ಶಿಗ್ಗಾವಿ ಬಂದ್‌ಗೆ ಪಕ್ಷಾತೀತವಾಗಿ ಎಲ್ಲ ಸಮುದಾಯಗಳ ಬೆಂಬಲ ಕೋರಿಕೆ
ಶಿಗ್ಗಾವಿ, ಆ.23: ಶಿಗ್ಗಾವಿಯ ಟ್ಯಾಕ್ಸಿ ನಿಲ್ದಾಣದಲ್ಲಿರುವ ಶ್ರೀ ಹನುಮಾನ್ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಪ್ರಕರಣವನ್ನು ಪೊಲೀಸರು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ಹಾಗೂ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಆ.21ರಂದು ದೇವಸ್ಥಾನದೊಳಗೆ ಉದ್ದೇಶಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಯಾವುದೇ ಕೃತ್ಯವನ್ನು ಸಮಾಜ ಸಹಿಸಬಾರದು. ಈ ಘಟನೆಗೆ ಸಂಬಂಧಿಸಿದಂತೆ ನಿಜಾಂಶವನ್ನು ಸಂಪೂರ್ಣವಾಗಿ ತನಿಖೆ ಮೂಲಕ ಹೊರತಂದು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಪ್ರಕರಣವನ್ನು ಕೇವಲ ಒಂದು ದೇವಸ್ಥಾನಕ್ಕೆ ಸಂಬಂಧಿಸಿದ ಘಟನೆ ಎಂದು ಪರಿಗಣಿಸದೆ, ಶಿಗ್ಗಾವಿ ಪಟ್ಟಣದ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಗಂಭೀರ ವಿಚಾರವಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಪರಿಗಣಿಸಬೇಕು. ತಪ್ಪಿತಸ್ಥನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದರ ಜೊತೆಗೆ, ಕಾನೂನಿನ ವ್ಯಾಪ್ತಿಯಲ್ಲಿ ಅಗತ್ಯವಿದ್ದರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡುವಂತಹ ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿ–ಸವಣೂರು ಭಾಗದಲ್ಲಿ ಹಲವು ವರ್ಷಗಳಿಂದ ವಿವಿಧ ಸಮುದಾಯಗಳ ಜನರು ಪರಸ್ಪರ ಸಹಬಾಳ್ವೆ, ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಇಂತಹ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಅಥವಾ ದುಷ್ಟಶಕ್ತಿಗಳು ಕೋಮು ಭಾವನೆಗಳನ್ನು ಕೆರಳಿಸಿ ಜನರ ನಡುವೆ ಅಶಾಂತಿ ಸೃಷ್ಟಿಸಲು ಅವಕಾಶ ನೀಡಬಾರದು. ಶಾಂತಿ ಕದಡುವ ಪ್ರಯತ್ನಗಳನ್ನು ಆರಂಭದಲ್ಲೇ ಕಾನೂನುಬದ್ಧವಾಗಿ ನಿಯಂತ್ರಿಸುವುದು ಪೊಲೀಸ್ ಹಾಗೂ ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ ಎಂದರು.
ಆರೋಪಿಯನ್ನು ಬಂಧಿಸಿದ ಮಾತ್ರಕ್ಕೆ ಪ್ರಕರಣ ಮುಗಿದಂತಾಗುವುದಿಲ್ಲ. ತನಿಖೆಯನ್ನು ಸಮರ್ಪಕವಾಗಿ ನಡೆಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ಸಮರ್ಥವಾಗಿ ಮುಂದುವರಿಯುವಂತೆ ನೋಡಿಕೊಳ್ಳಬೇಕು. ಇಂತಹ ಕೃತ್ಯಗಳಿಗೆ ಮುಂದಿನ ದಿನಗಳಲ್ಲಿ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡುವ ರೀತಿಯಲ್ಲಿ ಕಾನೂನು ಕ್ರಮ ಜರುಗಬೇಕು. ಪ್ರಕರಣವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಶಿಗ್ಗಾವಿ ಟ್ಯಾಕ್ಸಿ ನಿಲ್ದಾಣದವರು ಹಾಗೂ ಪ್ರಮೋದ್ ಮುತಾಲಿಕ್ ಅವರು ಕರೆ ನೀಡಿರುವ ಶಿಗ್ಗಾವಿ ಬಂದ್‌ಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. ಬಂದ್ ಯಾವುದೇ ಒಂದು ಸಮುದಾಯದ ವಿರುದ್ಧ ನಡೆಸುವ ಹೋರಾಟವಾಗಬಾರದು. ಬದಲಾಗಿ ಶಾಂತಿ, ಸೌಹಾರ್ದತೆ, ಧಾರ್ಮಿಕ ಸ್ಥಳಗಳ ಗೌರವ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶಾಂತಿಯುತವಾಗಿ ನಡೆಯಬೇಕು ಎಂದರು.
ವ್ಯಾಪಾರಸ್ಥರು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡುವ ಮೂಲಕ ತಮ್ಮ ಪ್ರತಿಭಟನೆಯನ್ನು ಶಾಂತಿಯುತವಾಗಿ ವ್ಯಕ್ತಪಡಿಸಬೇಕು. ಯಾವುದೇ ರೀತಿಯ ಹಿಂಸಾಚಾರ, ಪ್ರಚೋದನೆ, ಕಲ್ಲುತೂರಾಟ ಅಥವಾ ಕೋಮು ಸಂಘರ್ಷಕ್ಕೆ ಯಾರೂ ಅವಕಾಶ ನೀಡಬಾರದು. ಕಾನೂನು ಕೈಗೆತ್ತಿಕೊಳ್ಳದೆ, ಪ್ರಜಾಸತ್ತಾತ್ಮಕ ರೀತಿಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವಂತೆ ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಶಿಗ್ಗಾವಿ ಮಾತ್ರವಲ್ಲದೆ ಹಾವೇರಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆಯೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಅವರು ಆಗ್ರಹಿಸಿದರು. ಇಸ್ಪೀಟ್, ಒಸಿ, ಮಾದಕ ವಸ್ತುಗಳ ದಂಧೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಿರಂತರ ಕಾರ್ಯಾಚರಣೆ ನಡೆಸಬೇಕು. ಇಂತಹ ಚಟುವಟಿಕೆಗಳಿಂದ ಯುವಜನರು ಹಾಗೂ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಅವುಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು ಎಂದರು.
ಕಾನೂನಿನ ಮುಂದೆ ಎಲ್ಲರೂ ಸಮಾನರು. ಅಪರಾಧ ಎಸಗಿದವರಿಗೆ ಯಾವುದೇ ರಾಜಕೀಯ, ಸಾಮಾಜಿಕ ಅಥವಾ ಇತರ ರೀತಿಯ ರಕ್ಷಣೆ ದೊರೆಯಬಾರದು. ಕಾನೂನು ಉಲ್ಲಂಘಿಸುವವರ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಂಡಾಗ ಮಾತ್ರ ಸಾರ್ವಜನಿಕರಲ್ಲಿ ಕಾನೂನಿನ ಮೇಲಿನ ವಿಶ್ವಾಸ ಮತ್ತಷ್ಟು ಬಲವಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಶಿಗ್ಗಾವಿಯ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷ, ಜಾತಿ, ಮತ ಹಾಗೂ ಧರ್ಮದ ಭೇದವಿಲ್ಲದೆ ಎಲ್ಲ ಸಮುದಾಯಗಳ ಜನರು ಶಾಂತಿಯುತ ಹೋರಾಟಕ್ಕೆ ಬೆಂಬಲ ನೀಡಬೇಕು. ಯಾವುದೇ ಪ್ರಚೋದನೆಗೆ ಒಳಗಾಗದೆ, ಸೌಹಾರ್ದತೆಯನ್ನು ಕಾಪಾಡಿಕೊಂಡು ಕಾನೂನು ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.









