ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

32 ವರ್ಷಗಳ ಬಳಿಕ ಶಿವಮೊಗ್ಗದಲ್ಲಿ ಭಕ್ತಿ ಸಂಭ್ರಮ: ಮೇ 17ರಂದು ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ

On: March 15, 2026 9:35 PM
Follow Us:

ಶಿವಮೊಗ್ಗ: ವೀರಶೈವ ಲಿಂಗಾಯತ ಸಮಾಜವು ಭಾರತದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು, ಅನಾದಿಕಾಲದಿಂದಲೂ ಸಮಾಜದ ಮಾರ್ಗದರ್ಶಕರಾಗಿ ಬೆಳಗುತ್ತಿರುವ ಶ್ರೀ ಜಗದ್ಗುರು ಪಂಚಾಚಾರ್ಯರ ಪರಂಪರೆ ಈ ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಬದುಕಿಗೆ ದಿಕ್ಕು ತೋರಿಸುತ್ತ ಬಂದಿದೆ. ಮಾನವಕುಲದ ಕಲ್ಯಾಣಕ್ಕಾಗಿ ತಪಸ್ಸು, ಉಪದೇಶ ಹಾಗೂ ಧರ್ಮಪ್ರಚಾರದಲ್ಲಿ ತೊಡಗಿಕೊಂಡು ಸಮಾಜವನ್ನು ಸತತವಾಗಿ ಪ್ರೇರೇಪಿಸುತ್ತಿರುವ ಈ ಮಹಾನ್ ಪರಂಪರೆಯನ್ನು ಸ್ಮರಿಸುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಭವ್ಯ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಭಾರತ ಧರ್ಮಭೂಮಿ. ಋಷಿಮುನಿಗಳು, ಆಚಾರ್ಯರು ಮತ್ತು ಸಂತಮಹಾಂತರು ಅವತರಿಸಿ ಮಾನವಕುಲಕ್ಕೆ ಧರ್ಮದ ದಾರಿ ತೋರಿದ ಪುಣ್ಯಭೂಮಿ. ಮಾನವ ಜೀವನದ ಉಜ್ವಲ ಭವಿಷ್ಯಕ್ಕೆ ಧರ್ಮದ ಆಚರಣೆ ಅತ್ಯಾವಶ್ಯಕ. ಸುಖ, ಶಾಂತಿ ಮತ್ತು ಸಮೃದ್ಧಿಯ ಬದುಕಿಗೆ ಧರ್ಮದ ಆದರ್ಶ ಮೌಲ್ಯಗಳನ್ನು ಪಾಲಿಸುವುದು ಅನಿವಾರ್ಯ. ಸತ್ಯ, ಶುದ್ಧತೆ ಮತ್ತು ಸನ್ಮಾರ್ಗದ ನಡೆ-ನುಡಿಗಳು ಮಾನವ ಜೀವನಕ್ಕೆ ನಿಜವಾದ ಬೆಲೆ ಮತ್ತು ನೆಲೆ ನೀಡುತ್ತವೆ.

ಲೋಕದಲ್ಲಿ ಹಲವು ಧರ್ಮಗಳಿವೆ, ವಿವಿಧ ಆಚರಣೆಗಳಿವೆ. ಆದರೆ ಎಲ್ಲ ಧರ್ಮಗಳ ಮೂಲ ಗುರಿಯೂ ಮಾನವ ಕಲ್ಯಾಣವೇ. ಸಕಲ ಜೀವಾತ್ಮರಿಗೂ ಸದಾ ಒಳಿತನ್ನೇ ಬಯಸುವ ಮಹೋನ್ನತ ಧರ್ಮವೇ ವೀರಶೈವ ಧರ್ಮ. ಪರಮಾತ್ಮನಾದ ಪರಶಿವನಿಗೆ ಐದು ಮುಖಗಳಿವೆ ಎಂಬ ನಂಬಿಕೆ ಇದೆ. ಆ ಪರಶಿವನ ಪಂಚಮುಖಗಳಿಂದ ಅವತರಿಸಿದ ಮಹಾನ್ ಗುರುಗಳು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು.

ಈ ಪಂಚಾಚಾರ್ಯರು ಭೂಮಂಡಲದಲ್ಲಿ ವೀರಶೈವ ಮತಸಿದ್ಧಾಂತವನ್ನು ಸ್ಥಾಪಿಸಿ, ಸಮಾಜಕ್ಕೆ ಧರ್ಮದ ದೀಪ ಬೆಳಗಿಸಿದ ಮಹನೀಯರು. ಅವರು ಸ್ಥಾಪಿಸಿದ ವೀರ ಸಿಂಹಾಸನ, ಸದ್ದರ್ಮ ಸಿಂಹಾಸನ, ವೈರಾಗ್ಯ ಸಿಂಹಾಸನ, ಸೂರ್ಯ ಸಿಂಹಾಸನ ಮತ್ತು ಜ್ಞಾನ ಸಿಂಹಾಸನಗಳು ಆಧ್ಯಾತ್ಮಿಕ ಜ್ಯೋತಿಯಾಗಿ ಲೋಕಕ್ಕೆ ಮಾರ್ಗದರ್ಶನ ನೀಡುತ್ತಿವೆ. ಈ ಮಹಾನ್ ಪರಂಪರೆಯ ಮೂಲಕ ಅನೇಕ ಜನರಿಗೆ ಧರ್ಮ, ಜ್ಞಾನ ಮತ್ತು ಆತ್ಮೋನ್ನತಿಯ ದಾರಿಯನ್ನು ತೋರಿಸಿ ಮಾನವಕುಲದ ಉದ್ಧಾರಕ್ಕೆ ಕಾರಣವಾದ ಮಹತ್ತಾದ ಇತಿಹಾಸ ವೀರಶೈವ ಸಂಪ್ರದಾಯಕ್ಕಿದೆ.

ಸುಮಾರು 32 ವರ್ಷಗಳ ಬಳಿಕ ನಡೆಯಲಿರುವ ಮಹತ್ವದ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಬೃಹತ್ ಧರ್ಮ ಜಾಗೃತಿ ಸಮಾರಂಭವನ್ನು ಅತ್ಯಂತ ವೈಭವ, ಸಡಗರ ಮತ್ತು ಭಕ್ತಿ ಸಂಭ್ರಮದಿಂದ ಆಚರಿಸಲು ಮಹೋತ್ಸವ ಸಮಿತಿ ನಿರ್ಧರಿಸಿದೆ.

ಈ ಮಹೋತ್ಸವವು 2026ರ ಮೇ 17ರಂದು ಭಾನುವಾರ ಶಿವಮೊಗ್ಗ ನಗರದ ಶ್ರೀ ಅಲ್ಲಮ ಪ್ರಭು ಮೈದಾನ (ಫ್ರೀಡಂ ಪಾರ್ಕ್)ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಅಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಉತ್ಸವವನ್ನು ಭಕ್ತಿಭಾವದಿಂದ ನೆರವೇರಿಸಲಾಗುತ್ತದೆ.

ಈ ಧಾರ್ಮಿಕ ಮಹೋತ್ಸವದ ಪ್ರಮುಖ ಉದ್ದೇಶ ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸುವುದು, ಯುವಪೀಳಿಗೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಪರಿಚಯಿಸುವುದು ಮತ್ತು ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಅರಿವಿಗೆ ತರುವುದಾಗಿದೆ. ಜೊತೆಗೆ ಸಮಾಜದಲ್ಲಿ ಸೌಹಾರ್ದತೆ, ಶಾಂತಿ ಹಾಗೂ ಸುಸಂಸ್ಕೃತ ಜೀವನ ಮೌಲ್ಯಗಳನ್ನು ಬಲಪಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುವುದು ಈ ಕಾರ್ಯಕ್ರಮದ ಆಶಯವಾಗಿದೆ.

ಈ ಭವ್ಯ ಸಮಾರಂಭದಲ್ಲಿ ನಾಡಿನ ವಿವಿಧ ಮಠಾಧೀಶರು, ಹರ-ಗುರು-ಚರಮೂರ್ತಿಗಳು, ಆಧ್ಯಾತ್ಮಿಕ ನಾಯಕರು, ಜನಪ್ರತಿನಿಧಿಗಳು, ಸಮಾಜದ ಗಣ್ಯರು ಹಾಗೂ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸಗಳು, ಆಶೀರ್ವಚನಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ.

ಇದೇ ಸಂದರ್ಭದಲ್ಲಿ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ, ನಮ್ಮ ನಾಡು ಕಂಡ ಧೀಮಂತ ನಾಯಕರು ಹಾಗೂ ವೀರಶೈವ ಲಿಂಗಾಯತ ಸಮಾಜದ ಹೆಮ್ಮೆಯ ವ್ಯಕ್ತಿತ್ವವಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಶೇಷ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಅವರ ಕೊಡುಗೆ ಅಪಾರವಾಗಿದ್ದು, ತಮ್ಮ ರಾಜಕೀಯ ಜೀವನದ ವಿವಿಧ ಹಂತಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅನೇಕ ಮಹತ್ವದ ಯೋಜನೆಗಳನ್ನು ತಂದಿದ್ದಾರೆ. ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ನಂತರ ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಅವರು ನೀಡಿದ ದಿಕ್ಕು ಜಿಲ್ಲೆಯ ಪ್ರಗತಿಗೆ ಹೊಸ ವೇಗವನ್ನು ನೀಡಿದೆ.

ಮೂಲಸೌಕರ್ಯ ವಿಸ್ತರಣೆ, ರಸ್ತೆ ಅಭಿವೃದ್ಧಿ, ಶಿಕ್ಷಣ, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಂಡು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯ ಚಿತ್ರಣವನ್ನು ಬದಲಾಯಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಅವರ ನಾಯಕತ್ವದಿಂದ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸ ಚೈತನ್ಯ ಮೂಡಿದ್ದು, ಜನರಲ್ಲಿ ವಿಶ್ವಾಸ ಮತ್ತು ಆಶಾವಾದ ಹೆಚ್ಚಾಗಿದೆ. ಸಮಾಜ ಮತ್ತು ನಾಡಿನ ಸೇವೆಗೆ ತಮ್ಮ ಬದುಕನ್ನೇ ಸಮರ್ಪಿಸಿದ ಇಂತಹ ಮಹನೀಯ ನಾಯಕರಿಗೆ ಈ ಧಾರ್ಮಿಕ ಮಹೋತ್ಸವದ ಸಂದರ್ಭದಲ್ಲಿ ಸಮಾಜದ ವತಿಯಿಂದ ಅಭಿನಂದನೆ ಸಲ್ಲಿಸುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಮಹೋತ್ಸವವನ್ನು ಯಶಸ್ವಿಗೊಳಿಸಲು ಸಮಾಜದ ಮುಖಂಡರು ಮತ್ತು ಮಹೋತ್ಸವ ಸಮಿತಿ ವ್ಯಾಪಕ ಸಿದ್ಧತೆಗಳನ್ನು ನಡೆಸುತ್ತಿದ್ದು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಸಮಾಜದ ಸಮಸ್ತ ಶ್ರದ್ಧಾಳುಗಳು, ಸಮಾಜ ಬಾಂಧವರು ಹಾಗೂ ಭಕ್ತರು ತನು-ಮನ-ಧನಪೂರ್ವಕವಾಗಿ ಸೇವೆ ಸಲ್ಲಿಸಿ ಈ ಮಹೋತ್ಸವವನ್ನು ಯಶಸ್ವಿಗೊಳಿಸಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಕೃಪಾಶೀರ್ವಾದಕ್ಕೆ ಪಾತ್ರರಾಗುವಂತೆ ಮಹೋತ್ಸವ ಸಮಿತಿ ಮನವಿ ಮಾಡಿದೆ.

ಮಹೋತ್ಸವ ಸಮಿತಿಯ ಪ್ರಮುಖರು:

  • ಬಿ.ವೈ. ರಾಘವೇಂದ್ರ – ಅಧ್ಯಕ್ಷರು ಹಾಗೂ ಸಂಸದರು, ಶಿವಮೊಗ್ಗ
  • ಆಯನೂರು ಮಂಜುನಾಥ – ಕಾರ್ಯಾಧ್ಯಕ್ಷರು, ಮಾಜಿ ಶಾಸಕರು
  • ಎಸ್. ರುದ್ರೇಗೌಡ – ಗೌರವಾಧ್ಯಕ್ಷರು, ಮಾಜಿ ಶಾಸಕರು
  • ಸಿ.ಎಸ್. ಷಡಾಕ್ಷರಿ – ಪ್ರಧಾನ ಕಾರ್ಯದರ್ಶಿ
  • ಬಳ್ಳೇಕೆರೆ ಸಂತೋಷ – ಪ್ರಧಾನ ಕಾರ್ಯದರ್ಶಿ
  • ಎಸ್.ಪಿ. ದಿನೇಶ್ – ಕೋಶಾಧ್ಯಕ್ಷರು

ಇವರೊಂದಿಗೆ ಉಪಾಧ್ಯಕ್ಷರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಸಮಾಜದ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಸೇರಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಸಮಿತಿ, ಶಿವಮೊಗ್ಗ ವತಿಯಿಂದ ಈ ಕಾರ್ಯಕ್ರಮವನ್ನು ಭವ್ಯವಾಗಿ ಆಯೋಜಿಸಲಾಗುತ್ತಿದೆ.

ಈ ಮಹೋತ್ಸವವು ಧಾರ್ಮಿಕ ಭಕ್ತಿ, ಸಾಂಸ್ಕೃತಿಕ ವೈಭವ ಮತ್ತು ಸಮಾಜದ ಏಕತೆಯನ್ನು ಪ್ರತಿಬಿಂಬಿಸುವ ಮಹತ್ವದ ಉತ್ಸವವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Leave a Comment