ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ/ಪಂಗಡಗಳ ರಾಜ್ಯ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳೊಳಗಾಗಿ ಆರೋಪಪಟ್ಟಿ ಸಲ್ಲಿಕೆ ಕಡ್ಡಾಯ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಳೆದ ಆರು ತಿಂಗಳಲ್ಲಿ ಶೇ.84ರಷ್ಟು ಪ್ರಕರಣಗಳಲ್ಲಿ ಮಾತ್ರ ನಿಗದಿತ ಅವಧಿಯೊಳಗಾಗಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಉಳಿದ ಪ್ರಕರಣಗಳಲ್ಲಿಯೂ ಶೇ.100 ಪಾಲು ಖಚಿತಪಡಿಸಬೇಕು ಎಂದು ಎಚ್ಚರಿಸಿದರು.
ಪ್ರಮುಖ ನಿರ್ಧಾರಗಳು
ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ರಾಜ್ಯದಲ್ಲಿ ಈಗಾಗಲೇ 11 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು (ಪ್ರಸ್ತುತ ಕೇವಲ ಶೇ.10) ಹೆಚ್ಚಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಆರೋಪಿಗಳ ಜೊತೆ ಪೊಲೀಸರು ಕೈಜೋಡಿಸಿರುವುದು ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು. ಈಗಾಗಲೇ 170 ಪ್ರಕರಣಗಳಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸಾಬೀತಾಗಿದೆ. ಇಂತಹವರು ಪಡೆದ ಸೌಲಭ್ಯಗಳನ್ನು ಸರ್ಕಾರ ಮರಳಿ ಪಡೆಯುವ ಕ್ರಮ ಕೈಗೊಳ್ಳಬೇಕು. ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಸಮಗ್ರ ವರದಿ ಸಲ್ಲಿಸಬೇಕೆಂದು ಸೂಚಿಸಲಾಯಿತು.
2023ರಿಂದ ಮೂರು ವರ್ಷಗಳಲ್ಲಿ ಒಟ್ಟು 6,635 ಪ್ರಕರಣಗಳು ದಾಖಲಾಗಿದ್ದು, 4,912 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. 60 ದಿನಗಳಲ್ಲಿ ಸಲ್ಲಿಕೆಯಾದವು 4,149 (63%) ಪ್ರಕರಣಗಳು ಮಾತ್ರ. ಶಿಕ್ಷೆಯಾದ ಪ್ರಕರಣಗಳು ಕೇವಲ 36.
ದೌರ್ಜನ್ಯ ಪ್ರಕರಣಗಳಲ್ಲಿ ಅಂಗವೈಕಲ್ಯ ಉಂಟಾದರೆ ನೀಡುವ ವೈದ್ಯಕೀಯ ಪರಿಹಾರವನ್ನು ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು.
ರಾಜ್ಯದಲ್ಲಿ 33 ಡಿಸಿಆರ್‌ಇ ಪೊಲೀಸ್ ಠಾಣೆಗಳಿದ್ದು, ಸಿಬ್ಬಂದಿ ಕೊರತೆಯಿದ್ದರೆ ಭರ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚಿಸಲಾಯಿತು.
ಪ್ರತಿ ದೂರು ದಾಖಲಿಸುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಥಳ ಪರಿಶೀಲನೆ ನಡೆಸಿ ದೂರಿನಲ್ಲಿ ಸತ್ಯಾಂಶ ಇದ್ದರೆ ಮಾತ್ರ ಎಫ್‌ಐಆರ್ ದಾಖಲಿಸಲು ಸೂಚನೆ ನೀಡಲಾಯಿತು.
ರಾಜ್ಯಾದ್ಯಂತ ದೇವದಾಸಿ ಸಮೀಕ್ಷಾ ಕಾರ್ಯ ನಡೆಯುತ್ತಿದ್ದು, ಸಮೀಕ್ಷೆ ಬಳಿಕ ದೇವದಾಸಿಯರ ಪುನರ್ವಸತಿ ಹಾಗೂ ಈ ಪಿಡುಗನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ವಿಶೇಷ ಯೋಜನೆ ಜಾರಿಗೊಳಿಸಲಾಗುವುದು. ಅಗತ್ಯವಿದ್ದರೆ ವಿಶೇಷ ಅನುದಾನ ನೀಡಲಾಗುವುದು.
ಬಾಕಿಯಿರುವ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಕುರಿತು ತ್ವರಿತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ದಲಿತರ ಪರವಾಗಿದ್ದು, ಅವರಿಗೆ ನ್ಯಾಯ ಒದಗಿಸಲು ಅಡ್ಡಗಾಲು ಹಾಕುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.