ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಇನ್ನು ಸ್ಟ್ಯಾಂಪ್ ಪೇಪರ್‌ಗಾಗಿ ಓಡಾಟ ಬ್ರೇಕ್: ರಾಜ್ಯದಲ್ಲಿ ಡಿಜಿಟಲ್ ಇ–ಸ್ಟ್ಯಾಂಪ್ ಆರಂಭ

On: December 2, 2025 8:08 PM
Follow Us:

ಬೆಂಗಳೂರು: ಕರ್ನಾಟಕದಲ್ಲಿ ಸ್ಟ್ಯಾಂಪ್ ಪೇಪರ್‌ಗಳ ಖರೀದಿಗೆ ಈಗ ಯಾವುದೇ ಮಧ್ಯವರ್ತಿಗಳ ಅವಲಂಬನೆ ಅಗತ್ಯವಿಲ್ಲ. ಸ್ಟ್ಯಾಂಪಿಂಗ್‌ ಕ್ಷೇತ್ರದಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಲು ರಾಜ್ಯ ಸರ್ಕಾರವು ಡಿಜಿಟಲ್ ಇ–ಸ್ಟ್ಯಾಂಪ್ ಸೇವೆಯನ್ನು ಅಧಿಕೃತವಾಗಿ ಪರಿಚಯಿಸಿದೆ. ಈ ಸೇವೆಯ ಮೂಲಕ ದಿನದ 24 ಗಂಟೆಗಳಲ್ಲಿಯೂ, ದೇಶದಷ್ಟೇ ಅಲ್ಲ ವಿಶ್ವದ ಯಾವುದೇ ಮೂಲೆಯಿಂದಲೂ ಸ್ಟ್ಯಾಂಪ್ ಶುಲ್ಕ ಪಾವತಿಸಿ ಪ್ರಮಾಣಪತ್ರ ಪಡೆಯುವ ವ್ಯವಸ್ಥೆ ಲಭ್ಯವಾಗಿದೆ.

ಸ್ಟ್ಯಾಂಪ್ ಪೇಪರ್‌ಗಳ ನಕಲಿ ಹಾವಳಿ, ವಿಶೇಷವಾಗಿ ತೆಲಗಿ ಹಗರಣದ ನಂತರ, ರಾಜ್ಯದಲ್ಲಿ ಭೌತಿಕ ಸ್ಟ್ಯಾಂಪ್ ಪೇಪರ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮೂಲಕ ಸ್ಟ್ಯಾಂಪ್ ಪೇಪರ್‌ಗಳ ವಿತರಣೆ ಮುಂದುವರಿದಿದ್ದರೂ, ಕೆಲವು ತಾಂತ್ರಿಕ ಮತ್ತು ಕಾರ್ಯಪದ್ಧತಿಯ ಅಸೌಕರ್ಯಗಳಿಂದಾಗಿ ಸಂಪೂರ್ಣ ಡಿಜಿಟಲ್ ವ್ಯವಸ್ಥೆಗೆ ಒತ್ತು ನೀಡಲಾಗಿದೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಪ್ರಸ್ತುತ ಬಳಕೆಯಲ್ಲಿರುವ ಇ–ಸ್ಟ್ಯಾಂಪ್ ಪ್ರಮಾಣಪತ್ರಗಳನ್ನು ನಕಲು ಮಾಡುವ ಸಾಧ್ಯತೆಗಳಿವೆ. ಇದರಿಂದ ಒಂದು ಉದ್ದೇಶಕ್ಕಾಗಿ ಖರೀದಿಸಿದ ಸ್ಟ್ಯಾಂಪ್‌ನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡುವ, ಕಡಿಮೆ ತೆರಿಗೆ ಪಾವತಿಸುವ ಮತ್ತು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ವಿವರಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಡಿಜಿಟಲ್ ನೋಂದಣಿ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿರುವುದರಿಂದ, ಸ್ಟ್ಯಾಂಪಿಂಗ್‌ ಕೂಡ ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯತ್ತ ಸಾಗುತ್ತಿದೆ. ಈ ಉದ್ದೇಶಕ್ಕಾಗಿ 2025ರ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ಕಾಯ್ದೆ ಪ್ರಕಟವಾಗಿದ್ದು, ಹಂತ ಹಂತವಾಗಿ ಹಳೆಯ ಇ–ಸ್ಟ್ಯಾಂಪ್ ವ್ಯವಸ್ಥೆಯನ್ನು ನಿಲ್ಲಿಸಲಾಗುತ್ತದೆ.

ಡಿಜಿಟಲ್ ಇ–ಸ್ಟ್ಯಾಂಪ್: ಏನು ಪ್ರಯೋಜನ?

ಸಂಪೂರ್ಣ ಡಿಜಿಟಲ್ ಸೇವೆ: ಆನ್‌ಲೈನ್‌ನಲ್ಲಿ ಮಾತ್ರ ಲಭ್ಯ — ಕಚೇರಿಗಳ ಓಡಾಟ, ದಲಾಲರ ಅವಲಂಬನೆ ಅಂತ್ಯ.

24×7 ಸೇವೆ: ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ ಪಡೆಯುವ ಸೌಲಭ್ಯ.

ಸುರಕ್ಷಿತ ಪಾವತಿ: ನಕಲಿ ಸ್ಟ್ಯಾಂಪ್ ಪೇಪರ್ ಸಮಸ್ಯೆಗೆ ಶಾಶ್ವತ ಪರಿಹಾರ.

ಸರ್ಕಾರದ ಬೊಕ್ಕಸಕ್ಕೆ ಲಾಭ: ಕೋಟ್ಯಂತರ ರೂಪಾಯಿ ನಷ್ಟ ತಪ್ಪಿಸುವ ನಿರೀಕ್ಷೆ.

ರಿಕವರಿ ಸೌಲಭ್ಯ: ಕಳೆದು ಹೋದರೂ ಡಿಜಿಟಲ್ ದಾಖಲೆ ಮರಳಿ ಪಡೆಯಬಹುದಾದ ವ್ಯವಸ್ಥೆ.

ಪಾರದರ್ಶಕತೆ: ವಂಚನೆ, ಕಡಿಮೆ ಸ್ಟ್ಯಾಂಪ್ ಡ್ಯೂಟಿ ಪಾವತಿಸುವ ದಂಧೆಗಳಿಗೆ ಕಡಿವಾಣ.

ಡಿಜಿಟಲ್ ಇ–ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ಬರುವುದರಿಂದ, ಕರ್ನಾಟಕವು ಸಂಪೂರ್ಣವಾಗಿ ಪೇಪರ್‌ಲೆಸ್ ಮತ್ತು ಪಾರದರ್ಶಕ ಸ್ಟ್ಯಾಂಪಿಂಗ್‌ ವ್ಯವಸ್ಥೆಯತ್ತ ಹೆಜ್ಜೆಯಿಡುತ್ತಿದೆ. ರಾಜ್ಯದ ಭೂ ನೋಂದಣಿ, ಒಪ್ಪಂದಗಳು ಮತ್ತು ಕಾನೂನುಪರ ದಾಖಲೆಗಳ ಪ್ರಕ್ರಿಯೆಯಲ್ಲಿ ಇದು ಮಹತ್ತರ ಬದಲಾವಣೆಯಾಗಿ ಪರಿಣಮಿಸಲು ಎಲ್ಲ ಸೂಚನೆಗಳೂ ಸ್ಪಷ್ಟವಾಗಿವೆ.

K.M.Sathish Gowda

Join WhatsApp

Join Now

Facebook

Join Now

Leave a Comment