ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಅಡಿಕೆ ಬೆಳೆಗಾರರಿಗೆ ಹೆಕ್ಟೇರ್‌ಗೆ ₹1 ಲಕ್ಷ ವಿಶೇಷ ಪರಿಹಾರ ಘೋಷಿಸಿ: ರೈತರಿಗೆ ತಕ್ಷಣ ನೆರವು ನೀಡದಿದ್ದರೆ ಬೃಹತ್ ಪ್ರತಿಭಟನೆ – ಸರ್ಕಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಎಚ್ಚರಿಕೆ

On: April 30, 2026 11:55 AM
Follow Us:

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಂಭವಿಸಿದ ಭೀಕರ ಬಿರುಗಾಳಿ ಸಹಿತ ಅಕಾಲಿಕ ಮಳೆಯು ರೈತರ ಬದುಕನ್ನು ಬೀದಿಪಾಲು ಮಾಡಿದೆ. ಈ ನೈಸರ್ಗಿಕ ವಿಕೋಪವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ರಾಜ್ಯ ಸರ್ಕಾರವು ತಕ್ಷಣವೇ ಸಂತ್ರಸ್ತ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಒತ್ತಾಯಿಸಿದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹಾನಿಯ ಭೀಕರತೆ ಮತ್ತು ಸರ್ಕಾರದ ಕರ್ತವ್ಯಗಳ ಕುರಿತು ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದರು, “ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 10,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ ಕನಿಷ್ಠ 5,000 ರಿಂದ 6,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಅಡಿಕೆ ಮರಗಳು ಬುಡಸಮೇತ ನೆಲಕ್ಕುರುಳಿವೆ. ಅಡಿಕೆ ಮರ ಒಮ್ಮೆ ಬಿದ್ದರೆ ಅದನ್ನು ಮತ್ತೆ ಎಬ್ಬಿಸಲು ಸಾಧ್ಯವಿಲ್ಲ, ರೈತರು ದಶಕಗಳ ಕಾಲ ಪಟ್ಟ ಶ್ರಮ ಕೇವಲ ಒಂದು ಗಂಟೆಯ ಮಳೆಗೆ ಮಣ್ಣು ಪಾಲಾಗಿದೆ. ಇಂತಹ ಭೀಕರ ಅನಾಹುತವನ್ನು ಈ ಹಿಂದೆ ನಾವು ಕಂಡಿರಲಿಲ್ಲ,” ಎಂದು ವಿಷಾದ ವ್ಯಕ್ತಪಡಿಸಿದರು.

ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಮತ್ತು ಕೂಡ್ಲಿಗೆರೆ ಹೋಬಳಿಗಳಲ್ಲಿ ಹಾನಿಯ ಪ್ರಮಾಣ ಅತ್ಯಂತ ಹೆಚ್ಚಿದೆ. ಸುಮಾರು 35ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು ಕಟಾವಿಗೆ ಬಂದಿದ್ದ ಇಂಗಾರು ಭತ್ತ ಸಂಪೂರ್ಣ ನಾಶವಾಗಿದೆ. ಶಿವಮೊಗ್ಗ ತಾಲ್ಲೂಕಿನ ಹೋಳಲೂರು ಮತ್ತು ಹಾರನಹಳ್ಳಿ ಭಾಗದ 25ಕ್ಕೂ ಹೆಚ್ಚು ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಇದೆ. ಬಿರುಗಾಳಿಯ ರಭಸಕ್ಕೆ ನೂರಾರು ಮನೆಗಳ ಹೆಂಚು ಮತ್ತು ಶೀಟ್‌ಗಳು ಹಾರಿಹೋಗಿದ್ದು, ಬಡ ಕುಟುಂಬಗಳು ಆಸರೆಯಿಲ್ಲದೆ ಕಂಗಾಲಾಗಿವೆ.

ಪ್ರಸ್ತುತ ಇರುವ ಎನ್‌ಡಿಆರ್‌ಎಫ್ (NDRF) ಮತ್ತು ಎಸ್‌ಡಿಆರ್‌ಎಫ್ (SDRF) ನಿಯಮಗಳ ಬಗ್ಗೆ ಮಾತನಾಡಿದ ಅವರು, “ಈಗಿರುವ ನಿಯಮದಂತೆ ಹೆಕ್ಟೇರ್‌ಗೆ ನೀಡುವ 31,000 ರೂ.ಗಳ ಪರಿಹಾರ ರೈತರ ಕಣ್ಣೊರೆಸುವ ತಂತ್ರವಾಗಿದೆ. ರೈಲ್ವೆ ಅಥವಾ ಹೆದ್ದಾರಿ ಕಾಮಗಾರಿಗಳಿಗೆ ಭೂಮಿ ಸ್ವಾಧೀನಪಡಿಸಿಕೊಂಡಾಗ ಒಂದು ಅಡಿಕೆ ಮರಕ್ಕೆ ಸುಮಾರು 3,500 ರಿಂದ 4,000 ರೂ. ಪರಿಹಾರ ನೀಡಲಾಗುತ್ತದೆ. ಆದರೆ ಈ ವಿಕೋಪದಲ್ಲಿ ಮರಗಳೇ ನಾಶವಾಗಿವೆ. ಆದ್ದರಿಂದ ರಾಜ್ಯ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಸೇರಿಸಿ ಪ್ರತಿ ಹೆಕ್ಟೇರ್‌ಗೆ ಕನಿಷ್ಠ 1 ಲಕ್ಷ ರೂಪಾಯಿ ಅಥವಾ ಪ್ರತಿ ಎಕರೆಗೆ 50,000 ರೂಪಾಯಿಗಳ ವಿಶೇಷ ಪರಿಹಾರ ನೀಡಬೇಕು,” ಎಂದು ಆಗ್ರಹಿಸಿದರು.

“ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅನಾಹುತ ಸಂಭವಿಸಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಕಾಟಾಚಾರಕ್ಕೆ ಎಂಬಂತೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ ಹೊರತು ರೈತರಿಗೆ ಯಾವುದೇ ಅನುಕೂಲವಾಗುತ್ತಿಲ್ಲ ಎಂದು ಸಂಸದರು ತೀವ್ರವಾಗಿ ಖಂಡಿಸಿದರು. ಸಚಿವರು ಕೇವಲ ಬೆಂಗಳೂರಿನಲ್ಲಿ ಕುಳಿತು ಆದೇಶಗಳನ್ನು ನೀಡುವ ಬದಲು, ತಕ್ಷಣವೇ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ರೈತರ ನೋವಿಗೆ ನೇರವಾಗಿ ಸ್ಪಂದಿಸಬೇಕು. ಕೂಡಲೇ ಅಧಿಕಾರಿಗಳ ಸಭೆ ಕರೆದು, ಯುದ್ಧೋಪಾದಿಯಲ್ಲಿ ಜಂಟಿ ಸಮೀಕ್ಷೆ (Joint Survey) ನಡೆಸಿ ಶೀಘ್ರ ವರದಿ ಸಲ್ಲಿಸಲು ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು.”

ತುರ್ತು ಕ್ರಮಗಳಿಗೆ ಆಗ್ರಹ:

  1. ವಿದ್ಯುತ್ ಪುನಃಸ್ಥಾಪನೆ: ಸುಮಾರು 200 ರಿಂದ 400 ವಿದ್ಯುತ್ ಕಂಬಗಳು ಬಿದ್ದಿರುವುದರಿಂದ ಗ್ರಾಮಗಳಲ್ಲಿ ಕತ್ತಲೆ ಆವರಿಸಿದೆ. ಬೆಸ್ಕಾಂ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ವಿದ್ಯುತ್ ಸಂಪರ್ಕ ಸರಿಪಡಿಸಬೇಕು.
  2. ಜಂಟಿ ಸಮೀಕ್ಷೆ: ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳು ಒಟ್ಟಾಗಿ ಸೇರಿ ಪಾರದರ್ಶಕವಾಗಿ ಹಾನಿಯ ವರದಿ ಸಿದ್ಧಪಡಿಸಬೇಕು.
  3. ಬೆಳೆ ವಿಮೆ: ವಿಮಾ ಕಂಪನಿಗಳೊಂದಿಗೆ ಸರ್ಕಾರ ಚರ್ಚಿಸಿ ರೈತರಿಗೆ ವಿಮಾ ಮೊತ್ತ ಶೀಘ್ರವಾಗಿ ತಲುಪುವಂತೆ ಮಾಡಬೇಕು.

“ಕೇಂದ್ರ ಸರ್ಕಾರವು ತನ್ನ ಪಾಲಿನ ನೆರವನ್ನು ನೀಡಲು ಸಿದ್ಧವಿದೆ, ಆದರೆ ರಾಜ್ಯ ಸರ್ಕಾರವು ಈ ವಿಷಯದಲ್ಲಿ ರಾಜಕಾರಣ ಮಾಡದೆ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಒಂದು ವೇಳೆ ಸರ್ಕಾರ ಒಂದು ವಾರದೊಳಗೆ ಸ್ಪಂದಿಸದಿದ್ದರೆ, ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು,” ಎಂದು ಸಂಸದರು ಎಚ್ಚರಿಸಿದರು.

ಈ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎನ್.ಕೆ. ಜಗದೀಶ್, ವಿಧಾನಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ, ಎಸ್. ದತ್ತಾತ್ರಿ, ಮಾಜಿ ಶಾಸಕರಾದ ಅಶೋಕ್ ನಾಯಕ್ ಹಾಗೂ ಪ್ರಮುಖ ಮುಖಂಡರುಗಳಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಹರಿಕೃಷ್ಣ, ಸಿದ್ಧಲಿಂಗಪ್ಪ, ಮಾಜಿ ಪಾಲಿಕೆ ಸದಸ್ಯ ಮಾಲತೇಶ್, ಶ್ರೀಮತಿ ಸುರೇಖಾ ಮುರುಳಿಧರ್, ಜಿಲ್ಲಾ ಮಾಧ್ಯಮ ಪ್ರಮುಖ್ ಎಸ್. ಚಂದ್ರಶೇಖರ್, ಸಹ ಮಾಧ್ಯಮ ಪ್ರಮುಖ್ ಎನ್. ಮಂಜುನಾಥ್, ಶರತ್ ಕಲ್ಯಾಣಿ, ಸುಮಲತಾ ಭೂಪಳಂ, ರಾಜೇಶ್ ಕಾಮತ್, ಹರೀಶ್, ಶ್ರೀಮತಿ ಶಾಂತ ಸುರೇಂದ್ರ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಮೇ 9 ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವಕ್ಕೆ ಕೌಂಟ್‌ಡೌನ್: ಶಿವಮೊಗ್ಗದಿಂದ 50 ಸಾವಿರ ಕಾರ್ಯಕರ್ತರ ಭಾಗವಹಿಸುವ ನಿರೀಕ್ಷೆ – ಎನ್.ಕೆ. ಜಗದೀಶ್

ರಾಜ್ಯ ರಾಜಕಾರಣದ ನಾಯಕತ್ವ ಗೊಂದಲಕ್ಕೆ ತೆರೆ ಎಳೆದ ಮಲ್ಲಿಕಾರ್ಜುನ ಖರ್ಗೆ: ಸದ್ಯಕ್ಕಿಲ್ಲ ‘ಸಿಎಂ’ ಬದಲಾವಣೆ

​”ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ‘ದಲಿತ ಕಾರ್ಡ್’ ಪ್ಲೇ ಮಾಡಿದ ಯತೀಂದ್ರ: ಕೈ ಪಾಳಯದಲ್ಲಿ ತಲ್ಲಣ!”

ಬಿಎಸ್‍ವೈ ಅಭಿಮಾನೋತ್ಸವಕ್ಕೆ 10 ಲಕ್ಷ ಅಧಿಕ ಜನಸಾಗರ ನಿರೀಕ್ಷೆ: ವಿಜಯನಗರದಲ್ಲಿ ನವ ಸಂಚಲನ ಮೂಡಿಸಿದ ಬಿ.ವೈ. ವಿಜಯೇಂದ್ರ ಕರೆ

​ಪಂಚರಾಜ್ಯ ಎಕ್ಸಿಟ್ ಪೋಲ್ ಪ್ರಕಟ: ತಮಿಳುನಾಡಿನಲ್ಲಿ ಡಿಎಂಕೆ ಆರ್ಭಟ, ಅಸ್ಸಾಂ, ಬಂಗಾಳದಲ್ಲಿ ಬಿಜೆಪಿ ಅಬ್ಬರ, ಕೇರಳದಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಜಯ!

ವೀರಶೈವ ಭವನದಲ್ಲಿ ಪಂಚಮುಖಿ ಶಿವಲಿಂಗ ಪ್ರತಿಷ್ಠಾಪನೆ; ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆ ಇಂದಿನ ಅಗತ್ಯ- ಸಿ.ಎಸ್. ಷಡಾಕ್ಷರಿ

Leave a Comment