ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದಲ್ಲಿ ಧ್ವನಿ ಸಂಘದಿಂದ ಪತ್ರಿಕಾ ದಿನಾಚರಣೆ: ಪತ್ರಕರ್ತರು ಸಮಾಜದ ನಿರ್ಭೀತ ಧ್ವನಿಯಾಗಬೇಕು ಎಂದು ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಕರೆ

On: May 6, 2026 8:20 PM
Follow Us:

ಶಿವಮೊಗ್ಗ: ಪತ್ರಕರ್ತರು ಕೇವಲ ಸುದ್ದಿಗಳನ್ನು ಪ್ರಸಾರ ಮಾಡುವವರಷ್ಟೇ ಅಲ್ಲ, ಅವರು ಸಮಾಜದ ನ್ಯೂನತೆಗಳನ್ನು ಬೆಳಕಿಗೆ ತಂದು, ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುವ ಅನಿಷ್ಟಗಳನ್ನು ಬೇರು ಸಹಿತ ನಿರ್ಮೂಲಗೊಳಿಸುವುದರ ಜೊತೆಗೆ ವ್ಯವಸ್ಥೆಯ ತಪ್ಪುಗಳನ್ನು ತಿದ್ದುವ ಜಾಗೃತ ಕಾವಲುಗಾರರು. ಎಂತಹ ಕಠಿಣ ಸವಾಲುಗಳು ಎದುರಾದರೂ, ಸಂಕಷ್ಟದ ಸಂದರ್ಭಗಳಲ್ಲಿಯೂ ಸತ್ಯದ ದಾರಿಯಿಂದ ತಪ್ಪದೆ, ಯಾವುದೇ ಒತ್ತಡಗಳಿಗೆ ಮಣಿಯದೆ ಧೈರ್ಯ ಹಾಗೂ ನಿಷ್ಪಕ್ಷಪಾತ ಮನೋಭಾವದಿಂದ ಕಾರ್ಯನಿರ್ವಹಿಸುವುದು ಇಂದಿನ ಕಾಲಘಟ್ಟದ ಅತ್ಯಂತ ಅಗತ್ಯವಾಗಿದೆ, ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರು ಹೇಳಿದರು.

ನಗರದ ಮಥುರಾ ಪ್ಯಾರಡೈಸ್ ಹೋಟೆಲ್‌ ಸಭಾಂಗಣದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ದ್ವಿತೀಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಿಕೋದ್ಯಮದ ಪಾವಿತ್ರ್ಯತೆ ಮತ್ತು ಪತ್ರಕರ್ತರ ಸಾಮಾಜಿಕ ಹೊಣೆಗಾರಿಕೆಯ ಕುರಿತು ಮನಮುಟ್ಟುವಂತೆ ಮಾತನಾಡಿದರು. “ಲೇಖನಿ ಹಿಡಿದ ಕೈಗಳು ಜನಸಾಮಾನ್ಯರ ಧ್ವನಿಯಾಗಬೇಕು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಶಕ್ತಿಯಾಗಬೇಕು” ಎಂದು ಅವರು ತಿಳಿಸಿದರು.

​ಕಳೆದ ಎರಡು ವರ್ಷಗಳಲ್ಲಿ ಸಂಘವು ಸಾಧಿಸಿದ ಮೈಲಿಗಲ್ಲುಗಳನ್ನು ಸ್ಮರಿಸಿದ ಅವರು, “ಸಂಘಟನೆಯು ಕೇವಲ ಹೆಸರಿಗಷ್ಟೇ ಸೀಮಿತವಾಗದೆ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಪತ್ರಕರ್ತರ ಧ್ವನಿಯಾಗಿ ಮಾರ್ಪಟ್ಟಿದೆ. ಇಂದು ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಅವರಿಗೆ ನ್ಯಾಯ ಕೊಡಿಸಲು ನಮ್ಮ ಸಂಘವು ಶಕ್ತಿಯುತವಾಗಿ ಬೆಳೆದು ನಿಂತಿದೆ. ಇದು ಕೇವಲ ಎರಡೇ ವರ್ಷದ ಸಾಧನೆಯಾದರೂ, ಇದರ ಹಿಂದೆ ರಾಜ್ಯದ ನೂರಾರು ಪತ್ರಕರ್ತರ ನಿಸ್ವಾರ್ಥ ಶ್ರಮ ಮತ್ತು ಬೆಂಬಲವಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.

​ಪತ್ರಿಕೋದ್ಯಮದ ಇಂದಿನ ಸ್ಥಿತಿಗತಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಬಂಗ್ಲೆ ಮಲ್ಲಿಕಾರ್ಜುನ್, “ನೇರವಾಗಿ ಕೇಳಬೇಕು ಮತ್ತು ನೇರವಾಗಿ ಹೇಳಬೇಕು ಎಂಬುದೇ ಪತ್ರಕರ್ತರ ಮೂಲ ಮಂತ್ರವಾಗಬೇಕು. ಯಾವುದೇ ರಾಜಕೀಯ ಅಥವಾ ಆಮಿಷಗಳಿಗೆ ಒಳಗಾಗದೆ, ಜನಸಾಮಾನ್ಯರ ಪರವಾಗಿ ಧ್ವನಿ ಎತ್ತುವ ಧೈರ್ಯ ನಮಗಿರಬೇಕು. ಸಮಾಜದಲ್ಲಿನ ಅನ್ಯಾಯಗಳನ್ನು ಬಯಲಿಗೆಳೆಯುವ ಸಂದರ್ಭದಲ್ಲಿ ಬರುವ ಸವಾಲುಗಳನ್ನು ಎದುರಿಸಲು ನಾವೆಲ್ಲರೂ ಒಗ್ಗಟ್ಟಾಗಬೇಕು,” ಎಂದು ಕರೆ ನೀಡಿದರು.

​ಪತ್ರಕರ್ತರ ಸಂಕಷ್ಟಗಳಿಗೆ ಸಂಘವು ಸ್ಪಂದಿಸುವ ರೀತಿಯನ್ನು ವಿವರಿಸುತ್ತಾ ಅವರು ಒಂದು ಭಾವುಕ ಉದಾಹರಣೆಯನ್ನು ಹಂಚಿಕೊಂಡರು:

​”ಪತ್ರಕರ್ತರು ಸದಾ ಕಾಲ ಸಮಾಜದ ಸಮಸ್ಯೆಗಳ ಬಗ್ಗೆ ಬರೆಯುತ್ತಾರೆ, ಆದರೆ ಅವರ ಸ್ವಂತ ಜೀವನದಲ್ಲಿ ನೋವು ಬಂದಾಗ ಕೇಳುವವರಿರುವುದಿಲ್ಲ. ನಮ್ಮ ಸಂಘದ ಜಿಲ್ಲಾಧ್ಯಕ್ಷರೊಬ್ಬರು ಕಳೆದ ಐದು ತಿಂಗಳಿಂದ ತೀವ್ರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಪಡೆಯುತ್ತಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಸಂಘವು ಅವರ ಬೆನ್ನಿಗೆ ನಿಂತಿದೆ. ಆರ್ಥಿಕ ಸಹಾಯದ ಜೊತೆಗೆ ಅವರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಸಂಘ ಎಂದರೆ ಕೇವಲ ಸಭೆ-ಸಮಾರಂಭವಲ್ಲ, ಅದು ಸಂಕಷ್ಟದಲ್ಲಿರುವ ಸದಸ್ಯರ ಪಾಲಿನ ಆಸರೆಯಾಗಬೇಕು,” ಎಂದರು.

​ಲೇಖನಿಯಲ್ಲಿ ಸತ್ಯವಿರಲಿ, ಮನಸ್ಸಿನಲ್ಲಿ ಒಗ್ಗಟ್ಟಿರಲಿ ಎಂಬ ಸಂದೇಶ ನೀಡಿದ ಅವರು, “ಪತ್ರಕರ್ತರಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರಬಹುದು, ಆದರೆ ವೃತ್ತಿಪರ ಹಿತಾಸಕ್ತಿ ಬಂದಾಗ ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು. ಈ ಒಗ್ಗಟ್ಟು ನಮ್ಮನ್ನು ವ್ಯವಸ್ಥೆಯ ವಿರುದ್ಧ ಹೋರಾಡಲು ಪ್ರೇರೇಪಿಸುತ್ತದೆ,” ಎಂದು ತಿಳಿಸಿದರು.

​”ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಡಿ.ಜಿ. ನಾಗರಾಜ್ ಮತ್ತು ಅವರ ತಂಡದ ದಕ್ಷತೆಯನ್ನು ಹೊಗಳಿದ ಬಂಗ್ಲೆ ಮಲ್ಲಿಕಾರ್ಜುನ್ ಅವರು, ‘ಶಿವಮೊಗ್ಗ ಜಿಲ್ಲೆಯಲ್ಲಿ ಸಂಘಟನೆಯು ಅತ್ಯಂತ ವ್ಯವಸ್ಥಿತವಾಗಿ ಮತ್ತು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ವಿಶೇಷವಾಗಿ, ಶಿವಮೊಗ್ಗ ನಗರದ ಪತ್ರಿಕಾ ಭವನದ ಹಿತರಕ್ಷಣೆಗಾಗಿ ಜಿಲ್ಲಾ ಘಟಕವು ನಡೆಸಿದ ದಿಟ್ಟ ಹೋರಾಟ ಮತ್ತು ಸಂಘಟಿತ ಪ್ರಯತ್ನವು ಪತ್ರಕರ್ತರ ಹಿತ ಕಾಯುವಲ್ಲಿ ಸಂಘಕ್ಕಿರುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಪತ್ರಕರ್ತರನ್ನು ಒಗ್ಗೂಡಿಸಿ, ಬಲಿಷ್ಠ ಸಂಘಟನೆಯನ್ನು ಕಟ್ಟುತ್ತಿರುವುದು ಶ್ಲಾಘನೀಯ. ಈ ತಂಡದ ಶ್ರಮ ಮತ್ತು ಸಂಘಟನಾ ಚತುರತೆಗೆ ರಾಜ್ಯ ಘಟಕವು ಸದಾ ಬೆನ್ನೆಲುಬಾಗಿ ನಿಲ್ಲಲಿದೆ. ಜಿಲ್ಲೆಯ ಪತ್ರಕರ್ತರ ಹಿತರಕ್ಷಣೆ ಮತ್ತು ಸಂಘಟನೆಯ ಬಲವರ್ಧನೆಗೆ ರಾಜ್ಯ ಘಟಕದಿಂದ ಬೇಕಾದ ಎಲ್ಲಾ ರೀತಿಯ ಸಹಕಾರ ಹಾಗೂ ಪ್ರೋತ್ಸಾಹವನ್ನು ನಿರಂತರವಾಗಿ ನೀಡಲಾಗುವುದು’ ಎಂದು ಭರವಸೆ ನೀಡಿದರು.”

​ಶಿವಮೊಗ್ಗದಲ್ಲಿ ಅತ್ಯಂತ ವೈಭವ ಹಾಗೂ ಅದ್ದೂರಿಯಾಗಿ ಜರುಗಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಪತ್ರಕರ್ತರ ಒಗ್ಗಟ್ಟಿಗೆ ಸಾಕ್ಷಿಯಾಯಿತು. ಸಂಘದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್, ಜಿಲ್ಲಾಧ್ಯಕ್ಷರಾದ ಡಿ.ಜಿ. ನಾಗರಾಜ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸತೀಶ್ ಗೌಡ ಅವರನ್ನು ಶಿಕಾರಿಪುರ ತಾಲ್ಲೂಕು ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದಿಸಿದರು. ಕಳೆದ ಎರಡು ವರ್ಷಗಳಿಂದ ಯಾವುದೇ ಎದೆಗುಂದದೆ, ದಕ್ಷತೆಯಿಂದ ಇಡೀ ರಾಜ್ಯದ ಪತ್ರಕರ್ತರ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಮತ್ತು ಸಮಾಜದ ಲೋಪದೋಷಗಳನ್ನು ತಿದ್ದುವ ಸಮಾಜಮುಖಿ ಚಿಂತನೆಯ ಇವರ ನಾಯಕತ್ವವನ್ನು ಅಭಿಮಾನದಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ಶಿಕಾರಿಪುರ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಭುವನೇಶ್ವರ್, ಪತ್ರಕರ್ತ ಹಾಗೂ ಕೃಷಿಕ ಸಮಾಜದ ನಿರ್ದೇಶಕರಾದ ಶಿವಕುಮಾರ್ ಡಿ.ಡಿ, ಪತ್ರಕರ್ತರಾದ ಯುವರಾಜ್, ವಿಜಯಕುಮಾರ್, ರಾಜಕುಮಾರ್, ಶಂಶು ಜಾನ್, ರಾಧಾಕೃಷ್ಣ, ತೀರ್ಥಪ್ಪ, ಗೋಪಿನಾಥ್ ಭಟ್ಟರ್ ಸೇರಿದಂತೆ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

Leave a Comment