ಸುಮಾರು 200 ಕಿ.ಮೀ. ಪಾದಯಾತ್ರೆ; ರೈತ, ಯುವಕರು, ಬಡವರ ಸಮಸ್ಯೆ ಮುಂದಿಟ್ಟು ಜನಜಾಗೃತಿ ಮೂಡಿಸಲು ವಿಜಯೇಂದ್ರ ನೇತೃತ್ವದ ಅಭಿಯಾನ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಜನವಿರೋಧಿ ಧೋರಣೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ನಿರ್ಲಕ್ಷ್ಯವನ್ನು ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಬಿಜೆಪಿ ವತಿಯಿಂದ ಸೆಪ್ಟೆಂಬರ್ 1ರಿಂದ 10ರವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಯಚೂರಿನಿಂದ ಆರಂಭವಾಗುವ ಈ ಪಾದಯಾತ್ರೆ ಬಳ್ಳಾರಿಯಲ್ಲಿ ಸಮಾರೋಪಗೊಳ್ಳಲಿದ್ದು, ಸುಮಾರು 200 ಕಿಲೋಮೀಟರ್ ದೂರವನ್ನು ಕ್ರಮಿಸಲಾಗುವುದು ಎಂದರು. ಪಾದಯಾತ್ರೆಯ ಉದ್ಘಾಟನೆ ಹಾಗೂ ಸಮಾರೋಪ ಕಾರ್ಯಕ್ರಮಗಳಲ್ಲಿ ಕೇಂದ್ರದ ಪ್ರಮುಖ ನಾಯಕರು ಮತ್ತು ಸಚಿವರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.


ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಬಡವರಿಗೆ ಅಗತ್ಯವಾದ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮೀಸಲಾತಿ ಜಾರಿ, ಹೊಸ ಸರ್ಕಾರಿ ನೇಮಕಾತಿ, ಉತ್ತರ ಕರ್ನಾಟಕದ ಅಭಿವೃದ್ಧಿ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಸರ್ಕಾರ ಗಂಭೀರ ಆಸಕ್ತಿ ವಹಿಸುತ್ತಿಲ್ಲ ಎಂದು ವಿಜಯೇಂದ್ರ ಆರೋಪಿಸಿದರು.
ಈ ಎಲ್ಲ ವಿಚಾರಗಳನ್ನು ಜನರ ಮುಂದಿಡುವುದರ ಜೊತೆಗೆ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳ ನೈಜ ಚಿತ್ರಣವನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸುವ ಉದ್ದೇಶದಿಂದ ಹತ್ತು ದಿನಗಳ ಕಾಲ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬಡವರು, ರೈತರು, ಯುವಕರ ಪರ ಜನಜಾಗೃತಿ
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯಗಳಿಂದ ಸುತ್ತುವರಿದಿದೆ ಎಂದು ಆರೋಪಿಸಿದ ವಿಜಯೇಂದ್ರ, ಸರ್ಕಾರದ ನಿಜವಾದ ಮುಖವನ್ನು ಜನರ ಮುಂದೆ ಬಯಲು ಮಾಡಲು ಬಿಜೆಪಿ ನಿರ್ಧರಿಸಿದೆ ಎಂದರು.
“ಈ ಪಾದಯಾತ್ರೆ ಕೇವಲ ರಾಜಕೀಯ ಕಾರ್ಯಕ್ರಮವಲ್ಲ. ಬಡವರು, ರೈತರು ಮತ್ತು ಯುವಜನರ ಸಮಸ್ಯೆಗಳನ್ನು ಜನರ ನಡುವೆ ತೆಗೆದುಕೊಂಡು ಹೋಗುವ ಜನಜಾಗೃತಿ ಅಭಿಯಾನವಾಗಿದೆ. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿ, ರಾಜ್ಯದ ಭವಿಷ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ನಮ್ಮದು,” ಎಂದು ಅವರು ಹೇಳಿದರು.
ರಾಯಚೂರಿನಿಂದ ಆರಂಭವಾಗಿ ಬಳ್ಳಾರಿಯಲ್ಲಿ ಸಮಾರೋಪಗೊಳ್ಳುವ ಈ ಪಾದಯಾತ್ರೆಯ ಮಾರ್ಗದ ಪೋಸ್ಟರ್ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಜೆಡಿಎಸ್ನಿಂದಲೂ ಬೆಂಬಲ
ಇದು ಬಿಜೆಪಿ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಯಾಗಿದ್ದರೂ, ಜೆಡಿಎಸ್ ನಾಯಕರಿಂದಲೂ ಬೆಂಬಲ ವ್ಯಕ್ತವಾಗಿದೆ ಎಂದು ವಿಜಯೇಂದ್ರ ತಿಳಿಸಿದರು.
ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರು ಈ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. ರಾಜ್ಯದ ಜನರ ಸಮಸ್ಯೆಗಳ ವಿಚಾರದಲ್ಲಿ ಸಮಾನ ಮನಸ್ಕ ಪಕ್ಷಗಳು ಒಗ್ಗಟ್ಟಿನಿಂದ ಧ್ವನಿ ಎತ್ತುವುದು ಅಗತ್ಯವಾಗಿದೆ ಎಂದು ಹೇಳಿದರು.
ಜನರ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡದೆ ಅಧಿವೇಶನ ಮೊಟಕು
ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಇದೇ ಕಾರಣಕ್ಕಾಗಿ ವಿಧಾನಮಂಡಲ ಅಧಿವೇಶನವನ್ನು ನಿರೀಕ್ಷಿತ ರೀತಿಯಲ್ಲಿ ನಡೆಸದೆ, ಅನಿರ್ದಿಷ್ಟಾವಧಿಗೆ ಮುಂದೂಡುವ ಮೂಲಕ ಜನರ ಸಮಸ್ಯೆಗಳ ಚರ್ಚೆಯಿಂದ ಸರ್ಕಾರ ಹಿಂದೆ ಸರಿದಿದೆ ಎಂದು ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದರು.
ಅಧಿವೇಶನ ಆರಂಭಕ್ಕೂ ಮುನ್ನವೇ ಬಿಜೆಪಿ ಹಲವು ಪ್ರಮುಖ ವಿಷಯಗಳನ್ನು ಸರ್ಕಾರದ ಗಮನಕ್ಕೆ ತಂದಿತ್ತು. ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸದನದಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿತ್ತು ಎಂದು ತಿಳಿಸಿದರು.
ಆದರೆ ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸದೆ ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಿದೆ. ಭೀಕರ ಬರ ಪರಿಸ್ಥಿತಿ, ಕೆಪಿಎಸ್‌ಸಿ ಹಗರಣ, ಸರ್ಕಾರಿ ನೇಮಕಾತಿ, ಉತ್ತರ ಕರ್ನಾಟಕದ ಸಮಸ್ಯೆಗಳು, ಬಿಡದಿ ಟೌನ್‌ಶಿಪ್ ಯೋಜನೆ, ನೈಸ್ ಯೋಜನೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ನಾವು ಮನವಿ ಮಾಡಿದ್ದೆವು. ಆದರೆ ಸರ್ಕಾರ ಯಾವುದೇ ಗಂಭೀರ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.
“ಈ ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದರೆ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳು ಬಯಲಾಗುತ್ತಿದ್ದವು. ಅದಕ್ಕಾಗಿಯೇ ಸರ್ಕಾರ ಚರ್ಚೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದೆ,” ಎಂದು ಅವರು ಟೀಕಿಸಿದರು.

ವಾಲ್ಮೀಕಿ ನಿಗಮ ಹಗರಣದ ವಿಚಾರದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ನಂತರ ನಡೆದ ಬೆಳವಣಿಗೆಗಳನ್ನು ಉಲ್ಲೇಖಿಸಿದ ವಿಜಯೇಂದ್ರ, ಈ ಪ್ರಕರಣದ ಕುರಿತು ಸರ್ಕಾರ ಸ್ಪಷ್ಟ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದು ಒತ್ತಾಯಿಸಿದರು.
ಭೋವಿ ಸಮಾಜಕ್ಕೆ ಸೇರಿದ ಚಂದ್ರಶೇಖರ್ ಎಂಬ ಅಧಿಕಾರಿಯ ಆತ್ಮಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಅವರ ಡೆತ್‌ನೋಟ್‌ನಲ್ಲಿ ಹಲವು ಗಂಭೀರ ಅಂಶಗಳು ಉಲ್ಲೇಖವಾಗಿವೆ ಎಂದು ಹೇಳಿದರು. ಸಚಿವರ ಮೌಖಿಕ ಸೂಚನೆಯ ಮೇರೆಗೆ ಹಣ ವರ್ಗಾವಣೆ ಮಾಡಿದ್ದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖವಿದೆ ಎಂದು ಆರೋಪಿಸಿದರು.
ಈ ಹಗರಣ ನಡೆದಿರುವ ಬಗ್ಗೆ ಹಿಂದಿನ ಮುಖ್ಯಮಂತ್ರಿಗಳೂ ಒಪ್ಪಿಕೊಂಡಿದ್ದಾರೆ. ಸಂಪುಟದ ಕೆಲವು ಸಚಿವರು ಸಹ ಈ ಪ್ರಕರಣದಲ್ಲಿ ಗಂಭೀರ ಆರೋಪಗಳಿರುವುದನ್ನು ಹೇಳಿದ್ದಾರೆ. ಆದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೆ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಅವರು ಆಕ್ಷೇಪಿಸಿದರು.

ಅವಕಾಶ ನೀಡದೆ ಸಮಯ ವ್ಯರ್ಥ ಮಾಡಿದೆ ಸರ್ಕಾರ
ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯದ ಜನತೆ ಎದುರಿಸುತ್ತಿರುವ ನೈಜ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಬದಲು ಸರ್ಕಾರ ಸಮಯ ವ್ಯರ್ಥ ಮಾಡಿದೆ ಎಂದು ವಿಜಯೇಂದ್ರ ದೂರಿದರು.
ಇತ್ತೀಚಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್ ರದ್ದುಪಡಿಸುವ ವಿಚಾರ ಜನರಲ್ಲಿ ಆತಂಕ ಮೂಡಿಸಿದೆ. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಸಕಾಲದಲ್ಲಿ ನೆರವು ದೊರೆಯುತ್ತಿಲ್ಲ ಎಂಬ ದೂರುಗಳಿವೆ. ಕಲ್ಯಾಣ ಯೋಜನೆಗಳ ಜಾರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸದನದಲ್ಲಿ ಚರ್ಚೆ ನಡೆಯಬೇಕಿತ್ತು. ಆದರೆ ಸರ್ಕಾರ ಅದಕ್ಕೂ ಅವಕಾಶ ನೀಡಲಿಲ್ಲ ಎಂದು ಹೇಳಿದರು.
“ಬಡವರು, ಹಿರಿಯ ನಾಗರಿಕರು ಮತ್ತು ದುರ್ಬಲ ವರ್ಗಗಳ ಸಮಸ್ಯೆಗಳ ಕುರಿತು ಚರ್ಚೆ ನಡೆಯದಿದ್ದರೆ ವಿಧಾನಮಂಡಲ ಅಧಿವೇಶನದ ಉದ್ದೇಶವೇನು?” ಎಂದು ಅವರು ಪ್ರಶ್ನಿಸಿದರು.
ಡಿ.ಕೆ. ಶಿವಕುಮಾರ್ ಆದ್ಯತೆ ರಿಯಲ್ ಎಸ್ಟೇಟ್ ಕಡೆಗೇ: ಆರೋಪ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರದ ಆದ್ಯತೆಗಳ ಕುರಿತು ಪ್ರಶ್ನೆ ಎತ್ತಿದ ವಿಜಯೇಂದ್ರ, ಬಿಡದಿ ಟೌನ್‌ಶಿಪ್, ಕನಕಪುರ ವಿಮಾನ ನಿಲ್ದಾಣ, ನೈಸ್ ಯೋಜನೆ ಸೇರಿದಂತೆ ಹಲವು ಯೋಜನೆಗಳಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
“ಒಂದು ಕಡೆ ಕೋಟಿ ಸಸಿಗಳನ್ನು ನೆಡುವುದಾಗಿ ಹೇಳಲಾಗುತ್ತಿದೆ. ಮತ್ತೊಂದೆಡೆ ಉದ್ಯಾನ ಮತ್ತು ಹಸಿರು ಪ್ರದೇಶಗಳ ಮೇಲೆಯೂ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಒತ್ತಡ ಸೃಷ್ಟಿಯಾಗುತ್ತಿದೆ. ಪರಿಸರ ಸಂರಕ್ಷಣೆ ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ,” ಎಂದು ಟೀಕಿಸಿದರು.
ರಾಜ್ಯದ ರೈತರು, ನಿರುದ್ಯೋಗಿಗಳು, ಬಡವರು ಮತ್ತು ಉತ್ತರ ಕರ್ನಾಟಕದ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಆದ್ಯತೆ ನೀಡುವ ಬದಲು ರಿಯಲ್ ಎಸ್ಟೇಟ್ ಸಂಬಂಧಿತ ಯೋಜನೆಗಳತ್ತ ಸರ್ಕಾರ ಹೆಚ್ಚು ಗಮನ ಹರಿಸುತ್ತಿದೆ ಎಂದು ಅವರು ದೂರಿದರು.
ಇನ್ನೂ ಟೇಕ್ಆಫ್ ಆಗದ ಸರ್ಕಾರ: ವಿಜಯೇಂದ್ರ ಟೀಕೆ
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಹೆಚ್ಚಿನ ಉತ್ಸಾಹದಲ್ಲಿದ್ದರು. ಆದರೆ ಎರಡೂವರೆ ತಿಂಗಳು ಕಳೆದರೂ ಸರ್ಕಾರದ ಆಡಳಿತದಲ್ಲಿ ನಿರೀಕ್ಷಿತ ವೇಗ ಮತ್ತು ಸ್ಪಷ್ಟತೆ ಕಾಣಿಸುತ್ತಿಲ್ಲ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.
ಸಚಿವ ಸಂಪುಟ ವಿಸ್ತರಣೆ, ಸಚಿವರ ಪಟ್ಟಿ ಬಿಡುಗಡೆ ಮತ್ತು ಖಾತೆ ಹಂಚಿಕೆ ವಿಚಾರದಲ್ಲಿ ವಿಳಂಬವಾಗಿದೆ. ಖಾತೆ ಹಂಚಿಕೆಯ ಬಳಿಕವೂ ಅಸಮಾಧಾನ ಮತ್ತು ಭಿನ್ನಮತಗಳು ಕೇಳಿಬರುತ್ತಿವೆ. ಸರ್ಕಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಡಳಿತದ ವೇಗ ಪಡೆದುಕೊಂಡಿಲ್ಲ ಎಂದು ಆರೋಪಿಸಿದರು.
“ರಾಜ್ಯದ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಸರ್ಕಾರ ತನ್ನ ಆಂತರಿಕ ಗೊಂದಲಗಳಲ್ಲಿಯೇ ಕಾಲಹರಣ ಮಾಡುತ್ತಿದೆ. ಜನರು ಎದುರಿಸುತ್ತಿರುವ ಸಂಕಷ್ಟಗಳಿಗೆ ಸ್ಪಂದಿಸುವ ದೃಢ ಆಡಳಿತ ರಾಜ್ಯಕ್ಕೆ ಅಗತ್ಯವಾಗಿದೆ,” ಎಂದು ಅವರು ಹೇಳಿದರು.
ಪ್ರಮುಖ ನಾಯಕರು ಭಾಗಿ
ಪಾದಯಾತ್ರೆಯ ಘೋಷಣೆ ಹಾಗೂ ಮಾರ್ಗದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವಥನಾರಾಯಣ, ಮಾಜಿ ಸಚಿವರಾದ ಬಿ. ಶ್ರೀರಾಮುಲು ಮತ್ತು ಗಾಲಿ ಜನಾರ್ಧನ ರೆಡ್ಡಿ, ರಾಜ್ಯ ಉಪಾಧ್ಯಕ್ಷ ರಾಜುಗೌಡ ನಾಯಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಜಿ. ಪಾಟೀಲ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಉಪಸ್ಥಿತರಿದ್ದರು.
ಶಾಸಕರಾದ ಪ್ರಭು ಚೌಹಾಣ್, ಡಾ. ಶೈಲೇಂದ್ರ ಬೆಲ್ದಾಳೆ, ಮಾನಪ್ಪ ಡಿ. ವಜ್ಜಲ್, ಡಾ. ಎಸ್. ಶಿವರಾಜ್ ಪಾಟೀಲ್, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಹರೀಶ್ ಪೂಂಜಾ, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ, ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ ಮತ್ತು ಹೆಚ್.ಸಿ. ತಮ್ಮೇಶ್ ಗೌಡ ಸೇರಿದಂತೆ ಮುಖಂಡ ಕೆ. ಕರಿಯಪ್ಪ ಮತ್ತು ಪಕ್ಷದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






