ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಮೋದಿ ವಿಶ್ವನಾಯಕ, ಅಮಿತ್ ಶಾ ಆಧುನಿಕ ಪಟೇಲರು, ಬಿಎಸ್‌ವೈ ರೈತರ ಸಂಜೀವಿನಿ”: ಸಿರಿಗೆರೆ ಶ್ರೀ ತರಳಬಾಳು ಜಗದ್ಗುರುಗಳು

On: May 10, 2026 9:23 AM
Follow Us:

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಭಾನುವಾರ ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ ಕಾರ್ಯಕ್ರಮ ಭವ್ಯ ಜನಸಾಗರದ ಮಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ನೀಡಿದ ಭಾಷಣ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿತು. ರಾಷ್ಟ್ರ ಏಕತೆ, ನಾಯಕತ್ವ, ರೈತಪರ ಸೇವೆ ಮತ್ತು ಬಸವತತ್ವಗಳ ಸುತ್ತ ಹೆಣೆದ ಸ್ವಾಮೀಜಿಗಳ ಮಾತುಗಳು ಸಮಾರಂಭದಲ್ಲಿ ವಿಶೇಷ ಸ್ಪಂದನೆ ಮೂಡಿಸಿತು.

ಬೃಹತ್ ಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ಭಾರತದ ಏಕೀಕರಣದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪಾತ್ರವನ್ನು ಸ್ಮರಿಸಿದರು. “ಸ್ವಾತಂತ್ರ್ಯಾನಂತರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತವನ್ನು ಏಕೀಕೃತ ರಾಷ್ಟ್ರವನ್ನಾಗಿ ರೂಪಿಸುವ ಮಹತ್ತರ ಕಾರ್ಯವನ್ನು ದೇಶದ ಮೊದಲ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಮಾಡಿದ್ದಾರೆ. ನಾವು ಅವರನ್ನು ಕಣ್ಣಾರೆ ಕಂಡಿಲ್ಲ, ಪುಸ್ತಕಗಳಲ್ಲಿ ಓದಿದ್ದೇವೆ. ಆದರೆ ಆ ಕಾಲದಲ್ಲಿ ಪಟೇಲರು ಮಾಡಿದ ರಾಷ್ಟ್ರ ಸಂಘಟನೆಯ ಕಾರ್ಯವನ್ನೇ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಡುತ್ತಿರುವುದು ದೇಶದ ಸೌಭಾಗ್ಯ,” ಎಂದು ಹೇಳಿದರು.

​ತಮ್ಮ ಭಾಷಣದ ಆರಂಭದಲ್ಲಿಯೇ ಅಚ್ಚರಿ ಮೂಡಿಸಿದ ಶ್ರೀಗಳು, ಅಮಿತ್ ಶಾ ಅವರಿಗೆ ಈ ಭಾಗದ ಜನರ ಭಾವನೆಗಳು ನೇರವಾಗಿ ತಲುಪಲಿ ಎಂಬ ಉದ್ದೇಶದಿಂದ ಹಿಂದಿ ಭಾಷೆಯಲ್ಲಿಯೇ ಮಾತನಾಡಿದರು.

​”ನಾನು ಇಂದು ಹೊಗಳಿಕೆಗಾಗಿ ಈ ಮಾತು ಹೇಳುತ್ತಿಲ್ಲ. ಅಂದು ಸರ್ದಾರ್ ಪಟೇಲರು ಹರಿದು ಹಂಚಿಹೋಗಿದ್ದ ಸಂಸ್ಥಾನಗಳನ್ನು ಒಂದುಗೂಡಿಸಿ ಅಖಂಡ ಭಾರತ ನಿರ್ಮಿಸಿದರು. ಇಂದು ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿ, ದೇಶದ ಭದ್ರತೆಯನ್ನು ಉತ್ತುಂಗಕ್ಕೆ ಏರಿಸುವ ಮೂಲಕ ಅಮಿತ್ ಶಾ ಅವರು ಪಟೇಲರ ಉತ್ತರಾಧಿಕಾರಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ,” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಮಿತ್ ಶಾ ಅವರ ಕಾರ್ಯಕ್ರಮದ ಹಾಜರಾತಿಯನ್ನು ಉಲ್ಲೇಖಿಸಿದ ಶ್ರೀಗಳು, “ಉತ್ತರ ಮತ್ತು ದಕ್ಷಿಣ ಭಾರತ ಎಂದಿಗೂ ಒಂದಾಗುವುದಿಲ್ಲ ಎಂಬ ಭಾವನೆ ಕೆಲವರಲ್ಲಿದೆ. ಆದರೆ ಇಂದು ಚಿತ್ರದುರ್ಗದಲ್ಲಿ ಉತ್ತರ ಮತ್ತು ದಕ್ಷಿಣದ ಸಂಗಮ ನಡೆದಿದೆ. ಕಲ್ಕತ್ತಾದಿಂದ ಇಲ್ಲಿಗೆ ಬಂದಿರುವ ಅಮಿತ್ ಶಾ ಅವರು ರಾಷ್ಟ್ರೀಯ ಏಕತೆಯ ಪ್ರತೀಕವಾಗಿದ್ದಾರೆ,” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸೇರಿದ್ದ ಲಕ್ಷಾಂತರ ಜನರತ್ತ ತೋರಿಸಿ, “ಇಷ್ಟು ದೊಡ್ಡ ಜನಸ್ತೋಮವೇ ಯಡಿಯೂರಪ್ಪ ಅವರ ಜನಪ್ರಿಯತೆಗೆ ಸಾಕ್ಷಿ,” ಎಂದು ಅವರು ಹೇಳಿದರು.

​ಚಿತ್ರದುರ್ಗದ ಈ ಸಮಾವೇಶ ಕೇವಲ ರಾಜಕೀಯ ಕಾರ್ಯಕ್ರಮವಲ್ಲ, ಬದಲಾಗಿ ಇದು ಉತ್ತರ ಮತ್ತು ದಕ್ಷಿಣ ಭಾರತದ ಸಂಸ್ಕೃತಿಯನ್ನು ಬೆಸೆಯುವ ಸಂಕೇತ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. “ಕನ್ಯಾಕುಮಾರಿಯ ಭಕ್ತಿ ಮತ್ತು ಕಾಶ್ಮೀರದ ಶಕ್ತಿ ಎರಡೂ ಒಂದೇ ಎಂಬ ಸಂದೇಶ ಇಂದು ಇಲ್ಲಿಂದ ಇಡೀ ದೇಶಕ್ಕೆ ರವಾನೆಯಾಗುತ್ತಿದೆ,” ಎಂದರು.

ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಹಾಗೂ ಸಾರ್ವಜನಿಕ ಸೇವೆಯನ್ನು ಸ್ಮರಿಸಿದ ಶ್ರೀಗಳು, ಅವರ ಹುಟ್ಟೂರಿನ ಹೆಸರಿನ ಅರ್ಥವನ್ನೇ ವಿಶಿಷ್ಟವಾಗಿ ವಿವರಿಸಿದರು. “ಯಡಿಯೂರಪ್ಪ ಅವರ ಹೆಸರಿನ ಆರಂಭವೇ ‘ಬೂಕನಕೆರೆ’ಯಿಂದ. ‘ಕೆರೆ’ ಎಂದರೆ ಜಲಾಶಯ. ನಮ್ಮ ರಾಜ್ಯದಲ್ಲಿ ‘ಕೆರೆ’ ಪದದಿಂದ ಕೊನೆಗೊಳ್ಳುವ ಅನೇಕ ಗ್ರಾಮಗಳಿವೆ. ಆದರೆ ಯಡಿಯೂರಪ್ಪ ಅವರ ಹೆಸರೇ ‘ಬೂಕನಕೆರೆ’ಯಿಂದ ಆರಂಭವಾಗುತ್ತದೆ. “ಯಡಿಯೂರಪ್ಪನವರ ಊರಿನ ಹೆಸರು ಬೂಕನಕೆರೆ. ಹೆಸರಿನಲ್ಲೇ ‘ಕೆರೆ’ ಇಟ್ಟುಕೊಂಡು ಬಂದ ಅವರು, ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಬಾಳಿಗೆ ಸಂಜೀವಿನಿಯಾದರು.”

ಸ್ವಾಮೀಜಿಗಳ ಭಾಷಣದಲ್ಲಿ ಹಾಸ್ಯ ಮಿಶ್ರಿತ ರೂಪಕವೂ ಗಮನ ಸೆಳೆಯಿತು. “ಒಂದು ವೇಳೆ ಭಗವಂತ ಅಡಿಕೆ ಮರಗಳಿಗೆ ನಡೆಯುವ ಶಕ್ತಿ ನೀಡಿದ್ದರೆ, ರಾಜ್ಯದ ಎಲ್ಲ ಅಡಿಕೆ ಮರಗಳೂ ಇಲ್ಲಿಗೆ ಬಂದು ಯಡಿಯೂರಪ್ಪ ಅವರ ಮುಂದೆ ಬಾಗಿ ನಮಸ್ಕರಿಸುತ್ತಿದ್ದವು,” ಎಂದು ಹೇಳುತ್ತಿದ್ದಂತೆ ನೆರೆದಿದ್ದ ಜನಸಾಗರ ಚಪ್ಪಾಳೆ ಹಾಗೂ ನಗುವಿನಿಂದ ಮೊಳಗಿತು.

“ಅಷ್ಟೊಂದು ಅಡಿಕೆ ಮರಗಳು ಇಲ್ಲಿ ಬಂದಿದ್ದರೆ, ಸಂಘಟಕರಾದ ಕಾರಜೋಳ ಹಾಗೂ ವಿಜಯೇಂದ್ರ ಅವರಿಗೆ ವ್ಯವಸ್ಥೆ ಮಾಡಲು ಕಷ್ಟವಾಗುತ್ತಿತ್ತು. ಈ ವೇದಿಕೆ ಚಿಕ್ಕದಾಗಿ ಹೋಗುತ್ತಿತ್ತು,” ಎಂದು ಅವರು ಹಾಸ್ಯ ಚಟಾಕಿ ಹಾರಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಮಾತನಾಡಿದ ಶ್ರೀಗಳು, “ಒಂದು ಕಾಲದಲ್ಲಿ ಅಮೆರಿಕವನ್ನು ವಿಶ್ವದ ‘ದೊಡ್ಡಣ್ಣ’ ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ಆ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ವಿಶ್ವದ ನಾಯಕನಾಗಿ ಮೋದಿ ಹೊರಹೊಮ್ಮಿದ್ದಾರೆ,” ಎಂದು ಹೇಳಿದರು.

‘MODI’ ಎಂಬ ಹೆಸರನ್ನು ಕನ್ನಡದಲ್ಲಿ ಬರೆದರೆ ಅದು ‘ಮೋಡಿ’ ಎಂದಾಗುತ್ತದೆ. “ಮೋದಿ ಎಂಬ ಹೆಸರೇ ಜನರನ್ನು ಮೋಡಿ ಮಾಡುವ ಶಕ್ತಿಯ ಪ್ರತೀಕವಾಗಿದೆ. ಅವರು ದೇಶಕ್ಕೆ ನೀಡಿರುವ ನಾಯಕತ್ವ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿದೆ,” ಎಂದು ಅವರು ಗುಣಗಾನ ಮಾಡಿದರು.

ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಶ್ರೀಗಳು, “ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಕೂಡಲಸಂಗನ ಶರಣರೇ ಕುಲಜರು”
ಎಂಬ ವಚನದ ಅರ್ಥವನ್ನು ವಿವರಿಸಿದರು.

“ಎಲ್ಲ ಜೀವಿಗಳ ಒಳಿತನ್ನು ಬಯಸುವವನೇ ನಿಜವಾದ ಒಳ್ಳೆಯ ಮನುಷ್ಯ. ಆ ಮೌಲ್ಯವನ್ನು ಯಡಿಯೂರಪ್ಪ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ರೈತರು, ಬಡವರು, ಹಿಂದುಳಿದವರ ಬದುಕಿಗೆ ಸ್ಪಂದಿಸುವ ಕಾರ್ಯವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಬಿಜೆಪಿ ನಾಯಕರು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ವಿವಿಧ ಮಠಾಧೀಶರು ಭಾಗವಹಿಸಿದ್ದರು. ಬಿಎಸ್‌ವೈ ಅವರ ರಾಜಕೀಯ ಬದುಕಿನ ಐದು ದಶಕಗಳ ಸೇವೆಯನ್ನು ಸ್ಮರಿಸುವ ಬ್ಯಾನರ್‌ಗಳು, ಘೋಷಣೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ಮತ್ತಷ್ಟು ಮೆರುಗು ತಂದವು.

ಅಭಿಮಾನೋತ್ಸವವು ಕೇವಲ ರಾಜಕೀಯ ಕಾರ್ಯಕ್ರಮವಾಗಿರದೆ, ಯಡಿಯೂರಪ್ಪ ಅವರ ಜನಪರ ರಾಜಕಾರಣಕ್ಕೆ ಸಲ್ಲಿಸಿದ ಸಾರ್ವಜನಿಕ ಗೌರವವಾಗಿ ರೂಪುಗೊಂಡಿತು.

K.M.Sathish Gowda

Join WhatsApp

Join Now

Facebook

Join Now

Read more

Leave a Comment