ತನಿಖಾ ಸಂಸ್ಥೆಗಳಿಗೆ ಅಡ್ಡಿ, ಅಧಿಕಾರ ದುರ್ಬಳಕೆ ಮತ್ತು ‘ನಾನೇ ಎಲ್ಲವೂ’ ಎನ್ನುವ ಆಡಳಿತ ಶೈಲಿಗೆ ಸುಪ್ರೀಂ ಕೋರ್ಟ್ನಿಂದ ಮಮತಾ ಬ್ಯಾನರ್ಜಿಗೆ ತೀವ್ರ ಛೀಮಾರಿ
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಅನುಸರಿಸುತ್ತಿರುವ ಆಡಳಿತ ಶೈಲಿಗೆ, ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯವೈಖರಿಗೆ ಅಡ್ಡಿಪಡಿಸುವ ಕ್ರಮಗಳಿಗೆ ಹಾಗೂ ಸಂವಿಧಾನಾತ್ಮಕ ಮಿತಿಗಳನ್ನು ಮೀರಿ ನಡೆಯುತ್ತಿರುವ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (I-PAC) ಸಂಬಂಧಿಸಿದ ಶೋಧ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್ಗಳಿಗೆ ತಡೆ ನೀಡುವ ಮೂಲಕ, ಉನ್ನತ ನ್ಯಾಯಾಲಯ ರಾಜ್ಯ ಸರ್ಕಾರದ ಕ್ರಮಗಳಿಗೆ ಕಠಿಣ ಸಂದೇಶ ರವಾನಿಸಿದೆ.
ಇದು ಕೇವಲ ಒಂದು ಪ್ರಕರಣಕ್ಕೆ ಸೀಮಿತವಾದ ವಿಚಾರವಲ್ಲ; ಬದಲಾಗಿ, “ನಾನೇ ಎಲ್ಲವೂ, ನನ್ನಿಂದಲೇ ಎಲ್ಲವೂ ನಡೆಯಬೇಕು” ಎಂಬ ಮಮತಾ ಬ್ಯಾನರ್ಜಿ ಅವರ ಆಡಳಿತ ಧೋರಣೆಯ ವಿರುದ್ಧದ ಗಂಭೀರ ಎಚ್ಚರಿಕೆಯೆಂದೇ ರಾಜಕೀಯ ಮತ್ತು ಕಾನೂನು ವಲಯಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.

ತನಿಖೆಗೆ ಅಡ್ಡಿ – ಸಂವಿಧಾನಾತ್ಮಕ ಮಿತಿಗಳ ಉಲ್ಲಂಘನೆ?
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರವನ್ನು ನಿರ್ವಹಿಸುತ್ತಿರುವ ಐ-ಪಿಎಸಿ ಸಂಸ್ಥೆಗೆ ಸಂಬಂಧಿಸಿದ ಆವರಣಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ನಡೆಸಿದ ಬಳಿಕ, ರಾಜ್ಯ ಸರ್ಕಾರ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ನಡುವೆ ನೇರ ಸಂಘರ್ಷ ಉಂಟಾಯಿತು. ಈ ಹಿನ್ನೆಲೆಯಲ್ಲಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆಯ ದಿಕ್ಕೇ ತಿರುಗಿಸುವ ಪ್ರಯತ್ನ ನಡೆದಿದೆ ಎಂಬ ಆರೋಪಗಳು ಕೇಳಿಬಂದವು.
ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಶಾಂತ್ ಮಿಶ್ರಾ ಮತ್ತು ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರ ಪೀಠ, “ಕೇಂದ್ರ ಸಂಸ್ಥೆಗಳು ಗಂಭೀರ ಅಪರಾಧಗಳ ತನಿಖೆಯನ್ನು ಪ್ರಾಮಾಣಿಕವಾಗಿ ನಡೆಸುತ್ತಿರುವ ಸಂದರ್ಭದಲ್ಲಿ, ರಾಜಕೀಯ ಅಥವಾ ಆಡಳಿತಾತ್ಮಕ ಒತ್ತಡಗಳಿಂದ ಅವುಗಳನ್ನು ತಡೆಯಬಹುದೇ?” ಎಂಬ ಮೂಲಭೂತ ಪ್ರಶ್ನೆಯನ್ನು ಎತ್ತಿದೆ. ಈ ಪ್ರಶ್ನೆಯಲ್ಲೇ ರಾಜ್ಯ ಸರ್ಕಾರದ ಕಾರ್ಯವೈಖರಿಯ ಮೇಲೆ ಸುಪ್ರೀಂ ಕೋರ್ಟ್ ಎಷ್ಟರ ಮಟ್ಟಿಗೆ ಅಸಮಾಧಾನಗೊಂಡಿದೆ ಎಂಬುದು
ಪೊಲೀಸ್ ವ್ಯವಸ್ಥೆಯ ರಾಜಕೀಯೀಕರಣ?
ಈ ಪ್ರಕರಣದಲ್ಲಿ ಬಂಗಾಳದ ಡಿಜಿಪಿ ರಾಜೀವ್ ಕುಮಾರ್ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ವರ್ಮಾ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳ ಪಾತ್ರದ ಕುರಿತಾಗಿಯೂ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಕೇಂದ್ರ ತನಿಖಾ ಸಂಸ್ಥೆಗಳು, ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ತನಿಖೆಗೆ ಸಹಕರಿಸುವ ಬದಲು, ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪದೊಂದಿಗೆ ಅಮಾನತು ಕೋರಿ ಅರ್ಜಿ ಸಲ್ಲಿಸಿವೆ.
ಇದು ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ವ್ಯವಸ್ಥೆ ಕಾನೂನಿನ ಪಾಲಕವಾಗಿರುವುದಕ್ಕಿಂತ, ಆಡಳಿತಾರೂಢ ಪಕ್ಷದ ರಕ್ಷಣಾ ಕವಚವಾಗಿ ಪರಿಣಮಿಸಿದೆ ಎಂಬ ಆರೋಪಕ್ಕೆ ಮತ್ತಷ್ಟು ಬಲ ನೀಡಿದೆ. ಸಂವಿಧಾನದಲ್ಲಿ ನಿರ್ದಿಷ್ಟಗೊಂಡಿರುವ “ಕಾನೂನಿನ ಮುಂದೆ ಎಲ್ಲರೂ ಸಮಾನ” ಎಂಬ ತತ್ವವೇ ಇಲ್ಲಿ ಪ್ರಶ್ನಾರ್ಥಕವಾಗಿದೆ.

‘ಜನಸಮೂಹ ಆಡಳಿತ’ ಮತ್ತು ನ್ಯಾಯಾಂಗದ ಅವಮಾನ
ಕೋಲ್ಕತ್ತಾ ಹೈಕೋರ್ಟ್ನಲ್ಲಿ ನಡೆದ ಅವ್ಯವಸ್ಥೆಗಳ ಕುರಿತು ಸುಪ್ರೀಂ ಕೋರ್ಟ್ “ತೀವ್ರ ಅಸಮಾಧಾನ” ವ್ಯಕ್ತಪಡಿಸಿದ್ದು, ನ್ಯಾಯಾಲಯದ ವಾತಾವರಣವೇ ಗೊಂದಲದ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಕಟುವಾಗಿ ಟೀಕಿಸಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇದನ್ನು “ಜನಸಮೂಹ ಆಡಳಿತ” ಎಂದು ವರ್ಣಿಸಿದ್ದು, ನ್ಯಾಯಾಲಯವನ್ನೇ ರಾಜಕೀಯ ರಣರಂಗವನ್ನಾಗಿ ಮಾಡುವ ಪ್ರಯತ್ನ ನಡೆದಿದೆ ಎಂಬ ಆರೋಪ ಮಾಡಿದ್ದಾರೆ.
ಹೈಕೋರ್ಟ್ ಅನ್ನು “ಜಂತರ್ ಮಂತರ್” ಆಗಿ ಪರಿವರ್ತಿಸಲಾಗಿದೆಯೇ ಎಂಬ ಸುಪ್ರೀಂ ಕೋರ್ಟ್ನ ಪ್ರಶ್ನೆಯೇ, ನ್ಯಾಯಾಂಗ ವ್ಯವಸ್ಥೆಗೆ ಎಷ್ಟರ ಮಟ್ಟಿಗೆ ಅವಮಾನವಾಗುತ್ತಿದೆ ಎಂಬುದನ್ನು ತೋರಿಸುತ್ತದೆ.
‘ನಾನು ಇದ್ದರೆ ಸಾಕು’ ಎನ್ನುವ ರಾಜಕೀಯ ಮನೋಭಾವ
ಈ ಪ್ರಕರಣದ ಮತ್ತೊಂದು ಆತಂಕಕಾರಿ ಅಂಶವೆಂದರೆ, ಮುಖ್ಯಮಂತ್ರಿ ಸ್ವತಃ ತನಿಖಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪ. ಸಾಕ್ಷ್ಯಗಳನ್ನು ಸ್ಥಳಾಂತರಿಸುವುದು, ತನಿಖಾಧಿಕಾರಿಗಳ ಮೇಲೆ ಒತ್ತಡ ತರುವುದು – ಇವುಗಳು ಕಾನೂನು ಪ್ರಭುತ್ವಕ್ಕೆ ವಿರುದ್ಧವಾದ ನಡೆಗಳಾಗಿವೆ.
ರಾಜ್ಯ ಮುಖ್ಯಮಂತ್ರಿಯೊಬ್ಬರು ತಮ್ಮನ್ನು ಸಂವಿಧಾನಕ್ಕಿಂತ ಮೇಲಿರುವ ಶಕ್ತಿಯಂತೆ ಕಾಣಲು ಆರಂಭಿಸಿದರೆ, ಅದು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೇ ಸವಾಲಾಗುತ್ತದೆ ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ತನ್ನ ಛೀಮಾರಿಯ ಮೂಲಕ ಸ್ಪಷ್ಟವಾಗಿ ನೀಡಿದೆ.
ಅಕ್ರಮ ನುಸುಳುಕೊರರು ಮತ್ತು ರಾಜಕೀಯ ಸಂರಕ್ಷಣೆ,.?
ಪಶ್ಚಿಮ ಬಂಗಾಳದಲ್ಲಿ ಅಕ್ರಮ ನುಸುಳುಕೊರರು, ಕಳ್ಳ ಸಾಗಣೆ, ಹಣದ ಅಕ್ರಮ ವರ್ಗಾವಣೆ ಪ್ರಕರಣಗಳು ವರ್ಷಗಳಿಂದಲೇ ಚರ್ಚೆಯಲ್ಲಿವೆ. ಇಂತಹ ಸಂದರ್ಭಗಳಲ್ಲಿ, ತನಿಖಾ ಸಂಸ್ಥೆಗಳ ಕಾರ್ಯಕ್ಕೆ ರಾಜ್ಯ ಸರ್ಕಾರವೇ ಅಡ್ಡಿಯಾಗುತ್ತಿದೆ ಎಂಬ ಆರೋಪಗಳು ಮಮತಾ ಬ್ಯಾನರ್ಜಿ ಆಡಳಿತದ ಮೇಲೆ ಮತ್ತೊಂದು ಕಪ್ಪು ಮಸುಕು ಎರಚಿವೆ. ರಾಜಕೀಯ ಲಾಭಕ್ಕಾಗಿ ಕಾನೂನನ್ನು ದುರ್ಬಳಕೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿದೆ.
ಸುಪ್ರೀಂ ಕೋರ್ಟ್ನ ಎಚ್ಚರಿಕೆ – ಮುಂದಿನ ವಿಚಾರಣೆ ಫೆಬ್ರವರಿ 3
ಈ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮುಂದೂಡಿರುವ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷವು ಸಂವಿಧಾನಾತ್ಮಕ ಬಿಕ್ಕಟ್ಟಾಗಿ ಪರಿಣಮಿಸಬಾರದೆಂದು ಎಚ್ಚರಿಸಿದೆ. ತನಿಖಾ ಸಂಸ್ಥೆಗಳ ಸ್ವತಂತ್ರ ಕಾರ್ಯವೈಖರಿಯನ್ನು ಗೌರವಿಸುವುದು ಪ್ರತಿಯೊಂದು ಸರ್ಕಾರದ ಕರ್ತವ್ಯ ಎಂಬುದನ್ನು ನ್ಯಾಯಾಲಯ ಪುನರುಚ್ಚರಿಸಿದೆ.
ಮಮತಾ ಬ್ಯಾನರ್ಜಿ ಅವರ ಆಡಳಿತವು “ಜನಪರ” ಎಂಬ ಬಿರುದಿನ ಹಿಂದೆ, ಅಧಿಕಾರ ಕೇಂದ್ರೀಕರಣ, ಸಂಸ್ಥೆಗಳ ದುರ್ಬಳಕೆ ಮತ್ತು ಕಾನೂನು ವ್ಯವಸ್ಥೆಯ ಮೇಲೆ ಅನಗತ್ಯ ಹಸ್ತಕ್ಷೇಪ ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ಈ ಸುಪ್ರೀಂ ಕೋರ್ಟ್ ಛೀಮಾರಿ ಬಲವಾದ ಹಿನ್ನೆಲೆ ಒದಗಿಸಿದೆ.
ಪ್ರಜಾಪ್ರಭುತ್ವದಲ್ಲಿ ಸರ್ಕಾರ ಶಕ್ತಿಶಾಲಿಯಾಗಿರಬಹುದು; ಆದರೆ ಸಂವಿಧಾನಕ್ಕಿಂತ ಮೇಲಲ್ಲ – ಈ ಸತ್ಯವನ್ನು ಪಶ್ಚಿಮ ಬಂಗಾಳದ ಆಡಳಿತ ಮರೆತರೆ, ನ್ಯಾಯಾಂಗ ಅದನ್ನು ನೆನಪಿಸುವುದರಲ್ಲಿ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವೇ ಈ ತೀರ್ಪಿನ ಸಾರ.











