ಹುಬ್ಬಳ್ಳಿ: “ಕಾಂಗ್ರೆಸ್ ಪಕ್ಷ ಮತ್ತು ಇಂಡಿ ಒಕ್ಕೂಟದ ಭ್ರಷ್ಟ ವ್ಯವಸ್ಥೆಯು ಮಹಿಳೆಯರಿಗೆ ಸತತವಾಗಿ ಅನ್ಯಾಯ ಮಾಡುತ್ತಾ ಬಂದಿದೆ. ಈ ಅನ್ಯಾಯದ ವಿರುದ್ಧ ಪ್ರತಿ ಮನೆಯಲ್ಲೂ ಜಾಗೃತಿ ಮೂಡಿಸಬೇಕಿದೆ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಕರೆ ನೀಡಿದರು.
ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ‘ಬೃಹತ್ ಜನಾಕ್ರೋಶ ಮಹಿಳಾ ಪ್ರತಿಭಟನಾ ಸಭೆ’ಯನ್ನುದ್ದೇಶಿಸಿ ಮಾತನಾಡಿದ ಅವರು. ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿತ ಮತ್ತು ಮಹಿಳಾ ವಿರೋಧಿ ನೀತಿಗಳ ವಿರುದ್ಧ ಸಮಾವೇಶದಲ್ಲಿ ಘರ್ಜಿಸಿದ ಬಿಜೆಪಿ ನಾಯಕರು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಸಂಕಲ್ಪ ಮಾಡಿದರು.

ನಾರಿ ಶಕ್ತಿಯೇ ಅಭಿವೃದ್ಧಿಯ ಮೂಲಶಕ್ತಿ: ವಿಜಯೇಂದ್ರ
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರವನ್ನು ಮನಗಂಡು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ ಎಂದು ವಿವರಿಸಿದ ವಿಜಯೇಂದ್ರ, “ಬಿಜೆಪಿ ಯಾವಾಗಲೂ ತಾಯಂದಿರ ಪರವಾಗಿ ನಿಲ್ಲುವ ಪಕ್ಷ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಭಾಗ್ಯಲಕ್ಷ್ಮಿ ಮತ್ತು ಬೈಸಿಕಲ್ ಯೋಜನೆಗಳು ಹೆಣ್ಣುಮಕ್ಕಳ ಸಬಲೀಕರಣಕ್ಕೆ ನಾಂದಿ ಹಾಡಿದ್ದವು. ಈ ಹೋರಾಟ ಕೇವಲ ಇಂದಿಗೆ ಸೀಮಿತವಲ್ಲ, ಮಹಿಳೆಯರಿಗೆ ಪೂರ್ಣ ನ್ಯಾಯ ಸಿಗುವವರೆಗೆ ಮುಂದುವರಿಯಲಿದೆ,” ಎಂದರು. ಇದೇ ವೇಳೆ ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳುವಂತೆ ಜನತೆಗೆ ವಿನಂತಿಸಿದರು.

ದೇಶ ಒಡೆಯುವ ಷಡ್ಯಂತ್ರಕ್ಕೆ ಸಚಿವೆ ಶೋಭಾ ಆಕ್ರೋಶ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಇಂಡಿ ಒಕ್ಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಲೋಕಸಭಾ ಸ್ಥಾನಗಳ ಪುನರ್ ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತದೆ ಎಂದು ಕಾಂಗ್ರೆಸ್ ಸುಳ್ಳು ಹಬ್ಬಿಸುತ್ತಿದೆ. ವಾಸ್ತವದಲ್ಲಿ ದಕ್ಷಿಣದ ರಾಜ್ಯಗಳಿಗೆ ಶೇ. 50ರಷ್ಟು ಹೆಚ್ಚುವರಿ ಸೀಟುಗಳು ಲಭಿಸಲಿವೆ. ಕಾಂಗ್ರೆಸ್, ಡಿಎಂಕೆ ಮತ್ತು ಕಮ್ಯುನಿಸ್ಟ್ ಪಕ್ಷಗಳು ‘ತುಕ್ಡೇ ತುಕ್ಡೇ’ ಗ್ಯಾಂಗ್‌ನ ಭಾಗವಾಗಿದ್ದು, ದೇಶವನ್ನು ವಿಭಜಿಸುವ ಷಡ್ಯಂತ್ರ ರೂಪಿಸುತ್ತಿವೆ,” ಎಂದು ಗಂಭೀರವಾಗಿ ಆರೋಪಿಸಿದರು.

ಕಾಂಗ್ರೆಸ್ ಅನ್ನು ಕಸದ ಬುಟ್ಟಿಗೆ ಹಾಕಿ: ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, “ಕಾಂಗ್ರೆಸ್ ಕೇವಲ ನಕಲಿ ಗಾಂಧಿ ಮನೆತನದ ಮಹಿಳೆಯರ ಏಳಿಗೆಯನ್ನು ಮಾತ್ರ ಬಯಸುತ್ತದೆ. ಸಾಮಾನ್ಯ ವರ್ಗದ, ಒಬಿಸಿ ಹಾಗೂ ದುರ್ಬಲ ವರ್ಗದ ಮಹಿಳೆಯರ ವಿರೋಧಿಯಾಗಿರುವ ಈ ಪಕ್ಷವನ್ನು ಜನತೆ ಕಸದ ಬುಟ್ಟಿಗೆ ಹಾಕಬೇಕು,” ಎಂದು ಕಿಡಿಕಾರಿದರು.

2029ಕ್ಕೆ ಮಹಿಳಾ ಮೀಸಲಾತಿ ಜಾರಿ: ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಮಹಿಳಾ ಮೀಸಲಾತಿ ಕುರಿತು ಮಾತನಾಡುತ್ತಾ, “ನರೇಂದ್ರ ಮೋದಿಯವರು ಮಹಿಳಾ ಮೀಸಲಾತಿ ಮಸೂದೆಯನ್ನು ಅನುಮೋದಿಸಿದ್ದು, 2029ರ ವೇಳೆಗೆ ಇದು ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿದೆ. ರಾಜ್ಯದಲ್ಲಿ ಇಂದು ಲವ್ ಜಿಹಾದ್, ಅತ್ಯಾಚಾರ ಮತ್ತು ಸುಲಿಗೆ ಪ್ರಕರಣಗಳು ಹೆಚ್ಚಾಗಿದ್ದು, ಮಹಿಳೆಯರು ಭಯದಲ್ಲಿ ಬದುಕುತ್ತಿದ್ದಾರೆ. ಈ ದುರಾಡಳಿತದ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕಿದೆ,” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಕೇಂದ್ರ ಸಚಿವರುಗಳು, ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್, ರೂಪಾಲಿ ನಾಯಕ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಸಿ. ಮಂಜುಳಾ, ಶಾಸಕ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ್ ಸೇರಿದಂತೆ ಹಲವಾರು ಪ್ರಮುಖ ನಾಯಕರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದರು.





