ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಧರ್ಮಸ್ಥಳ ಪ್ರಕರಣ: ದೆಹಲಿಯಲ್ಲಿ ಸ್ವಾಮೀಜಿಗಳ ನಿಯೋಗ–ಅಮಿತ್ ಶಾ ಜೊತೆ ಸುದೀರ್ಘ ಮಾತುಕತೆ

On: September 4, 2025 6:21 PM
Follow Us:

ದೆಹಲಿ: ಧರ್ಮಸ್ಥಳ ಪ್ರಕರಣವು ಈಗ ರಾಜ್ಯ ಮಟ್ಟವನ್ನು ಮೀರಿ ಕೇಂದ್ರ ಮಟ್ಟಕ್ಕೂ ತಲುಪಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದ ಪ್ರಮುಖ ಸ್ವಾಮೀಜಿಗಳ ನಿಯೋಗವನ್ನು ದೆಹಲಿಯಲ್ಲಿ ಭೇಟಿಯಾಗಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಹತ್ವದ ಭರವಸೆ ನೀಡಿದ್ದಾರೆ.

ಮಾಸ್ಕ್‌ಮ್ಯಾನ್ ಚಿನ್ನಯ್ಯ ಧರ್ಮಸ್ಥಳದಲ್ಲಿ “ನೂರಾರು ಶವಗಳನ್ನು ಹೂತಿದ್ದೇನೆ” ಎಂಬ ಸ್ಫೋಟಕ ಆರೋಪ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ತೀವ್ರ ತಿರುವು ಪಡೆದಿದೆ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (NIA)ಗೆ ವಹಿಸಬೇಕೆಂಬ ಆಗ್ರಹ ದಿನೇದಿನೇ ಹೆಚ್ಚುತ್ತಿರುವ ನಡುವೆ, ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹಾಗೂ ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದ ಸನಾತನ ಸಂತ ನಿಯೋಗವು ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಸ್ವಾಮೀಜಿಗಳ ಮನವಿಯನ್ನು ಆಲಿಸಿದ ಅಮಿತ್ ಶಾ, “ಧರ್ಮಸ್ಥಳ ಪ್ರಕರಣದ ಎಲ್ಲಾ ಬೆಳವಣಿಗೆಗಳನ್ನು ನಾನು ಖುದ್ದಾಗಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇದನ್ನು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಧಾರ್ಮಿಕ ಕ್ಷೇತ್ರಗಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ತರಲು ಯೋಚನೆ ನಡೆದಿದೆ. ನೀವು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮುಂದುವರಿಸಬೇಕು.”

ಸುಮಾರು ಒಂದು ಗಂಟೆಯ ಕಾಲ ನಡೆದ ಈ ಮಾತುಕತೆಯಲ್ಲಿ ಸ್ವಾಮೀಜಿಗಳು ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಆರೋಪಗಳು, ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ತಪ್ಪುಮಾಹಿತಿ ಮತ್ತು ಕ್ಷೇತ್ರದ ಗೌರವಕ್ಕೆ ಉಂಟಾಗುತ್ತಿರುವ ಹಾನಿ ಕುರಿತು ವಿವರಿಸಿದರು.

ಈ ಪ್ರಕರಣದಲ್ಲಿ ವಿದೇಶಗಳಿಂದ ಕೆಲವು ಯೂಟ್ಯೂಬರ್ಗಳಿಗೆ ಹಣಕಾಸು ಹರಿದು ಬಂದಿದೆ ಎಂಬ ಗಂಭೀರ ಆರೋಪ ಈಗಾಗಲೇ ಕೇಳಿಬಂದಿದ್ದು, ಜಾರಿ ನಿರ್ದೇಶನಾಲಯ (ED) ಪ್ರಾಥಮಿಕ ತನಿಖೆ ಆರಂಭಿಸಿದೆ. ಈಗ ಕೇಂದ್ರ ಗೃಹ ಸಚಿವರ ಭರವಸೆಯ ನಂತರ ಪ್ರಕರಣವನ್ನು NIAಗೆ ವಹಿಸುವ ಸಾಧ್ಯತೆಯ ಕುರಿತಂತೆ ಕುತೂಹಲ ಹೆಚ್ಚಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment