ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕನ್ನಡಿಗರ ಅಸ್ಮಿತೆಯ ಕನ್ನಡ ಸಾಹಿತ್ಯ ಪರಿಷತ್ತು: 112ನೇ ಸಂಸ್ಥಾಪನಾ ದಿನದ ಸಂಭ್ರಮ

On: May 4, 2026 7:11 PM
Follow Us:

ಕನ್ನಡ ಕುಲಕೋಟಿ ಬಂಧುಗಳೇ, ಕನ್ನಡ ಮನಸುಗಳೇ,

ನಮ್ಮ ನಿಮ್ಮೆಲ್ಲರ ಮಾತೃಭಾಷೆ, ಅನ್ನದ ಭಾಷೆ ಹಾಗೂ ಹೆಮ್ಮೆಯ ಭಾಷೆ ಕನ್ನಡ. ಈ ಕನ್ನಡ ಮಾತನಾಡುವ ಕರುನಾಡಿನ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಏಕೈಕ ಸಂಸ್ಥೆ ನಮ್ಮೀ ಕನ್ನಡ ಸಾಹಿತ್ಯ ಪರಿಷತ್ತು. ಅಂದಿನ ಮೈಸೂರು ರಾಜ್ಯದ ಅರಸರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಜನನಾಯಕ ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಸರ್ ಮಿರ್ಜಾ ಇಸ್ಮಾಯಿಲ್ ಅವರಂತಹ ಮಹನೀಯರ ದೂರದೃಷ್ಟಿಯಿಂದ ಮೇ 5, 1915 ರಂದು ಈ ಸಂಸ್ಥೆ ಸ್ಥಾಪಿತವಾಯಿತು. ಆ ಸ್ಮರಣೀಯ ದಿನದ ಅಂಗವಾಗಿ ಪ್ರತಿವರ್ಷ ಮೇ 5 ರಂದು ‘ಪರಿಷತ್ ಸಂಸ್ಥಾಪನಾ ದಿನ’ವನ್ನು ಆಚರಿಸಲಾಗುತ್ತಿದ್ದು, ಇಂದು (ಮೇ 5, 2026) 112ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.

ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ ಹಾಗೂ ಸಂಸ್ಕೃತಿಗಳ ಸಂವರ್ಧನೆ ಮತ್ತು ಸಂರಕ್ಷಣೆಯ ಮಹದೋದ್ದೇಶದೊಂದಿಗೆ ಸ್ಥಾಪನೆಯಾದ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಈ ಕನ್ನಡ ಸಾಹಿತ್ಯ ಪರಿಷತ್ತು.

ಕನ್ನಡ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರಿಗೆ ಪ್ರೋತ್ಸಾಹ ನೀಡಲು ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದರ ಅಗತ್ಯವಿದೆ ಎಂದು ಭಾವಿಸಿ, 1914ರಲ್ಲಿ ಅಂದಿನ ಮೈಸೂರು ಸಂಸ್ಥಾನದ ‘ಸಂಪದಭ್ಯುದಯ ಸಮಾಜ’ ತನ್ನ ವಾರ್ಷಿಕ ಅಧಿವೇಶನದಲ್ಲಿ ಕೈಗೊಂಡ ನಿರ್ಧಾರವೇ ಈ ಪರಿಷತ್ತಿನ ಉಗಮಕ್ಕೆ ನಾಂದಿಯಾಯಿತು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಬೆಂಗಳೂರಿನ ಶಂಕರಪುರ ಬಡಾವಣೆಯ ಪುಟ್ಟ ಕೊಠಡಿಯೊಂದರಲ್ಲಿ ಆರಂಭವಾದ ಅಂದಿನ ‘ಕರ್ಣಾಟಕ ಸಾಹಿತ್ಯ ಪರಿಷತ್ತು’, ಇಂದು ‘ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ಹೆಸರಿನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.

ಬೆಂಗಳೂರಿನ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿರುವ ಕೇಂದ್ರ ಕಚೇರಿಯು ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಬಿ.ಎಂ.ಶ್ರೀ ಅಚ್ಚುಕೂಟ, ಸುವರ್ಣ ಮಹೋತ್ಸವ ಕಟ್ಟಡ, ವಜ್ರ ಮಹೋತ್ಸವ ಕಟ್ಟಡ ಹಾಗೂ ಶತಮಾನೋತ್ಸವ ಭವನಗಳನ್ನು ಒಳಗೊಂಡಿದೆ.

18 ವರ್ಷ ಮೇಲ್ಪಟ್ಟ, ಕನ್ನಡ ಓದು-ಬರಹ ಬಲ್ಲ ಯಾರೇ ಆದರೂ ಪರಿಷತ್ತಿನ ಸದಸ್ಯರಾಗಬಹುದು. ದೇಶ-ವಿದೇಶಗಳಲ್ಲೂ ಹರಡಿರುವ ಬೃಹತ್ ಸದಸ್ಯ ಬಲ ಈ ಸಂಸ್ಥೆಯ ಅನನ್ಯತೆ. ಸದಸ್ಯರಿಗೆ ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕು, ಪರಿಷತ್ತಿನ ಪುಸ್ತಕಗಳ ಖರೀದಿಯಲ್ಲಿ ರಿಯಾಯಿತಿ, ದ್ವೈಮಾಸಿಕ ಪತ್ರಿಕೆ ‘ಕನ್ನಡ ನುಡಿ’ಯನ್ನು ಉಚಿತವಾಗಿ ಪಡೆಯುವ ಅವಕಾಶ ಹಾಗೂ ಗ್ರಂಥಭಂಡಾರದ ಸೌಲಭ್ಯ ಲಭ್ಯವಿದೆ.

ಪರಿಷತ್ತು ಕೇವಲ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಘಟಕಗಳ ಮೂಲಕ ಕ್ರಿಯಾಶೀಲವಾಗಿದೆ. ಅಲ್ಲದೆ, ಗಡಿನಾಡುಗಳಾದ ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲೂ ಅಧಿಕೃತ ಘಟಕಗಳನ್ನು ಹೊಂದಿ ಕನ್ನಡದ ಕಂಪು ಪಸರಿಸುತ್ತಿದೆ.

  • ಸರಸ್ವತೀ ಭಂಡಾರ: ಸುಮಾರು 70 ಸಾವಿರಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳನ್ನು ಹೊಂದಿರುವ ಹಳೆಯ ಗ್ರಂಥಾಲಯಗಳಲ್ಲಿ ಇದು ಒಂದು.
  • ವಸ್ತುಸಂಗ್ರಹಾಲಯ: ಅಪರೂಪದ ನಾಣ್ಯಗಳು, ಹಸ್ತಪ್ರತಿಗಳು, ತಾಮ್ರಶಾಸನಗಳು ಮತ್ತು ಜಾನಪದ ವಸ್ತುಗಳ ಸಂಗ್ರಹ ಇಲ್ಲಿದೆ.
  • ಪುಸ್ತಕ ಸಂತೆ: ಲೇಖಕರು ಮತ್ತು ಪ್ರಕಾಶಕರಿಗೆ ಉತ್ತೇಜನ ನೀಡಲು 2004 ರಿಂದ ‘ಪುಸ್ತಕ ಸಂತೆ’ಯಂತಹ ವಿನೂತನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
  • ಪ್ರಶಸ್ತಿ ಮತ್ತು ದತ್ತಿನಿಧಿ: ‘ನೃಪತುಂಗ’ ಪ್ರಶಸ್ತಿಯಂತಹ ಪ್ರತಿಷ್ಠಿತ ಗೌರವಗಳೂ ಸೇರಿದಂತೆ ಅನೇಕ ದತ್ತಿನಿಧಿ ಪ್ರಶಸ್ತಿಗಳ ಮೂಲಕ ಸಾಧಕರನ್ನು ಸನ್ಮಾನಿಸಲಾಗುತ್ತಿದೆ.

ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಪರಿಷತ್ತು ನಡೆಸಿಕೊಂಡು ಬರುತ್ತಿರುವ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು’ ಕರ್ನಾಟಕದ ಏಕೀಕರಣ ಮತ್ತು ಭಾಷಾ ಬೆಳವಣಿಗೆಯಲ್ಲಿ ಐತಿಹಾಸಿಕ ಪಾತ್ರ ವಹಿಸಿವೆ. 2016ರಲ್ಲಿ ದೆಹಲಿಯಲ್ಲಿ ನಡೆದ ‘ಅಖಿಲ ಭಾರತ ಹೊರನಾಡು ಕನ್ನಡಿಗರ ರಾಷ್ಟ್ರೀಯ ಸಮಾವೇಶ’ ಪರಿಷತ್ತಿನ ವ್ಯಾಪ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ.

ಪರಿಷತ್ತನ್ನು ಕಟ್ಟಿ ಬೆಳೆಸಿದ ಮಹನೀಯರ ಆಶಯದಂತೆ, ಈ ಸಂಸ್ಥೆಯು ಇಂದು ಜನಸಾಮಾನ್ಯರ ಪರಿಷತ್ತಾಗಿ ರೂಪಾಂತರಗೊಳ್ಳುತ್ತಿದೆ. ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಘಟಕಗಳು ಮತ್ತಷ್ಟು ಕ್ರಿಯಾಶೀಲವಾಗಿ ನಾಡು-ನುಡಿಯ ಸೇವೆಯಲ್ಲಿ ತೊಡಗಲಿ ಎಂಬುದು ನಮ್ಮೆಲ್ಲರ ಆಶಯ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ನಾವೆಲ್ಲರೂ ಕೈಜೋಡಿಸೋಣ.

“ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ”

ಲೇಖನ: ಸಂತೋಷ್ ಬಿದರಗಡ್ಡೆ ಶಿಕ್ಷಕರು, ಸಾಹಿತಿಗಳು
ನಿಕಟಪೂರ್ವ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಹಾನಗಲ್ಲ.

K.M.Sathish Gowda

Join WhatsApp

Join Now

Facebook

Join Now

Read more

ಬಿಎಸ್‌ವೈ ಅಭಿಮಾನೋತ್ಸವಕ್ಕೆ ‘ವೈದ್ಯಕೀಯ ಕವಚ’: ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಸಂಜೀವಿನಿಯಾದ ಡಾ.ಲಕ್ಷ್ಮಣ್, ಡಾ. ಚನ್ನಮಲ್ಲಯ್ಯ, ಡಾ.ನಾರಾಯಣ್ ತಂಡ

ಇಂಧನ ಉಳಿತಾಯಕ್ಕೆ ಪ್ರಧಾನಿ ಮೋದಿ ಮಾದರಿ: ಎಸ್‌ಪಿಜಿ ಬೆಂಗಾವಲು ಪಡೆಯಲ್ಲಿ 50% ಕಡಿತಕ್ಕೆ ಸೂಚನೆ

ದೇಶಕ್ಕೆ ಬುದ್ಧಿ ಹೇಳುವ ಕೇಂದ್ರಕ್ಕೆ ಒಂದು ಪರೀಕ್ಷೆ ನಡೆಸಲಾಗುತ್ತಿಲ್ಲವೇ? : ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಬಸವೇಶ್ವರ ಸೊಸೈಟಿಯ ಶತಮಾನೋತ್ಸವ ಸಂಭ್ರಮ: ಮೇ 16 ಮತ್ತು 17ರಂದು ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭ

ವೈದ್ಯಕೀಯ ಆಕಾಂಕ್ಷಿಗಳಿಗೆ ಬಿಗ್ ಅಪ್‌ಡೇಟ್: ನೀಟ್ 2026 ರದ್ದು; ಶೀಘ್ರದಲ್ಲೇ ಮರುಪರೀಕ್ಷೆಯ ಹೊಸ ದಿನಾಂಕ ಘೋಷಣೆ

ಬಿಎಸ್‌ವೈ ಅಭಿಮಾನೋತ್ಸವದ ಅಭೂತಪೂರ್ವ ಯಶಸ್ಸು: ನಾಡಿನ ಜನತೆ ಹಾಗೂ ಆಗಮಿಸಿದ ಗಣ್ಯರಿಗೆ ಸಂಸದ ಬಿ.ವೈ. ರಾಘವೇಂದ್ರ ಕೃತಜ್ಞತೆ

Leave a Comment