ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹಿಂದಿನ ಜನ್ಮದ ಚಿಂತೆಯಲ್ಲ; ಇಂದಿನ ಕರ್ಮದ ಬಗ್ಗೆ ಎಚ್ಚರವಿರಲಿ! ಕರ್ಮದಿಂದ ಮುಕ್ತರಾಗಲು ಆತ್ಮನೈವೇದ್ಯ, ಸಜ್ಜನರ ಸಹವಾಸವೇ ದಾರಿ: ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ

On: November 25, 2026 6:00 PM
Follow Us:

ಶಿವಮೊಗ್ಗ: ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಮಾಡುವ ಪ್ರತಿಯೊಂದು ಕ್ರಿಯೆಯೂ ಒಂದಲ್ಲೊಂದು ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ. ನಾವು ಬಿತ್ತಿದ ಬೀಜವೇ ಬೆಳೆದು ಫಲ ನೀಡುವಂತೆ, ನಮ್ಮ ನಡೆ, ನುಡಿ ಮತ್ತು ಕಾಯಕಕ್ಕೆ ತಕ್ಕ ಪ್ರತಿಫಲವೂ ಬದುಕಿನಲ್ಲಿ ಎದುರಾಗುತ್ತದೆ. ಆದರೆ ಆ ಕರ್ಮಫಲದ ಬಂಧನದಿಂದ ಮುಕ್ತರಾಗುವುದು ಹೇಗೆ? ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ, ಅಹಂಕಾರವನ್ನು ಬದಿಗಿಟ್ಟು ಬದುಕುವುದು ಹೇಗೆ? ಎಂಬ ಜೀವನದ ಬಹುದೊಡ್ಡ ಪ್ರಶ್ನೆಗಳಿಗೆ ವಿಶ್ವಗುರು ಬಸವಣ್ಣನವರ ವಚನಗಳಲ್ಲಿಯೇ ಅದ್ಭುತವಾದ ಉತ್ತರಗಳಿವೆ. ಕಾಯಕದ ಪಾವಿತ್ರ್ಯ, ಆತ್ಮನೈವೇದ್ಯದ ಮಹತ್ವ, ಸಜ್ಜನರ ಸಹವಾಸ ಮತ್ತು ಸಮಚಿತ್ತದ ಬದುಕಿನ ಮೂಲಕ ಮನುಷ್ಯ ಕರ್ಮಬಂಧನದಿಂದ ಬಿಡುಗಡೆ ಹೊಂದಬಹುದು. ಬಸವಣ್ಣನವರ ಚಿಂತನೆಗಳು ಕೇವಲ ಧಾರ್ಮಿಕ ಸಂದೇಶಗಳಲ್ಲ, ಮನುಷ್ಯನ ಬದುಕನ್ನು ಪರಿವರ್ತಿಸುವ ಜೀವನದರ್ಶನ ಎಂದು ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಶಿವಮೊಗ್ಗದ ವೆಂಕಟೇಶ ನಗರದ ಬಸವಕೇಂದ್ರದ ಹಿಂಭಾಗದ 2ನೇ ಅಡ್ಡ ರಸ್ತೆಯ ಶ್ರೀ ಗಣಪತಿ ಮಂದಿರದಲ್ಲಿ, ಬಸವಕೇಂದ್ರ ಹಾಗೂ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಆಶ್ರಯದಲ್ಲಿ ನಡೆದ 20ನೇ ವರ್ಷದ ಚಿಂತನ ಕಾರ್ತಿಕದ 12ನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಈಗಾಗಲೇ ಮುಖ್ಯ ಉಪನ್ಯಾಸ, ಉಪನ್ಯಾಸ ಮತ್ತು ಅನುಭವ ಕಥನಗಳ ಮೂಲಕ ಮೂವರು ವಿದ್ವಾಂಸರು ಬಸವಣ್ಣನವರ ಕರ್ಮಸಿದ್ಧಾಂತದ ಕುರಿತು ವಿಭಿನ್ನ ನೆಲೆಗಳಲ್ಲಿ ವಿಚಾರ ಮಂಡಿಸಿದ್ದಾರೆ. ಮೂವರ ಮಾತುಗಳೂ ವಿಷಯದ ವಿವಿಧ ಆಯಾಮಗಳನ್ನು ತೆರೆದಿಟ್ಟಿವೆ. ಈ ವೇದಿಕೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ದೊರೆತಿರುವುದನ್ನು ಉಲ್ಲೇಖಿಸಿದ ಬಸವಕೇಂದ್ರ ಶ್ರೀಗಳು, ಪ್ರತಿಭೆ ಮತ್ತು ಅರ್ಹತೆ ಇರುವ ಎಲ್ಲರಿಗೂ ಅವಕಾಶ ಸಿಗಬೇಕು. ಕಾರ್ಯಕ್ರಮದ ವೇದಿಕೆಯಲ್ಲಿ ಮಾತ್ರವಲ್ಲ, ಆಹ್ವಾನ ಪತ್ರಿಕೆಯಲ್ಲಿಯೂ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ದೊರೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಬಸವಣ್ಣನವರಿಗೂ ಕರ್ಮಸಿದ್ಧಾಂತಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಕೆಲವರಲ್ಲಿದೆ. ಬಸವಣ್ಣನವರು ಕರ್ಮಸಿದ್ಧಾಂತವನ್ನು ತಿರಸ್ಕರಿಸಿ, ಅದಕ್ಕೆ ಪರ್ಯಾಯವಾಗಿ ಕಾಯಕಸಿದ್ಧಾಂತವನ್ನು ನೀಡಿದರು ಎಂಬ ಅಭಿಪ್ರಾಯವೂ ಇದೆ. ಆದರೆ ಬಸವಾದಿ ಶರಣರ ವಚನಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ ಅವರು ಕರ್ಮಸಿದ್ಧಾಂತವನ್ನು ಒಪ್ಪಿಕೊಂಡಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಕಾಯಕ ಮತ್ತು ಕರ್ಮ ಇವೆರಡೂ ಒಂದಕ್ಕೊಂದು ವಿರುದ್ಧವಾದ ಪರಿಕಲ್ಪನೆಗಳಲ್ಲ. ಕಾಯಕಸಿದ್ಧಾಂತದೊಳಗೆ ಕರ್ಮಸಿದ್ಧಾಂತದ ಅನ್ವಯಿಕತೆಯೂ ಅಡಕವಾಗಿದೆ ಎಂದು ವಿವರಿಸಿದರು.

ಬಸವಣ್ಣನವರ,

“ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು, ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು,
ನಾನು ಪರಸೇವೆಯ ಮಾಡುವೆನಯ್ಯಾ, ಜಂಗಮದಾಸೋಹಕ್ಕೆಂದು; ನಾನಾವಾವ ಕರ್ಮಂಗಳ ಮಾಡಿದರೆಯೂ ಆ ಕರ್ಮಫಲಭೋಗವ ನೀ ಕೊಡುವೆಯೆಂಬುದ ನಾನು ಬಲ್ಲೆನು,
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದ ಕ್ರೀಯ ಮಾಡೆನು; ನಿಮ್ಮ ಸೊಮ್ಮಿಂಗೆ ಸಲಿಸುವೆನು, ನಿಮ್ಮಾಣೆ
ಕೂಡಲಸಂಗಮದೇವಾ.”

ಎಂಬ ವಚನವನ್ನು ಉಲ್ಲೇಖಿಸಿದ ಅವರು, ಇಲ್ಲಿ ಆರಂಭ ಎಂದರೆ ವ್ಯವಸಾಯ, ವ್ಯವಹಾರ ಎಂದರೆ ವ್ಯಾಪಾರ. ದುಡಿಮೆಯಿಂದ ದೊರೆಯುವ ಸಂಪತ್ತನ್ನು ವೈಯಕ್ತಿಕ ಸ್ವಾರ್ಥಕ್ಕೆ ಬಳಸದೆ ಗುರುಪೂಜೆ, ಲಿಂಗಾರ್ಚನೆ ಮತ್ತು ಜಂಗಮ ದಾಸೋಹಕ್ಕೆ ಅರ್ಪಿಸುವ ಸಂಕಲ್ಪವನ್ನು ಬಸವಣ್ಣನವರು ವ್ಯಕ್ತಪಡಿಸಿದ್ದಾರೆ. ಕಾಯಕದಿಂದ ಬಂದ ಪ್ರತಿಫಲವನ್ನು ದೇವರಿಗೆ ಸಮರ್ಪಿಸುವ ಮನೋಭಾವವೇ ಈ ವಚನದ ತಿರುಳು. ಕಾಯಕ ಮಾಡುವುದು ನಮ್ಮ ಕರ್ತವ್ಯ; ಅದರ ಫಲವನ್ನು ಸ್ವಾರ್ಥಕ್ಕೆ ಬಳಸದೆ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವುದು ಶರಣರ ಆಶಯವಾಗಿದೆ ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.

ಕರ್ಮಸಿದ್ಧಾಂತವನ್ನು ಯಾವುದೋ ಒಂದು ಧರ್ಮ ಅಥವಾ ಪರಂಪರೆಗೆ ಸೀಮಿತಗೊಳಿಸುವುದು ಸರಿಯಲ್ಲ. ವೈದಿಕ, ಜೈನ, ಬೌದ್ಧ, ಶೈವ, ಸಿಖ್ ಸೇರಿದಂತೆ ಭಾರತೀಯ ತಾತ್ವಿಕ ಪರಂಪರೆಗಳಲ್ಲಿ ಕರ್ಮದ ಪರಿಕಲ್ಪನೆ ವಿವಿಧ ರೂಪಗಳಲ್ಲಿ ವ್ಯಕ್ತವಾಗಿದೆ. ಕ್ರೈಸ್ತ ಧರ್ಮದಲ್ಲಿ ‘Reaping what you sow‘ ಅಂದರೆ ಬಿತ್ತಿದ್ದನ್ನೇ ಕೊಯ್ಯಬೇಕು ಎಂಬ ತತ್ವವಿದೆ. ಇಸ್ಲಾಂ ಧರ್ಮದಲ್ಲಿ ‘ಅಮಲ್’ ಎಂಬ ಪದದ ಮೂಲಕ ಕಾರ್ಯ ಮತ್ತು ಅದಕ್ಕೆ ತಕ್ಕ ಪ್ರತಿಫಲದ ಪರಿಕಲ್ಪನೆ ವ್ಯಕ್ತವಾಗುತ್ತದೆ. ವಿವಿಧ ಧರ್ಮಗಳು ಬೇರೆ ಬೇರೆ ಪದಗಳನ್ನು ಬಳಸಿದರೂ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬ ಮೂಲ ಆಶಯದಲ್ಲಿ ಸಾಮ್ಯವಿದೆ.

ವಿಜ್ಞಾನದಲ್ಲಿಯೂ ನ್ಯೂಟನ್‌ನ ಚಲನೆಯ ಮೂರನೇ ನಿಯಮವು ಪ್ರತಿಯೊಂದು ಕ್ರಿಯೆಗೂ ಸಮಾನ ಮತ್ತು ವಿರುದ್ಧ ಪ್ರತಿಕ್ರಿಯೆ ಇರುತ್ತದೆ ಎಂಬುದನ್ನು ತಿಳಿಸುತ್ತದೆ. ಇದನ್ನು ಆಧ್ಯಾತ್ಮಿಕ ಕರ್ಮಸಿದ್ಧಾಂತಕ್ಕೆ ನೇರ ಸಮೀಕರಣವೆಂದು ಪರಿಗಣಿಸಬಾರದು. ಆದರೆ ಕ್ರಿಯೆ ಮತ್ತು ಪ್ರತಿಕ್ರಿಯೆಯ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಇದು ಒಂದು ಉದಾಹರಣೆಯಾಗಿದೆ. ಹೀಗಾಗಿ ಕರ್ಮಸಿದ್ಧಾಂತವು ಒಂದು ಧರ್ಮದ ಸ್ವತ್ತಲ್ಲ; ಮನುಷ್ಯನ ಕ್ರಿಯೆ ಮತ್ತು ಅದರ ಪರಿಣಾಮಗಳ ಕುರಿತು ರೂಪುಗೊಂಡ ವಿಶಾಲವಾದ ತಾತ್ವಿಕ ಪರಿಕಲ್ಪನೆಯಾಗಿದೆ ಎಂದು ವಿಶ್ಲೇಷಿಸಿದರು.

ಬಸವಣ್ಣನವರು ಕರ್ಮಫಲದ ಅನಿವಾರ್ಯತೆಯನ್ನು ವಿವರಿಸುತ್ತಾ,

“ಪಂಡಿತನಾಗಲಿ, ಮೂರ್ಖನಾಗಲಿ ಸಂಚಿತಕರ್ಮ, ಉಂಡಲ್ಲದೆ ಬಿಡದು, ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದೆಂದು ಶ್ರುತಿ ಸಾರುತ್ತೈದಾವೆ, ನೋಡಾ,
ತಾನಾವ ಲೋಕದೊಳಗಿದ್ದರೆಯೂ ಬಿಡದು.
ಕರ್ಮಫಲಗೂಡಿ ಕೂಡಲಸಂಗಮದೇವಂಗೆ
ಆತ್ಮನೈವೇದ್ಯವ ಮಾಡಿದವನೆ ಧನ್ಯ.”

ಎಂದು ಹೇಳಿದ್ದಾರೆ. ಮನುಷ್ಯ ಪಂಡಿತನಾಗಿರಲಿ, ಮೂರ್ಖನಾಗಿರಲಿ, ಯಾವುದೇ ಸ್ಥಾನದಲ್ಲಿರಲಿ ಮಾಡಿದ ಕರ್ಮದ ಫಲವನ್ನು ಅನುಭವಿಸಲೇಬೇಕು. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಕರ್ಮಬಂಧನದಿಂದ ಬಿಡುಗಡೆ ಪಡೆಯುವುದು ಹೇಗೆ ಎಂಬುದಕ್ಕೆ ಬಸವಣ್ಣನವರು ಆತ್ಮನೈವೇದ್ಯದ ಮಾರ್ಗವನ್ನು ತೋರಿಸಿದ್ದಾರೆ ಎಂದು ತಿಳಿಸಿದರು.

ನಾವು ದೇವರಿಗೆ ನೈವೇದ್ಯ ಅರ್ಪಿಸುವಾಗ ನಮ್ಮ ದುಡಿಮೆಯಿಂದ ಸಂಪಾದಿಸಿದ ಪದಾರ್ಥಗಳನ್ನು ಸಿದ್ಧಪಡಿಸಿ ದೇವರಿಗೆ ಸಮರ್ಪಿಸುತ್ತೇವೆ. ಅರ್ಪಿಸಿದ ನಂತರ ಅದನ್ನು ದೇವರ ಪ್ರಸಾದವೆಂದು ಸ್ವೀಕರಿಸುತ್ತೇವೆ. ಅದೇ ರೀತಿಯಲ್ಲಿ ನಮ್ಮ ಅಹಂಕಾರ, ಸ್ವಾರ್ಥ, ಸಂಪತ್ತು, ಕರ್ಮಫಲ ಸೇರಿದಂತೆ ನಮ್ಮ ಸಂಪೂರ್ಣ ಅಸ್ತಿತ್ವವನ್ನೇ ದೇವರಿಗೆ ಅರ್ಪಿಸಬೇಕು. ‘ನನ್ನದು’ ಎಂಬ ಭಾವನೆ ಉಳಿಯದಂತೆ ಸರ್ವಸ್ವವನ್ನೂ ಸಮರ್ಪಿಸಿಕೊಳ್ಳುವುದೇ ಆತ್ಮನೈವೇದ್ಯ. ಕರ್ಪೂರ ಉರಿದಾಗ ತನ್ನ ಅಸ್ತಿತ್ವದ ಗುರುತನ್ನೇ ಉಳಿಸದಂತೆ ಮನುಷ್ಯನ ಅಹಂಕಾರವೂ ಸಂಪೂರ್ಣವಾಗಿ ಕರಗಬೇಕು. ಇಂತಹ ಸಮರ್ಪಣಾ ಭಾವವೇ ಆತ್ಮೋನ್ನತಿಗೆ ದಾರಿ ಎಂದು ಶ್ರೀಗಳು ಹೇಳಿದರು.

ಬಸವಣ್ಣನವರ ಮತ್ತೊಂದು ವಚನವನ್ನು ಉಲ್ಲೇಖಿಸಿದ ಬಸವಕೇಂದ್ರ ಶ್ರೀಗಳು,

“ಹೊಯ್ದರೆ ಹೊಯ್ಗಳು ಕೈಯ ಮೇಲೆ;
ಬಯ್ದರೆ ಬೈಗುಳು ಕೈಯ ಮೇಲೆ!
ಹಿಂದಣ ಜನನವೇನಾದೊಡಾಗಲಿ-
ಇಂದಿನ ಭೋಗವು ಕೈಯ ಮೇಲೆ!
ಕೂಡಲಸಂಗಮದೇವಯ್ಯಾ.
ನಿಮ್ಮ ಪೂಜಿಸಿದ ಫಲ ಕೈಯ ಮೇಲೆ!”

ಎಂಬ ವಚನದ ಮೂಲಕ ಕರ್ಮದ ಪರಿಣಾಮಗಳನ್ನು ಸರಳವಾಗಿ ವಿವರಿಸಿದ್ದಾರೆ ಎಂದರು.

ಯಾರಾದರೂ ಹೊಡೆದರೆ ಅದರ ನೋವು ತಕ್ಷಣವೇ ಅನುಭವಕ್ಕೆ ಬರುತ್ತದೆ. ಯಾರಾದರೂ ಬೈದರೆ ಅದರ ಪರಿಣಾಮವೂ ಮನಸ್ಸಿನ ಮೇಲೆ ತಕ್ಷಣ ಉಂಟಾಗುತ್ತದೆ. ಹಾಗೆಯೇ ನಾವು ಮಾಡುವ ಒಳ್ಳೆಯ ಕಾರ್ಯಗಳ ಫಲವೂ ನಮ್ಮ ಬದುಕಿನಲ್ಲಿ ವ್ಯಕ್ತವಾಗುತ್ತದೆ. ಹಿಂದಿನ ಜನ್ಮದಲ್ಲಿ ಏನಾಯಿತು ಎಂಬುದರ ಬಗ್ಗೆ ಅತಿಯಾಗಿ ಚಿಂತಿಸದೆ, ಇಂದು ದೊರೆತಿರುವ ಬದುಕಿನ ಅವಕಾಶವನ್ನು ಸಾರ್ಥಕವಾಗಿ ಬಳಸಿಕೊಳ್ಳಬೇಕು. ಇಂದಿನ ನಡೆ, ನುಡಿ ಮತ್ತು ಕಾಯಕವನ್ನು ಶುದ್ಧವಾಗಿಟ್ಟುಕೊಳ್ಳುವುದೇ ಮುಖ್ಯ. ದೇವರ ಪೂಜೆ ಮತ್ತು ಸತ್ಕಾರ್ಯಗಳ ಫಲವೂ ನಮ್ಮ ಬದುಕಿನಲ್ಲಿ ದೊರೆಯುತ್ತದೆ ಎಂಬ ಸಂದೇಶವನ್ನು ಬಸವಣ್ಣನವರು ನೀಡಿದ್ದಾರೆ ಎಂದು ಶ್ರೀಗಳು ಹೇಳಿದರು.

ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಸಹವಾಸದ ಪಾತ್ರ ಬಹಳ ದೊಡ್ಡದು. ಇದನ್ನು ಬಸವಣ್ಣನವರು,

“ಆರಾರ ಸಂಗವೇನೇನ ಮಾಡದಯ್ಯಾ;
ಕೀಡಿ ಕುಂಡಲಿಗನಾಗದೆ, ಅಯ್ಯಾ?
ಚಂದನದ ಸನ್ನಿಧಿಯಲಿ ಪರಿಮಳ ತಾಗಿ
ಬೇವು, ಬೊಬ್ಬುಳಿ, ತರೆಯ ಗಂಧಂಗಳಾಗವೆ?
ನಮ್ಮ ಕೂಡಲಸಂಗನ ಶರಣರ ಸನ್ನಿಧಿಯಿಂದ
ಕರ್ಮ ನಿರ್ಮಳವಾಗದಿಹುದೆ?”

ಎಂಬ ವಚನದಲ್ಲಿ ಮನೋಜ್ಞವಾಗಿ ವಿವರಿಸಿದ್ದಾರೆ.

ಒಂದು ಹುಳು ದುಂಬಿಯ ಸಹವಾಸಕ್ಕೆ ಬಂದು ಅದರ ಪ್ರಭಾವದಿಂದ ದುಂಬಿಯ ಸ್ವರೂಪ ಪಡೆಯುವ ಉದಾಹರಣೆ ಹಾಗೂ ಶ್ರೀಗಂಧದ ಕಟ್ಟಿಗೆಯ ಸಾನ್ನಿಧ್ಯದಿಂದ ಇತರ ಕಟ್ಟಿಗೆಗಳೂ ಸುಗಂಧವನ್ನು ಪಡೆದುಕೊಳ್ಳುವ ದೃಷ್ಟಾಂತಗಳನ್ನು ಬಸವಣ್ಣನವರು ನೀಡಿದ್ದಾರೆ. ಅದೇ ರೀತಿ ಶರಣರ, ಸಜ್ಜನರ ಸಹವಾಸದಲ್ಲಿ ಬದುಕುವ ಮನುಷ್ಯನ ಮನಸ್ಸು ಮತ್ತು ನಡವಳಿಕೆಗಳು ಪರಿಶುದ್ಧವಾಗುತ್ತವೆ. ಒಳ್ಳೆಯವರ ಸಂಗದಿಂದ ಒಳ್ಳೆಯ ಆಲೋಚನೆಗಳು ಬೆಳೆಯುತ್ತವೆ. ಬದುಕಿನ ಮೌಲ್ಯಗಳು ಬದಲಾಗುತ್ತವೆ. ಹೀಗಾಗಿ ಕರ್ಮವನ್ನು ನಿರ್ಮಲಗೊಳಿಸಿಕೊಳ್ಳಲು ಸಜ್ಜನರ ಸಹವಾಸ ಅತ್ಯಂತ ಅಗತ್ಯ ಎಂದರು.

ಮನುಷ್ಯನನ್ನು ಕರ್ಮಬಂಧನಕ್ಕೆ ಸಿಲುಕಿಸುವ ಪ್ರಮುಖ ಸಂಗತಿಗಳಲ್ಲಿ ಹೊಗಳಿಕೆ ಮತ್ತು ತೆಗಳಿಕೆಯೂ ಸೇರಿವೆ. ಬಸವಣ್ಣನವರು,

“ನಿಂದಿಸುವನೊಬ್ಬ, ಸ್ತುತಿಸುವನೊಬ್ಬ,
ಇವರಿಬ್ಬರು ನಮ್ಮ ಶಿವಯೋಗಿಯ ಪರಮಬಂಧುಗಳಯ್ಯಾ.
ಪಾಪವನೊಬ್ಬ ಕೊಂಬ, ಪುಣ್ಯವನೊಬ್ಬ ಕೊಂಬ,
ಕೂಡಲಸಂಗಮದೇವಾ, ನಿಮ್ಮ ಶರಣರು ನಿತ್ಯಮುಕ್ತರು.”

ಎಂಬ ವಚನದಲ್ಲಿ ಇದನ್ನು ವಿವರಿಸಿದ್ದಾರೆ.

ಯಾರಾದರೂ ನಮ್ಮನ್ನು ಹೊಗಳಿದಾಗ ಸಂತೋಷದಿಂದ ಹಿಗ್ಗುತ್ತೇವೆ. ತೆಗಳಿದಾಗ ಬೇಸರದಿಂದ ಕುಗ್ಗುತ್ತೇವೆ. ಆದರೆ ಇವೆರಡಕ್ಕೂ ಅತಿಯಾಗಿ ಪ್ರತಿಕ್ರಿಯಿಸದೆ ಸಮಚಿತ್ತದಿಂದ ಬದುಕಬೇಕು. ಹೊಗಳಿಕೆಯಿಂದ ಅಹಂಕಾರ ಬೆಳೆಸಿಕೊಳ್ಳಬಾರದು; ತೆಗಳಿಕೆಯಿಂದ ಮನಸ್ಸಿನ ಶಾಂತಿ ಕಳೆದುಕೊಳ್ಳಬಾರದು. ಹೊಗಳುವವರು ಮತ್ತು ನಿಂದಿಸುವವರು ತಮ್ಮ ತಮ್ಮ ಭಾವನೆಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ. ಅವರ ಮಾತುಗಳಿಗೆ ನಮ್ಮ ಮನಸ್ಸನ್ನು ಒಪ್ಪಿಸಬಾರದು.

ಹೊಗಳಿಕೆಗೆ ಹಿಗ್ಗದೆ, ನಿಂದನೆಗೆ ಕುಗ್ಗದೆ, ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಾಗ ಮನುಷ್ಯ ಪುಣ್ಯ-ಪಾಪಗಳ ಬಂಧನದಿಂದಲೂ ದೂರವಾಗಬಹುದು. ಇದುವೇ ಶರಣರ ನಿತ್ಯಮುಕ್ತ ಸ್ಥಿತಿಯ ಆಶಯವಾಗಿದೆ. ‘ಮಾಡಿದವರ ಪಾಪ ಆಡಿದವರ ಬಾಯಿಗೆ’ ಎಂಬ ಜನಪದ ಗಾದೆಯೂ ಈ ವಿಚಾರವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.

ತೀರ್ಥಯಾತ್ರೆ, ಪುಣ್ಯಕ್ಷೇತ್ರಗಳ ದರ್ಶನ ಮತ್ತು ಪವಿತ್ರ ಸ್ನಾನಗಳಿಂದ ಮಾತ್ರ ಮನುಷ್ಯನ ಪಾಪಕರ್ಮಗಳು ದೂರವಾಗುವುದಿಲ್ಲ. ಅವನ ಮೂಲಭೂತ ಸ್ವಭಾವದಲ್ಲಿ ಬದಲಾವಣೆಯಾಗಬೇಕು. ಈ ವಿಚಾರವನ್ನು ವಿವರಿಸಲು ಹಾಗಲಕಾಯಿಯ ದೃಷ್ಟಾಂತವನ್ನು ಬಸವಕೇಂದ್ರ ಶ್ರೀಗಳು ಪ್ರಸ್ತಾಪಿಸಿದರು.

ತೀರ್ಥಯಾತ್ರೆಗೆ ಹೊರಟಿದ್ದ ಕೆಲವರಿಗೆ ಕೃಷ್ಣನು ಒಂದು ಹಾಗಲಕಾಯಿಯನ್ನು ನೀಡಿ, ಅವರು ಭೇಟಿ ನೀಡುವ ಎಲ್ಲ ಪುಣ್ಯಕ್ಷೇತ್ರಗಳಲ್ಲಿಯೂ ಅದನ್ನು ಮುಳುಗಿಸಿಕೊಂಡು ಬರಲು ಹೇಳಿದನಂತೆ. ಯಾತ್ರೆ ಮುಗಿಸಿ ಬಂದ ನಂತರ ಆ ಹಾಗಲಕಾಯಿಯನ್ನು ತುಂಡು ಮಾಡಿ ಅವರಿಗೆ ತಿನ್ನಲು ನೀಡಿದಾಗ ಅದರ ಕಹಿ ಸ್ವಭಾವ ಹಾಗೆಯೇ ಉಳಿದಿತ್ತು. ಆಗ ಕೃಷ್ಣನು, ಇಷ್ಟೆಲ್ಲ ಪವಿತ್ರ ಕ್ಷೇತ್ರಗಳಲ್ಲಿ ಮುಳುಗಿಸಿದರೂ ಹಾಗಲಕಾಯಿಯ ಕಹಿ ಏಕೆ ಹೋಗಲಿಲ್ಲ ಎಂದು ಪ್ರಶ್ನಿಸಿದನಂತೆ.

ಈ ದೃಷ್ಟಾಂತದ ಮೂಲಕ ಬಾಹ್ಯ ಆಚರಣೆಗಳಿಂದ ಮಾತ್ರ ಮನುಷ್ಯನ ಅಂತರಂಗ ಬದಲಾಗುವುದಿಲ್ಲ. ತನ್ನ ನಡೆ-ನುಡಿ, ಆಲೋಚನೆ ಮತ್ತು ಸ್ವಭಾವವನ್ನು ಪರಿವರ್ತಿಸಿಕೊಳ್ಳದಿದ್ದರೆ ಎಷ್ಟೇ ತೀರ್ಥಯಾತ್ರೆ ಮಾಡಿದರೂ ಪ್ರಯೋಜನವಿಲ್ಲ. ನಿಜವಾದ ಧರ್ಮವೆಂದರೆ ವ್ಯಕ್ತಿಯ ಅಂತರಂಗದ ಶುದ್ಧೀಕರಣ ಮತ್ತು ಬದುಕಿನ ಪರಿವರ್ತನೆ ಎಂದು ಶ್ರೀಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶ್ರೀರಂಜಿನಿ ದತ್ತಾತ್ರಿ ಅವರ ಅಧ್ಯಯನಶೀಲತೆಯನ್ನು ಶ್ರೀಗಳು ವಿಶೇಷವಾಗಿ ಪ್ರಶಂಸಿಸಿದರು. ವಿಷಯವನ್ನು ನೀಡಿದಾಗ ಅದರ ಬಗ್ಗೆ ತಿಳಿದಿಲ್ಲವೆಂದು ಹಿಂದೆ ಸರಿಯದೆ, ಆಕರ ಗ್ರಂಥಗಳನ್ನು ಹುಡುಕಿ, ವಿಷಯದ ಆಳವನ್ನು ಅರಿತು ಸಿದ್ಧತೆ ಮಾಡಿಕೊಂಡು ಬಂದು ಮಾತನಾಡುವ ಅವರ ಬದ್ಧತೆ ಮೆಚ್ಚುವಂತಹದ್ದು. ಚಿಂತನ ಕಾರ್ತಿಕದೊಂದಿಗೆ ಅವರಿಗೆ ಅವಿನಾಭಾವ ಸಂಬಂಧವಿದೆ. ಪ್ರತಿವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವರ ಆಸಕ್ತಿ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿನ ತೊಡಗಿಸಿಕೊಳ್ಳುವಿಕೆ ಶ್ಲಾಘನೀಯ ಎಂದರು.

ಜಯಮ್ಮ ಕುಪ್ಸದ್ ಅವರು ಬಸವಕೇಂದ್ರದೊಂದಿಗೆ 2007ರ ಶ್ರೀಶೈಲ ಪ್ರವಾಸದಿಂದ ಆರಂಭವಾದ ಆತ್ಮೀಯ ಸಂಬಂಧವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಅವರ ಕುಟುಂಬದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಸವಕೇಂದ್ರದ ಸ್ವಾಮೀಜಿಗಳ ಮೇಲೆ ಇಟ್ಟಿರುವ ನಂಬಿಕೆ, ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಬಂಧ ಸ್ಪರ್ಧೆಗಳಲ್ಲಿ ನಿರಂತರವಾಗಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿರುವ ಸಾಧನೆ ಹಾಗೂ ಅಕ್ಕನ ಬಳಗವನ್ನು ಸಂಘಟಿಸಿಕೊಂಡು ಬಂದಿರುವ ಸೇವೆಯನ್ನು ಸ್ಮರಿಸಿದರು.

ಆರ್.ಎಸ್. ಸ್ವಾಮಿ ಅವರ ಸರಳತೆ, ದಾಂಪತ್ಯ ಸಾಮರಸ್ಯ, ಕುಟುಂಬದ ಸಹಕಾರ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿನ ತೊಡಗಿಸಿಕೊಳ್ಳುವಿಕೆಯನ್ನು ಮೆಚ್ಚಿಕೊಂಡರು. ಸಂಘಟನೆಯ ಜವಾಬ್ದಾರಿಯನ್ನು ನಿಗದಿತ ಅವಧಿಯ ನಂತರ ಸ್ವಯಂಪ್ರೇರಣೆಯಿಂದ ಬೇರೆಯವರಿಗೆ ಬಿಟ್ಟುಕೊಟ್ಟ ಅವರ ನಡೆ ಮಾದರಿಯಾಗಿದೆ. ಸ್ಥಾನಮಾನಗಳಿಗಾಗಿ ಹಂಬಲಿಸದೆ, ಸಮಾಜಕ್ಕೆ ಕೈಲಾದ ಸೇವೆ ಸಲ್ಲಿಸುವ ಮನೋಭಾವ ಅವರಲ್ಲಿದೆ ಎಂದು ಪ್ರಶಂಸಿಸಿದರು.

ಈ ಮೂವರಿಗೂ ದೇವರು ಉತ್ತಮ ಆಯುಷ್ಯ, ಆರೋಗ್ಯ ಹಾಗೂ ಇನ್ನಷ್ಟು ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸೇವೆ ಸಲ್ಲಿಸುವ ಶಕ್ತಿ ನೀಡಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಸೇವಾರ್ಥಿಗಳಾದ ತ್ರಿವೇಣಿ, ಗುರುಶಾಂತಪ್ಪ ಹಾಗೂ ಕುಟುಂಬದವರು ತಮ್ಮ ಮನೆಯ ಹಿರಿಯರಾದ ಕರಿಬಸಪ್ಪ ಮತ್ತು ಕಮಲಮ್ಮ ಅವರ ಸ್ಮರಣಾರ್ಥವಾಗಿ ಚಿಂತನ ಕಾರ್ತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅವರ ಸೇವಾ ಮನೋಭಾವವನ್ನು ಶ್ಲಾಘಿಸಿದ ಬಸವಕೇಂದ್ರ ಶ್ರೀಗಳು, ಕುಟುಂಬಕ್ಕೆ ಶುಭ ಹಾರೈಸಿದರು.

ಕರ್ಮಸಿದ್ಧಾಂತದಿಂದ ಮುಕ್ತರಾಗಲು ಬಸವಣ್ಣನವರು ತೋರಿದ ಮೂರು ಪ್ರಮುಖ ಮಾರ್ಗಗಳಾದ ಆತ್ಮನೈವೇದ್ಯ, ಸಜ್ಜನರ ಸಹವಾಸ ಮತ್ತು ಹೊಗಳಿಕೆ-ತೆಗಳಿಕೆಗಳ ಬಗ್ಗೆ ನಿರ್ಲಿಪ್ತ ಭಾವ ಬೆಳೆಸಿಕೊಳ್ಳುವುದನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳ ಆಶಯವನ್ನು ಕೇವಲ ಕೇಳುವುದಕ್ಕೆ ಸೀಮಿತಗೊಳಿಸದೆ, ಅವುಗಳನ್ನು ಬದುಕಿನಲ್ಲಿ ಅನುಷ್ಠಾನಗೊಳಿಸಿದಾಗ ಮಾತ್ರ ನಿಜವಾದ ಪರಿವರ್ತನೆ ಸಾಧ್ಯ ಎಂದು ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಕಿರಣ್ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಅಂಕಣಕಾರ್ತಿ ಶ್ರೀರಂಜಿನಿ ದತ್ತಾತ್ರಿ, ಅಕ್ಕನ ಬಳಗದ ನಿಕಟಪೂರ್ವ ಅಧ್ಯಕ್ಷೆ ಜಯಮ್ಮ ಕುಬ್ಸದ್ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಆರ್.ಎಸ್. ಸ್ವಾಮಿ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment