ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸಿಎಂ ಕುರ್ಚಿ ವಿಚಾರ ಕೇವಲ ಮಾಧ್ಯಮ ಸೃಷ್ಟಿ, ಪಕ್ಷದೊಳಗೆ ಯಾವುದೇ ಗೊಂದಲ ಇಲ್ಲ: ಡಿ.ಕೆ. ಶಿವಕುಮಾರ್

On: December 22, 2025 10:33 PM
Follow Us:

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ದಿನೇದಿನೇ ತೀವ್ರಗೊಳ್ಳುತ್ತಿರುವ ನಡುವೆಯೇ, ಕಾಂಗ್ರೆಸ್ ಪಕ್ಷದೊಳಗೆ ಯಾವುದೇ ಗೊಂದಲವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. “ನಮ್ಮಲ್ಲಿ ಬಗೆಹರಿಸಿಕೊಳ್ಳುವಂಥದ್ದು ಏನೂ ಇಲ್ಲ. ಸಮಸ್ಯೆಯೇ ಇಲ್ಲದಿದ್ದಾಗ ಪರಿಹಾರದ ಪ್ರಶ್ನೆ ಎಲ್ಲಿ ಬರುತ್ತದೆ?” ಎಂದು ಅವರು ಸೋಮವಾರ ಮಾಧ್ಯಮಗಳಿಗೆ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ಯಾವುದೇ ಗೊಂದಲ ಸೃಷ್ಟಿಸಿಲ್ಲ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ವಿಚಾರ ಸಂಪೂರ್ಣವಾಗಿ “ಮಾಧ್ಯಮಗಳ ಸೃಷ್ಟಿ” ಎಂದರು.
“ನಾವು ನಮ್ಮ ಮಾತುಗಳನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಖರ್ಗೆ ಅವರು ಹೇಳಬೇಕಾದ್ದನ್ನು ಹೇಳಿದ್ದಾರೆ. ಇದರ ಹೊರತಾಗಿ ಪಕ್ಷದೊಳಗೆ ಯಾವುದೇ ಆಂತರಿಕ ಸಮಸ್ಯೆಗಳಿಲ್ಲ” ಎಂದು ತಿಳಿಸಿದರು.

ಮಾಧ್ಯಮಗಳು ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಅತಿಯಾದ ಚರ್ಚೆ ನಡೆಸಬಾರದು ಎಂಬ ಸಲಹೆಯನ್ನೂ ಡಿಸಿಎಂ ನೀಡಿದರು. ಇದೇ ವೇಳೆ, ಮುಖ್ಯಮಂತ್ರಿ ಬದಲಾವಣೆ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ, ಎಲ್ಲರೂ ಅದಕ್ಕೆ ಬದ್ಧರಾಗಿರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವುದನ್ನೂ ಅವರು ಉಲ್ಲೇಖಿಸಿದರು.

ನಾಯಕತ್ವ ಗೊಂದಲದ ವಿಚಾರದಲ್ಲಿ ಹೈಕಮಾಂಡ್ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ತಾಕೀತು ಮಾಡಿದ್ದು, ಸ್ಥಳೀಯ ನಾಯಕರು ಆಂತರಿಕ ವಿಚಾರಗಳನ್ನು ತಾವೇ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದರು.

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿ.ಕೆ. ಶಿವಕುಮಾರ್, “ಹುಟ್ಟಿದ ಸೂರ್ಯ ಮುಳುಗಲೇಬೇಕು. ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದುಹಾಕುವ ಮೂಲಕ ಬಿಜೆಪಿ ಸರ್ಕಾರ ತನ್ನ ಅಂತ್ಯದತ್ತ ಸಾಗುತ್ತಿದೆ” ಎಂದು ಹೇಳಿದರು. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಕೈ ಹಾಕುವ ಧೈರ್ಯ ಬಿಜೆಪಿ ಮಾಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದರು.

ಮನರೇಗಾ ಯೋಜನೆಯ ಹೆಸರನ್ನು ಬದಲಾಯಿಸುವ ಪ್ರಯತ್ನವು ಬಡವರ ಬದುಕಿನ ಮೇಲೆ ನೇರ ದಾಳಿ ನಡೆಸುವಂತದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ ಡಿಸಿಎಂ, ಇದು ದೇಶದ ಬಡಜನತೆಗೆ ಎಸಗುತ್ತಿರುವ ದೊಡ್ಡ ದ್ರೋಹ ಎಂದರು. “ಬಡವರಿಗೆ ನೀಡಿದ ಯೋಜನೆಯ ಕುತ್ತಿಗೆ ಹಿಸುಕುವ ಕೆಲಸ ನಡೆಯುತ್ತಿದೆ. ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ” ಎಂದು ಕಿಡಿಕಾರಿದರು.

ಮನರೇಗಾ ಹೆಸರು ಬದಲಾವಣೆ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಯನ್ನು ಪಕ್ಷದ 27ರಂದು ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಿದ ಅವರು, “ಹೆಸರು ಬದಲಾವಣೆ ಹಿಂಪಡೆಯುವ ತನಕ ಪಂಚಾಯಿತಿ ಮಟ್ಟದಿಂದ ಪಾರ್ಲಿಮೆಂಟ್‌ವರೆಗೆ ಹೋರಾಟ ನಡೆಯಲಿದೆ” ಎಂದು ಎಚ್ಚರಿಕೆ ನೀಡಿದರು.

K.M.Sathish Gowda

Join WhatsApp

Join Now

Facebook

Join Now

Leave a Comment