ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಬಸವಣ್ಣನವರ ಚರಿತ್ರೆ ತಿರುಚುವ ಯತ್ನಕ್ಕೆ ಮಠಾಧೀಶರ ಕೆಂಡಾಮಂಡಲ! ಬಸವಣ್ಣನವರ ವಿರುದ್ಧದ ಅಪಪ್ರಚಾರಕ್ಕೆ ಸಿಡಿದೆದ್ದ ಶರಣ ಸಮುದಾಯ; ಜನವರಿಯಲ್ಲಿ ರಾಜ್ಯಮಟ್ಟದ ‘ಬಸವ ಪಡೆ’ ಅಸ್ತಿತ್ವಕ್ಕೆ

On: November 25, 2026 8:11 PM
Follow Us:

ಬೆಂಗಳೂರು, ನ. 25: 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಜ್ಯೋತಿ, ಸಮಾನತೆಯ ಸಾಕಾರಮೂರ್ತಿ, ಕಾಯಕ-ದಾಸೋಹದ ಮೂಲಕ ಮನುಕುಲಕ್ಕೆ ಹೊಸ ಬದುಕಿನ ದಾರಿ ತೋರಿದ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವವನ್ನೇ ಪ್ರಶ್ನಿಸುವ ಪ್ರಯತ್ನಕ್ಕೆ ಬಸವಾನುಯಾಯಿಗಳು ಮೌನವಾಗಿರಬೇಕೇ? ಬಸವಣ್ಣನವರ ಚಾರಿತ್ರ್ಯ, ಚಿಂತನೆ ಮತ್ತು ವಚನ ಪರಂಪರೆಯನ್ನು ವಿವಾದದ ಅಂಗಳಕ್ಕೆ ಎಳೆದು ತರುವ ಬರಹಗಳನ್ನು ಸಹಿಸಿಕೊಂಡು ಸುಮ್ಮನಿರಬೇಕೇ? ಅಥವಾ ಸತ್ಯದ ದಾಖಲೆ, ಇತಿಹಾಸದ ಆಧಾರ ಮತ್ತು ವೈಚಾರಿಕ ಚಿಂತನೆಯ ಮೂಲಕ ಅಂತಹ ಅಪಪ್ರಚಾರಗಳಿಗೆ ಉತ್ತರ ನೀಡಬೇಕೇ? ಇಂತಹ ಮಹತ್ವದ ಪ್ರಶ್ನೆಗಳು ಬೆಂಗಳೂರಿನ ಬಸವ ಸಮಿತಿಯ ಅನುಭವ ಮಂಟಪದಲ್ಲಿ ನಡೆದ ‘ಇವ ನಮ್ಮವ’ ಚಿಂತನ-ಮಂಥನ ಸಭೆಯಲ್ಲಿ ಪ್ರತಿಧ್ವನಿಸಿದವು.

ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಹಾಗೂ ತತ್ವಗಳಿಗೆ ಅಪಮಾನವಾಗುವ ರೀತಿಯಲ್ಲಿ ಪ್ರಕಟವಾಗಿರುವ ವಿವಾದಾತ್ಮಕ ಕೃತಿಯ ವಿರುದ್ಧ ಲಿಂಗಾಯತ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ನಡೆದ ಈ ಸಭೆ ಕೇವಲ ಖಂಡನೆಗೆ ಸೀಮಿತವಾಗದೆ, ಬಸವತತ್ವದ ರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಂಘಟಿತ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುವ ವೇದಿಕೆಯಾಯಿತು. ಬಸವಣ್ಣನವರ ಚರಿತ್ರೆಯನ್ನು ತಿರುಚುವ ಪ್ರಯತ್ನಗಳಿಗೆ ದಾಖಲೆಗಳ ಮೂಲಕ ಉತ್ತರ ನೀಡುವುದು, ರಾಜ್ಯದ ಪ್ರತಿ ಗ್ರಾಮದಲ್ಲೂ ‘ಅನುಭವ ಮಂಟಪ ಅಭಿಯಾನ’ವನ್ನು ಪುನರಾರಂಭಿಸುವುದು, ನುರಿತ ವಿದ್ವಾಂಸರ ಸಮಿತಿ ರಚಿಸಿ ವಿವಾದಾತ್ಮಕ ಕೃತಿಗೆ ವೈಚಾರಿಕ ಪ್ರತಿಕ್ರಿಯೆ ನೀಡುವ ಸಮಗ್ರ ಗ್ರಂಥ ಪ್ರಕಟಿಸುವುದು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ವಿವಾದಾತ್ಮಕ ಕೃತಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಭೆ ಸರ್ಕಾರವನ್ನು ಒತ್ತಾಯಿಸಿತು. ಬಸವಣ್ಣನವರ ವಿಚಾರದಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲ ಬಸವಪರ ಸಂಘಟನೆಗಳು, ಮಠಾಧೀಶರು, ಸಾಹಿತಿಗಳು ಹಾಗೂ ಚಿಂತಕರು ಒಂದೇ ವೇದಿಕೆಯಲ್ಲಿ ಒಗ್ಗಟ್ಟಿನಿಂದ ನಿಲ್ಲಬೇಕೆಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿವಾದಾತ್ಮಕ ಲೇಖಕನ ಹತ್ಯೆಗೆ ಬಹುಮಾನ ಘೋಷಿಸುವುದು ಯಾವುದೇ ಕಾರಣಕ್ಕೂ ಸರಿಯಾದ ಮಾರ್ಗವಲ್ಲ. ವ್ಯಕ್ತಿಯನ್ನು ಕೊಲ್ಲುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಾಗಿ, ಅವರ ತಲೆಯಲ್ಲಿರುವ ಕಸವನ್ನು ತೊಳೆದುಹಾಕುವಂತಹ ವೈಚಾರಿಕ ಕೆಲಸ ನಡೆಯಬೇಕು. ವಿಚಾರಕ್ಕೆ ವಿಚಾರವೇ ಉತ್ತರವಾಗಬೇಕು. ಬಸವಣ್ಣನವರ ತತ್ವಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸಮಾಜಕ್ಕೆ ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ರಾಜ್ಯದ ಪ್ರತಿಯೊಂದು ಗ್ರಾಮದಲ್ಲೂ ‘ಅನುಭವ ಮಂಟಪ ಅಭಿಯಾನ’ವನ್ನು ಪುನರಾರಂಭಿಸಬೇಕು. ಬಸವಣ್ಣನವರ ಜೀವನ, ವಚನಗಳು, ಸಾಮಾಜಿಕ ಕ್ರಾಂತಿ ಹಾಗೂ ಶರಣ ಚಳವಳಿಯ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ವಿವಾದಾತ್ಮಕ ಕೃತಿಯಲ್ಲಿನ ತಪ್ಪುಗಳನ್ನು ಗುರುತಿಸಿ, ನುರಿತ ಸಂಶೋಧಕರು ಮತ್ತು ವಿದ್ವಾಂಸರ ಮೂಲಕ ಅದಕ್ಕೆ ತಕ್ಕ ಉತ್ತರ ನೀಡುವ ಸಮರ್ಥ ಗ್ರಂಥವನ್ನು ಹೊರತರಬೇಕು. ಭಾವನಾತ್ಮಕ ಪ್ರತಿಕ್ರಿಯೆಗಿಂತ ಬೌದ್ಧಿಕ ಮತ್ತು ವೈಚಾರಿಕ ಪ್ರತಿರೋಧವೇ ಹೆಚ್ಚು ಪರಿಣಾಮಕಾರಿ ಎಂದು ಸಾಣೇಹಳ್ಳಿ ಶ್ರೀಗಳು ವ್ಯಕ್ತಪಡಿಸಿದರು.

ಬಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಣ್ಣನವರ ಕುರಿತು ಅಪಚಾರದ ಬರಹಗಳು ಪ್ರಕಟವಾದಾಗ ತಕ್ಷಣವೇ ಸ್ಪಂದಿಸುವ ವ್ಯವಸ್ಥೆ ರೂಪುಗೊಳ್ಳಬೇಕು. ಇದಕ್ಕಾಗಿ 11 ಅಥವಾ 21 ಮಂದಿ ವಿದ್ವಾಂಸರನ್ನೊಳಗೊಂಡ ಸಮಿತಿಯನ್ನು ರಚಿಸಬೇಕು. ಈ ಸಮಿತಿ ಇತಿಹಾಸ, ಶಾಸನಗಳು, ವಚನ ಸಾಹಿತ್ಯ ಹಾಗೂ ಸಂಶೋಧನಾ ದಾಖಲೆಗಳನ್ನು ಆಧರಿಸಿ ಪ್ರತಿಯೊಂದು ಆರೋಪಕ್ಕೂ ಸಮರ್ಥ ಉತ್ತರ ನೀಡುವಂತಿರಬೇಕು ಎಂದರು.

ಗಣಾಚಾರ ಪಡೆಯಂತೆ ಸದಾ ಸಜ್ಜಾಗಿರುವ ವೈಚಾರಿಕ ತಂಡವನ್ನು ರೂಪಿಸಬೇಕು. ತಾತ್ಕಾಲಿಕ ಪ್ರತಿಭಟನೆ ಮತ್ತು ಖಂಡನೆಗಳಿಗಿಂತ ಮುಂದಿನ ಪೀಳಿಗೆಗೆ ಆಧಾರವಾಗುವಂತಹ ಸಂಶೋಧನಾ ಗ್ರಂಥಗಳನ್ನು ರಚಿಸುವ ಮೂಲಕ ವಿವಾದಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅಪಪ್ರಚಾರಕ್ಕೆ ಪ್ರತಿಯಾಗಿ ಕೇವಲ ಸಣ್ಣ ಗೆರೆ ಎಳೆಯದೆ, ಬಸವತತ್ವದ ಮೂಲಕ ದೊಡ್ಡ ಗೆರೆ ಎಳೆಯುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಗದಗಿನ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಪುರಾಣ ಮತ್ತು ಕಾವ್ಯಗಳಲ್ಲಿ ಕಂಡುಬರುವ ಅತಿಶಯೋಕ್ತಿಗಳನ್ನು ಆಧಾರವಾಗಿಟ್ಟುಕೊಂಡು ಬಸವಣ್ಣನವರ ಚರಿತ್ರೆಯನ್ನು ತಿರುಚುವುದು ಖಂಡನೀಯ. ಯಾವುದೇ ಐತಿಹಾಸಿಕ ವ್ಯಕ್ತಿಯ ಜೀವನವನ್ನು ಅಧ್ಯಯನ ಮಾಡುವಾಗ ಶಾಸನಗಳು, ಸಮಕಾಲೀನ ದಾಖಲೆಗಳು ಮತ್ತು ವಿಶ್ವಾಸಾರ್ಹ ಐತಿಹಾಸಿಕ ಆಧಾರಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಬಸವಣ್ಣನವರು ಲಿಂಗೈಕ್ಯರಾದ ಎರಡು ವರ್ಷಗಳ ನಂತರ ಬಿಜ್ಜಳನ ಹತ್ಯೆಯಾಯಿತು ಎಂಬುದಕ್ಕೆ ಶಾಸನಗಳ ಆಧಾರವಿದೆ. ಇಂತಹ ಐತಿಹಾಸಿಕ ಸಂಗತಿಗಳನ್ನು ಕಡೆಗಣಿಸಿ ಮನಬಂದಂತೆ ಚರಿತ್ರೆ ಬರೆಯುವುದು ಸರಿಯಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಮನುಸ್ಮೃತಿಯನ್ನು ಮತ್ತೆ ಮುನ್ನೆಲೆಗೆ ತರಲು ಪ್ರಯತ್ನಿಸುವ ವಿಕೃತ ಶಕ್ತಿಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕು. ಬಸವಣ್ಣನವರ ಸಮಾನತೆಯ ತತ್ವವೇ ಇಂತಹ ಶಕ್ತಿಗಳಿಗೆ ಸೂಕ್ತ ಉತ್ತರವಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಿದ್ಧಗಂಗೆಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ, ಬಸವಣ್ಣನವರು ಯಾವುದೇ ಒಂದು ಜಾತಿ, ಸಮುದಾಯ ಅಥವಾ ಧರ್ಮದ ಚೌಕಟ್ಟಿಗೆ ಸೀಮಿತವಾದವರಲ್ಲ. ಅವರು ಇಡೀ ಮನುಕುಲಕ್ಕೆ ಬೆಳಕು ತೋರಿದ ಮಹಾನ್ ಸಮಾಜ ಸುಧಾರಕರು. ಮಾನವೀಯತೆ, ಸಮಾನತೆ, ಕಾಯಕ ಮತ್ತು ದಾಸೋಹದ ಮೂಲಕ ಜಗತ್ತಿಗೆ ಹೊಸ ಸಾಮಾಜಿಕ ಚಿಂತನೆ ನೀಡಿದವರು ಎಂದು ಹೇಳಿದರು.

ಸರ್ಕಾರ ವಿವಾದಾತ್ಮಕ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಸ್ವಾಗತಾರ್ಹ. ಆದರೆ ಇಂತಹ ಕೃತಿಗಳು ಮತ್ತೆ ಪ್ರಕಟವಾಗದಂತೆ ಸಂಪೂರ್ಣ ನಿಷೇಧ ಹೇರಬೇಕು. ಕಾನೂನು ಉಲ್ಲಂಘಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬಸವಣ್ಣನವರ ವಿಚಾರಧಾರೆಗಳನ್ನು ಯುವಜನತೆಗೆ ತಲುಪಿಸುವ ಕೆಲಸವೂ ಸಮಾನವಾಗಿ ನಡೆಯಬೇಕು ಎಂದು ಒತ್ತಾಯಿಸಿದರು.

ಕೂಡಲಸಂಗಮದ ಗಂಗಾಮಾತಾಜಿ ಮಾತನಾಡಿ, ಅಪ್ಪ ಬಸವಣ್ಣನವರ ವಿಚಾರ ಬಂದಾಗ ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗಿಟ್ಟು ಒಂದಾಗಬೇಕು. ಸಿಂಹಗಳಂತೆ ಒಗ್ಗಟ್ಟಿನಿಂದ ನಿಂತು ಬಸವತತ್ವದ ರಕ್ಷಣೆಗಾಗಿ ಹೋರಾಡಬೇಕು ಎಂದು ಕರೆ ನೀಡಿದರು.

12ನೇ ಶತಮಾನದ ಶರಣ ಚಳವಳಿ ಮಹಿಳೆಯರಿಗೆ ಗೌರವ, ಸ್ವಾತಂತ್ರ್ಯ ಹಾಗೂ ಆಧ್ಯಾತ್ಮಿಕ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸಿತ್ತು. ಹೆಣ್ಣುಮಕ್ಕಳಿಗೆ ದೈವತ್ವದ ಸ್ಥಾನ ಮತ್ತು ಆಚಾರ್ಯತ್ವದ ಗೌರವ ನೀಡಿದ ಬಸವಣ್ಣನವರ ಚಳವಳಿಯ ಕುರಿತು ಅವಹೇಳನಕಾರಿ ಮಾತುಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಬಸವಣ್ಣನವರ ವಿಚಾರಧಾರೆಗಳನ್ನು ಮನೆಮನೆಗೆ ತಲುಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಶಿವಮೊಗ್ಗದ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಮಾತನಾಡಿ, ಹೊರಗಿನಿಂದ ಬರುವ ವಿರೋಧಕ್ಕಿಂತಲೂ ಅದಕ್ಕೆ ಒಳಗಿನಿಂದ ಕಾವಾಗಿ ನಿಲ್ಲುವವರ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ. ಬಸವಣ್ಣನವರ ತತ್ವಗಳ ಬಗ್ಗೆ ಮಾತನಾಡುವಾಗ ಸಮಾಜದೊಳಗಿನ ಒಗ್ಗಟ್ಟು ಅತ್ಯಂತ ಮುಖ್ಯ. ಸರ್ಕಾರ ತ್ವರಿತವಾಗಿ ಕಾನೂನು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಸಮಾಜ ನಿರಂತರವಾಗಿ ಜಾಗೃತವಾಗಿರಬೇಕು. ಬಸವತತ್ವದ ರಕ್ಷಣೆಗೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.

ಮೈಸೂರಿನ ಶರಶ್ಚಂದ್ರ ಸ್ವಾಮೀಜಿ ಮಾತನಾಡಿ, ಕಾವ್ಯ ಮತ್ತು ಪುರಾಣಗಳಲ್ಲಿನ ಕಥನಗಳನ್ನು ಯಥಾವತ್ತಾಗಿ ಐತಿಹಾಸಿಕ ಸತ್ಯವೆಂದು ಪರಿಗಣಿಸುವುದು ಸರಿಯಲ್ಲ. ಇತಿಹಾಸ ರಚನೆಗೆ ವೈಜ್ಞಾನಿಕ ಅಧ್ಯಯನ, ಕಾಲಾನುಕ್ರಮ, ಶಾಸನಗಳು ಮತ್ತು ಪ್ರಾಚೀನ ಗ್ರಂಥಗಳ ಆಧಾರ ಅಗತ್ಯ. ‘ಅನುಭವ ಮಂಟಪ’ದ ಯೋಜನೆಯಡಿ ಶತಮಾನವಾರು ಲಭ್ಯವಿರುವ ಗ್ರಂಥಗಳನ್ನು ಅಧ್ಯಯನ ಮಾಡಿ, ಸಮಗ್ರ ಹಾಗೂ ಸುಯೋಜಿತ ಇತಿಹಾಸವನ್ನು ಕಟ್ಟುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಚಿತ್ರದುರ್ಗದ ಮುರುಘಾಮಠದ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ವಚನ ಚಳವಳಿಯನ್ನು ವೈದಿಕ ಚೌಕಟ್ಟಿನೊಳಗೆ ಸಿಲುಕಿಸಿ ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವವನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಒಪ್ಪಲು ಸಾಧ್ಯವಿಲ್ಲ. ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಮೂಲ ಆಶಯಗಳನ್ನು ಅರ್ಥಮಾಡಿಕೊಂಡು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.

ಪರಸ್ಪರ ನಿಂದನೆ ಮತ್ತು ಆರೋಪ-ಪ್ರತ್ಯಾರೋಪಗಳಿಂದ ಯಾವುದೇ ಪ್ರಯೋಜನವಿಲ್ಲ. ಎಲ್ಲ ಮಠಾಧೀಶರು ಒಂದೆಡೆ ಕುಳಿತು ಸೌಹಾರ್ದಯುತವಾಗಿ ಚರ್ಚಿಸಬೇಕು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬಸವ ಸಂಸ್ಕೃತಿ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಬೇಕು ಎಂದು ಕರೆ ನೀಡಿದರು.

ಚಿಂತಕ ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ಅಂಬೇಡ್ಕರ್ ಅವರಿಗಿಂತಲೂ ಹಲವು ಶತಮಾನಗಳ ಹಿಂದೆಯೇ 12ನೇ ಶತಮಾನದಲ್ಲಿ ಸಾಂಸ್ಕೃತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಮಾನತೆಗಾಗಿ ಬಸವಣ್ಣನವರು ಹೋರಾಟ ನಡೆಸಿದ್ದರು. ಅಂದಿನ ಸಾಮಾಜಿಕ ವ್ಯವಸ್ಥೆಯ ಅಸಮಾನತೆಗಳನ್ನು ಪ್ರಶ್ನಿಸಿ ಮನುಷ್ಯನ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಮಹತ್ವ ನೀಡಿದವರು ಬಸವಣ್ಣನವರು ಎಂದು ಹೇಳಿದರು.

ವಚನ ಸಾಹಿತ್ಯದ ಸಮಗ್ರ ಅಧ್ಯಯನ ನಡೆಯಬೇಕು. ಕಾಲಕ್ರಮೇಣ ಸೇರಿಕೊಂಡಿರುವ ಪ್ರಕ್ಷಿಪ್ತ ವಚನಗಳನ್ನು ಸಂಶೋಧನೆಯ ಮೂಲಕ ಗುರುತಿಸಿ, ಕೆಳವರ್ಗದ ಶರಣರು ವ್ಯಕ್ತಪಡಿಸಿರುವ ವಿಚಾರಗಳು ಮತ್ತು ಅನುಭವಗಳಿಗೂ ಸೂಕ್ತ ಮಹತ್ವ ನೀಡಬೇಕು. ಯಾವುದೇ ಪೂರ್ವಗ್ರಹವಿಲ್ಲದೆ ದಾಖಲೆಗಳ ಆಧಾರದಲ್ಲಿ ಸತ್ಯವನ್ನು ಸಮಾಜದ ಮುಂದಿಡಬೇಕು ಎಂದು ಅಭಿಪ್ರಾಯಪಟ್ಟರು.

ಎಲ್. ಹನುಮಂತಯ್ಯ ಮಾತನಾಡಿ, ಸಮಾಜವನ್ನು ಒಡೆಯುವಂತಹ ಸಾಂಸ್ಕೃತಿಕ ವಿಕೋಪಗಳ ವಿರುದ್ಧ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಬಸವತತ್ವವನ್ನು ಕೇವಲ ಸಭೆ-ಸಮಾರಂಭಗಳಿಗೆ ಸೀಮಿತಗೊಳಿಸದೆ ಮನೆಮನೆಗೆ ತಲುಪಿಸುವ ಕೆಲಸವಾಗಬೇಕು. ಬಸವಣ್ಣನವರ ಕುರಿತು ಅವಹೇಳನಕಾರಿ ಬರಹಗಳನ್ನು ರಚಿಸುವವರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ವಿಚಾರಗಳಿಗೆ ವೈಚಾರಿಕವಾಗಿ ಪ್ರತಿಕ್ರಿಯಿಸುವ ಜವಾಬ್ದಾರಿ ಚಿಂತಕರು ಮತ್ತು ಸಾಹಿತಿಗಳ ಮೇಲಿದೆ ಎಂದರು.

ಹೋರಾಟಗಾರ ನವೀನ್ ಬಿಡದಿ ಮಾತನಾಡಿ, ವಿವಾದಾತ್ಮಕ ಕೃತಿಯ ಹಿಂದಿರುವವರ ಪಾತ್ರದ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ರವಿ ಹಂಜ್ ಕೇವಲ ಸೂತ್ರದ ಬೊಂಬೆಯಾಗಿದ್ದು, ಪ್ರಕರಣದ ಪ್ರಮುಖ ವ್ಯಕ್ತಿ ಎಂದು ತಾವು ಆರೋಪಿಸಿರುವ ವಿಶ್ವೇಶ್ವರ ಭಟ್ ಅವರಿಗೆ ತಕ್ಷಣ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿ, ಆಸ್ಟ್ರೇಲಿಯಾದಿಂದ ಬಂಧಿಸಿ ಕರೆತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಸವಣ್ಣನವರ ವಿಚಾರಧಾರೆ ಮತ್ತು ಶರಣ ಸಂಸ್ಕೃತಿಯ ರಕ್ಷಣೆಗಾಗಿ ಯುವಜನರನ್ನು ಒಳಗೊಂಡ ರಾಜ್ಯಮಟ್ಟದ ‘ಬಸವ ಪಡೆ’ಯನ್ನು ಜನವರಿಯಲ್ಲಿ ಅಸ್ತಿತ್ವಕ್ಕೆ ತರಲಾಗುವುದು. ಬಸವಪರ ಸಂಘಟನೆಗಳು ಹಾಗೂ ಹೋರಾಟಗಾರರನ್ನು ಒಗ್ಗೂಡಿಸಿ ರಾಜ್ಯಾದ್ಯಂತ ಸಂಘಟಿತ ಚಳವಳಿ ರೂಪಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ್, ಬಸವರಾಜ್ ಸಾದರ, ಬಸವರಾಜ ಸಬರದ, ಜಾಣಗೆರೆ ವೆಂಕಟರಾಮಯ್ಯ, ಆರ್. ಜಿಹಳ್ಳಿ ನಾಗರಾಜ್, ನಾಗರಾಜ ಮೂರ್ತಿ, ಅರವಿಂದ ಜತ್ತಿ, ರಾಜಸಾಬ್, ವಿಜಯಲಕ್ಷ್ಮಿ ಬಾಳೆಕುಂದ್ರಿ ಮುಕ್ತ, ಸಿದ್ದು ಯಾಪಲಪರವಿ, ಅನಂತನಾಯಕ ಸೇರಿದಂತೆ ಹಲವು ಗಣ್ಯರು, ಸಾಹಿತಿಗಳು, ಹೋರಾಟಗಾರರು, ಮಠಾಧೀಶರು ಹಾಗೂ ಬಸವಪರ ಚಿಂತಕರು ಉಪಸ್ಥಿತರಿದ್ದರು.

‘ಇವ ನಮ್ಮವ’ ಚಿಂತನ-ಮಂಥನ ಸಭೆ ಬಸವಣ್ಣನವರ ಕುರಿತ ವಿವಾದಾತ್ಮಕ ಕೃತಿಯ ವಿರುದ್ಧದ ಆಕ್ರೋಶವನ್ನು ವ್ಯಕ್ತಪಡಿಸುವುದರ ಜೊತೆಗೆ, ಬಸವತತ್ವದ ಪ್ರಚಾರ, ಐತಿಹಾಸಿಕ ಸಂಶೋಧನೆ ಮತ್ತು ವೈಚಾರಿಕ ಪ್ರತಿರೋಧಕ್ಕೆ ಹೊಸ ದಿಕ್ಕು ನೀಡುವ ಪ್ರಯತ್ನವಾಗಿ ಗಮನ ಸೆಳೆಯಿತು. ವ್ಯಕ್ತಿಗತ ವಿರೋಧ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಸೀಮಿತವಾಗದೆ, ಸಂಶೋಧನೆ, ದಾಖಲೆ, ಸಾಹಿತ್ಯ ಹಾಗೂ ಸಂಘಟನೆಯ ಶಕ್ತಿಯ ಮೂಲಕ ಉತ್ತರ ನೀಡಬೇಕೆಂಬ ಸಂದೇಶ ಸಭೆಯಲ್ಲಿ ಮೊಳಗಿತು.

ಬಸವಣ್ಣನವರನ್ನು ವಿರೋಧಿಸುವವರ ವಿರುದ್ಧ ಕೇವಲ ಘೋಷಣೆ ಕೂಗುವುದಲ್ಲ, ಬಸವಣ್ಣನವರ ವಿಚಾರಗಳನ್ನು ಓದಿ, ಅರಿತು, ಆಚರಿಸಿ, ಮುಂದಿನ ಪೀಳಿಗೆಗೆ ತಲುಪಿಸುವುದೇ ನಿಜವಾದ ಪ್ರತಿರೋಧ ಎಂಬ ಆಶಯದೊಂದಿಗೆ ಸಭೆ ಸಂಘಟಿತ ಹೋರಾಟದ ಸಂಕಲ್ಪಕ್ಕೆ ಸಾಕ್ಷಿಯಾಯಿತು.

K.M.Sathish Gowda

Join WhatsApp

Join Now

Facebook

Join Now

Read more

ಪ್ರಜಾಪ್ರಭುತ್ವದ ಹೆಸರಿನಲ್ಲಿ ಕಾಂಗ್ರೆಸ್ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ;150ಕ್ಕೂ ಹೆಚ್ಚು ಸ್ಥಾನ ಗೆದ್ದು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ: ಬಿ.ವೈ. ವಿಜಯೇಂದ್ರ

ಸುಪ್ರೀಂಕೋರ್ಟ್ ಆದೇಶಕ್ಕೂ ಅಡ್ಡಿ! ತಿರುಪ್ಪರಂಕುಂದ್ರಂ ದೀಪ ವಿವಾದದಲ್ಲಿ ವಿಜಯ್ ಸರ್ಕಾರಕ್ಕೆ ಮುಖಭಂಗ; ದೀಪಸ್ತಂಭದಲ್ಲಿ ಜ್ಯೋತಿ ಬೆಳಗದ ಪ್ರಕರಣ: ನ್ಯಾಯಾಲಯಕ್ಕೆ ಬೇಷರತ್ ಕ್ಷಮೆಯಾಚಿಸಿದ ಮಧುರೈ ಜಿಲ್ಲಾಧಿಕಾರಿ

ಕರ್ನಾಟಕದ ಪ್ರಮುಖ ನಗರಗಳಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಗೆ ಸರ್ಕಾರದ ಒಲವು; ಜೆಎಫ್‌ಇ ಇಂಜಿನಿಯರಿಂಗ್ ಕಾರ್ಪೊರೇಷನ್ ಪ್ರತಿನಿಧಿಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗ ಮಾತುಕತೆ

ಕರ್ನಾಟಕ ಜಪಾನ್ ಹೂಡಿಕೆಗಳಿಗೆ ಪ್ರಮುಖ ತಾಣ; ಯಸುತಾಕಾ ನಕಸೋನ್ ಮೆಚ್ಚುಗೆ: ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಜಪಾನ್ ಸರ್ಕಾರಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಆಹ್ವಾನ

ಆಶಾ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಖಂಡಿತ ಪರಿಹಾರ; ಪ್ರತಿಭಟನೆ ಕೈಬಿಡಿ: ಸಿಎಂ ಡಿ.ಕೆ. ಶಿವಕುಮಾರ್ ಮನವಿ

ಜಪಾನ್‌ನ ನಗರ ಸಾರಿಗೆ ಮಾದರಿಗಳತ್ತ ಕರ್ನಾಟಕದ ಚಿತ್ತ; ರಾಜ್ಯದಲ್ಲೇ ‘ಜೆಪಿಎನ್ ಟ್ಯಾಕ್ಸಿ’ ತಯಾರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ಆಸಕ್ತಿ

Leave a Comment