ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶತಮಾನ ಕಂಡ ವಿದ್ಯಾರ್ಥಿ ನಿಲಯಕ್ಕೆ ಹೊಸ ಕಾಯಕಲ್ಪ; ಶಿಕ್ಷಣದ ಮೂಲಕ ಸಮಾಜ ಕಟ್ಟುವ ಪವಿತ್ರ ಕಾರ್ಯ: ಬಿ.ಎಸ್. ಯಡಿಯೂರಪ್ಪ

On: August 16, 2026 10:10 PM
Follow Us:

ಶಿವಮೊಗ್ಗ, ಆ.16: ಶತಮಾನಕ್ಕೂ ಹೆಚ್ಚು ಕಾಲ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆಶ್ರಯ, ಶಿಕ್ಷಣ ಮತ್ತು ಭವಿಷ್ಯದ ಭರವಸೆಯಾಗಿರುವ ನಗರ ಡಿವಿಜನ್ ವೀರಶೈವ ಲಿಂಗಾಯತ ವಿದ್ಯಾರ್ಥಿ ನಿಲಯ ವಿಶ್ವಸ್ಥ ಮಂಡಳಿ ವತಿಯಿಂದ ಹಳೇ ತಾಲ್ಲೂಕು ಕಚೇರಿ ರಸ್ತೆಯಲ್ಲಿರುವ ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾನುವಾರ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗದ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಿದ್ದರು.

ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು, ವಿದ್ಯಾರ್ಥಿ ನಿಲಯದ ಅಭಿವೃದ್ಧಿಗಾಗಿ ಸಂಸ್ಥೆಯ ಪದಾಧಿಕಾರಿಗಳು, ಮುಖಂಡರು ಹಾಗೂ ಸಮಾಜದ ಹಿರಿಯರು ನಡೆಸಿದ ನಿರಂತರ ಪರಿಶ್ರಮವನ್ನು ಶ್ಲಾಘಿಸಿದರು.

ನಮ್ಮ ರುದ್ರೇಗೌಡರು ಸೇರಿದಂತೆ ಸಂಸ್ಥೆಯ ಮುಖಂಡರು ಹಾಗೂ ಸಮಾಜದ ಅನೇಕ ಪ್ರಮುಖರು ಈ ನೂತನ ಕಟ್ಟಡ ನಿರ್ಮಾಣಕ್ಕಾಗಿ ಯಾವ ರೀತಿಯಲ್ಲಿ ಪರಿಶ್ರಮಪಟ್ಟಿದ್ದಾರೆ ಎಂಬುದನ್ನು ಈಗಾಗಲೇ ವಿವರಿಸಿದ್ದಾರೆ. ಈ ಕಟ್ಟಡದ ಹಿಂದೆ ಇರುವ ಪರಿಶ್ರಮ ಮತ್ತು ಸೇವಾ ಮನೋಭಾವವೇ ಇದರ ನಿಜವಾದ ಶಕ್ತಿ, ಎಂದು ಹೇಳಿದರು.

ಅಲ್ಲಮಪ್ರಭು, ಅಕ್ಕಮಹಾದೇವಿ, ಕುವೆಂಪು, ಶಾಂತವೇರಿ ಗೋಪಾಲಗೌಡರಂತಹ ಮಹನೀಯರನ್ನು ನಾಡಿಗೆ ನೀಡಿದ ಪುಣ್ಯಭೂಮಿ ಶಿವಮೊಗ್ಗ ಎಂದು ಬಣ್ಣಿಸಿದ ಯಡಿಯೂರಪ್ಪ, ಶಿವಮೊಗ್ಗ ತಮ್ಮ ಕರ್ಮಭೂಮಿಯಾಗಿದ್ದು, ಸಾರ್ವಜನಿಕ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಜಿಲ್ಲೆಯ ಜನತೆ ತಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸ್ಮರಿಸಿದರು.

ಯಡಿಯೂರಪ್ಪ ಎಂಬ ಸಾಮಾನ್ಯ ಕಾರ್ಯಕರ್ತನನ್ನು ಈ ಹಂತಕ್ಕೆ ಬೆಳೆಸಿದ ಈ ಪುಣ್ಯಭೂಮಿಗೆ ಮತ್ತು ಶಿವಮೊಗ್ಗದ ಮಹಾಜನತೆಗೆ ನಾನು ಸದಾ ಋಣಿಯಾಗಿದ್ದೇನೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನವೇ ನನ್ನ ಸಾರ್ವಜನಿಕ ಜೀವನದ ದೊಡ್ಡ ಶಕ್ತಿ, ಎಂದು ಭಾವುಕರಾಗಿ ಹೇಳಿದರು.

ಶತಮಾನ ಪೂರೈಸಿರುವ ವಿದ್ಯಾರ್ಥಿ ನಿಲಯದ ನೂತನ ಕಟ್ಟಡಕ್ಕೆ ತಮ್ಮ ಹೆಸರನ್ನು ಇಟ್ಟಿರುವುದು ವೈಯಕ್ತಿಕವಾಗಿ ತಮಗೆ ದೊರೆತ ದೊಡ್ಡ ಗೌರವ ಎಂದು ಯಡಿಯೂರಪ್ಪ ಹೇಳಿದರು.

ಈ ಗೌರವವನ್ನು ನಾನು ಕೇವಲ ನನ್ನ ವೈಯಕ್ತಿಕ ಹೆಸರಿಗೆ ಸಿಕ್ಕ ಗೌರವ ಎಂದು ಭಾವಿಸುವುದಿಲ್ಲ. ಇದು ನನ್ನ ಮೇಲಿನ ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನ ಮತ್ತು ಸಮಾಜದ ಆಶೀರ್ವಾದದ ಪ್ರತೀಕವಾಗಿದೆ. ನನ್ನ ಮೇಲೆ ಇಟ್ಟಿರುವ ಈ ಅಪಾರ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಸದಾ ಋಣಿಯಾಗಿರುತ್ತೇನೆ, ಎಂದು ತಿಳಿಸಿದರು.

1916ರಲ್ಲಿ ಬೆಕ್ಕಿನಕಲ್ಮಠದ ಮಠದ ಹಿರಿಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಸಮಾಜದ ಹಿರಿಯರು ಆರಂಭಿಸಿದ ಈ ಸಂಸ್ಥೆ ಇಂದು ಶತಮಾನ ಪೂರೈಸಿ ಬೃಹತ್ ಹೆಮ್ಮರವಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.

ಸಂಸ್ಥೆಯ ಆರಂಭದಿಂದ ಇಂದಿನವರೆಗೆ ಅದರ ಅಭಿವೃದ್ಧಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಸಮಾಜದ ಕೊಡುಗೆ ಮತ್ತು ವಿದ್ಯಾರ್ಥಿ ನಿಲಯಗಳ ಪಾತ್ರವನ್ನು ವಿಶೇಷವಾಗಿ ಉಲ್ಲೇಖಿಸಿದರು.

ನಾನು ಸಾರ್ವಜನಿಕ ಜೀವನಕ್ಕೆ ಬಂದ ಸಂದರ್ಭದಲ್ಲಿ ಹಳ್ಳಿಗಳು ಹಾಗೂ ದೂರದ ಊರುಗಳಿಂದ ಶಿವಮೊಗ್ಗಕ್ಕೆ ಬಂದು ಶಿಕ್ಷಣ ಪಡೆಯುತ್ತಿದ್ದ ಅನೇಕ ವಿದ್ಯಾರ್ಥಿಗಳು ವಸತಿ ಸೌಲಭ್ಯವಿಲ್ಲದೆ ಎದುರಿಸುತ್ತಿದ್ದ ಸಂಕಷ್ಟವನ್ನು ಹತ್ತಿರದಿಂದ ಕಂಡಿದ್ದೇನೆ. ಒಂದು ಮಗು ವಸತಿ ಅಥವಾ ಊಟದ ಕೊರತೆಯಿಂದ ಶಿಕ್ಷಣದಿಂದ ವಂಚಿತವಾಗಬಾರದು. ಇದನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಸಮಾಜದ ಹೊಣೆಗಾರಿಕೆಯೂ ಹೌದು, ಎಂದು ಅಭಿಪ್ರಾಯಪಟ್ಟರು.

ತಾವು ಮುಖ್ಯಮಂತ್ರಿಯಾಗಿದ್ದ 2021ರಲ್ಲಿ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ₹5 ಕೋಟಿ ಅನುದಾನ ನೀಡಲಾಗಿತ್ತು ಎಂದು ಯಡಿಯೂರಪ್ಪ ನೆನಪಿಸಿಕೊಂಡರು.

ಸಮಾಜದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸರ್ಕಾರ ಮಾಡಬೇಕಾದ ಕನಿಷ್ಠ ಕರ್ತವ್ಯವೆಂಬ ದೃಷ್ಟಿಯಿಂದ ಈ ಅನುದಾನ ನೀಡಲಾಗಿತ್ತು. ಇಂದು ಆ ಅನುದಾನದಿಂದ ನಿರ್ಮಾಣಗೊಂಡ ನೂತನ ಕಟ್ಟಡವನ್ನು ಉದ್ಘಾಟಿಸುತ್ತಿರುವುದು ಸಂತಸ ತಂದಿದೆ, ಎಂದರು.

ಬಸವಾದಿ ಶರಣರು ಹಾಗೂ ವೀರಶೈವ ಸಿದ್ಧಾಂತ ಸಾರಿದ ದಾಸೋಹದ ಪರಂಪರೆಯನ್ನು ಮುಂದುವರಿಸುವ ಮಹತ್ವದ ಕಾರ್ಯ ಇದಾಗಿದೆ ಎಂದು ಅವರು ಹೇಳಿದರು.

ಈ ಕಟ್ಟಡ ಕೇವಲ ಕಲ್ಲು, ಮಣ್ಣು ಮತ್ತು ಸಿಮೆಂಟ್‌ನ ಗೋಡೆಗಳ ಸಮೂಹವಲ್ಲ. ಸಾವಿರಾರು ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಜ್ಞಾನದ ದೀಪ ಹಚ್ಚುವ, ಅವರ ಭವಿಷ್ಯ ರೂಪಿಸುವ ಪವಿತ್ರ ಮಂದಿರವಾಗಿದೆ. ಇಲ್ಲಿ ದೊರೆಯುವ ಶಿಕ್ಷಣ ಮತ್ತು ಸಂಸ್ಕಾರದಿಂದ ಸಮಾಜಕ್ಕೆ ಉತ್ತಮ ನಾಗರಿಕರು, ನಾಯಕರು ಹಾಗೂ ಸಾಧಕರು ಹೊರಹೊಮ್ಮಬೇಕು, ಎಂದು ಆಶಿಸಿದರು.

ಈ ವಿದ್ಯಾರ್ಥಿ ನಿಲಯದಲ್ಲಿ ಪಿ. ಲಂಕೇಶ್, ಪ್ರೊ. ನಂಜುಂಡಸ್ವಾಮಿ, ಎಚ್.ಎಸ್. ರುದ್ರಪ್ಪ ಸೇರಿದಂತೆ ಅನೇಕ ಗಣ್ಯರು ವಿದ್ಯಾಭ್ಯಾಸ ಮಾಡಿ ಬೆಳೆದಿರುವುದನ್ನು ಸ್ಮರಿಸಿದ ಯಡಿಯೂರಪ್ಪ, ನೂತನ ಕಟ್ಟಡದ ಮೂಲಕ ಮುಂದಿನ ದಿನಗಳಲ್ಲಿ ನಾಡಿಗೆ ನೂರಾರು ಪ್ರತಿಭಾವಂತರು ಹಾಗೂ ಸಾಧಕರು ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಕೇವಲ ತಮ್ಮ ವೈಯಕ್ತಿಕ ಭವಿಷ್ಯವನ್ನು ರೂಪಿಸಿಕೊಳ್ಳುವುದಷ್ಟೇ ಅಲ್ಲದೆ, ಸಮಾಜದ ಅಭಿವೃದ್ಧಿಗೂ ತಮ್ಮ ಕೊಡುಗೆ ನೀಡಬೇಕು. ಈ ನಿಲಯದಿಂದ ಹೊರಬರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಉತ್ತಮ ನಾಗರಿಕನಾಗಬೇಕು, ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಯಡಿಯೂರಪ್ಪ, ಜೀವನದಲ್ಲಿ ಎದುರಾಗುವ ಕಷ್ಟಗಳು ಮತ್ತು ಸವಾಲುಗಳಿಗೆ ದೃತಿಗೆಡಬಾರದು ಎಂದು ಕರೆ ನೀಡಿದರು.

ಪರಿಶ್ರಮ, ನಿಷ್ಠೆ ಮತ್ತು ಸಮಾಜಮುಖಿ ಚಿಂತನೆ ಇದ್ದಾಗ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೇಕಾದರೂ ಏರಬಹುದು. ವಿದ್ಯಾರ್ಥಿಗಳು ಇಲ್ಲಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ, ತಮ್ಮ ಹೆತ್ತವರಿಗೆ, ಸಂಸ್ಥೆಗೆ ಹಾಗೂ ಸಮಾಜಕ್ಕೆ ಒಳ್ಳೆಯ ಹೆಸರು ತರಬೇಕು. ನಿಮ್ಮ ಸಾಧನೆಯೇ ಈ ಸಂಸ್ಥೆಗೆ ನೀಡಬಹುದಾದ ಅತ್ಯುತ್ತಮ ಗೌರವ, ಎಂದು ಹೇಳಿದರು.

ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಕ್ಷೇತ್ರಗಳ ಅಭಿವೃದ್ಧಿಗಾಗಿ ತಮ್ಮ ಸಾರ್ವಜನಿಕ ಜೀವನದಲ್ಲಿ ಹಲವು ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತಂದಿರುವ ತೃಪ್ತಿ ಇದೆ ಎಂದ ಅವರು, ಮುಂದಿನ ಪೀಳಿಗೆಯ ಶಿಕ್ಷಣ ಮತ್ತು ಭವಿಷ್ಯ ನಿರ್ಮಾಣಕ್ಕೆ ಇಂತಹ ವಿದ್ಯಾರ್ಥಿ ನಿಲಯಗಳು ಇನ್ನಷ್ಟು ಬಲಿಷ್ಠವಾಗಬೇಕು ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಎನ್.ಡಿ.ವಿ. ಹಾಸ್ಟೆಲ್ ಟ್ರಸ್ಟ್ (ರಿ.) ಅಧ್ಯಕ್ಷರು, ಮಾಜಿ ಸಂಸದರು ಹಾಗೂ ಮಾಜಿ ಶಾಸಕರಾದ ಆಯನೂರು ಮಂಜುನಾಥ್ ಅವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಶಿಕಾರಿಪುರ ಶಾಸಕ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಿವಮೊಗ್ಗ ಶಾಸಕ ಚನ್ನಬಸಪ್ಪ (ಚೆನ್ನಿ), ಭದ್ರಾವತಿ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಕೆ.ಆರ್.ಐ.ಡಿ.ಎಲ್. ನಿಗಮದ ಅಧ್ಯಕ್ಷರಾದ ಬಿ.ಕೆ. ಸಂಗಮೇಶ್, ವಿಧಾನಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರು ಹಾಗೂ ಎನ್.ಡಿ.ವಿ. ಹಾಸ್ಟೆಲ್ ಟ್ರಸ್ಟ್ (ರಿ.) ಕಟ್ಟಡ ಸಮಿತಿ ಅಧ್ಯಕ್ಷರಾದ ಎಸ್. ರುದ್ರೇಗೌಡ, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್, ವೀರಶೈವ ಕಲ್ಯಾಣ ಮಂದಿರದ ಅಧ್ಯಕ್ಷರಾದ ಜೆ. ವಿರೂಪಾಕ್ಷಪ್ಪ, ನಂಜುಂಡ ಶೆಟ್ರು ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸಮಾಜದ ಮುಖಂಡರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ವಿದ್ಯಾರ್ಥಿ ನಿಲಯಕ್ಕೆ ಆಧುನಿಕ ಸೌಲಭ್ಯಗಳೊಂದಿಗೆ ನೂತನ ಕಟ್ಟಡ ದೊರೆತಿರುವುದು ಶಿವಮೊಗ್ಗದ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಈ ಸಂಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಮೂಡಿಸಿದೆ.

K.M.Sathish Gowda

Join WhatsApp

Join Now

Facebook

Join Now

Read more

ಶಿವಮೊಗ್ಗ ಅಭಿವೃದ್ಧಿಯ ಹರಿಕಾರ ಬಿ.ವೈ. ರಾಘವೇಂದ್ರ: ಜನಸೇವೆಯ ಪಯಣಕ್ಕೆ ಯಡಿಯೂರಪ್ಪ ಮೆಚ್ಚುಗೆ

ಗೋವುಗಳ ಕಳ್ಳಸಾಗಾಟವನ್ನು ಗಂಭೀರವಾಗಿ ಪರಿಗಣಿಸಿ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಬಿ.ವೈ. ವಿಜಯೇಂದ್ರ

ಅಭಿವೃದ್ಧಿಯ ಹರಿಕಾರ, ಜನಸೇವೆಯ ಧೀಮಂತ ನಾಯಕ ಬಿ.ವೈ. ರಾಘವೇಂದ್ರ ಅವರಿಗೆ ಡಿಟೆಕ್ಟಿವ್ ನ್ಯೂಸ್24 ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು

ಸಂಸದ ಬಿ.ವೈ. ರಾಘವೇಂದ್ರ ಅವರ ಹುಟ್ಟುಹಬ್ಬ: ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ

ಸ್ವಾತಂತ್ರ್ಯವೆಂದರೆ ಬಂಧನಗಳಿಂದ ಮುಕ್ತಿ ಮಾತ್ರವಲ್ಲ; ಜವಾಬ್ದಾರಿಯುತವಾಗಿ ಬದುಕುವ ಅವಕಾಶ: ಶ್ರೀ ರಂಭಾಪುರಿ ಜಗದ್ಗುರುಗಳು

ಶಿಸ್ತು, ಸಾಹಸ, ದೇಶಪ್ರೇಮದ ಸಂಗಮ: ಸಿರಿಗೆರೆಯಲ್ಲಿ ಅದ್ಧೂರಿ ಸ್ವಾತಂತ್ರ್ಯೋತ್ಸವ

Leave a Comment