ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಫೆಬ್ರವರಿ 1ರಂದು ಕೇಂದ್ರದ ಸಾಮಾನ್ಯ ಬಜೆಟ್ ಮಂಡಿಸುವ ಪದ್ಧತಿಯನ್ನು ಅನುಸರಿಸುತ್ತಿದೆ. ಈ ಬಾರಿ ಫೆಬ್ರವರಿ 1 ಭಾನುವಾರಕ್ಕೆ ಬಿದ್ದಿರುವುದರಿಂದ, ಭಾನುವಾರ ಬಜೆಟ್ ಮಂಡನೆಯಾಗುತ್ತದೆಯೇ ಎಂಬ ಕುತೂಹಲ ಉಂಟಾಗಿತ್ತು. ಆದರೆ, ಸರ್ಕಾರ ಯಾವುದೇ ವೇಳಾಪಟ್ಟಿ ಬದಲಾವಣೆ ಮಾಡದೇ ಭಾನುವಾರವೇ ಬಜೆಟ್ ಮಂಡಿಸಲು ನಿರ್ಧರಿಸಿದೆ.
ಕೇಂದ್ರ ಬಜೆಟ್ 2026ನ್ನು ಫೆಬ್ರವರಿ 1ರಂದು ಭಾನುವಾರದಂದೇ ಮಂಡಿಸುವ ನಿರೀಕ್ಷೆಯಿದೆ. ಸಂಸತ್ತಿನ ಬಜೆಟ್ ಅಧಿವೇಶನದ ದಿನಾಂಕಗಳನ್ನು ಇನ್ನೂ ಅಧಿಕೃತವಾಗಿ ಘೋಷಿಸದಿದ್ದರೂ, ನಿಗದಿತ ದಿನಾಂಕದಲ್ಲೇ ಬಜೆಟ್ ಮಂಡನೆಯಾಗಲಿದೆ ಎಂಬುದು ಬಹುತೇಕ ಖಚಿತವಾಗಿದೆ. ಈ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.
ನಿರ್ಮಲಾ ಸೀತಾರಾಮನ್ ಸತತವಾಗಿ 9ನೇ ಬಾರಿ ಕೇಂದ್ರ ಬಜೆಟ್ ಮಂಡಿಸಲಿರುವುದು ವಿಶೇಷ. ಇದರಿಂದಾಗಿ ಅವರು ಸತತ ಒಂಭತ್ತು ಬಜೆಟ್ಗಳನ್ನು ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಜೊತೆಗೆ, ಇದು ಸ್ವಾತಂತ್ರ್ಯ ನಂತರ ಮಂಡನೆಯಾಗುತ್ತಿರುವ 80ನೇ ಕೇಂದ್ರ ಬಜೆಟ್ವಾಗಲಿದೆ.
ವಾರಾಂತ್ಯದಲ್ಲಿ ಬಜೆಟ್ ಮಂಡಿಸುವುದು ಹೊಸದೇನೂ ಅಲ್ಲ. 2025ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ್ದರು. ಇದಕ್ಕೂ ಮುನ್ನ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2015 ಮತ್ತು 2016ರಲ್ಲಿ ಫೆಬ್ರವರಿ 28ರಂದು ಶನಿವಾರವೇ ಕೇಂದ್ರ ಬಜೆಟ್ ಮಂಡಿಸಿದ್ದರು.
ಸತತವಾಗಿ ಅನೇಕ ಬಜೆಟ್ಗಳನ್ನು ಮಂಡಿಸಿದ ಹಣಕಾಸು ಸಚಿವರ ಪೈಕಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಪ್ರಮುಖರಾಗಿದ್ದು, ಅವರು ಎರಡು ವಿಭಿನ್ನ ಅವಧಿಗಳಲ್ಲಿ ಒಟ್ಟು 10 ಬಜೆಟ್ಗಳನ್ನು ಮಂಡಿಸಿದ್ದಾರೆ. ಇತ್ತೀಚಿನ ಕಾಲದಲ್ಲಿ ಪಿ. ಚಿದಂಬರಂ ಅವರು ಒಟ್ಟು 9 ಬಜೆಟ್ಗಳನ್ನು, ಪ್ರಣಬ್ ಮುಖರ್ಜಿ ಅವರು ವಿವಿಧ ಪ್ರಧಾನ ಮಂತ್ರಿಗಳ ಅವಧಿಯಲ್ಲಿ 8 ಬಜೆಟ್ಗಳನ್ನು ಮಂಡಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ, ನಿರ್ಮಲಾ ಸೀತಾರಾಮನ್ ಅವರನ್ನು ಭಾರತದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆಯಾಗಿ ನೇಮಕ ಮಾಡಲಾಯಿತು. 2024ರಲ್ಲಿ ಮೋದಿ ಸರ್ಕಾರ ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರವೂ ಅವರು ಹಣಕಾಸು ಖಾತೆಯನ್ನು ಮುಂದುವರೆಸುತ್ತಿದ್ದಾರೆ.
ವಾರ್ಷಿಕ ಬಜೆಟ್ ಮಂಡನೆಗೆ ಅಗತ್ಯವಿರುವ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಹೊಸ ಹಣಕಾಸು ವರ್ಷದ ಆರಂಭಕ್ಕೂ ಮುನ್ನ ಸಂಸತ್ತಿನ ಸಮಗ್ರ ಪರಿಶೀಲನೆ ಮತ್ತು ಅನುಷ್ಠಾನಕ್ಕೆ ಸಾಕಷ್ಟು ಸಮಯ ಸಿಗುವಂತೆ ಫೆಬ್ರವರಿ 1ರ ದಿನಾಂಕವನ್ನು ಸರ್ಕಾರ ಕಾಯ್ದುಕೊಂಡಿದೆ. ಸಂಸತ್ತಿನ ಬಜೆಟ್ ಅಧಿವೇಶನದ ದಿನಾಂಕಗಳ ಕುರಿತು ಅಧಿಕೃತ ಘೋಷಣೆ ಇನ್ನಷ್ಟೇ ಬಾಕಿಯಿದೆ.











