ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಯುಗದ ಹಾದಿ – ಯುಗಾದಿ”: ಸಂಸ್ಕೃತಿ, ಸಂಪ್ರದಾಯ ಮತ್ತು ಹೊಸ ಬದುಕಿನ ಆರಂಭ

On: March 18, 2026 6:11 PM
Follow Us:

ಯುಗದ ಹಾದಿ – ಯುಗಾದಿ

ಲೇಖಕ: ಸಂತೋಷ್ ಬಿದರಗಡ್ಡೆ

“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ, ಹೊಸ ವರುಷಕೆ ಹೊಸ ಹರುಷವನ್ನು ಹೊಸತು ಹೊಸತು ತರುತ್ತಿದೆ…” ಎಂಬ ಕವಿವಾಣಿಯಂತೆ ಮತ್ತೆ ಬಂದಿದೆ ಯುಗಾದಿ. ಭಾರತವೆಂದರೆ ಆಧ್ಯಾತ್ಮದ ಮೂಲಕ ದೇಶಪ್ರೇಮ ಬಿತ್ತಿದ ವೀರ ಧೀರರು, ಸಾಧು-ಸಂತರ ನಾಡು. ಇಡೀ ಜಗತ್ತು ಕತ್ತಲೆಯಲ್ಲಿದ್ದಾಗ ಬೆಳಕನ್ನು ಭಾರತದಿಂದ ಕಾಣಬಹುದು ಎಂದು ಜರ್ಮನಿಯ ಮ್ಯಾಕ್ಸ್ ಮುಲ್ಲರ್ ಹೇಳಿದ್ದಾರೆ ಎಂಬುದು ಅರ್ಥಪೂರ್ಣವಾಗಿದೆ. ಅದೇ ರೀತಿ ನಮ್ಮ ಯುಗಾದಿ ಹಬ್ಬವೂ ಹೊಸತನದ, ಹೊಸ ಹಾದಿಗೆ ನಾಂದಿ ಹಾಡುವ ಹಬ್ಬವಾಗಿದೆ.

ನಮ್ಮೂರಿನ ಹೊಳೆದಂಡೆ ಸುತ್ತ, ಹಿತ್ತಲಲ್ಲಿ ಬೆಳೆದಿದ್ದ ಮಾವಿನ ಮರದ ಚಿಗುರೆಲೆಗಳು, ಬೇವಿನ ಚಿಗುರು ಕಿತ್ತು ಬೇವು-ಬೆಲ್ಲ ತಿಂದ ನೆನಪುಗಳು ಇನ್ನೂ ಅಚ್ಚಳಿಯದೆ ಉಳಿದಿವೆ. ಬನ್ನಿ, ಯುಗಾದಿ ಹಬ್ಬದ ಮಹತ್ವವನ್ನು ತಿಳಿದು ಆಚರಿಸೋಣ.

ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದ’. ಈ ದಿನ ವರ್ಷಾರಂಭ ಮಾಡುವುದಕ್ಕೆ ನೈಸರ್ಗಿಕ, ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಕಾರಣಗಳಿವೆ. ಈ ಸಮಯದಲ್ಲಿ ಸೂರ್ಯನು ವಸಂತ ಸಂಪಾತದ ಮೇಲೆ ಬರುತ್ತಾನೆ ಮತ್ತು ವಸಂತ ಋತು ಪ್ರಾರಂಭವಾಗುತ್ತದೆ. “ಕುಸುಮಾಕರ ವಸಂತ ಋತು ನನ್ನ ವಿಭೂತಿ” ಎಂದು ಭಗವಂತನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಈ ಕಾಲದಲ್ಲಿ ಹವಾಮಾನ ಸಮಶೀತೋಷ್ಣ, ಉತ್ಸಾಹವರ್ಧಕ ಹಾಗೂ ಆನಂದಕರವಾಗಿರುತ್ತದೆ.

ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿದರೂ, ಪ್ರತಿಪದೆಯ ವೇಳೆಗೆ ಹೊಸ ಚಿಗುರುಗಳು ಮೂಡಿ ಪ್ರಕೃತಿ ಹೊಸ ರೂಪ ತಾಳುತ್ತದೆ. ಆದ್ದರಿಂದ ಯುಗಾದಿ ಹೊಸಚೇತನದ ಸಂಕೇತವಾಗಿದೆ. ಯುಗಾದಿಯಂದು ಆರಂಭವಾಗುವ ಕಾಲಚಕ್ರವು ಸೃಷ್ಟಿಯ ಆರಂಭವನ್ನು ಸೂಚಿಸುತ್ತದೆ. ಅದಕ್ಕೆ ವಿರುದ್ಧವಾಗಿ ಡಿಸೆಂಬರ್ 31ರ ಮಧ್ಯರಾತ್ರಿ ಆರಂಭವಾಗುವ ಹೊಸ ವರ್ಷ ಲಯದ ಸಂಕೇತವಾಗಿದೆ. ಯುಗಾದಿಯನ್ನು ಸೂರ್ಯೋದಯದ ತೇಜಸ್ವಿ ದಿನದೊಂದಿಗೆ ಹೋಲಿಸಬಹುದು.

ನಿಸರ್ಗದ ನಿಯಮದಂತೆ ನಡೆಯುವ ಆಚರಣೆಗಳು ಮನುಷ್ಯರಿಗೆ ಪೂರಕವಾಗುತ್ತವೆ. ಆದ್ದರಿಂದ ಪಾಶ್ಚಾತ್ಯ ಪದ್ಧತಿಯ ಜನವರಿ 1ರ ಬದಲು ಯುಗಾದಿಯನ್ನೇ ವರ್ಷಾರಂಭವಾಗಿ ಆಚರಿಸುವುದು ನಮ್ಮ ಹಿತದಲ್ಲಿದೆ.

ಈ ದಿನ ಶ್ರೀರಾಮನು ವಾಲಿಯನ್ನು ಸಂಹರಿಸಿದನೆಂದು ಹೇಳಲಾಗುತ್ತದೆ. ಇದೇ ದಿನದಿಂದ ಶಾಲಿವಾಹನ ಶಕವೂ ಪ್ರಾರಂಭವಾಯಿತು. ಶಾಲಿವಾಹನನು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೂ ಇದೇ ಎಂದು ಪರಂಪರೆ ತಿಳಿಸುತ್ತದೆ.

ಬ್ರಹ್ಮದೇವನು ಇದೇ ದಿನ ಸೃಷ್ಟಿಯನ್ನು ನಿರ್ಮಿಸಿದನೆಂಬ ನಂಬಿಕೆ ಇದೆ. ಅಂದರೆ ಸತ್ಯಯುಗವೂ ಇದೇ ದಿನ ಆರಂಭವಾಯಿತು. ಆದ್ದರಿಂದ ಈ ದಿನವನ್ನು ವರ್ಷಾರಂಭವಾಗಿ ಆಚರಿಸುತ್ತಾರೆ. ಯುಗಾದಿಯಂದು ತೇಜಸ್ಸು ಮತ್ತು ಚೈತನ್ಯ ಹೆಚ್ಚು ಪ್ರಮಾಣದಲ್ಲಿ ಪ್ರಕಾಶಿಸುತ್ತದೆ ಎಂಬ ನಂಬಿಕೆಯಿದೆ.

ಯುಗಾದಿ ಪಾಡ್ಯದಂದು ಬೆಳಗ್ಗೆ ಬೇಗ ಎದ್ದು ಅಭ್ಯಂಗ ಸ್ನಾನ ಮಾಡಬೇಕು. ನಂತರ ಮನೆಯ ಬಾಗಿಲುಗಳಿಗೆ ಮಾವಿನ ಎಲೆಯ ತೋರಣ ಕಟ್ಟುವುದು ಶುಭಕರ. ಕೆಂಪು ಹೂವುಗಳ ಅಲಂಕಾರವೂ ಮಾಡುತ್ತಾರೆ. ಇದು ಶುಭದ ಸಂಕೇತವಾಗಿದೆ.

ನಂತರ ದೇವರ ಪೂಜೆ ಮಾಡಿ, ಬ್ರಹ್ಮಧ್ವಜವನ್ನು ಏರಿಸುವುದು ವಿಶೇಷ. ಕೋಲಿನ ತುದಿಗೆ ಬಣ್ಣದ ಬಟ್ಟೆ, ಸಕ್ಕರೆಗಂಟು, ಬೇವಿನ ಎಲೆ, ಮಾವಿನ ಎಲೆಗಳನ್ನು ಕಟ್ಟಿಕೊಂಡು ಧ್ವಜವನ್ನು ನಿಲ್ಲಿಸುತ್ತಾರೆ. ಇದನ್ನು ‘ಧರ್ಮಧ್ವಜ’ ಎಂದೂ ಕರೆಯುತ್ತಾರೆ.

ಪಂಚಾಂಗ ಶ್ರವಣವು ಯುಗಾದಿಯ ಪ್ರಮುಖ ಭಾಗ. ಇದರ ಮೂಲಕ ಹೊಸ ವರ್ಷದ ಫಲವನ್ನು ತಿಳಿದುಕೊಳ್ಳುತ್ತಾರೆ. ನಂತರ ಬೇವು-ಬೆಲ್ಲವನ್ನು ಹಂಚುತ್ತಾರೆ. ಇದು ಜೀವನದಲ್ಲಿ ಸುಖ-ದುಃಖಗಳನ್ನು ಸಮವಾಗಿ ಸ್ವೀಕರಿಸುವ ಸಂಕೇತವಾಗಿದೆ.

ಗ್ರಾಮೀಣ ಭಾಗಗಳಲ್ಲಿ ಯುಗಾದಿಯಂದು ಮೊದಲ ಉಳುಮೆ ಮಾಡುವುದು ರೂಢಿ. ಎತ್ತುಗಳನ್ನು ಅಲಂಕರಿಸಿ ಹೊಲದಲ್ಲಿ ಕೆಲಸ ಪ್ರಾರಂಭಿಸುತ್ತಾರೆ. ಜೋಕಾಲಿ ಕಟ್ಟಿ ಮಕ್ಕಳು ಆಡುವುದು ಸಹ ವಿಶೇಷ ಸಂಪ್ರದಾಯವಾಗಿದೆ. ಜೊತೆಗೆ ಹೋಳಿಗೆ, ಶಾವಿಗೆ ಮುಂತಾದ ಸಾಂಪ್ರದಾಯಿಕ ಊಟಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ.

ಕೆಲವು ಭಾಗಗಳಲ್ಲಿ ಚಂದ್ರ ದರ್ಶನ ಮಾಡಿ, ದೇವರ ದರ್ಶನ, ಹಿರಿಯರಿಗೆ ನಮಸ್ಕಾರ ಮಾಡುವ ಪದ್ಧತಿ ಇದೆ. ಸ್ನೇಹಿತರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬವನ್ನು ಆಚರಿಸುತ್ತಾರೆ.

ಇಂದಿನ ಕಾಲದಲ್ಲಿ ಹಬ್ಬ ಎಂದರೆ ಕೇವಲ ಮನರಂಜನೆ ಎಂಬ ಭಾವನೆ ಹೆಚ್ಚುತ್ತಿದೆ. ಆದರೆ ನಮ್ಮ ಸಂಪ್ರದಾಯದಲ್ಲಿ ಹಬ್ಬವೆಂದರೆ ಚೈತನ್ಯ ಮತ್ತು ಆತ್ಮಶುದ್ಧಿಯ ದಿನ. ಆದ್ದರಿಂದ ಸಾತ್ತ್ವಿಕ ಆಹಾರ, ಸಾಂಸ್ಕೃತಿಕ ಆಚರಣೆಗಳ ಮೂಲಕ ಹಬ್ಬವನ್ನು ಆಚರಿಸಬೇಕು.

ಯುಗಾದಿ ನಮ್ಮ ಹೊಸ ಸಂವತ್ಸರದ ಹಬ್ಬ. ಈ ಹಬ್ಬದ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ ಉಳಿಸೋಣ. ಹೊಸ ಬಟ್ಟೆ, ಬೇವು-ಬೆಲ್ಲದೊಂದಿಗೆ ಸಂಭ್ರಮದಿಂದ ಯುಗಾದಿಯನ್ನು ಆಚರಿಸೋಣ.

K.M.Sathish Gowda

Join WhatsApp

Join Now

Facebook

Join Now

Read more

32 ವರ್ಷಗಳ ಬಳಿಕ ಶಿವಮೊಗ್ಗದಲ್ಲಿ ಭಕ್ತಿ ಸಂಭ್ರಮ: ಮೇ 17ರಂದು ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ

ಮಾರ್ಚ್‌ 19ರಂದು ಹುಬ್ಬಳ್ಳಿಯ ತಿರುಮಲಕೊಪ್ಪದಲ್ಲಿ ಧಾರ್ಮಿಕ ಮಹೋತ್ಸವ: ಜಗದ್ಗುರು ರೇಣುಕಾಚಾರ್ಯರ ರಥೋತ್ಸವಕ್ಕೆ ಸಿದ್ಧತೆ

ನ್ಯಾಮತಿಯಲ್ಲಿ ಶರಣರ ಸಂದೇಶಗಳ ನಡುವೆ ಮಹಿಳಾ ದಿನಾಚರಣೆ: ಅಕ್ಕಮಹಾದೇವಿಗೆ ಗೌರವ ನಮನ

ಶ್ರೀ ರಂಭಾಪುರಿ ಪೀಠದಲ್ಲಿ ಯುಗಮಾನೋತ್ಸವ ಸಂಭ್ರಮ: “ಮೂಲ ಸಂಸ್ಕೃತಿ ಮರೆತರೆ ಕಷ್ಟ ತಪ್ಪಿದ್ದಲ್ಲ” – ಡಾ. ವೀರಸೋಮೇಶ್ವರ ಜಗದ್ಗುರುಗಳು ಸಂದೇಶ

ಧರ್ಮ ವೃಕ್ಷದ ತಾಯಿಯಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು: ಶ್ರೀ ರಂಭಾಪುರಿ ಜಗದ್ಗುರು

ಎಲ್ಲಾ ಸಮಾಜಗಳಿಗೆ ನೆರಳು ಹಾಗೂ‌ ಆಶ್ರಯ ನೀಡುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ: ಬಿ.ವೈ ವಿಜಯೇಂದ್ರ

Leave a Comment