ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಪೊಲೀಸ್ ಸಿಬ್ಬಂದಿಗೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಕಡ್ಡಾಯ ರಜೆ: ರಾಜ್ಯ ಸರ್ಕಾರದ ಮಹತ್ವದ ಸೂಚನೆ

On: January 8, 2026 8:28 AM
Follow Us:

ಬೆಂಗಳೂರು: ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ವೈಯಕ್ತಿಕ ಜೀವನಕ್ಕೆ ಗೌರವ ನೀಡುವ ಮಹತ್ವದ ಹೆಜ್ಜೆಯಾಗಿ, ಇನ್ನುಮುಂದೆ ಪೊಲೀಸ್ ಸಿಬ್ಬಂದಿಯ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ದಿನ ಕಡ್ಡಾಯ ರಜೆ ನೀಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಈ ಸಂಬಂಧ ರಾಜ್ಯ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು, ಪೊಲೀಸ್ ಮಹಾ ನಿರ್ದೇಶಕರು (DGP) ಹಾಗೂ ಆರಕ್ಷಕ ಮಹಾ ನಿರೀಕ್ಷಕರಿಗೆ (IGP) ಅಧಿಕೃತ ಪತ್ರ ಬರೆದು, ನಿಯಮಾನುಸಾರ ಮುಂದಿನ ಕ್ರಮ ವಹಿಸುವಂತೆ ನಿರ್ದೇಶಿಸಿದ್ದಾರೆ.

ಈ ಸೂಚನೆಯ ಹಿಂದೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ನಾಗರಿಕ ಸಮಾಜದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರ ಮನವಿ ಪ್ರಮುಖವಾಗಿದ್ದು, ಅವರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್‌ನಿಂದ ಎಎಸ್‌ಐ ದರ್ಜೆಯವರೆಗಿನ ಸಿಬ್ಬಂದಿಗೆ, ಅವರ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನ ಕಡ್ಡಾಯ ರಜೆ ನೀಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂಬುದನ್ನು ಸರ್ಕಾರ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.

ಪೊಲೀಸ್ ಸಿಬ್ಬಂದಿ ದಿನನಿತ್ಯ ಒತ್ತಡ, ಅಪಾಯ, ಸಮಯದ ಮಿತಿ ಇಲ್ಲದ ಕರ್ತವ್ಯ, ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಾರ್ವಜನಿಕ ಸೇವೆಯ ಒತ್ತಡದಲ್ಲಿ ತಮ್ಮ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗದೇ, ವೈಯಕ್ತಿಕ ಸಂತೋಷದಿಂದ ದೂರ ಉಳಿಯುವ ಸ್ಥಿತಿಯೂ ಹಲವರಲ್ಲಿ ಕಂಡುಬರುತ್ತಿದೆ.

ಇಂತಹ ಸಂದರ್ಭದಲ್ಲಿ, ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವದಂತಹ ವಿಶೇಷ ದಿನಗಳಲ್ಲಿ ರಜೆ ನೀಡುವುದರಿಂದ, ಪೊಲೀಸ್ ಸಿಬ್ಬಂದಿಗೆ ಮಾನಸಿಕ ನೆಮ್ಮದಿ ದೊರಕುವ ಜೊತೆಗೆ, ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಲು ಅವಕಾಶ ಸಿಗಲಿದೆ. ಇದು ಅವರ ಕಾರ್ಯಕ್ಷಮತೆ, ಸೇವಾ ಮನೋಭಾವ ಹಾಗೂ ಕರ್ತವ್ಯದ ಮೇಲಿನ ಬದ್ಧತೆಯನ್ನು ಇನ್ನಷ್ಟು ಬಲಪಡಿಸುವಲ್ಲಿ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರಾಜ್ಯ ಸರ್ಕಾರದ ಈ ಸೂಚನೆ ಜಾರಿಯಾದಲ್ಲಿ, ಪೊಲೀಸ್ ಸಿಬ್ಬಂದಿಯ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಬದುಕಿನ ನಡುವಿನ ಸಮತೋಲನವನ್ನು ಸಾಧಿಸಲು ಸಹಾಯವಾಗಲಿದ್ದು, ಮಾನವೀಯ ದೃಷ್ಟಿಕೋನದ ಆಡಳಿತಕ್ಕೆ ಉತ್ತಮ ಉದಾಹರಣೆಯಾಗಿ ಪರಿಗಣಿಸಲಾಗುತ್ತಿದೆ.

ಈ ಕುರಿತು ಈಗ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾ ನಿರೀಕ್ಷಕರು ನಿಯಮಾನುಸಾರ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment