ನ್ಯಾಮತಿ: ದಾವಣಗೆರೆ ಜಿಲ್ಲಾ ನ್ಯಾಮತಿ ತಾಲೂಕಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ತಾಲೂಕು ರಾಷ್ಟ್ರೀಯ ಬಸವದಳದ ಸಂಯುಕ್ತ ಆಶ್ರಯದಲ್ಲಿ ಜನವರಿ 25ರಂದು (ಭಾನುವಾರ) ಒಂದು ದಿನದ ಶರಣ ತತ್ವ ಕಮ್ಮಟವನ್ನು ಆಯೋಜಿಸಲಾಗಿದೆ. ಶರಣ ಸಂಸ್ಕೃತಿ, ಬಸವ ತತ್ವ ಹಾಗೂ ವಚನಾಧಾರಿತ ಚಿಂತನೆಗಳನ್ನು ಸಮಕಾಲೀನ ಸಂದರ್ಭದಲ್ಲಿ ವಿಶ್ಲೇಷಿಸುವ ಉದ್ದೇಶದಿಂದ ಈ ಕಮ್ಮಟ ಹಮ್ಮಿಕೊಳ್ಳಲಾಗಿದೆ.
ನಾಡಿನ ಹೆಸರಾಂತ ಅನುಭಾವಿಗಳು ಮತ್ತು ಶರಣ ತತ್ವ ಪ್ರಚಾರಕರು ವಿವಿಧ ಮಹತ್ವದ ವಿಷಯಗಳ ಮೇಲೆ ಗೋಷ್ಠಿಗಳಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಸಿಂಧನೂರಿನ ಶರಣ ಪಿ. ರುದ್ರಪ್ಪ ಅವರು “ಕಾಣುವ ದೃಷ್ಟಿ ಮಿತವೇ ಸೃಷ್ಟಿಯ ಬಗ್ಗೆ ಶರಣರ ನಿಲುವು”, “ಶರಣರ ಆರಾಧನಾ ಮಾರ್ಗ ಇತರೆ ಮಾರ್ಗಗಳಿಂದ ಹೇಗೆ ಭಿನ್ನ?” ಹಾಗೂ “ಬಸವಣ್ಣ ಯಾರು? – ವಚನಾಧಾರಿತ ವಿಶ್ಲೇಷಣೆ” ವಿಷಯಗಳ ಕುರಿತು ಮಾತನಾಡಲಿದ್ದಾರೆ. ಹುಬ್ಬಳ್ಳಿಯ ಶರಣ ತತ್ವ ಪ್ರಚಾರಕರಾದ ಶರಣ ಕರವೀರ ಶೆಟ್ಟರು ಇಷ್ಟಲಿಂಗ ಸ್ವರೂಪದ ಕುರಿತು ಪ್ರಸ್ತುತಪಡಿಸಲಿದ್ದು, ಹೊಸಪೇಟೆಯ ಬಸವ ಕೃಪಾನಿಧಿ ಆಶ್ರಮದ ಶರಣ ಬಸವಕಿರಣ ಅವರು ಆಧ್ಯಾತ್ಮ ಸಾಧನೆಯಲ್ಲಿ ಪಂಚಾಚಾರಗಳ ಅವಶ್ಯಕತೆ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ.

ಪ್ರತಿ ವಿಷಯಕ್ಕೆ 45 ನಿಮಿಷಗಳ ಕಾಲ ಪ್ರಸ್ತುತಿ ನಡೆಯಲಿದ್ದು, ಬಳಿಕ ಅದೇ ವಿಷಯದ ಮೇಲೆ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭಾಗವಹಿಸುವ ಆಸಕ್ತರಿಗೆ ವಿಚಾರ ವಿನಿಮಯ ಹಾಗೂ ಪ್ರಶ್ನೋತ್ತರಗಳ ಮೂಲಕ ಆಳವಾದ ಅರಿವು ದೊರೆಯಲಿದೆ.

ಬೆಳಿಗ್ಗೆ 9 ಗಂಟೆಗೆ ಕಮ್ಮಟದ ಉದ್ಘಾಟನಾ ಸಮಾರಂಭ ನಡೆಯಲಿದೆ. ಶರಣ ಎಸ್.ಆರ್. ಬಸವರಾಜಪ್ಪ ಅವರ ಅಧ್ಯಕ್ಷತೆಯಲ್ಲಿ, ದಾವಣಗೆರೆ ಜಿಲ್ಲಾ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಶರಣ ನಾರೇಶಪ್ಪ ಅವರ ಉಪಸ್ಥಿತಿಯಲ್ಲಿ, ದಾವಣಗೆರೆ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಶರಣ ಷಡಕ್ಷರಿ ಅಜ್ಜಂಪುರ ಶೆಟ್ರು ಅವರು ಕಮ್ಮಟವನ್ನು ಉದ್ಘಾಟಿಸಲಿದ್ದಾರೆ. ನ್ಯಾಮತಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಹೆಚ್ಚು ಮಹೇಶ್ವರಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ.
ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ನ್ಯಾಮತಿ ತಾಲೂಕು ರಾಷ್ಟ್ರೀಯ ಬಸವದಳದ ಅಧ್ಯಕ್ಷ ನಾಗರಾಜ್ ಸಿ.ವಿ. ಅವರ ಅಧ್ಯಕ್ಷತೆಯಲ್ಲಿ, ದಾವಣಗೆರೆ ಬಸವ ಬಳಗದ ಅಧ್ಯಕ್ಷರಾದ ಶರಣೆ ಭುವನೇಶ್ವರಿ ತಾಯಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಜಾತಿ, ಲಿಂಗ, ಪಂಥಭೇದವಿಲ್ಲದೆ ಶರಣ ತತ್ವದಲ್ಲಿ ಆಸಕ್ತಿಯಿರುವ ಎಲ್ಲರೂ ಈ ಕಮ್ಮಟದಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ತಮ್ಮ ಹೆಸರು ನೋಂದಾಯಿಸುವ ಮೂಲಕ ಭಾಗವಹಿಸುವುದನ್ನು ದೃಢೀಕರಿಸಿಕೊಳ್ಳುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: 9380174923











