ಶಿವಮೊಗ್ಗ: “ಸಮಾಜದ ಕಣ್ಣಾಗಿ, ಬರವಣಿಗೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಕೆಲಸ ಮಾಡುವ ಪತ್ರಕರ್ತರು ಪ್ರಜಾಪ್ರಭುತ್ವದ ಅಸ್ತಿತ್ವದ ಭರವಸೆಗಳು. ಕಷ್ಟಕಾಲದಲ್ಲಿ ಪತ್ರಕರ್ತರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲುವ ಸಂಘಟನೆಗಳ ಕಾರ್ಯ ಶ್ಲಾಘನೀಯ,” ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಹೇಳಿದರು.
‘ಧ್ವನಿ ಇಲ್ಲದವರಿಗೆ ಧ್ವನಿಯಾಗಿ’: ಶಾಸಕ ಎಸ್. ಎನ್. ಚನ್ನಬಸಪ್ಪ
ನಗರದ ಮಥುರಾ ಪ್ಯಾರಡೈಸ್ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ದ್ವಿತೀಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಪತ್ರಿಕಾ ರಂಗದ ಮಹತ್ವವನ್ನು ವಿವರಿಸುತ್ತಾ, “ಪತ್ರಕರ್ತರು ಕೇವಲ ಸುದ್ದಿಯನ್ನು ನೀಡುವವರಲ್ಲ, ಬದಲಾಗಿ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸುವ ಮೂಲಕ ಸಮಾಜವನ್ನು ತಿದ್ದುವ ಗುರುವಿನ ಕೆಲಸ ಮಾಡುತ್ತಿದ್ದಾರೆ. ಧ್ವನಿ ಇಲ್ಲದ ಜನಸಾಮಾನ್ಯರಿಗೆ ಧ್ವನಿಯಾಗುವ ಪತ್ರಕರ್ತರ ಕ್ಷೇಮಾಭಿವೃದ್ಧಿ ಮತ್ತು ಹಿತರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೇವಲ ಎರಡು ವರ್ಷಗಳ ಅಲ್ಪ ಅವಧಿಯಲ್ಲಿ ಈ ಸಂಘವು ಜಿಲ್ಲೆಯ ಪತ್ರಕರ್ತರನ್ನು ಒಗ್ಗೂಡಿಸಿ, ಅವರ ಧ್ವನಿಯಾಗಿ ಬೆಳೆದಿರುವುದು ಹೆಮ್ಮೆಯ ವಿಷಯ,” ಎಂದರು.

ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಗೌರವ
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಕುರಿತು ಮಾತನಾಡಿದ ಶಾಸಕರು, “ಮಕ್ಕಳ ಸಾಧನೆಯನ್ನು ಗುರುತಿಸುವುದು ಅವರ ಉಜ್ವಲ ಭವಿಷ್ಯಕ್ಕೆ ಪ್ರೇರಣೆಯಾಗುತ್ತದೆ,” ಎಂದು ಹಾರೈಸಿದರು.

ಅಗಲಿದ ಚೇತನಗಳಿಗೆ ನಮನ
ತಮ್ಮ ಭಾಷಣದ ಮಧ್ಯೆ ಇತ್ತೀಚೆಗೆ ನಿಧನರಾದ ಜಿಲ್ಲೆಯ ಹಿರಿಯ ಪತ್ರಕರ್ತರನ್ನು ನೆನೆದ ಶಾಸಕರು ಭಾವುಕರಾದರು. ಸಿ.ವಿ. ರಾಘವೇಂದ್ರರಾವ್, ಕಾಮ್ರೇಡ್ ಲಿಂಗಪ್ಪ, ಶಿವಮೊಗ್ಗ ನಂದನ್, ಶಶಿಧರ, ಅನಿಲ್ ಮತ್ತು ಓಂಕಾರ್ ತಾಳಗುಪ್ಪ ಅವರ ಹೆಸರನ್ನು ಪ್ರಸ್ತಾಪಿಸಿ, “ಇವರುಗಳು ಜಿಲ್ಲೆಯ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆದರ್ಶಗಳನ್ನು ಇಂದಿನ ಯುವ ಪತ್ರಕರ್ತರು ಮೈಗೂಡಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.

ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತರು ಹಾಗೂ ಸಂಪಾದಕರಿಗೆ ಧ್ವನಿ ಸಂಘದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಶಾಸಕ ಚನ್ನಬಸಪ್ಪ ಅವರು ಪತ್ರಕರ್ತರ ವೃತ್ತಿಪರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಭರವಸೆ ನೀಡಿ, ಸಂಘದ ಮುಂದಿನ ಎಲ್ಲಾ ಜನಪರ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಹಾಗೂ ಆಯನೂರು ಮಂಜುನಾಥ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್, ಹಿರಿಯ ಪತ್ರಕರ್ತರಾದ ಜಗಳೂರು ಲಕ್ಷ್ಮಣರಾವ್, ಚಿಕ್ಕರಸು ಹಾಗೂ ಎಸ್.ಎಸ್. ಪಾಟೀಲ್, ಜನಶ್ರೀ ವಿಜಯ್, ಮಾಜಿ ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್, ವೈ.ಹೆಚ್.ನಾಗರಾಜ್, ಪತ್ರಕರ್ತರ ಧ್ವನಿ ಸಂಘದ ಜಿಲ್ಲಾಧ್ಯಕ್ಷ ಡಿ.ಜಿ. ನಾಗರಾಜ್, ಉಪಾಧ್ಯಕ್ಷ ಚಿತ್ರಪ್ಪ, ಕಾನೂನು ಸಲಹೆಗಾರ ಷಡಕ್ಷರಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಸತೀಶ್ ಗೌಡ, ಕಾರ್ಯದರ್ಶಿ ಬಿ.ಸಿ. ಶಿವರಾಜ್, ಖಜಾಂಚಿ ಬಿ.ಸಿ.ಗಿರೀಶ್ ಹಾಗೂ ಸಂಘಟನಾ ಕಾರ್ಯದರ್ಶಿ ಎಂ. ಅಣ್ಣಪ್ಪ, ಪದಾಧಿಕಾರಿಗಳಾದ ನಂದನ್ ಕುಮಾರ್ ಸಿಂಗ್, ವಿಷ್ಣು ಪ್ರಸಾದ್, ಮಹಮ್ಮದ್ ಫಾರೂಕ್ ಸೇರಿದಂತೆ ಶಿಕಾರಿಪುರ, ಸಾಗರ, ತೀರ್ಥಹಳ್ಳಿ, ಭದ್ರಾವತಿ ಹಾಗೂ ಹೊಸನಗರ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು






