ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮಳೆ ಹಾನಿ ಪ್ರದೇಶಗಳಲ್ಲಿ ಸಚಿವ ಮಧು ಬಂಗಾರಪ್ಪ ಭೇಟಿ: ಜಾತಿ-ಪಕ್ಷ ನೋಡದೆ ಪರಿಹಾರ ನೀಡಲು ಅಧಿಕಾರಿಗಳಿಗೆ ಖಡಕ್ ಸೂಚನೆ

On: April 28, 2026 9:01 PM
Follow Us:

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಇಂದು ಜಿಲ್ಲೆಯ ಮಳೆ ಹಾಗೂ ಗಾಳಿ ಹಾನಿಗೆ ತುತ್ತಾದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೈಮರದಿಂದ ಅರಹತೋಳಲು, ವಡ್ಡರಹಟ್ಟಿ, ಮೈದೊಳಲು, ಮಲ್ಲಿಗೆನಹಳ್ಳಿ, ತಡಸ ಹಾಗೂ ಗುಡುಮಗಟ್ಟೆ ಪ್ರದೇಶಗಳಲ್ಲಿ ಸಂಚರಿಸಿದ ಸಚಿವರು, ತೊಂದರೆಗೆ ಒಳಗಾದ ಸಾರ್ವಜನಿಕರಿಗೆ ಸಾಂತ್ವನ ಹೇಳಿದರು.

ಪರಿಶೀಲನೆಯ ವೇಳೆ ಮಾತನಾಡಿದ ಸಚಿವರು, “ಮಳೆ ಹಾಗೂ ಗಾಳಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಸಂತ್ರಸ್ತರಿಗೆ ಪರಿಹಾರ ನೀಡುವಾಗ ಯಾವುದೇ ಪಕ್ಷ ಅಥವಾ ಜಾತಿಯ ಭೇದಭಾವ ಮಾಡಬಾರದು. ಅರ್ಹ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು,” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗುಡುಮಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡುಮಗಟ್ಟೆ, ತಡಸ, ಮಲ್ಲಿಗೆನಹಳ್ಳಿ, ಲಕ್ಷ್ಮಿಪುರ ಕ್ಯಾಂಪ್ ಹಾಗೂ ಮಹಾತ್ಮ ಗಾಂಧಿ ಕಾಲೋನಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಟ್ಯಾಂಕರ್ ಮೂಲಕ ಪೂರೈಕೆಯಾಗುವ ನೀರು ಜನರಿಗೆ ಸಾಕಾಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಗುಡುಮಗಟ್ಟೆಯ ಹೆಚ್.ಜಿ. ಮಲ್ಲಯ್ಯನವರು ಜನರೇಟರ್ ವ್ಯವಸ್ಥೆ ಮಾಡಿ, ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ತುಂಬಿಸಿ ಸಾರ್ವಜನಿಕರ ದಿನನಿತ್ಯದ ಬಳಕೆಗೆ ಅನುಕೂಲ ಮಾಡಿಕೊಟ್ಟಿದ್ದರು. ಅವರ ಈ ಸಮಯೋಚಿತ ಸೇವೆಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಗಿಸಿದರು.

ಕಾಂಗ್ರೆಸ್ ಮುಖಂಡರಾದ ಹೆಚ್.ಜಿ. ಮಲ್ಲಯ್ಯನವರ ತೋಟದಲ್ಲಿ ಈ ಪ್ರಕೃತಿ ವಿಕೋಪದಿಂದಾಗಿ ಅಪಾರ ನಷ್ಟ ಉಂಟಾಗಿದೆ. ಸುಮಾರು 700ಕ್ಕೂ ಹೆಚ್ಚು ಅಡಿಕೆ ಮರಗಳು, 72 ತೆಂಗಿನ ಮರಗಳು, ನೂರಾರು ಬಾಳೆ ಗಿಡಗಳು ಹಾಗೂ ಮಾವು, ಹಲಸು, ಸಪೋಟ ಮತ್ತು ನಿಂಬೆ ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿವೆ. ತಮ್ಮ ಕಣ್ಣೆದುರೇ ವರ್ಷಗಳ ಕಾಲ ಪೋಷಿಸಿದ ಬೆಳೆ ನಾಶವಾಗಿ ಬೆಟ್ಟದಷ್ಟು ನಷ್ಟ ಎದುರಾಗಿದ್ದರೂ, ಮಲ್ಲಯ್ಯನವರು ಕುಗ್ಗದೆ ಮೊದಲು ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಿದರು. ತಮ್ಮ ವೈಯಕ್ತಿಕ ನೋವನ್ನು ಬದಿಗಿಟ್ಟು ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ತಮ್ಮ ವಿಶಾಲ ಮನೋಭಾವವನ್ನು ಮೆರೆದಿದ್ದಾರೆ.

ಸಂಕಷ್ಟದ ಸಮಯದಲ್ಲಿ ಹೆಚ್.ಜಿ. ಮಲ್ಲಯ್ಯನವರು ತೋರಿದ ಈ ಸಮಾಜಮುಖಿ ಕಳಕಳಿಯು ಅವರ ನಿಸ್ವಾರ್ಥ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ ಎಂದು ಸಚಿವ ಮಧು ಬಂಗಾರಪ್ಪನವರು ಶ್ಲಾಘಿಸಿದರು. “ತಮ್ಮದೇ ತೋಟದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದ್ದರೂ, ಅದರ ಬಗ್ಗೆ ಚಿಂತಿಸದೆ ಸಾರ್ವಜನಿಕ ಜೀವನಕ್ಕೆ ಹಾಗೂ ಗ್ರಾಮಸ್ಥರ ಅನುಕೂಲಕ್ಕೆ ಮಿಡಿದ ಮಲ್ಲಯ್ಯನವರಂತಹ ನಿಷ್ಠಾವಂತ ವ್ಯಕ್ತಿಗಳು ಸಮಾಜಕ್ಕೆ ಮಾದರಿ” ಎಂದು ಸಚಿವರು ಅವರ ಸೇವೆಯನ್ನು ಕೊಂಡಾಡಿದರು.

ಅಷ್ಟೇ ಅಲ್ಲದೆ, ಗುಡುಮಗಟ್ಟೆಯ ಸುಮಾರು 40 ಯುವಕರ ತಂಡವು ತೋರಿದ ಶ್ರಮವನ್ನು ಸಚಿವರು ಸ್ಮರಿಸಿದರು. ಮಳೆಯಿಂದಾಗಿ ತಡಸ-ಆನೆವರಿ ರಸ್ತೆಯಲ್ಲಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಲ್ಲದೆ, ವಿದ್ಯುತ್ ಇಲಾಖೆಯ ಸಿಬ್ಬಂದಿಯೊಂದಿಗೆ ಸೇರಿ ಜಂಗಲ್ ಕ್ಲೀನಿಂಗ್, ಕಂಬ ಅಳವಡಿಕೆ ಹಾಗೂ ವೈರ್ ಎಳೆಯುವ ಕೆಲಸದಲ್ಲಿ ಯುವಕರು ಕೈಜೋಡಿಸಿದ್ದರು. ಇಂತಹ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿದರೆ ಕೆಲಸಗಳು ಶೀಘ್ರವಾಗಿ ಮುಕ್ತಾಯಗೊಳ್ಳುತ್ತವೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಅರ್ಹತೋಳದಲ್ಲಿ ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿಯ ಮನೆಗೆ ಭೇಟಿ ನೀಡಿದ ಸಚಿವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಎಲ್ಲಾ ಪರಿಹಾರಗಳನ್ನು ಶೀಘ್ರವಾಗಿ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶಿಸಿದರು.

ಈ ಭಾಗದಲ್ಲಿ ಉಂಟಾಗಿರುವ ಹಾನಿಯನ್ನು ಗಮನಿಸಿ, ಇದನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಸಾರ್ವಜನಿಕರು ಆಗ್ರಹಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, “ರಾಜ್ಯ ಸರ್ಕಾರವು ಈ ಬಗ್ಗೆ ಕೇಂದ್ರಕ್ಕೆ ವರದಿಯನ್ನು ಕಳುಹಿಸಲಿದೆ. ನಾಡಿದ್ದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚಿಸಿ, ಅಗತ್ಯ ತೀರ್ಮಾನ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು,” ಎಂದು ಭರವಸೆ ನೀಡಿದರು.

ಸಚಿವರ ಈ ಭೇಟಿಯ ಸಂದರ್ಭದಲ್ಲಿ ಶ್ರೀನಿವಾಸ್ ಕರಿಯಣ್ಣ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಹನುಮಂತಪ್ಪ, ಕಲ್ಲಗೋಡು ರತ್ನಾಕರ್, ಹೆಚ್.ಜಿ. ಮಲ್ಲಯ್ಯ ಹಾಗೂ ಉಮೇಶ್ ಕಟ್ಟಾ ಅವರು ಉಪಸ್ಥಿತರಿದ್ದರು. ಇವರೊಂದಿಗೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದು, ಹಾನಿಯ ಕುರಿತು ಸಚಿವರಿಗೆ ವಿವರವಾದ ಮಾಹಿತಿ ನೀಡಿದರು.

K.M.Sathish Gowda

Join WhatsApp

Join Now

Facebook

Join Now

Read more

ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೊಳಗಾದ ರೈತರು: ನಾಳೆ ರೈತ ಸಂಘದಿಂದ ಪ್ರತಿಭಟನೆ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

ಮೇ 1ರಿಂದ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್ ನಲ್ಲಿ ನಿಯಮಗಳಲ್ಲಿ ಭಾರಿ ಬದಲಾವಣೆ: ಗ್ರಾಹಕರ ಗಮನಕ್ಕೆ ಪ್ರಮುಖ 3 ಅಂಶಗಳು!

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಬಿರುಗಾಳಿ: ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧ, ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ

ಶಿವಮೊಗ್ಗದಲ್ಲಿ ಮಳೆಯ ಅಬ್ಬರ: ಅಡಿಕೆ-ತೆಂಗಿನ ತೋಟಗಳಿಗೆ ಭಾರಿ ಹಾನಿ;’ರಾಷ್ಟ್ರೀಯ ಪ್ರಕೃತಿ ವಿಕೋಪ’ ಎಂದು ಘೋಷಿಸಿ – ಹೆಚ್.ಆರ್. ಬಸವರಾಜಪ್ಪ ಆಗ್ರಹ

ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ಸಾವಿರಾರು ಅಡಿಕೆ ಮರಗಳು: ಭದ್ರಾವತಿ ತಾಲ್ಲೂಕಿನಾದ್ಯಂತ ಅಪಾರ ಹಾನಿ – ತಕ್ಷಣದ ಪರಿಹಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಆಗ್ರಹ

ಶಿವಮೊಗ್ಗದಲ್ಲಿ ಮೇ 3 ರಂದು ‘ಪತ್ರಕರ್ತರ ಧ್ವನಿ’ ಸಂಘದ 2ನೇ ವಾರ್ಷಿಕೋತ್ಸವ: ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ

Leave a Comment