ಶಿವಮೊಗ್ಗ: ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಸಂಬಂಧಗಳ ಬೆಲೆ ಮರೆತರೆ ಆ ಬೆಳವಣಿಗೆಗೆ ಅರ್ಥವಿಲ್ಲ. ಆಸ್ತಿ ಗಳಿಸುವ ಭರದಲ್ಲಿ ಅಣ್ಣ-ತಮ್ಮಂದಿರ ಬಾಂಧವ್ಯ ಕಳೆದುಹೋದರೆ, ಅಹಂಕಾರ ಮತ್ತು ಅಸೂಯೆಯ ನಡುವೆ ಕುಟುಂಬದ ನೆಮ್ಮದಿ ನಾಶವಾದರೆ ಕೊನೆಗೆ ಉಳಿಯುವುದು ಪಶ್ಚಾತ್ತಾಪ ಮಾತ್ರ. ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಇಂತಹ ಭಿನ್ನಾಭಿಪ್ರಾಯಗಳಿಗೆ ಕಡಿವಾಣ ಹಾಕಿ, ಮಕ್ಕಳಲ್ಲಿ ಸಂಸ್ಕಾರ, ಯುವಜನರಲ್ಲಿ ನೈತಿಕ ಮೌಲ್ಯ ಹಾಗೂ ಕುಟುಂಬಗಳಲ್ಲಿ ಸಾಮರಸ್ಯ ಬೆಳೆಸುವ ಶಕ್ತಿ ಗುರುಗಳ ಮಾರ್ಗದರ್ಶನ ಮತ್ತು ಬಸವಣ್ಣನವರ ಚಿಂತನೆಗಳಲ್ಲಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲವಕುಮಾರಸ್ವಾಮಿ ಎನ್.ಎಸ್ ಅವರು ಹೇಳಿದರು.
ಶಿವಮೊಗ್ಗ ತಾಲ್ಲೂಕಿನ ಹರಮಘಟ್ಟದ ಶ್ರೀ ರಾಮಾಂಜನೇಯ ರಂಗಮಂದಿರದಲ್ಲಿ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು, ಬಸವಕೇಂದ್ರ, ಶಿವಮೊಗ್ಗ, ಅರಳಿಕಟ್ಟೆ ಅನುಭವ ಮಂಟಪ–6 ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಇವರ ಆಶ್ರಯದಲ್ಲಿ, ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮದ 11ನೇ ದಿನದ ಚಿಂತನಗೋಷ್ಠಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಇಂತಹ ಆಧ್ಯಾತ್ಮಿಕ ಹಾಗೂ ವೈಚಾರಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಹಿಂದಿನ ಉದ್ದೇಶವನ್ನು ವಿವರಿಸಿದ ಅವರು, ಇಂದಿನ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಅತ್ಯಗತ್ಯವಾಗಿದೆ. ಮಕ್ಕಳಿಗೆ ಮುಂದೆ ಗುರಿ ಇರಬೇಕು, ಹಿಂದೆ ಗುರುಗಳಿರಬೇಕು. ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನ ದೊರೆತಾಗ ಮಾತ್ರ ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ. ಸಮಾಜದಲ್ಲಿ ನೈತಿಕ ಮೌಲ್ಯಗಳು ನಿಧಾನವಾಗಿ ಕುಸಿಯುತ್ತಿವೆ. ಮಕ್ಕಳಲ್ಲಿ ಯಾವ ಹಂತದಲ್ಲಿ ಮೌಲ್ಯಗಳ ಕೊರತೆ ಉಂಟಾಗುತ್ತಿದೆ ಎಂಬುದು ತಂದೆ-ತಾಯಿಗಳ ಗಮನಕ್ಕೂ ಬರುವುದಿಲ್ಲ. ಮಾಧ್ಯಮಗಳ ಸದುಪಯೋಗದ ಬದಲಿಗೆ ದುರುಪಯೋಗ ಹೆಚ್ಚುತ್ತಿರುವುದು ಆತಂಕಕಾರಿ. ನಕಾರಾತ್ಮಕ ವಿಚಾರಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿರುವ ಇಂತಹ ಸಂದರ್ಭದಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವ ಗುರುಗಳ ಮಾರ್ಗದರ್ಶನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಗುರುವಿನ ಪ್ರಾಣವೇ ಶಿಷ್ಯನಿಗೆ ಮುಖ್ಯವೆಂದ ಅಲೆಕ್ಸಾಂಡರ್
ಗುರು ಮತ್ತು ಶಿಷ್ಯನ ನಡುವಿನ ಸಂಬಂಧ ಎಷ್ಟು ಪವಿತ್ರವಾಗಿರಬೇಕು ಎಂಬುದನ್ನು ವಿವರಿಸಲು ಅರಿಸ್ಟಾಟಲ್ ಹಾಗೂ ಅಲೆಕ್ಸಾಂಡರ್ ಕುರಿತ ಪ್ರಸಂಗವನ್ನು ಲವಕುಮಾರಸ್ವಾಮಿ ಅವರು ಉದಾಹರಿಸಿದರು.
ಅರಿಸ್ಟಾಟಲ್ ಜಗತ್ಪ್ರಸಿದ್ಧ ತತ್ವಜ್ಞಾನಿ. ಜಗತ್ತನ್ನೇ ಗೆಲ್ಲುವ ಕನಸು ಕಂಡ ಅಲೆಕ್ಸಾಂಡರ್ನ ಗುರು. ಒಂದು ದಿನ ಗುರು-ಶಿಷ್ಯರು ಕುದುರೆಗಳ ಮೇಲೆ ಪ್ರಯಾಣಿಸುತ್ತಿದ್ದಾಗ ಮಾರ್ಗಮಧ್ಯೆ ಉಕ್ಕಿ ಹರಿಯುತ್ತಿದ್ದ ನದಿಯೊಂದು ಎದುರಾಗುತ್ತದೆ. ಆಗ ಅರಿಸ್ಟಾಟಲ್, ಮೊದಲು ತಾನು ನದಿ ದಾಟಿ ಸುರಕ್ಷಿತವಾಗಿ ದಡ ಸೇರಿದರೆ ಮಾತ್ರ ಶಿಷ್ಯ ಬರಬೇಕು ಎಂದು ಸೂಚಿಸುತ್ತಾರೆ. ಆದರೆ ಅಲೆಕ್ಸಾಂಡರ್ ಗುರುಗಳಿಗಾಗಿ ಕಾಯದೆ ತಾನೇ ಮೊದಲು ನದಿಗೆ ಧುಮುಕಿ ಈಜಿ ದಡ ಸೇರುತ್ತಾನೆ. ಬಳಿಕ ಗುರುಗಳು ನದಿ ದಾಟುತ್ತಾರೆ.
ಇದಕ್ಕೆ ಕಾರಣ ಕೇಳಿದಾಗ ಅಲೆಕ್ಸಾಂಡರ್, ‘ಗುರುಗಳೇ, ನಾನು ಒಂದು ಸಾಮ್ರಾಜ್ಯದ ರಾಜ ಮಾತ್ರ. ನಾನು ಸತ್ತರೆ ನನ್ನ ಸಾಮ್ರಾಜ್ಯಕ್ಕೆ ನಷ್ಟವಾಗಬಹುದು. ಆದರೆ ನನ್ನಂತಹ ಸಾವಿರಾರು ಜನರನ್ನು ರೂಪಿಸುವ ಶಕ್ತಿ ನಿಮಗಿದೆ. ಹೀಗಾಗಿ ನನ್ನ ಪ್ರಾಣಕ್ಕಿಂತ ನಿಮ್ಮ ಪ್ರಾಣ ಮುಖ್ಯ ಎಂದು ಭಾವಿಸಿ ಮೊದಲು ನದಿ ದಾಟಿದೆ’ ಎಂದು ಉತ್ತರಿಸುತ್ತಾನೆ. ಗುರುಗಳ ಮೇಲಿನ ಗೌರವ, ಪ್ರೀತಿ ಮತ್ತು ಕಾಳಜಿಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಶಿಷ್ಯನ ಬದುಕಿನಲ್ಲಿ ಗುರುವಿನ ಸ್ಥಾನ ಎಷ್ಟು ಮಹತ್ವದ್ದು ಎಂಬುದನ್ನು ಈ ಪ್ರಸಂಗ ತಿಳಿಸುತ್ತದೆ ಎಂದು ಹೇಳಿದರು.

ಆಸ್ತಿ ಹಂಚಿಕೆಯ ಸಣ್ಣ ವಿವಾದವೇ ಕುಟುಂಬವನ್ನೇ ಬೀದಿಗೆ ತಂದಿತು
ಕುಟುಂಬಗಳಲ್ಲಿ ಆಸ್ತಿ ವಿಚಾರವಾಗಿ ಉಂಟಾಗುವ ಭಿನ್ನಾಭಿಪ್ರಾಯಗಳು ಹೇಗೆ ಸಂಬಂಧಗಳನ್ನು ಹಾಳುಮಾಡುತ್ತವೆ ಎಂಬುದನ್ನು ಮತ್ತೊಂದು ಪ್ರಸಂಗದ ಮೂಲಕ ಮನಮುಟ್ಟುವಂತೆ ವಿವರಿಸಿದರು.
ಒಂದು ಗ್ರಾಮದಲ್ಲಿ ಅಣ್ಣ-ತಮ್ಮಂದಿರು ಕಷ್ಟಪಟ್ಟು ದುಡಿದು ಉತ್ತಮ ಸ್ಥಿತಿಗೆ ಬಂದಿದ್ದರು. ಇಡೀ ಊರಿನಲ್ಲಿ ಶ್ರೀಮಂತ ಕುಟುಂಬವೆಂಬ ಹೆಗ್ಗಳಿಕೆಯನ್ನೂ ಗಳಿಸಿದ್ದರು. ಆದರೆ ನಂತರ ಇಬ್ಬರ ನಡುವೆ ಆಸ್ತಿ ಹಂಚಿಕೆ ಮಾಡಿಕೊಳ್ಳುವ ಆಲೋಚನೆ ಮೂಡಿತು. ಯಾರ ಹಸ್ತಕ್ಷೇಪವೂ ಬೇಡವೆಂದು ನಿರ್ಧರಿಸಿ ಇಬ್ಬರೂ ಸಮಾನವಾಗಿ ಆಸ್ತಿ ಹಂಚಿಕೊಂಡರು. ಆದರೆ ಒಂದು ಸಣ್ಣ ವಸ್ತುವನ್ನು ಮಾತ್ರ ಅಣ್ಣ ತನ್ನ ಬಳಿ ಉಳಿಸಿಕೊಂಡಿದ್ದ.
ಇದನ್ನು ತಿಳಿದ ಗ್ರಾಮದ ವ್ಯಕ್ತಿಯೊಬ್ಬ ತಮ್ಮನ ಬಳಿ ಬಂದು, ‘ನಿಮ್ಮ ಕುಟುಂಬ ಇಷ್ಟೊಂದು ಅಭಿವೃದ್ಧಿಯಾಗಲು ಆ ವಸ್ತುವೇ ಕಾರಣ. ಅದನ್ನು ಅಣ್ಣನಿಗೆ ಬಿಟ್ಟುಕೊಟ್ಟಿದ್ದು ಸರಿಯಲ್ಲ’ ಎಂದು ಮನಸ್ಸಿನಲ್ಲಿ ಅನುಮಾನ ಬಿತ್ತಿದ. ಅಷ್ಟಕ್ಕೇ ನಿಲ್ಲದೆ ಅಣ್ಣನ ಬಳಿಗೂ ಹೋಗಿ, ‘ನಿಮ್ಮ ಕುಟುಂಬದ ಏಳಿಗೆಗೆ ಕಾರಣವಾದ ಆ ವಸ್ತುವನ್ನು ನೀವೇ ಉಳಿಸಿಕೊಂಡಿದ್ದು ಒಳ್ಳೆಯ ನಿರ್ಧಾರ’ ಎಂದು ಹೇಳಿ ಇಬ್ಬರ ನಡುವೆ ಗೊಂದಲ ಸೃಷ್ಟಿಸಿದ.
ಆರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಅನುಮಾನ ಕ್ರಮೇಣ ದೊಡ್ಡ ಜಗಳವಾಗಿ ಬೆಳೆದು, ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿತು. ನ್ಯಾಯಾಲಯ ಆ ವಸ್ತುವನ್ನೂ ಇಬ್ಬರೂ ಸಮನಾಗಿ ಹಂಚಿಕೊಳ್ಳುವಂತೆ ತೀರ್ಪು ನೀಡುವ ಹಂತಕ್ಕೆ ವಿವಾದ ತಲುಪಿತು. ಅಷ್ಟರೊಳಗೆ ನ್ಯಾಯಾಲಯದ ಖರ್ಚು, ಓಡಾಟ ಹಾಗೂ ಪರಸ್ಪರ ಹಗೆತನದಿಂದ ಕುಟುಂಬದ ಆಸ್ತಿಯೇ ಕರಗಿಹೋಗಿತ್ತು. ಕೊನೆಗೆ ಹಂಚಿಕೊಳ್ಳಲು ಉಳಿದಿದ್ದು ಆ ಒಂದು ವಸ್ತು ಮಾತ್ರ!
ಸಣ್ಣ ವಿಚಾರಕ್ಕೆ ಸಂಬಂಧಗಳನ್ನು ಕಳೆದುಕೊಳ್ಳುವ ಸಮಾಜದ ಮನಸ್ಥಿತಿಯನ್ನು ಈ ಪ್ರಸಂಗ ಬಿಂಬಿಸುತ್ತದೆ. ಅಣ್ಣ-ತಮ್ಮಂದಿರ ನಡುವೆ ಪ್ರೀತಿ, ವಿಶ್ವಾಸ ಮತ್ತು ಹೊಂದಾಣಿಕೆ ಇರಬೇಕು. ಇತರರು ಬಿತ್ತುವ ಅನುಮಾನಗಳಿಗೆ ಕಿವಿಗೊಟ್ಟು ಕುಟುಂಬದ ನೆಮ್ಮದಿಯನ್ನು ಹಾಳುಮಾಡಿಕೊಳ್ಳಬಾರದು. ಇಂತಹ ಸಂದರ್ಭಗಳಲ್ಲಿ ಹಿರಿಯರ ಮತ್ತು ಗುರುಗಳ ಮಾರ್ಗದರ್ಶನ ಬಹಳ ಮುಖ್ಯ ಎಂದು ತಿಳಿಸಿದರು.

15 ಗ್ರಾಮಗಳಿಗೆ ಅರಳಿಕಟ್ಟೆ ಅನುಭವ ಮಂಟಪದ ಚಿಂತನೆ ವಿಸ್ತರಣೆ
ಶಿವಮೊಗ್ಗದಿಂದ ಸುಮಾರು 40 ಶರಣ-ಶರಣೆಯರು, ಅಕ್ಕನ ಬಳಗ, ಕದಳಿ ವೇದಿಕೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು ಗುರುಗಳ ಆಶೀರ್ವಾದ ಪಡೆಯಲು ಆಗಮಿಸಿರುವುದು ಸಂತಸದ ಸಂಗತಿ. ಗ್ರಾಮೀಣ ಪ್ರದೇಶಗಳಲ್ಲಿ ಪರಸ್ಪರ ಪ್ರೀತಿ, ಸಹಕಾರ ಮತ್ತು ಸಾಮರಸ್ಯವಿದ್ದರೂ ಕೆಲವು ಕಡೆ ಅನಗತ್ಯ ಭಿನ್ನಾಭಿಪ್ರಾಯಗಳು ಸಮಾಜದ ಒಗ್ಗಟ್ಟಿಗೆ ಧಕ್ಕೆ ತರುತ್ತಿವೆ. ಇಂತಹ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ, ಬಸವಣ್ಣನವರ ಚಿಂತನೆಗಳನ್ನು ಮನೆಮನೆಗೂ ತಲುಪಿಸುವ ಉದ್ದೇಶದಿಂದ ‘ಅರಳಿಕಟ್ಟೆ ಅನುಭವ ಮಂಟಪ’ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಈ ಕಾರ್ಯಕ್ರಮಕ್ಕಾಗಿ ವಿಶೇಷ ತಂಡವೊಂದನ್ನು ರಚಿಸಲಾಗಿದ್ದು, ಬೆನವಳ್ಳಿ ಕುಮಾರ್, ಬಸವರಾಜಪ್ಪ, ಬಸವರಾಜ್, ಹಿರೇಮಠ ಸೇರಿದಂತೆ ಹಲವರು ಬಸವಕೇಂದ್ರ ಶ್ರೀಗಳ ಆಶೀರ್ವಾದದೊಂದಿಗೆ ಗ್ರಾಮದಿಂದ ಗ್ರಾಮಕ್ಕೆ ತೆರಳಿ ಕಾರ್ಯಕ್ರಮ ಆಯೋಜನೆಗೆ ಶ್ರಮಿಸುತ್ತಿದ್ದಾರೆ. ಈಗಾಗಲೇ ಸುಮಾರು 15 ಗ್ರಾಮಗಳಿಂದ ಗುರುಗಳನ್ನು ಆಹ್ವಾನಿಸುವ ಆಸಕ್ತಿ ವ್ಯಕ್ತವಾಗಿದೆ. ಪೂಜ್ಯರು ಕಾಲಾವಕಾಶ ನೀಡಿದಾಗ ಆಯಾ ಗ್ರಾಮಗಳಿಗೆ ತೆರಳಿ ಅರಳಿಕಟ್ಟೆ ಅನುಭವ ಮಂಟಪ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಲವಕುಮಾರಸ್ವಾಮಿ ಅವರು ತಿಳಿಸಿದರು.
ಎರಡು ಮಠಗಳ ಜವಾಬ್ದಾರಿ ನಿರ್ವಹಿಸುವುದರ ಜೊತೆಗೆ ರಾಜ್ಯಾದ್ಯಂತ ಬಸವಣ್ಣನವರ ಚಿಂತನೆಗಳನ್ನು ಪ್ರಸಾರ ಮಾಡುವ ಕಾರ್ಯದಲ್ಲಿ ನಿರತರಾಗಿರುವ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು ಹರಮಘಟ್ಟಕ್ಕೆ ಆಗಮಿಸಿರುವುದು ಗ್ರಾಮಸ್ಥರ ಸೌಭಾಗ್ಯ. ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ ಸಮಸ್ತ ಗ್ರಾಮಸ್ಥರು, ಮುಖಂಡರು ಹಾಗೂ ಸಂಘಟಕರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.









