ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಆದರ್ಶ ರಾಜಕಾರಣದ ಪುನರುಜ್ಜೀವನಕ್ಕೆ ಕರೆ: ನೂತನ ಸಭಾಧ್ಯಕ್ಷ ಗುರುಪಾದಗೌಡ ಸಂಗನಗೌಡ ಪಾಟೀಲ್ ಅವರಿಗೆ ಶ್ರೀ ತರಳಬಾಳು ಜಗದ್ಗುರುಗಳ ಮಾರ್ಗದರ್ಶನ

On: August 26, 2026 5:34 PM
Follow Us:

ಬೆಂಗಳೂರು: ರಾಜಕೀಯವು ಕೇವಲ ಅಧಿಕಾರ ಪಡೆಯುವ ಸಾಧನವಾಗಿರದೆ, ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ಪವಿತ್ರ ಸಾರ್ವಜನಿಕ ಹೊಣೆಗಾರಿಕೆಯಾಗಬೇಕು ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿಪ್ರಾಯಪಟ್ಟರು. ಇಂದಿನ ರಾಜಕೀಯದಲ್ಲಿ ಮೌಲ್ಯಗಳು, ಪ್ರಾಮಾಣಿಕತೆ ಮತ್ತು ಜನಸೇವೆಯ ಮನೋಭಾವಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರಾದ ಗುರುಪಾದಗೌಡ ಸಂಗನಗೌಡ ಪಾಟೀಲ್ ಅವರು ಮಂಗಳವಾರ ಸಂಜೆ ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಕ್ಕೆ ಭೇಟಿ ನೀಡಿ, ಶ್ರೀ ತರಳಬಾಳು ಜಗದ್ಗುರುಗಳವರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು.

ಸಭಾಧ್ಯಕ್ಷರು ಮತ್ತು ಶ್ರೀ ತರಳಬಾಳು ಜಗದ್ಗುರುಗಳವರ ನಡುವಿನ ಈ ಭೇಟಿ ಕೇವಲ ಸೌಜನ್ಯದ ಭೇಟಿಯಾಗದೆ, ಮೌಲ್ಯಾಧಾರಿತ ರಾಜಕಾರಣ, ಪರಿಶುದ್ಧ ಚುನಾವಣೆ, ಗ್ರಾಮೀಣ ಬದುಕು, ಸಾಮಾಜಿಕ ಜಾಲತಾಣಗಳ ದುರುಪಯೋಗ, ಯುವಜನತೆಯ ಮೊಬೈಲ್ ಗೀಳು ಹಾಗೂ ಆದರ್ಶ ಸಾರ್ವಜನಿಕ ಜೀವನದ ಕುರಿತು ನಡೆದ ಅರ್ಥಪೂರ್ಣ ಚಿಂತನಾ ಸಂವಾದವಾಗಿ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಜಿ.ಎಸ್. ಪಾಟೀಲ್ ಅವರು ಸುಮಾರು ಮೂವತ್ತು ವರ್ಷಗಳ ಹಿಂದೆ ಗಜೇಂದ್ರಗಡದಲ್ಲಿರುವ ತಮ್ಮ ನಿವಾಸಕ್ಕೆ ಶ್ರೀ ತರಳಬಾಳು ಜಗದ್ಗುರುಗಳವರು ದಯಮಾಡಿಸಿದ್ದ ಸಂದರ್ಭವನ್ನು ಆತ್ಮೀಯವಾಗಿ ನೆನಪಿಸಿಕೊಂಡರು.

ಇದಕ್ಕೆ ಸ್ಪಂದಿಸಿದ ಶ್ರೀ ಜಗದ್ಗುರುಗಳವರು ಅಂದಿನ ಭೇಟಿಯ ನೆನಪುಗಳನ್ನು ಮೆಲುಕು ಹಾಕಿದರು. ದಷ್ಟಪುಷ್ಟವಾದ ಎತ್ತುಗಳು, ಹಸುಗಳು, ಎಮ್ಮೆಗಳು ಹಾಗೂ ಕರುಗಳಿಂದ ತುಂಬಿದ್ದ ಪಾಟೀಲ್ ಅವರ ಮನೆಯ ಗ್ರಾಮೀಣ ವಾತಾವರಣ, ಗೋಸಂಪತ್ತಿನ ಮೇಲಿನ ಅವರ ಕಾಳಜಿ ಮತ್ತು ಕುಟುಂಬದ ಆತ್ಮೀಯತೆ ತಮ್ಮಲ್ಲಿ ವಿಶೇಷ ಸಂತೋಷ ಮೂಡಿಸಿತ್ತು ಎಂದು ಸ್ಮರಿಸಿದರು.

ಇಂದಿಗೂ ತಮ್ಮ ಮನೆಯಲ್ಲಿ ಎತ್ತು, ಹಸು ಹಾಗೂ ಕರುಗಳನ್ನು ಸಾಕಿಕೊಂಡು ಅವುಗಳ ಆರೈಕೆಯನ್ನು ಮುಂದುವರಿಸಿಕೊಂಡು ಬರುತ್ತಿರುವುದಾಗಿ ಪಾಟೀಲ್ ಅವರು ತಿಳಿಸಿದರು. ಆಧುನಿಕ ಜೀವನಶೈಲಿಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಹಾಗೂ ಗೋಸಂಪತ್ತಿನೊಂದಿಗೆ ತಮ್ಮ ನಂಟನ್ನು ಉಳಿಸಿಕೊಂಡಿರುವುದನ್ನು ಶ್ರೀ ತರಳಬಾಳು ಜಗದ್ಗುರುಗಳವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದಿನ ಕಾಲದ ರಾಜಕೀಯ ಮತ್ತು ಇಂದಿನ ರಾಜಕೀಯದ ನಡುವಿನ ಬದಲಾವಣೆಗಳನ್ನು ಹೇಗೆ ವಿಶ್ಲೇಷಿಸುತ್ತೀರಿ ಎಂದು ಶ್ರೀ ತರಳಬಾಳು ಜಗದ್ಗುರುಗಳವರು ಸಭಾಧ್ಯಕ್ಷರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗುರುಪಾದಗೌಡ ಸಂಗನಗೌಡ ಪಾಟೀಲ್ ಅವರು, ಕಾಲ ಬದಲಾದಂತೆ ರಾಜಕೀಯದ ಸ್ವರೂಪ ಮತ್ತು ಜನರ ನಿರೀಕ್ಷೆಗಳೂ ಬದಲಾಗಿವೆ. ಮತದಾರರ ನಿರೀಕ್ಷೆಗಳು ಹೆಚ್ಚುತ್ತಿರುವುದರ ಜೊತೆಗೆ, ಜನಪ್ರತಿನಿಧಿಗಳ ವೈಯಕ್ತಿಕ ನಿರೀಕ್ಷೆಗಳು ಕೂಡ ಮಿತಿಮೀರಿದಾಗ ರಾಜಕೀಯದ ನೈತಿಕ ಮೌಲ್ಯಗಳು ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ರಾಜಕೀಯದಲ್ಲಿ ಜನರ ವಿಶ್ವಾಸವೇ ಅತ್ಯಂತ ದೊಡ್ಡ ಬಂಡವಾಳವಾಗಬೇಕು. ಅಧಿಕಾರ, ಸ್ಥಾನಮಾನ ಮತ್ತು ವೈಯಕ್ತಿಕ ಲಾಭಕ್ಕಿಂತ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ಸಾರ್ಥಕವಾಗುತ್ತವೆ ಎಂದು ಅವರು ಹೇಳಿದರು.

ಪ್ರಾಮಾಣಿಕತೆ, ಸರಳತೆ, ತ್ಯಾಗ, ಜನಪರ ಕಾಳಜಿ ಮತ್ತು ಸಾರ್ವಜನಿಕ ಬದ್ಧತೆಯೇ ನಿಜವಾದ ರಾಜಕಾರಣಿಯ ಶಕ್ತಿ ಎಂದು ಸಭಾಧ್ಯಕ್ಷರು ಹೇಳಿದರು.

ರಾಜಕೀಯದಲ್ಲಿ ಗ್ರಾಮೀಣ ಜನತೆಯ ಪಾತ್ರ ಮತ್ತು ಜನರ ನೇರ ಪಾಲ್ಗೊಳ್ಳುವಿಕೆಯ ಕುರಿತು ಮಾತನಾಡಿದ ಶ್ರೀ ತರಳಬಾಳು ಜಗದ್ಗುರುಗಳವರು, 1994ರಲ್ಲಿ ಪಕ್ಷಾತೀತ ಹಾಗೂ ಜಾತ್ಯತೀತ ಧ್ಯೇಯದೊಂದಿಗೆ ಕೈಗೊಂಡಿದ್ದ ವಿಶಿಷ್ಟ ರಾಜಕೀಯ ಜಾಗೃತಿ ಪ್ರಯತ್ನವನ್ನು ವಿವರಿಸಿದರು.

ಹರಿಹರ, ಮಾಯಕೊಂಡ, ಜಗಳೂರು, ಭರಮಸಾಗರ ಹಾಗೂ ಹೊಳಲ್ಕೆರೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು, “ಹಳ್ಳಿಗಳೇ ಹೈಕಮಾಂಡ್” ಎಂಬ ಆಶಯದೊಂದಿಗೆ ಗ್ರಾಮೀಣ ಜನತೆಗೆ ರಾಜಕೀಯ ಜಾಗೃತಿ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಪ್ರಯತ್ನ ಮಾಡಲಾಗಿತ್ತು ಎಂದು ಹೇಳಿದರು.

ಹಣ, ಜಾತಿ, ಪಕ್ಷ ಮತ್ತು ಅಧಿಕಾರದ ಪ್ರಭಾವಕ್ಕಿಂತ ಅಭ್ಯರ್ಥಿಯ ವ್ಯಕ್ತಿತ್ವ, ಪ್ರಾಮಾಣಿಕತೆ, ಅರ್ಹತೆ, ಸರಳತೆ ಹಾಗೂ ಜನಸೇವೆಯ ಬದ್ಧತೆಯೇ ಚುನಾವಣೆಯಲ್ಲಿ ಮುಖ್ಯ ಮಾನದಂಡವಾಗಬೇಕು ಎಂಬುದು ಈ ಪರಿಕಲ್ಪನೆಯ ಮೂಲ ಆಶಯವಾಗಿತ್ತು ಎಂದು ಶ್ರೀ ತರಳಬಾಳು ಜಗದ್ಗುರುಗಳವರು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪು ನೀಡುವ ಶಕ್ತಿ ಜನರಲ್ಲಿದೆ. ಆದ್ದರಿಂದ ಜನರು ಜಾಗೃತರಾಗಿ, ಅಭ್ಯರ್ಥಿಯ ಹಿನ್ನೆಲೆ, ಸಾರ್ವಜನಿಕ ಸೇವೆ ಮತ್ತು ವ್ಯಕ್ತಿತ್ವವನ್ನು ಪರಿಗಣಿಸಿ ತಮ್ಮ ಆಯ್ಕೆಯನ್ನು ಮಾಡಬೇಕು ಎಂಬ ಸಂದೇಶವನ್ನು ಈ ಪ್ರಯತ್ನದ ಮೂಲಕ ನೀಡಲಾಗಿತ್ತು ಎಂದು ಅವರು ಹೇಳಿದರು.

ಇದೇ ಧ್ಯೇಯದ ಮುಂದುವರಿದ ಭಾಗವಾಗಿ ಚಿಕ್ಕಮಗಳೂರು ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶುದ್ಧ ಚುನಾವಣೆಯ ಪ್ರಯತ್ನವನ್ನು ಕೈಗೊಳ್ಳಲಾಗಿತ್ತು ಎಂದು ಶ್ರೀ ತರಳಬಾಳು ಜಗದ್ಗುರುಗಳವರು ವಿವರಿಸಿದರು.

ಆದರೆ ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಬಂದ ಕೆಲವು ಮಾಹಿತಿಗಳು ಆತಂಕಕಾರಿಯಾಗಿದ್ದವು. ಇತರ ಚುನಾವಣೆಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಣದ ಬಳಕೆ ನಡೆಯುತ್ತಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಪರಿಶುದ್ಧ ಚುನಾವಣೆಯ ಮೂಲ ಆಶಯಕ್ಕೆ ವಿರುದ್ಧವಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಹಣದ ಪ್ರಭಾವ ಹೆಚ್ಚುತ್ತಿರುವ ಚುನಾವಣಾ ವ್ಯವಸ್ಥೆಯಲ್ಲಿ ಮೌಲ್ಯಾಧಾರಿತ ರಾಜಕಾರಣವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಆದರೂ ಜನಜಾಗೃತಿ ಮತ್ತು ನೈತಿಕ ರಾಜಕೀಯದ ಕುರಿತ ನಿರಂತರ ಚರ್ಚೆ ಮಾತ್ರವೇ ಈ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಗೆ ದಾರಿ ಮಾಡಿಕೊಡಬಲ್ಲದು ಎಂದು ಶ್ರೀ ತರಳಬಾಳು ಜಗದ್ಗುರುಗಳವರು ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸಾಪ್ ಸೇರಿದಂತೆ ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಹರಡುತ್ತಿರುವ ಸುಳ್ಳು, ನಕಲಿ ಹಾಗೂ ಪರಿಶೀಲಿಸದ ಮಾಹಿತಿಗಳ ಬಗ್ಗೆ ಶ್ರೀ ತರಳಬಾಳು ಜಗದ್ಗುರುಗಳವರು ಕಳವಳ ವ್ಯಕ್ತಪಡಿಸಿದರು.

ತಪ್ಪು ಸಂದೇಶಗಳು ಮತ್ತು ನಕಲಿ ಮಾಹಿತಿಗಳ ಪರಿಣಾಮವಾಗಿ ಕುಟುಂಬಗಳಲ್ಲಿ ಅನುಮಾನ, ಅಪನಂಬಿಕೆ, ಮನಸ್ತಾಪ ಹಾಗೂ ಕೌಟುಂಬಿಕ ಕಲಹಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ವಿಶೇಷವಾಗಿ ವಾಟ್ಸಾಪ್ ಮೂಲಕ ಹರಡುವ ನಕಲಿ ಸಂದೇಶಗಳಿಂದ ಪತಿ-ಪತ್ನಿಯರ ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಮತ್ತು ಕೌಟುಂಬಿಕ ಸಮಸ್ಯೆಗಳು ಉಂಟಾಗುವ ಘಟನೆಗಳು ಗಮನಕ್ಕೆ ಬರುತ್ತಿವೆ ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳ ಸ್ವಾತಂತ್ರ್ಯವನ್ನು ಗೌರವಿಸಬೇಕು. ಆದರೆ ಆ ಸ್ವಾತಂತ್ರ್ಯವನ್ನು ಬಳಸಿಕೊಂಡು ಸುಳ್ಳು, ದ್ವೇಷಪೂರಿತ ಅಥವಾ ವ್ಯಕ್ತಿಯ ಮತ್ತು ಕುಟುಂಬದ ನೆಮ್ಮದಿಗೆ ಧಕ್ಕೆ ಉಂಟುಮಾಡುವ ಸಂದೇಶಗಳನ್ನು ಹರಡುವುದನ್ನು ತಡೆಯಲು ಪರಿಣಾಮಕಾರಿ ಕಾನೂನು ಹಾಗೂ ತಾಂತ್ರಿಕ ವ್ಯವಸ್ಥೆಯ ಅಗತ್ಯವಿದೆ ಎಂದು ಶ್ರೀ ತರಳಬಾಳು ಜಗದ್ಗುರುಗಳವರು ಸಲಹೆ ನೀಡಿದರು.

ವಾಟ್ಸಾಪ್ ಅಥವಾ ಇತರ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸಂದೇಶವನ್ನು ಪದೇಪದೇ ಫಾರ್ವರ್ಡ್ ಮಾಡಿದ ಸಂದರ್ಭದಲ್ಲಿ, ಆ ಸಂದೇಶವನ್ನು ಮೂಲತಃ ರಚಿಸಿ ಮೊದಲು ಪ್ರಸಾರ ಮಾಡಿದ ವ್ಯಕ್ತಿಯನ್ನು ಕಾನೂನುಬದ್ಧ ತನಿಖೆಯ ಸಂದರ್ಭದಲ್ಲಿ ತಾಂತ್ರಿಕವಾಗಿ ಗುರುತಿಸಲು ಸಾಧ್ಯವಾಗುವಂತಹ ವ್ಯವಸ್ಥೆಗಳ ಕುರಿತು ಚಿಂತನೆ ನಡೆಯಬೇಕು ಎಂದು ಶ್ರೀ ಜಗದ್ಗುರುಗಳವರು ಅಭಿಪ್ರಾಯಪಟ್ಟರು.

ಸುಳ್ಳು ಅಥವಾ ದ್ವೇಷಪೂರಿತ ಮಾಹಿತಿಯನ್ನು ಸೃಷ್ಟಿಸಿ ಸಮಾಜದಲ್ಲಿ ಗೊಂದಲ ಉಂಟುಮಾಡುವವರನ್ನು ಗುರುತಿಸುವುದು ಹಾಗೂ ಹೊಣೆಗಾರಿಕೆಯನ್ನು ನಿಗದಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕಾನೂನು ಮತ್ತು ತಾಂತ್ರಿಕ ನಿಯಮಗಳ ಅಗತ್ಯವಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಯಲು ಸರ್ಕಾರಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

“ಒಂದು ಸುಳ್ಳು ಸಂದೇಶ ಒಂದು ಕುಟುಂಬದ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಆದ್ದರಿಂದ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜವಾಬ್ದಾರಿ ಅಗತ್ಯ; ಅದರ ದುರುಪಯೋಗಕ್ಕೆ ಕಾನೂನಿನ ಕಡಿವಾಣವೂ ಅಗತ್ಯ” ಎಂಬ ಸಂದೇಶವನ್ನು ಶ್ರೀ ತರಳಬಾಳು ಜಗದ್ಗುರುಗಳವರು ನೀಡಿದರು.

ಈ ಮಹತ್ವದ ವಿಷಯವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಸಭಾಧ್ಯಕ್ಷ ಗುರುಪಾದಗೌಡ ಸಂಗನಗೌಡ ಪಾಟೀಲ್ ಅವರು ತಿಳಿಸಿದರು.

ಇಂದಿನ ಯುವಪೀಳಿಗೆ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯತ್ತ ಸೆಳೆಯಲ್ಪಡುತ್ತಿರುವ ಬೆಳವಣಿಗೆಯ ಬಗ್ಗೆಯೂ ಶ್ರೀ ತರಳಬಾಳು ಜಗದ್ಗುರುಗಳವರು ಕಳವಳ ವ್ಯಕ್ತಪಡಿಸಿದರು.

ತಂತ್ರಜ್ಞಾನವು ಮಾನವನ ಬದುಕನ್ನು ಸುಗಮಗೊಳಿಸುವ ಸಾಧನವಾಗಬೇಕು; ಆದರೆ ಅದೇ ತಂತ್ರಜ್ಞಾನ ಮಾನವನ ಚಿಂತನೆ, ಸಮಯ, ಸಂಬಂಧಗಳು ಮತ್ತು ಜೀವನಶೈಲಿಯನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆಯಬಾರದು ಎಂದು ಅವರು ಹೇಳಿದರು.

ಯುವಜನತೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸ್ವಯಂ ನಿಯಂತ್ರಣ ರೂಢಿಸಿಕೊಳ್ಳಬೇಕು. ಶಿಕ್ಷಣ, ಕೌಶಲ್ಯಾಭಿವೃದ್ಧಿ, ಕುಟುಂಬದೊಂದಿಗೆ ಸಮಯ ಕಳೆಯುವುದು, ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮತ್ತು ಆರೋಗ್ಯಕರ ಜೀವನಶೈಲಿಯತ್ತ ಗಮನಹರಿಸುವುದು ಅಗತ್ಯ ಎಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಜಗದ್ಗುರುಗಳವರು ಕರ್ನಾಟಕದ ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕತೆ ಮತ್ತು ಜನಪರ ಬದ್ಧತೆಯ ಮೂಲಕ ಗುರುತಿಸಿಕೊಂಡಿದ್ದ ಹಿರಿಯ ರಾಜಕಾರಣಿಗಳಾದ ಶಾಂತವೇರಿ ಗೋಪಾಲಗೌಡ, ಕಾಗೋಡು ತಿಮ್ಮಪ್ಪ ಹಾಗೂ ಬಿ.ಜಿ. ಬಣಾಕರ್ ಅವರ ದಕ್ಷತೆ, ಸರಳತೆ ಮತ್ತು ಸಾರ್ವಜನಿಕ ಸೇವೆಯನ್ನು ಸ್ಮರಿಸಿದರು.

ಅದೇ ರೀತಿ ಜಗಳೂರಿನ ಮಹಮದ್ ಇಮಾಂ, ಅಂದರೆ ಜೆ.ಎಂ. ಇಮಾಂ ಅವರ ಸರಳತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯನ್ನೂ ನೆನಪಿಸಿಕೊಂಡರು.

ಜನರು ಪ್ರೀತಿಯಿಂದ “ಇಮ್ಮಣ್ಣ” ಎಂದು ಕರೆಯುತ್ತಿದ್ದ ಇಮಾಂ ಅವರು ರಾಜಕೀಯವನ್ನು ಹಣ ಗಳಿಸುವ ಸಾಧನವನ್ನಾಗಿ ಕಾಣದೆ, ಸಾರ್ವಜನಿಕ ಸೇವೆಯ ಪವಿತ್ರ ಕ್ಷೇತ್ರವೆಂದು ಭಾವಿಸಿದ್ದ ಆದರ್ಶ ರಾಜಕಾರಣಿ ಎಂದು ಶ್ರೀ ತರಳಬಾಳು ಜಗದ್ಗುರುಗಳವರು ಹೇಳಿದರು.

ರಾಜಕಾರಣಿಯ ನಿಜವಾದ ಗೌರವವು ಆತನ ಬಳಿ ಇರುವ ಅಧಿಕಾರ ಅಥವಾ ಸಂಪತ್ತಿನಲ್ಲಿ ಅಲ್ಲ, ಜನರ ಮನಸ್ಸಿನಲ್ಲಿ ಗಳಿಸಿರುವ ವಿಶ್ವಾಸ ಮತ್ತು ಪ್ರೀತಿಯಲ್ಲಿ ಇದೆ ಎಂಬುದನ್ನು ಇಂತಹ ಹಿರಿಯ ನಾಯಕರ ಬದುಕು ನಮಗೆ ತೋರಿಸಿಕೊಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಭಾಧ್ಯಕ್ಷ ಗುರುಪಾದಗೌಡ ಸಂಗನಗೌಡ ಪಾಟೀಲ್ ಅವರ ಶ್ರೀ ತರಳಬಾಳು ಜಗದ್ಗುರುಗಳವರೊಂದಿಗಿನ ದರ್ಶನ ಮತ್ತು ಆಶೀರ್ವಾದದ ಭೇಟಿ ಕೇವಲ ಸೌಜನ್ಯದ ಭೇಟಿಯಾಗಿರದೆ, ಪ್ರಜಾಪ್ರಭುತ್ವದ ಮೌಲ್ಯಗಳು, ಪರಿಶುದ್ಧ ಚುನಾವಣೆ, ಗ್ರಾಮಾಧಾರಿತ ರಾಜಕಾರಣ, ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯುತ ಬಳಕೆ, ಯುವಜನತೆಯ ಭವಿಷ್ಯ, ಗೋಸಂಪತ್ತಿನ ಸಂರಕ್ಷಣೆ ಹಾಗೂ ಆದರ್ಶ ಸಾರ್ವಜನಿಕ ಜೀವನದ ಕುರಿತು ನಡೆದ ಅರ್ಥಪೂರ್ಣ ಸಂವಾದವಾಗಿ ರೂಪುಗೊಂಡಿತು.

ಮೂರು ದಶಕಗಳ ಹಿಂದಿನ ಗ್ರಾಮೀಣ ಬದುಕಿನ ಆತ್ಮೀಯ ನೆನಪಿನಿಂದ ಆರಂಭವಾದ ಈ ಸಂವಾದವು “ಹಳ್ಳಿಗಳೇ ಹೈಕಮಾಂಡ್” ಎಂಬ ಜನಕೇಂದ್ರಿತ ರಾಜಕೀಯ ಪರಿಕಲ್ಪನೆಯಿಂದ ಹಿಡಿದು, ಇಂದಿನ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳು ಎದುರಿಸುತ್ತಿರುವ ಸವಾಲುಗಳವರೆಗೆ ವಿಸ್ತರಿಸಿತು.

ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆಗೆ ರಾಜಕೀಯದಲ್ಲಿ ಮೌಲ್ಯಗಳು ಉಳಿಯಬೇಕು; ಚುನಾವಣೆಗಳಲ್ಲಿ ಹಣ ಮತ್ತು ಪ್ರಭಾವದ ಬದಲಿಗೆ ಜನಸೇವೆ ಮುಖ್ಯವಾಗಬೇಕು, ತಂತ್ರಜ್ಞಾನವು ಸಮಾಜದ ಒಳಿತಿಗೆ ಬಳಕೆಯಾಗಬೇಕು; ಯುವಜನತೆ ಮೊಬೈಲ್ ಗೀಳಿನಿಂದ ಹೊರಬಂದು ಸೃಜನಾತ್ಮಕ ಬದುಕಿನತ್ತ ಸಾಗಬೇಕು ಎಂಬ ಮಹತ್ವದ ಸಂದೇಶವನ್ನು ಈ ಸಂವಾದವು ನೀಡಿತು.

ಈ ಸಂದರ್ಭದಲ್ಲಿ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಚಂದ್ರಪ್ಪ, ಕಾರ್ಯದರ್ಶಿ ವಿಶ್ವನಾಥ್ ಬಾತಿ, ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಿಶೇಷಾಧಿಕಾರಿ ಜತ್ತಿ, ತಿಪ್ಪೇಸ್ವಾಮಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಶ್ರೀ ತರಳಬಾಳು ಜಗದ್ಗುರುಗಳ ಆಶೀರ್ವಾದ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಶ್ರೀ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ: ಆಗಸ್ಟ್ 29ರಿಂದ 31ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಬಿಡದಿ ಟೌನ್‌ಶಿಪ್ ರದ್ದುಪಡಿಸಿ; ರೈತರ ಭೂಮಿಗೆ ಕೈಹಾಕಿದರೆ ಉಗ್ರ ಹೋರಾಟ! ಅನ್ಯಾಯ ಮಾಡಿದರೆ ಚುನಾವಣೆಯಲ್ಲಿ ತಕ್ಕ ಪಾಠ: ಹೆಚ್.ಆರ್. ಬಸವರಾಜಪ್ಪ

ಎಂಜಲು ಕಾಸಿಗೆ ಆಸೆ ಬಿದ್ದು ಕಣ್ಣುಮುಚ್ಚಿದ ಅಧಿಕಾರಿಗಳು: ಅಕ್ರಮ ‘ತುಂತೂರು’ ರೆಸಾರ್ಟ್ ಮೇಲೆ ಬಿದ್ದಿತು ಅಬಕಾರಿ ಕಣ್ಣು, ಮಾಲೀಕ ಗಾಜನೂರು ಸದಾನಂದನಿಗೆ ಎಫ್‌ಐಆರ್ ಶಾಕ್!

ನಾನೀಗ ಸರ್ಕಾರದ ಮುಖ್ಯಸ್ಥನಲ್ಲ, ಆದರೂ ಒಳ ಮೀಸಲಾತಿ ಹೋರಾಟದಿಂದ ಹಿಂದೆ ಸರಿಯಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಕಳ್ಳರಿಗೆ ಸಿಂಹಸ್ವಪ್ನ, ಜನರಿಗೆ ನೆಮ್ಮದಿ; ಎಸ್ಪಿ ನಿಖಿಲ್ ಬಿ. ನೇತೃತ್ವದಲ್ಲಿ ಶಿವಮೊಗ್ಗ ಪೊಲೀಸರ ಖಡಕ್ ಕಾರ್ಯಾಚರಣೆ: ಬರೋಬ್ಬರಿ ₹5.73 ಕೋಟಿ ಸ್ವತ್ತು ಮಾಲೀಕರ ಕೈಗೆ!

Leave a Comment