಶ್ರಯದಲ್ಲಿ ಸೇವಾರ್ಥಿಗಳು, ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರ ಸಹಯೋಗದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕದ 13ನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಬಸವಣ್ಣನವರ ವಿರುದ್ಧ ತೇಜೋವಧೆ ಮಾಡುವ ರೀತಿಯಲ್ಲಿ ಕೃತಿ ರಚಿಸಿ ವರ್ತಿಸುತ್ತಿರುವ ವ್ಯಕ್ತಿಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಒಂದು ಭಾಗ. ಆದರೆ ಅದಕ್ಕಷ್ಟೇ ನಮ್ಮ ಪ್ರತಿರೋಧ ಸೀಮಿತವಾಗಬಾರದು. ಇಂತಹ ಕೃತ್ಯಗಳು ಮರುಕಳಿಸದಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಮತ್ತು ಶರಣ ಸಂಸ್ಕೃತಿಯ ಮೇಲೆ ನಂಬಿಕೆ, ಗೌರವ ಹೊಂದಿರುವ ಪ್ರತಿಯೊಬ್ಬರೂ ಸಂಘಟಿತರಾಗುವುದು ಇಂದಿನ ಅಗತ್ಯವಾಗಿದೆ ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.

ಬೆಂಗಳೂರಿನ ಬಸವ ಸಮಿತಿಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಅಭಿಮಾನಿಗಳ ನೇತೃತ್ವದಲ್ಲಿ ಸುಮಾರು 100 ಜನರು ಸೇರಿ ಚಿಂತನ-ಮಂಥನ ಸಭೆ ನಡೆಸಲಾಗಿದೆ. ಬಸವಣ್ಣನವರ ವಿರುದ್ಧದ ಅಪಪ್ರಚಾರಕ್ಕೆ ಕೇವಲ ಕಾನೂನು ಕ್ರಮ ಅಥವಾ ಪ್ರತಿಭಟನೆ ಮಾತ್ರ ಉತ್ತರವಾಗಬಾರದು. ಸಮಾಜದ ಪ್ರತಿಯೊಬ್ಬರಲ್ಲೂ ಈ ವಿಚಾರದ ಬಗ್ಗೆ ಜಾಗೃತಿ ಮೂಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಹಿಂದೆ ಬೇರೆ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಬಂದಾಗ ಮೌನವಾಗಿದ್ದವರು, ಈಗ ಬಸವಣ್ಣನವರ ವಿಚಾರದಲ್ಲಿ ಏಕೆ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸುವ ಮೂಲಕ ವಿಷಯವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ. ಅಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಇಂದಿನಷ್ಟು ಪ್ರಬಲವಾಗಿರಲಿಲ್ಲ. ಮುದ್ರಿತ ಮಾಧ್ಯಮಗಳು ಮತ್ತು ಸೀಮಿತ ಅವಧಿಯ ದೂರದರ್ಶನ ಸುದ್ದಿಗಳ ಮೂಲಕವೇ ಪ್ರತಿಭಟನೆಗಳು ಜನರಿಗೆ ತಲುಪುತ್ತಿದ್ದವು. ಆದರೆ ಇಂದು 24 ಗಂಟೆಗಳ ಕಾಲ ಸುದ್ದಿ ಪ್ರಸಾರ ಮಾಡುವ ವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳ ಕಾರಣದಿಂದ ಪ್ರತಿಯೊಂದು ಬೆಳವಣಿಗೆಯೂ ವ್ಯಾಪಕ ಚರ್ಚೆಗೆ ಬರುತ್ತಿದೆ. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಬಸವಣ್ಣನವರ ವಿಚಾರದಲ್ಲಿ ನಡೆಯುತ್ತಿರುವ ಪ್ರತಿರೋಧವನ್ನು ದುರ್ಬಲಗೊಳಿಸಲು, ಹಿಂದಿನ ಘಟನೆಗಳನ್ನು ಮುಂದಿಟ್ಟುಕೊಂಡು ಪ್ರಶ್ನಿಸುವವರೂ ನಮ್ಮ ನಡುವೆ ಇದ್ದಾರೆ. ಇಂತಹ ಮನೋಭಾವದ ಹಿಂದೆ ಇರುವ ಉದ್ದೇಶವನ್ನು ಬಸವ ಅಭಿಮಾನಿಗಳು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಶರಣ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶ್ರೀಗಳು ಎಚ್ಚರಿಸಿದರು.

ಬಸವಣ್ಣನವರ ವಿರುದ್ಧದ ಅಪಪ್ರಚಾರದ ವಿಚಾರದಲ್ಲಿ ಶಿವಮೊಗ್ಗದ ರುದ್ರೇಗೌಡರು ವ್ಯಕ್ತಪಡಿಸಿದ ಕಳಕಳಿ ಮತ್ತು ಹೋರಾಟದ ಅಗತ್ಯತೆಯ ಬಗ್ಗೆ ಪ್ರಸ್ತಾಪಿಸಿದ ಬಸವಕೇಂದ್ರ ಶ್ರೀಗಳು, ಆರಂಭದಲ್ಲಿ ಸರ್ಕಾರ ಕ್ರಮ ಕೈಗೊಂಡ ಬಳಿಕ ಮುಂದೇನು ಮಾಡಬಹುದು ಎಂಬ ಚಿಂತನೆಯಲ್ಲಿದ್ದೆವು. ಆದರೆ ನಂತರ ಸಮಾಜದ ಪ್ರತಿರೋಧವೂ ಅಷ್ಟೇ ಮುಖ್ಯ ಎಂಬುದನ್ನು ಮನಗಂಡಿದ್ದೇವೆ. ಬಸವಣ್ಣನವರ ಬಗ್ಗೆ ಭಕ್ತಿ, ಶ್ರದ್ಧೆ ಮತ್ತು ಗೌರವ ಹೊಂದಿರುವ ಪ್ರತಿಯೊಬ್ಬರಲ್ಲೂ ಇಂತಹ ಘಟನೆಗಳು ಸಹಜವಾಗಿಯೇ ಆಕ್ರೋಶ ಮೂಡಿಸುತ್ತವೆ. ಆ ಆಕ್ರೋಶವನ್ನು ಸಂಘಟಿತ ಮತ್ತು ಶಾಂತಿಯುತ ಹೋರಾಟದ ರೂಪಕ್ಕೆ ತರಬೇಕಾಗಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಇದೇ ನವೆಂಬರ್ 29ರಂದು ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ಶಿವಮೊಗ್ಗದ ಬಸವಕೇಂದ್ರದಲ್ಲಿ ಚಿಂತನ-ಮಂಥನ ಸಭೆ ಕರೆಯಲಾಗಿದೆ. ಸಭೆಯಲ್ಲಿ ಹೋರಾಟದ ಸ್ವರೂಪ, ಪ್ರತಿಭಟನೆ ನಡೆಸುವ ವಿಧಾನ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಚರ್ಚಿಸಲಾಗುವುದು. ಬಳಿಕ ಪ್ರತಿಭಟನೆ ಮತ್ತು ಮೆರವಣಿಗೆಗೆ ದಿನಾಂಕ ನಿಗದಿಪಡಿಸಲಾಗುವುದು. ಈ ಹೋರಾಟದಲ್ಲಿ ಬಸವ ಅಭಿಮಾನಿಗಳು, ಶರಣ ಸಂಸ್ಕೃತಿಯನ್ನು ಪ್ರೀತಿಸುವವರು ಹಾಗೂ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಸವಕೇಂದ್ರ ಶ್ರೀಗಳು ಮನವಿ ಮಾಡಿದರು.

ಇಂದು ನಮ್ಮ ಮನೆಗಳಲ್ಲಿ ಶರಣ ಪರಂಪರೆಯ ಸಂಸ್ಕಾರಗಳು ಎಷ್ಟರಮಟ್ಟಿಗೆ ಉಳಿದಿವೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಜೀವನಶೈಲಿ ಮತ್ತು ಕುಟುಂಬದ ಸಂಸ್ಕಾರಗಳಲ್ಲಿ ಶರಣರ ಮೌಲ್ಯಗಳು ಹಿಂದೆ ಸರಿಯುತ್ತಿರುವಾಗ, ನಮಗೆ ಇಂತಹ ಮಾನವೀಯ ಸಂಸ್ಕಾರಗಳನ್ನು ಕಲಿಸಿದ ಬಸವಣ್ಣನವರ ಚಾರಿತ್ರ್ಯವನ್ನೇ ಹನನ ಮಾಡುವ ಪ್ರಯತ್ನಗಳು ನಡೆಯುತ್ತಿರುವುದು ನೋವಿನ ಸಂಗತಿ. ಈ ಹಿನ್ನೆಲೆಯಲ್ಲಿ ಸಮಾಜದ ಪ್ರತಿಯೊಬ್ಬರೂ ಜಾಗೃತರಾಗಬೇಕು. ಅನ್ಯಾಯ ಮತ್ತು ಅಪಪ್ರಚಾರದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತದಿದ್ದರೆ ಇಂತಹ ಘಟನೆಗಳು ಮತ್ತಷ್ಟು ಅತಿರೇಕಕ್ಕೆ ಹೋಗುವ ಅಪಾಯವಿದೆ ಎಂದು ಶ್ರೀಗಳು ತಿಳಿಸಿದರು.

ಲಿಂಗ ಸಮನ್ವಯ ಎಂದರೆ ಕೇವಲ ಸ್ತ್ರೀ-ಪುರುಷರ ನಡುವಿನ ಸಮಾನತೆಯ ಮಾತಲ್ಲ. ಪರಸ್ಪರರ ಭಾವನೆ, ವಿಚಾರ, ಶ್ರಮ ಮತ್ತು ವ್ಯಕ್ತಿತ್ವವನ್ನು ಗೌರವಿಸುವ ಮನೋಭಾವವೇ ನಿಜವಾದ ಲಿಂಗ ಸಮನ್ವಯ. ಹಸಿವು, ನಿದ್ರೆ, ಭಾವನೆಗಳು ಮಹಿಳೆ ಮತ್ತು ಪುರುಷ ಇಬ್ಬರಿಗೂ ಒಂದೇ. ಹೀಗಿರುವಾಗ ಪರಸ್ಪರ ಗೌರವದಿಂದ ಬದುಕುವುದೇ ಸಮನ್ವಯದ ಮೂಲತತ್ವ ಎಂದು ಹೇಳಿದರು.

12ನೇ ಶತಮಾನದಲ್ಲಿಯೇ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಮಹಿಳೆಯರಿಗೆ ಮುಕ್ತವಾಗಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಿದ್ದರು. ಅಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಯಾವುದೇ ಶೇಕಡಾವಾರು ಮಿತಿ ಇರಲಿಲ್ಲ. ಇಂದು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ, ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲಾತಿ ಕುರಿತು ಚರ್ಚಿಸುತ್ತಿದ್ದೇವೆ. ಆದರೆ ಶತಮಾನಗಳ ಹಿಂದೆಯೇ ಶರಣರು ಮಹಿಳೆಯರಿಗೆ ಸಮಾನ ಅವಕಾಶ ನೀಡಿದ್ದರು ಎಂಬುದು ಜಗತ್ತೇ ಅಚ್ಚರಿಯಿಂದ ನೋಡುವಂತಹ ವಿಚಾರವಾಗಿದೆ ಎಂದು ಹೇಳಿದರು.

ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೇ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಮತದಾನದ ಹಕ್ಕು ದೊರೆತಿರುವುದು ನಮ್ಮ ಸಂವಿಧಾನದ ಶ್ರೇಷ್ಠತೆಯನ್ನು ತೋರಿಸುತ್ತದೆ. ಸಮಾನತೆ ಮತ್ತು ಮಾನವೀಯತೆಯ ಈ ಚಿಂತನೆಗಳಿಗೆ ಬಸವಾದಿ ಶರಣರ ಅನುಭವ ಮಂಟಪದ ಆಶಯಗಳೂ ಪ್ರೇರಣೆಯಾಗಿವೆ ಎಂಬುದನ್ನು ನಾವು ಸ್ಮರಿಸಬೇಕು ಎಂದು ಹೇಳಿದರು.

ಸಿದ್ಧರಾಮೇಶ್ವರರ ವಚನದಲ್ಲಿ ಮಹಿಳೆಯ ಶಕ್ತಿಯನ್ನು ಅತ್ಯಂತ ಉನ್ನತವಾಗಿ ಬಿಂಬಿಸಲಾಗಿದೆ. ಹೆಣ್ಣನ್ನು ಕೇವಲ ಕುಟುಂಬದ ಒಂದು ಸದಸ್ಯೆಯಾಗಿ ನೋಡದೆ, ಅಪಾರ ಸಾಮರ್ಥ್ಯ ಮತ್ತು ಸೃಜನಶೀಲತೆ ಹೊಂದಿರುವ ವ್ಯಕ್ತಿಯಾಗಿ ಗೌರವಿಸಬೇಕು. ಮಹಿಳೆಯರ ಭಾವನೆ ಮತ್ತು ಶ್ರಮಕ್ಕೆ ಬೆಲೆ ನೀಡಬೇಕು. ಮನೆಯ ಜವಾಬ್ದಾರಿಯನ್ನು ನಿರ್ವಹಿಸುವುದು ಸಾಮಾನ್ಯ ಕೆಲಸವಲ್ಲ. ಪುರುಷರು ದುಡಿದು ತರುವ ಆದಾಯವನ್ನು ಸಮರ್ಥವಾಗಿ ನಿರ್ವಹಿಸಿ ಕುಟುಂಬವನ್ನು ಮುನ್ನಡೆಸುವ ಮಹಿಳೆಯರ ಕಾರ್ಯವೂ ಅತ್ಯಂತ ಮಹತ್ವದ್ದಾಗಿದೆ ಎಂದರು.

ಗಂಡು ಮಕ್ಕಳು ಮಹಿಳೆಯರನ್ನು ಗೌರವಿಸುವುದನ್ನು ಮೊದಲು ತಮ್ಮ ಮನೆಗಳಿಂದಲೇ ಕಲಿಯಬೇಕು. ಮನೆಯಲ್ಲಿರುವ ಮಹಿಳೆಯರನ್ನು ನಿರ್ಲಕ್ಷಿಸಿ, ಹೀಯಾಳಿಸಿ ಮಾತನಾಡುವ ಪುರುಷರು ಒಂದು ದಿನವಾದರೂ ಬೆಳಗ್ಗೆಯಿಂದ ಸಂಜೆಯವರೆಗೆ ಮನೆಯ ಎಲ್ಲ ಕೆಲಸಗಳನ್ನು ಮಾಡಿ ನೋಡಲಿ. ಆಗ ಮಹಿಳೆಯರ ಶ್ರಮದ ಮಹತ್ವ ಅರ್ಥವಾಗುತ್ತದೆ. ತಂದೆ ತಾಯಿಯರ ನಡವಳಿಕೆಯನ್ನೇ ಮಕ್ಕಳು ಅನುಸರಿಸುವುದರಿಂದ, ಮನೆಯಲ್ಲಿ ಮಹಿಳೆಯರಿಗೆ ಗೌರವ ನೀಡಿದರೆ ಮುಂದಿನ ಪೀಳಿಗೆಯೂ ಸಮಾಜದಲ್ಲಿ ಮಹಿಳೆಯರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳುತ್ತದೆ ಎಂದು ಬಸವಕೇಂದ್ರ ಶ್ರೀಗಳು ಕಿವಿಮಾತು ಹೇಳಿದರು.

ಅಲ್ಲಮ ಅಕ್ಕ ಚಿಂತನ ಬಳಗದ ರಚನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಬಸವಕೇಂದ್ರ ಶ್ರೀಗಳು, ಅಲ್ಲಮಪ್ರಭುದೇವರ ಹೆಸರಿನಲ್ಲಿ ಗೃಹಸ್ಥರು, ಉದ್ಯೋಗದಾತರು ಮತ್ತು ಉದ್ಯೋಗಸ್ಥರು ಒಗ್ಗೂಡಿ ಇಂತಹ ಚಿಂತನ ಬಳಗವನ್ನು ರೂಪಿಸಿರುವುದು ವಿಶೇಷವಾಗಿದೆ. ಈ ಸಂಘಟನೆ ಕೇವಲ ಚಿಂತನ ಕಾರ್ತಿಕ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು. ವಿದ್ಯಾನಗರ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ವರ್ಷಕ್ಕೊಮ್ಮೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶರಣರ ವಿಚಾರಗಳನ್ನು ಜನರಿಗೆ ತಲುಪಿಸಬೇಕು ಎಂದು ಹೇಳಿದರು.

ಒಂದು ತಿಂಗಳ ಕಾಲ ವಚನ ಕಲಿಸುವವರನ್ನು ಆಹ್ವಾನಿಸಿ, ಬಳಗದ ಸದಸ್ಯರೆಲ್ಲರೂ ವಚನಗಳನ್ನು ಕಲಿಯಬೇಕು. ಮುಂದಿನ ಕಾರ್ಯಕ್ರಮದಲ್ಲಿ ನೀವು ಕಲಿತ ವಚನಗಳನ್ನು ಹಾಡಿದರೆ ಅದಕ್ಕಿಂತ ಸಂತೋಷದ ಸಂಗತಿ ಮತ್ತೊಂದಿಲ್ಲ. ನಾವು ನೂರು ಭಾಷಣ ಮಾಡುವುದಕ್ಕಿಂತ ನೀವು ಒಂದು ತಿಂಗಳು ಶ್ರದ್ಧೆಯಿಂದ ವಚನಗಳನ್ನು ಕಲಿತು ಅವುಗಳ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೆಚ್ಚು ಮೌಲ್ಯಯುತವಾದದ್ದು ಎಂದು ಸಲಹೆ ನೀಡಿದರು.

ಚಿಂತನ ಕಾರ್ತಿಕದ ಸಮಾರೋಪ ಸಮಾರಂಭ ಡಿಸೆಂಬರ್ 14 ಮತ್ತು 15ರಂದು ನಡೆಯಲಿದೆ. ಈ ಎರಡು ದಿನಗಳ ಕಾಲ ಶಿವಸಂಚಾರದ ವತಿಯಿಂದ ‘ನುಲಿಯ ಚಂದಯ್ಯ’ ಮತ್ತು ‘ಬರ್ಬರೀಕ’ ನಾಟಕಗಳು ಪ್ರದರ್ಶನಗೊಳ್ಳಲಿವೆ. ಡಿಸೆಂಬರ್ 14ರಂದು ಬೆಕ್ಕಿನಕಲ್ಮಠದ ಶ್ರೀಗಳು ಹಾಗೂ 15ರಂದು ಸಾಣೇಹಳ್ಳಿಯ ಶ್ರೀಗಳು ಆಗಮಿಸಲಿದ್ದಾರೆ.

ಮೊದಲ ದಿನ ಮಕ್ಕಳಿಗೆ ಶರಣರ ವಿಚಾರಗಳನ್ನು ಅಕ್ಷರಾನುಕ್ರಮದಲ್ಲಿ ಪರಿಚಯಿಸುವ ಅಪರೂಪದ ಕೃತಿ ‘ಶರಣ ರತ್ನಮಾಲೆ’ಯ ಆರನೇ ಮುದ್ರಣವನ್ನು ಬಿಡುಗಡೆ ಮಾಡಲಾಗುವುದು. ಎರಡನೇ ದಿನ ಬಸವಣ್ಣನವರ ಕುರಿತು ಇತ್ತೀಚೆಗೆ ಎದ್ದಿರುವ ಪ್ರಶ್ನೆಗಳಿಗೆ ಕೇವಲ ಮಾತುಗಳ ಮೂಲಕವಲ್ಲದೆ, ದಾಖಲೆಗಳ ಸಹಿತ ಉತ್ತರ ನೀಡುವ ಉದ್ದೇಶದಿಂದ ಸಿದ್ಧಪಡಿಸಿರುವ ಮಹತ್ವದ ಕೃತಿಯನ್ನು ಬಿಡುಗಡೆ ಮಾಡಲಾಗುವುದು. ಈ ಎರಡೂ ದಿನಗಳ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಹ್ವಾನಿಸಿದರು.

ಕಾರ್ಯಕ್ರಮದ ಆಯೋಜನೆಗಾಗಿ ಬಳಗದ ಸದಸ್ಯರು ತಿಂಗಳುಗಟ್ಟಲೆ ಸಭೆಗಳನ್ನು ನಡೆಸಿ, ಪ್ರತಿಯೊಂದು ವಿಷಯದಲ್ಲೂ ಶ್ರಮಿಸಿರುವುದನ್ನು ಬಸವಕೇಂದ್ರ ಶ್ರೀಗಳು ಶ್ಲಾಘಿಸಿದರು. ಮಳೆ ಬಂದರೂ ಕಾರ್ಯಕ್ರಮದ ಉತ್ಸಾಹ ಕುಂದಬಾರದು. ಬಹಳ ದಿನಗಳ ಬಳಿಕ ಮಳೆ ಸುರಿದಿರುವುದನ್ನು ಶುಭಸೂಚನೆಯೆಂದು ಭಾವಿಸಬೇಕು. ಮಳೆಯಿಂದಾಗಿ ಕಾರ್ಯಕ್ರಮದಲ್ಲಿ ಯಾವುದೇ ಕೊರತೆ ಉಂಟಾಯಿತು ಎಂದು ಯಾರೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ನಿಮ್ಮ ಕಾರ್ಯಕ್ರಮದ ಸೊಬಗನ್ನು ನೋಡಲು ಮಳೆಯೂ ಆಗಮಿಸಿದೆ ಎಂದು ಸಂಭ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಆನಂದ್ ಅವರ ವಿಚಾರಪೂರ್ಣ ಮಾತುಗಳನ್ನು ಪ್ರಶಂಸಿಸಿದ ಶ್ರೀಗಳು, ಅವರು ತಮ್ಮ ಮನೆಯ ಮೇಲ್ಭಾಗದಲ್ಲಿ ಗ್ರಂಥಾಲಯ ಸ್ಥಾಪಿಸಿರುವುದಲ್ಲದೆ, ಸುತ್ತಮುತ್ತಲಿನ ಮಕ್ಕಳಿಗೆ ಪ್ರತಿನಿತ್ಯ ಉಚಿತವಾಗಿ ಪಾಠ ಹೇಳುವ ಮೂಲಕ ಸಾಹಿತ್ಯ ಮತ್ತು ಸಂಸ್ಕೃತಿಯ ಸೇವೆ ಮಾಡುತ್ತಿದ್ದಾರೆ. ಕೇವಲ ವಿಚಾರಗಳನ್ನು ಬೋಧಿಸುವುದಷ್ಟೇ ಅಲ್ಲದೆ, ಅವುಗಳನ್ನು ತಮ್ಮ ಬದುಕಿನಲ್ಲೂ ಅನುಸರಿಸುತ್ತಿರುವ ಅಪರೂಪದ ವ್ಯಕ್ತಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ. ನಾಗರಾಜ್, ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ಚಿಕ್ಕಮಗಳೂರು ವಹಿಸಿದ್ದರು. ಮಾಜಿ ವಿಧಾನಪರಿಷತ್ ಸದಸ್ಯ ರುದ್ರೇಗೌಡ ಉಪಸ್ಥಿತರಿದ್ದರು. ಡಾ. ಆನಂದ್, ಪ್ರಾಧ್ಯಾಪಕರು, ಕಡೂರು ಅವರು ಉಪನ್ಯಾಸ ನೀಡಿದರು.

K.M.Sathish Gowda

Join WhatsApp

Join Now

Facebook

Join Now

Read more

ಮಕ್ಕಳಲ್ಲಿ ನೈತಿಕ ಮೌಲ್ಯಗಳ ಕುಸಿತ, ಕುಟುಂಬಗಳಲ್ಲಿ ಆಸ್ತಿ ಕಲಹ, ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷ–ಅಸೂಯೆಗೆ ಆಧ್ಯಾತ್ಮಿಕ ಚಿಂತನೆಯೇ ಮದ್ದು: ಲವಕುಮಾರಸ್ವಾಮಿ

ಹಿಂದಿನ ಜನ್ಮದ ಚಿಂತೆಯಲ್ಲ; ಇಂದಿನ ಕರ್ಮದ ಬಗ್ಗೆ ಎಚ್ಚರವಿರಲಿ! ಕರ್ಮದಿಂದ ಮುಕ್ತರಾಗಲು ಆತ್ಮನೈವೇದ್ಯ, ಸಜ್ಜನರ ಸಹವಾಸವೇ ದಾರಿ: ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ನಿಜವಾದ ಭಕ್ತಿ ಪ್ರದರ್ಶನದಲ್ಲಿಲ್ಲ, ಅಂತರಂಗದ ಶುದ್ಧತೆ ಮತ್ತು ನೈತಿಕ ಬದುಕಿನಲ್ಲಿದೆ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ಧರ್ಮದ ಬೆಳಕಿನಲ್ಲಿ ಸಮಾಜದ ಉನ್ನತಿಗೆ ಸತ್ಕಾರ್ಯಗಳ ಹೊಸ ಸಂಕಲ್ಪ: ಶ್ರೀ ರಂಭಾಪುರಿ ಜಗದ್ಗುರುಗಳು

ಭಕ್ತಿ ಎಂದರೆ ಆಡಂಬರವಲ್ಲ, ಅಂತರಂಗದ ಶುದ್ಧತೆ ಮತ್ತು ಬದುಕಿನ ನೈತಿಕತೆ: ಡಾ. ಬಸವರಾಜಪ್ಪ

ಬಸವಣ್ಣನವರ ವಚನಗಳು ಕೇವಲ ಪಠಣಕ್ಕಲ್ಲ, ಬದುಕಿನಲ್ಲಿ ಅಳವಡಿಸಿಕೊಳ್ಳುವ ಜೀವನಸೂತ್ರಗಳು: ಜಿ. ನಟೇಶ್

Leave a Comment