ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಬಾಡಿಗೆದಾರರಿಗೆ ಸಿಹಿ ಸುದ್ದಿ: ‘ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ–2025’ ವಿಧಾನಸಭೆಯಲ್ಲಿ ಮಂಡನೆ

On: December 10, 2025 11:49 PM
Follow Us:

ಬೆಳಗಾವಿ: ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಅದರಿಂದ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಹೆಚ್ಚುತ್ತಿರುವ ವಿವಾದಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ, ರಾಜ್ಯ ಸರ್ಕಾರ ‘ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ–2025’ನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ಈ ವಿಧೇಯಕವನ್ನು ಮಂಡಿಸಿದ್ದು, 1999ರ ಕರ್ನಾಟಕ ಬಾಡಿಗೆ ಕಾಯ್ದೆಗೆ ಪ್ರಮುಖ ತಿದ್ದುಪಡಿಗಳನ್ನು ತರಲು ಸರ್ಕಾರ ತೀರ್ಮಾನಿಸಿದೆ. ಈ ತಿದ್ದುಪಡಿ ಜಾರಿಯಾದರೆ, ಮನೆ ಮಾಲೀಕರಿಗೂ, ಬಾಡಿಗೆದಾರರಿಗೂ ಸಮಾನ ಕಾನೂನು ರಕ್ಷಣೆ ದೊರಕಲಿದೆ ಎಂದು ಸರ್ಕಾರ ತಿಳಿಸಿದೆ.

ಹೊಸ ನಿಯಮಗಳ ಪ್ರಕಾರ, ಮನೆ ಮಾಲೀಕರ ಅನುಮತಿ ಇಲ್ಲದೆ ಬಾಡಿಗೆ ಮನೆಯನ್ನು ಮತ್ತೊಬ್ಬರಿಗೆ ಬಾಡಿಗೆಗೆ ನೀಡಿದರೆ, ಈಗಿನ ₹5,000 ದಂಡವನ್ನು ₹50,000ಕ್ಕೆ ಹೆಚ್ಚಿಸಲಾಗುವುದು. ಜೊತೆಗೆ, ಅನಧಿಕೃತವಾಗಿ ಕೆಲಸ ಮಾಡುವ ಬ್ರೋಕರ್‌ಗಳಿಗೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ನೋಂದಣಿ ಮಾಡಿಸದಿದ್ದರೆ ದಿನಕ್ಕೆ ₹25,000 ದಂಡ ವಿಧಿಸುವ ಪ್ರಸ್ತಾವನೆ ಮಾಡಲಾಗಿದೆ. ಪುನರಾವರ್ತನೆ ಮಾಡಿದರೆ ಹೆಚ್ಚುವರಿ ₹20,000 ದಂಡವೂ ವಿಧಿಸಲಾಗುವುದು. ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಾಡಿಗೆ ಒಪ್ಪಂದಗಳು ಅೌಪಚಾರಿಕ ದಾಖಲೆಗಳಿಲ್ಲದೆ ನಡೆಯುವ ಕಾರಣದಿಂದ, ಬಾಡಿಗೆ ಒಪ್ಪಂದಗಳನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡುವ ವ್ಯವಸ್ಥೆ ಕಡ್ಡಾಯಗೊಳಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರ ಹೊಸ ಪೋರ್ಟಲ್ ಅನ್ನು ಆರಂಭಿಸಿದೆ, ಇದು ವಿವಾದಗಳು ತಡೆಗಟ್ಟುವ ಮತ್ತು ದಾಖಲೆ ಪಾರದರ್ಶಕತೆಯನ್ನು ಖಚಿತಪಡಿಸುವಲ್ಲಿ ಸಹಾಯಕವಾಗಲಿದೆ.

ಇದಲ್ಲದೆ, ಮನೆ ಮಾಲೀಕರು ಬಾಡಿಗೆದಾರರನ್ನು ಮನೆಯಿಂದ ಹೊರಹಾಕುವ ಮೊದಲು ಸೂಕ್ತ ನೋಟಿಸ್ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಕಡಿಮೆ ಬಾಡಿಗೆಯ ಮನೆಗಳನ್ನು ಒದಗಿಸುವವರಿಗೆ ತೆರಿಗೆ ವಿನಾಯಿತಿ ಮತ್ತು ಸಬ್ಸಿಡಿ ನೀಡುವ ಬಗ್ಗೆ ಸರ್ಕಾರ ಚಿಂತಿಸುತ್ತಿದ್ದು, ಇದರಿಂದ ಸಾಮಾನ್ಯ ಜನರಿಗೆ ಸಸಲು ಮನೆಗಳ ಲಭ್ಯತೆ ಹೆಚ್ಚುವ ನಿರೀಕ್ಷೆ ಇದೆ. ಬಾಡಿಗೆ ವಿವಾದಗಳನ್ನು ಬೇಗನೇ ಇತ್ಯರ್ಥಪಡಿಸಲು ಫಾಸ್ಟ್ ಟ್ರ್ಯಾಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ಜೊತೆಗೆ, ಮನೆ ಮಾಲೀಕರು ಮತ್ತು ಬಾಡಿಗೆದಾರರಿಗೆ ನ್ಯಾಯ ದೊರೆಕುವಲ್ಲಿ ವಿಳಂಬವಾಗುವುದಿಲ್ಲ. ಒಟ್ಟಿನಲ್ಲಿ, ಬಾಡಿಗೆ ವ್ಯವಹಾರವನ್ನು ಕಾನೂನುಬದ್ಧ, ಪಾರದರ್ಶಕ ಮತ್ತು ಶಿಸ್ತುಬದ್ಧಗೊಳಿಸುವುದೇ ಈ ತಿದ್ದುಪಡಿಯ ಮುಖ್ಯ ಗುರಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment