ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ಶೈಲಿ, ಅತಿವೃಷ್ಟಿ–ಅನಾವೃಷ್ಟಿ ನಿರ್ವಹಣೆ ಮತ್ತು ರಸ್ತೆ ಗುಂಡಿ ಸಮಸ್ಯೆ ಕುರಿತಾಗಿ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ಬುಧವಾರ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಸರಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ, ವಿಶೇಷವಾಗಿ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಠಿಣ ಟೀಕೆಗಳನ್ನು ಮಾಡಿದ್ದಾರೆ.
ರಾಜ್ಯದಲ್ಲಿ ಅನೇಕ ಜಿಲ್ಲೆಗಳು ಮಳೆಯಿಂದ ತತ್ತರಿಸುತ್ತಿರುವಾಗಲೂ, ಇನ್ನೂ ಹಲವು ಪ್ರದೇಶಗಳು ಬರದ ಬಾಯಲ್ಲಿ ತವಕಿಸುತ್ತಿವೆ. ಕಲಬುರಗಿ, ಚಿಕ್ಕೋಡಿ, ಬಿಜಾಪುರ ಪ್ರಾಂತಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು ಹಾಗೂ ಕೋಲಾರ ಭಾಗಗಳು ನೀರಿಗಾಗಿ ಹಾತೊರೆಯುತ್ತಿವೆ.
“ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ರೈತರ ಹೊಲಗಳು ನಾಶವಾಗುತ್ತಿವೆ. ಆದರೆ ಸರ್ಕಾರಕ್ಕೆ ಪರವಾಗಿಲ್ಲ!” – ಎಂದು ಆಕ್ರೋಶ ವ್ಯಕ್ತಪಡಿಸಿದರು ನಾರಾಯಣಸ್ವಾಮಿ.
ರಸ್ತೆ ಗುಂಡಿಗಳಿಗೆ ಉತ್ತರ – ‘750 ಕೋಟಿ ಎಲ್ಲಿಗೆ ಹೋಯ್ತು?’ ಬೆಂಗಳೂರಿನ ರಸ್ತೆಗಳಲ್ಲಿ ಮಳೆ ಬಂದಾಗ ಗುಂಡಿಗಳಲ್ಲೇ ಕೆರೆಗಳು ರೂಪುಗೊಳ್ಳುತ್ತಿವೆ. ಈ ಸಮಸ್ಯೆ ಬಗ್ಗೆ ಮಾತನಾಡುವ ಬದಲು ಸರ್ಕಾರ ಹಳೆಯ ಸರ್ಕಾರದ ಮೇಲೆ ದೋಷಾರೋಪಣೆ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಎರಡು ವರ್ಷವಾಗ್ತಾ ಬರೋಕೆ ನಮ್ಮ ಸರ್ಕಾರ ಬದಲಾಗಿದ್ದು! ಈಗಲೂ ‘ಹಿಂದಿನ ಸರ್ಕಾರ’ ಅಂದ್ರೆ ಹೇಗೆ? ನೀವು ಹೇಳ್ತೀರಾ 750 ಕೋಟಿ ಕೊಟ್ಟಿದ್ದೇವೆ ಅಂತಾ – ಹಾಗಿದ್ರೆ ಆ ಹಣ ಯಾವ ಜೇಬಿಗೆ ಹೋಯ್ತು?” – ಎಂದು ಪ್ರಶ್ನೆ ಎಸೆದರು.
ಪ್ರಿಯಾಂಕ್ ಖರ್ಗೆ ಮೇಲೆ ತೀವ್ರ ದಾಳಿ – “ದಲಿತರ ಹೆಸರಿನಿಂದ ರಾಜಕೀಯ, ಆದರೆ ದಲಿತರ ಕಾಳಜಿ ಇಲ್ಲ!”
ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಅವರು ‘ನಾನು ದಲಿತ’ ಅಂತ ಹೇಳ್ತಾರೆ. ಆದರೆ ದಲಿತರಿಗಾಗಿ ಮಾಡಿದೇನು? ಅವರ ಹೆಸರಿನಲ್ಲಿ ಕಲೆಹಾಕಿದ ಆಸ್ತಿ ಎಲ್ಲಿದೆ? ಅದನ್ನ ದಲಿತರ ಉನ್ನತಿಗಾಗಿ ಉಪಯೋಗಿಸೋಕೆ ಸಿದ್ದನಾ?” ಎಂದು ಪ್ರಶ್ನಿಸಿದರು.
ಇದಲ್ಲದೆ, “ಪ್ರಿಯಾಂಕ್ ಖರ್ಗೆ ಜನರ ಗಮನ ಬೇರೆಡೆಗೆ ತಿರುಗಿಸಲು ಹೊಸ ಹೊಸ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜನರು ರಸ್ತೆ ಗುಂಡಿಗಳನ್ನು ಮರೆತುಬಿಡಬೇಕು, ರೈತರ ಅನಾಥತ್ವವನ್ನು ಮರೆತುಬಿಡಬೇಕು ಅನ್ನೋದು ಅವರ ತಂತ್ರ” ಎಂದರು.
ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣ ಮತ್ತು ದಲಿತರ ದಮನ – ಗಂಭೀರ ಆರೋಪ “ಕಾಂಗ್ರೆಸ್ನಲ್ಲಿ ಕೆಲ ಕುಟುಂಬಗಳು ದಲಿತರನ್ನು ಸ್ವಾರ್ಥಕ್ಕಾಗಿ ಗುಲಾಮರನ್ನಾಗಿ ಮಾಡಿಕೊಂಡಿವೆ. ಉಳಿದ ದಲಿತ ನಾಯಕರು ಮಂತ್ರಿಯಾಗಬಾರದೆಂದು ತಡೆಹಿಡಿದಿವೆ. ಪ್ರಿಯಾಂಕ್ ಖರ್ಗೆ ಅಪ್ಪನ ಆಶೀರ್ವಾದದಿಂದ ಮಾತ್ರ ಮಂತ್ರಿ; ಸ್ವಂತ ಶ್ರಮದಿಂದ ಆದರೆ ಆ ಸ್ಥಾನ ಬಂದಿರಲಿಲ್ಲ” ಎಂದು ನೇರ ಪ್ರಶ್ನೆ ಎಸೆದರು.











