ಶಿವಮೊಗ್ಗ: ಭಾರತದ ರಾಜಕೀಯ ಇತಿಹಾಸದಲ್ಲಿ ಅಪರೂಪದ ಮೈಲಿಗಲ್ಲೊಂದನ್ನು ಸ್ಥಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಸತತ 12 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದು ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಮಹತ್ವದ ಅಧ್ಯಾಯವಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತವು ಕೇವಲ ಸರ್ಕಾರದ ಅವಧಿಯಲ್ಲ, ಅದು ಭಾರತದ ಪುನರುತ್ಥಾನದ ಯುಗವಾಗಿದ್ದು, ದೇಶದ ಆತ್ಮವಿಶ್ವಾಸ, ಆರ್ಥಿಕ ಶಕ್ತಿ, ಜಾಗತಿಕ ಗೌರವ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಅವಿಸ್ಮರಣೀಯ ಕಾಲಘಟ್ಟವಾಗಿದೆ ಎಂದು ಬಣ್ಣಿಸಿದರು.

“ಇತಿಹಾಸದ ಪುಟಗಳಲ್ಲಿ ಹೊಸ ಅಧ್ಯಾಯ: ಸತತ 4,399 ದಿನಗಳ ಯಶಸ್ವಿ ಆಡಳಿತದ ವಿಶ್ವನಾಯಕ ನರೇಂದ್ರ ಮೋದಿ”: ಬಿ.ವೈ.ರಾಘವೇಂದ್ರ
ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದ ಅಪೂರ್ವ ಕಾಲಘಟ್ಟವೊಂದಕ್ಕೆ ದೇಶ ಸಾಕ್ಷಿಯಾಗುತ್ತಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯಾಗಿ ಸತತ 4,399 ದಿನಗಳ ಕಾಲ ಯಶಸ್ವಿ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಈ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಸುದೀರ್ಘ ಆಡಳಿತಾವಧಿಯ ದಾಖಲೆಯನ್ನು ಹಿಂದಿಕ್ಕಿರುವ ಮೋದಿ ಅವರು, ಜನಬೆಂಬಲದೊಂದಿಗೆ ನಿರಂತರವಾಗಿ ದೇಶವನ್ನು ಮುನ್ನಡೆಸುತ್ತಿರುವ ಪ್ರಮುಖ ಕಾಂಗ್ರೆಸ್ಸೇತರ ಪ್ರಧಾನಿಯಾಗಿ ಹೊರಹೊಮ್ಮಿದ್ದಾರೆ. ಕೇವಲ ಆಡಳಿತದ ಅವಧಿಯ ದೃಷ್ಟಿಯಿಂದಷ್ಟೇ ಅಲ್ಲ, ಬದಲಾಗಿ ಅವರು ಜಾರಿಗೆ ತಂದ ಜನಕಲ್ಯಾಣಕಾರಿ ಯೋಜನೆಗಳು, ಕೈಗೊಂಡ ದಿಟ್ಟ ಹಾಗೂ ದೂರದೃಷ್ಟಿಯ ನಿರ್ಧಾರಗಳು ಮತ್ತು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿದ ನಾಯಕತ್ವವು ಭಾರತವನ್ನು ವಿಶ್ವದ ಪ್ರಮುಖ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ಪ್ರತಿಷ್ಠಾಪಿಸಿದೆ ಎಂದು ಹೇಳಿದರು.


ಬಡವರ ಕಲ್ಯಾಣ ಮತ್ತು ಜೀವನಮಟ್ಟದ ಸುಧಾರಣೆ
ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 12 ವರ್ಷಗಳ ಆಡಳಿತವು ಬಡವರು, ಶೋಷಿತರು, ರೈತರು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣಕ್ಕೆ ಸಮರ್ಪಿತವಾಗಿತ್ತು. ಕೇಂದ್ರ ಸರ್ಕಾರದ ದೃಢ ಸಂಕಲ್ಪ ಮತ್ತು ಜನಪರ ಯೋಜನೆಗಳ ಪರಿಣಾಮವಾಗಿ ದೇಶದ ಸುಮಾರು 25 ಕೋಟಿಗೂ ಹೆಚ್ಚು ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ವಿವಿಧ ವರದಿಗಳು ಸೂಚಿಸುತ್ತವೆ. ‘ಸ್ವಚ್ಛ ಭಾರತ ಅಭಿಯಾನ’ದಡಿ 12 ಕೋಟಿಗೂ ಅಧಿಕ ಶೌಚಾಲಯಗಳ ನಿರ್ಮಾಣ ಹಾಗೂ ‘ಜಲಜೀವನ್ ಮಿಷನ್’ ಯೋಜನೆಯ ಮೂಲಕ 15 ಕೋಟಿಗೂ ಹೆಚ್ಚು ಮನೆಗಳಿಗೆ ಶುದ್ಧ ಕುಡಿಯುವ ನೀರಿನ ನೇರ ನಳ್ಳಿ ಸಂಪರ್ಕ ಕಲ್ಪಿಸಿರುವುದು ಗ್ರಾಮೀಣ ಭಾರತದ ಬದುಕಿನಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಿದೆ.
ವಿಶೇಷವಾಗಿ, ನೀರಿಗಾಗಿ ಪ್ರತಿದಿನ ಕಿಲೋಮೀಟರ್ಗಟ್ಟಲೆ ನಡೆದು ಹೋಗಬೇಕಾಗಿದ್ದ ಗ್ರಾಮೀಣ ಮಹಿಳೆಯರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮನೆಮನೆಗೆ ಶುದ್ಧ ಕುಡಿಯುವ ನೀರು ತಲುಪಿಸಿರುವುದು ಗಮನಾರ್ಹ ಸಾಧನೆಯಾಗಿದೆ. ಇದರ ಜೊತೆಗೆ, ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯಡಿ ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಣೆ ಹಾಗೂ ‘ಪ್ರಧಾನಮಂತ್ರಿ ಆವಾಸ್ ಯೋಜನೆ’ಯಡಿ 4 ಕೋಟಿಗೂ ಅಧಿಕ ಬಡ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಿ ನೀಡಿರುವುದು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಮಾಜಿಕ ಭದ್ರತೆ ಮತ್ತು ಜನಕಲ್ಯಾಣ ಕಾರ್ಯಕ್ರಮಗಳಾಗಿ ಗುರುತಿಸಿಕೊಂಡಿವೆ ಎಂದು ಹೇಳಿದರು.

ಆರೋಗ್ಯ ವಲಯದಲ್ಲಿ ಜಾಗತಿಕ ಮೈಲಿಗಲ್ಲು
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೊಂಡಿರುವ ಆಯುಷ್ಮಾನ್ ಭಾರತ್ ಯೋಜನೆಯು ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಕಾರ್ಯಕ್ರಮಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ದೇಶದ 55 ಕೋಟಿಗೂ ಹೆಚ್ಚು ಜನರಿಗೆ ಆರೋಗ್ಯ ಭದ್ರತೆಯ ಕವಚವಾಗಿರುವ ಈ ಯೋಜನೆಯಡಿ ₹1.48 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ವೆಚ್ಚ ಮಾಡಿ, 10 ಕೋಟಿಗೂ ಹೆಚ್ಚು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ಆಸ್ಪತ್ರೆ ಚಿಕಿತ್ಸೆಯ ಸೌಲಭ್ಯ ಕಲ್ಪಿಸಲಾಗಿದೆ. ದುಬಾರಿ ವೈದ್ಯಕೀಯ ವೆಚ್ಚದಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಈ ಯೋಜನೆ ಸಂಜೀವಿನಿಯಾಗಿ ಪರಿಣಮಿಸಿದೆ.
ಇತ್ತೀಚೆಗೆ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ, 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೂ ಆಯುಷ್ಮಾನ್ ವಯೋ ವಂದನಾ ಕಾರ್ಡ್ ಮೂಲಕ ಉಚಿತ ಆರೋಗ್ಯ ಸೇವೆಯ ಸೌಲಭ್ಯ ಒದಗಿಸಲಾಗಿದೆ. ಆರೋಗ್ಯ ಸೇವೆಯನ್ನು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿ ಪರಿಗಣಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಚಿಕಿತ್ಸೆ ದೊರಕುವಂತೆ ಮಾಡುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ. ಜನಸಾಮಾನ್ಯರ ಆರೋಗ್ಯ ಮತ್ತು ಜೀವನಮಟ್ಟ ಸುಧಾರಣೆಗೆ ಕೈಗೊಂಡಿರುವ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮವು ಸರ್ಕಾರದ ಮಾನವೀಯತೆ ಮತ್ತು ಜನಪರ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ಆರ್ಥಿಕ ಪ್ರಗತಿ ಮತ್ತು ಡಿಜಿಟಲ್ ಕ್ರಾಂತಿ
ಕೋವಿಡ್-19 ಸಾಂಕ್ರಾಮಿಕದಂತಹ ಜಾಗತಿಕ ಸಂಕಷ್ಟಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾದ ಆರ್ಥಿಕ ಮತ್ತು ಭೌರಾಜಕೀಯ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆಯನ್ನು ಸ್ಥಿರವಾಗಿ ಮುನ್ನಡೆಸಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಸಲ್ಲುತ್ತದೆ. 2014ರಲ್ಲಿ ವಿಶ್ವದ ಪ್ರಮುಖ ಆರ್ಥಿಕತೆಗಳ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತವು ಇಂದು ವಿಶ್ವದ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವುದು ದೇಶದ ಆರ್ಥಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ‘ಒಂದು ದೇಶ, ಒಂದು ತೆರಿಗೆ’ ಪರಿಕಲ್ಪನೆಯಡಿ ಜಾರಿಗೆ ಬಂದ ಜಿಎಸ್ಟಿ (GST) ಹಾಗೂ ಡಿಜಿಟಲ್ ಇಂಡಿಯಾ ಅಭಿಯಾನವು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಪರಿವರ್ತನೆಗೆ ಕಾರಣವಾಗಿವೆ.
ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಭಾರತ ಇಂದು ಜಗತ್ತಿಗೆ ಮಾದರಿಯಾಗಿದ್ದು, ಯುಪಿಐ (UPI) ವ್ಯವಸ್ಥೆಯ ಮೂಲಕ ಕೋಟ್ಯಂತರ ವಹಿವಾಟುಗಳು ಪ್ರತಿದಿನ ಸುಲಭವಾಗಿ ನಡೆಯುತ್ತಿವೆ. ಭಾರತದ ಡಿಜಿಟಲ್ ಪಾವತಿ ಮಾದರಿಯನ್ನು ಹಲವು ರಾಷ್ಟ್ರಗಳು ಅಧ್ಯಯನ ಮಾಡುತ್ತಿವೆ. ಇದೇ ವೇಳೆ, ಉದ್ಯಮಶೀಲತೆಗೆ ನೀಡಿದ ಉತ್ತೇಜನ ಮತ್ತು ಸ್ಟಾರ್ಟ್ಅಪ್ ಇಂಡಿಯಾ ಕಾರ್ಯಕ್ರಮದ ಪರಿಣಾಮವಾಗಿ 2014ರಲ್ಲಿ ಕೆಲವೇ ನೂರರಷ್ಟಿದ್ದ ಸ್ಟಾರ್ಟ್ಅಪ್ಗಳ ಸಂಖ್ಯೆ ಇಂದು 2.3 ಲಕ್ಷಕ್ಕೂ ಅಧಿಕಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದು, ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿದೆ ಎಂದು ಹೇಳಿದರು.

ಆತ್ಮನಿರ್ಭರತೆ ಮತ್ತು ಮೂಲಸೌಕರ್ಯ ಕ್ರಾಂತಿ
ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ್’ ಪರಿಕಲ್ಪನೆಯು ಕೇವಲ ಘೋಷಣೆಯಾಗಿ ಉಳಿಯದೆ, ದೇಶದ ಕೈಗಾರಿಕಾ ವಲಯಕ್ಕೆ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸ ತುಂಬುವಲ್ಲಿ ಯಶಸ್ವಿಯಾಗಿದೆ. ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವ ಮೂಲಕ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ಪ್ರಯತ್ನಗಳು ಫಲ ನೀಡುತ್ತಿವೆ. ಶಿವಮೊಗ್ಗದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಫೌಂಡ್ರಿ ಕ್ಲಸ್ಟರ್ ಹಾಗೂ ರಕ್ಷಣಾ ವಲಯದ ಉತ್ಪನ್ನಗಳು ಇಂದು ವಿಶ್ವದ ಸುಮಾರು 30 ರಾಷ್ಟ್ರಗಳಿಗೆ ರಫ್ತಾಗುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಕೈಗಾರಿಕಾ ಉತ್ತೇಜನ ನೀತಿಗಳು ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನ ಪ್ರಮುಖ ಕಾರಣವಾಗಿದೆ.
ಮೂಲಸೌಕರ್ಯ ಕ್ಷೇತ್ರದಲ್ಲಿ ಕಳೆದ 12 ವರ್ಷಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಕೇಂದ್ರ ಸರ್ಕಾರ ಮಾಡಿದೆ. 2014ರ ಮೊದಲು ಕೇವಲ 5 ನಗರಗಳಿಗೆ ಸೀಮಿತವಾಗಿದ್ದ ಮೆಟ್ರೋ ರೈಲು ಜಾಲವು ಇಂದು 29ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಗೊಂಡಿದ್ದು, ನಗರ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಎಕ್ಸ್ಪ್ರೆಸ್ವೇಗಳು, ವಿಮಾನ ನಿಲ್ದಾಣಗಳು, ರೈಲ್ವೆ ಆಧುನೀಕರಣ ಮತ್ತು ಬಂದರುಗಳ ಅಭಿವೃದ್ಧಿಗೆ ಭಾರಿ ಪ್ರಮಾಣದ ಅನುದಾನ ಮೀಸಲಿಡಲಾಗಿದೆ.
ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ ಜಪಾನ್ನೊಂದಿಗೆ ಸುಮಾರು ₹80,000 ಕೋಟಿ ಮೌಲ್ಯದ ಹಣಕಾಸು ಸಹಕಾರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅತ್ಯಂತ ಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿಯ ಸಾಲ ಸೌಲಭ್ಯ ಪಡೆಯಲಾಗಿದೆ. ಈ ಯೋಜನೆಯ ಮೂಲಕ ಅತ್ಯಾಧುನಿಕ ರೈಲು ತಂತ್ರಜ್ಞಾನವನ್ನು ಭಾರತಕ್ಕೆ ತರಲಾಗುತ್ತಿದ್ದು, ತಂತ್ರಜ್ಞಾನ ವರ್ಗಾವಣೆ ಹಾಗೂ ಕೌಶಲ್ಯ ಅಭಿವೃದ್ಧಿಯ ಮೂಲಕ ಭವಿಷ್ಯದಲ್ಲಿ ದೇಶದ ಇತರೆ ಭಾಗಗಳಿಗೂ ಇದೇ ಮಾದರಿಯ ವೇಗದ ರೈಲು ಜಾಲವನ್ನು ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ಮೋದಿ ಸರ್ಕಾರ ನೀಡಿರುವ ಆದ್ಯತೆ ದೇಶದ ಆರ್ಥಿಕ ಬೆಳವಣಿಗೆಗೆ ಹೊಸ ವೇಗವನ್ನು ನೀಡಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.

ರಾಷ್ಟ್ರೀಯ ಭದ್ರತೆಯಲ್ಲಿ ದಿಟ್ಟ ನಾಯಕತ್ವ
ಭಾರತದ ಭದ್ರತಾ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಯಾವುದೇ ರಾಜಿ ಮಾಡಿಕೊಳ್ಳದ ನಾಯಕ ಎಂದು ರಾಘವೇಂದ್ರ ಹೇಳಿದರು. ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ, ಸರ್ಜಿಕಲ್ ಸ್ಟ್ರೈಕ್ ಹಾಗೂ ಬಾಲಾಕೋಟ್ ಕಾರ್ಯಾಚರಣೆಗಳಂತಹ ಕ್ರಮಗಳು ಭಾರತದ ಸೇನೆಯ ಸಾಮರ್ಥ್ಯ ಮತ್ತು ರಾಷ್ಟ್ರದ ಸಂಕಲ್ಪವನ್ನು ಜಗತ್ತಿಗೆ ತೋರಿಸಿವೆ ಎಂದು ಹೇಳಿದರು.
ದೇಶದ ಸುರಕ್ಷತೆ ಮತ್ತು ಸಾರ್ವಭೌಮತ್ವದ ವಿಷಯದಲ್ಲಿ ಮೋದಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳು ರಾಷ್ಟ್ರದ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ ಎಂದು ಅವರು ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಗೆ ದೊರೆತ ಭರಪೂರ ಕೊಡುಗೆಗಳು
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಿವಮೊಗ್ಗ ಜಿಲ್ಲೆ ಹಾಗೂ ಮಲೆನಾಡು ಭಾಗದ ಅಭಿವೃದ್ಧಿಗೆ ಅಭೂತಪೂರ್ವ ಪ್ರಮಾಣದ ಅನುದಾನ ಮತ್ತು ಯೋಜನೆಗಳು ದೊರೆತಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಕಳೆದ ಕೆಲವು ವರ್ಷಗಳಲ್ಲಿ ವಿವಿಧ ಕೇಂದ್ರ ಯೋಜನೆಗಳಡಿ ಶಿವಮೊಗ್ಗ ಜಿಲ್ಲೆಗೆ ಸುಮಾರು ₹20,000 ರಿಂದ ₹22,000 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳು ಮಂಜೂರಾಗಿದ್ದು, ರಸ್ತೆ, ರೈಲ್ವೆ, ವಿಮಾನಯಾನ, ನಗರಾಭಿವೃದ್ಧಿ, ಕೈಗಾರಿಕೆ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂದು ಅವರು ತಿಳಿಸಿದರು.
ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು ₹990 ಕೋಟಿ ವೆಚ್ಚದಲ್ಲಿ 73ಕ್ಕೂ ಹೆಚ್ಚು ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ನಗರಾಭಿವೃದ್ಧಿಗೆ ಹೊಸ ರೂಪ ನೀಡಲಾಗಿದೆ. ಸುಮಾರು ₹450 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಾಷ್ಟ್ರಕವಿ ಕುವೆಂಪು ಅವರ ಹೆಸರಿನ ಶಿವಮೊಗ್ಗ ವಿಮಾನ ನಿಲ್ದಾಣವು ಮಲೆನಾಡಿನ ಅಭಿವೃದ್ಧಿಗೆ ಹೊಸ ವೇಗ ನೀಡಿದ್ದು, ಪ್ರವಾಸೋದ್ಯಮ, ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ವಿಸ್ತರಿಸಿದೆ ಎಂದು ಅವರು ಹೇಳಿದರು.
ರೈಲ್ವೆ ಕ್ಷೇತ್ರದಲ್ಲಿಯೂ ಕ್ರಾಂತಿಕಾರಿ ಬದಲಾವಣೆಗಳು ನಡೆದಿವೆ. ಸುಮಾರು ₹990 ಕೋಟಿ ವೆಚ್ಚದ ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಹೊಸ ರೈಲ್ವೆ ಮಾರ್ಗದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ಯೋಜನೆಯು ಮಧ್ಯ ಕರ್ನಾಟಕ ಮತ್ತು ಮಲೆನಾಡಿನ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಿದರು.
ಅದೇ ರೀತಿ, ಮಲೆನಾಡನ್ನು ಕರಾವಳಿ ಭಾಗದೊಂದಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷಿ ಶಿವಮೊಗ್ಗ–ಶೃಂಗೇರಿ–ಮಂಗಳೂರು ರೈಲ್ವೆ ಯೋಜನೆಗೆ ಸಂಬಂಧಿಸಿದ ಅಂತಿಮ ಹಂತದ ಸ್ಥಳ ಪರಿಶೀಲನಾ ಸಮೀಕ್ಷೆ (Final Location Survey) ಕಾರ್ಯ ಭರದಿಂದ ಸಾಗುತ್ತಿದೆ. ಈ ಯೋಜನೆ ಜಾರಿಯಾದರೆ ಮಲೆನಾಡಿನ ಆರ್ಥಿಕ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೊಸ ಉತ್ತೇಜನ ದೊರೆಯಲಿದ್ದು, ಈ ಭಾಗದ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ಹೇಳಿದರು.

ಸಾಂಸ್ಕೃತಿಕ ಪುನರುಜ್ಜೀವನದ ಶಿಲ್ಪಿ
ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ವಿಶ್ವ ಮಟ್ಟದಲ್ಲಿ ಮರುಸ್ಥಾಪಿಸುವಲ್ಲಿ ಪ್ರಧಾನಿ ಮೋದಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ರಾಘವೇಂದ್ರ ಹೇಳಿದರು.
ಶತಮಾನಗಳ ಕನಸಾಗಿದ್ದ ಶ್ರೀ ರಾಮ ಮಂದಿರ ನಿರ್ಮಾಣ, ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದತಿ ಸೇರಿದಂತೆ ಹಲವು ಐತಿಹಾಸಿಕ ನಿರ್ಧಾರಗಳು ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನದ ಸಂಕೇತಗಳಾಗಿವೆ ಎಂದು ಹೇಳಿದರು.
“ಭಾರತವನ್ನು ವಿಶ್ವ ವೈಭವದತ್ತ ಮುನ್ನಡೆಸಿದ ಧೀಮಂತ ನಾಯಕ: ಪ್ರಧಾನಿ ಮೋದಿಯವರಿಗೆ ಶಿವಮೊಗ್ಗದಿಂದ ಗೌರವ ನಮನ”
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ 12 ವರ್ಷಗಳ ಈ ಆಡಳಿತವು ಕೇವಲ ಅಂಕಿ-ಅಂಶಗಳ ಸಾಧನೆಯಲ್ಲ, ಅದು ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ಮೂಡಿಸಿರುವ ಆತ್ಮವಿಶ್ವಾಸದ ಸಂಕೇತ. ದೇಶದ ಕಂಟಕಗಳು ದೂರವಾಗಿ, ಪ್ರಧಾನಿಗಳಿಗೆ ದೇಶವನ್ನು ಮುನ್ನಡೆಸುವ ಮತ್ತಷ್ಟು ಶಕ್ತಿ ಸಿಗಲಿ ಎಂದು ಶಿವಮೊಗ್ಗ ಜಿಲ್ಲೆಯ 100ಕ್ಕೂ ಹೆಚ್ಚು ಪ್ರಮುಖ ದೇವಸ್ಥಾನಗಳಲ್ಲಿ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸಿರುವುದು ಅವರ ಮೇಲಿಟ್ಟಿರುವ ಅಪಾರ ಗೌರವಕ್ಕೆ ಸಾಕ್ಷಿಯಾಗಿದೆ. ಭಾರತವನ್ನು ಜಗತ್ತಿನ ಪರಮ ವೈಭವದ ಸ್ಥಾನಕ್ಕೆ ಕೊಂಡೊಯ್ಯುತ್ತಿರುವ ಈ ಧೀಮಂತ ನಾಯಕನಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಕೆ. ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್ ಹಾಗೂ ಹರಿಕೃಷ್ಣ, ಜಿಲ್ಲಾ ಖಜಾಂಚಿ ಎನ್.ಡಿ. ಸತೀಶ್, ‘ವಿಶ್ವಾಸ, ಅಭಿವೃದ್ಧಿ ಮತ್ತು ಜನಕಲ್ಯಾಣದ 12 ವರ್ಷಗಳ ಅಭಿಯಾನ’ದ ಜಿಲ್ಲಾ ಸಂಚಾಲಕ ಉಪೇಂದ್ರ ನಾಯಕ್, ಸಹ-ಸಂಚಾಲಕರಾದ ಶ್ರೀಮತಿ ಪದ್ಮಿನಿ, ದರ್ಶನ್ ಹಾಗೂ ಹರೀಶ್ ನಾಯಕ್, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಚಂದ್ರಶೇಖರ್ ಎಸ್. ಹಾಗೂ ಸಹ-ಮಾಧ್ಯಮ ಸಂಚಾಲಕ ಮಂಜುನಾಥ್ ಎನ್. ಉಪಸ್ಥಿತರಿದ್ದರು.







