ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಮಹಾತ್ಮ ಗಾಂಧೀಜಿ ಅವರ ಜಯಂತಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಒಂದು ತಿಂಗಳ ಕಾಲ ವಿವಿಧ ಸೇವಾ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸೇವಾ ಚಟುವಟಿಕೆಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಕರೆ ನೀಡಿದ್ದಾರೆ ಎಂದರು.

ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ನಡೆಯುವ ಈ ಅಭಿಯಾನದಲ್ಲಿ ಜಿಲ್ಲಾ, ಮಂಡಲ ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ವಿವಿಧ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಅವುಗಳಿಂದ ಸಾರ್ವಜನಿಕರಿಗೆ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿ ತಲುಪಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಸೆ.17ರಂದು ‘ಆಶೀರ್ವಾದದ ದೀಪ’
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಶಿವಮೊಗ್ಗ ಕ್ಷೇತ್ರದಾದ್ಯಂತ ‘ಆಶೀರ್ವಾದದ ದೀಪ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಬಿ.ವೈ. ರಾಘವೇಂದ್ರ ತಿಳಿಸಿದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸಿ, ಅವರ ಮನೆಗಳ ಅಂಗಳ ಅಥವಾ ವರಾಂಡಾದಲ್ಲಿ ಸಂಜೆ 7 ಗಂಟೆಗೆ ದೀಪ ಬೆಳಗಿಸುವ ಮೂಲಕ ಪ್ರಧಾನಮಂತ್ರಿಗಳಿಗೆ ಶುಭ ಹಾರೈಸುವ ಕಾರ್ಯಕ್ರಮ ರೂಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ದೊರೆಯಲಿ ಹಾಗೂ ವಿಕಸಿತ ಭಾರತ-2047ರ ಗುರಿ ಸಾಧನೆಗೆ ಮತ್ತಷ್ಟು ಶಕ್ತಿ ದೊರೆಯಲಿ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಫಲಾನುಭವಿಗಳಿದ್ದಾರೆ. ಅಂತಹ ಕುಟುಂಬಗಳನ್ನು ಗುರುತಿಸಿ ಅವರೊಂದಿಗೆ ಸಂಪರ್ಕ ಸಾಧಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಶಿವಮೊಗ್ಗ ನಗರದಲ್ಲಿ ನಿರ್ಮಾಣವಾಗಿರುವ ವಿವಿಧ ಮೇಲ್ಸೇತುವೆಗಳು, ಕಳಸವಳ್ಳಿ-ಸಿಗಂದೂರು ಸೇತುವೆ, ಅಮೃತ್ ಭಾರತ್ ರೈಲ್ವೆ ನಿಲ್ದಾಣ ಯೋಜನೆಯಡಿ ನಡೆಯುತ್ತಿರುವ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಶಿವಮೊಗ್ಗ ವಿಮಾನ ನಿಲ್ದಾಣ, ಎಫ್‌ಎಂ ರೇಡಿಯೋ ಟವರ್ ಸೇರಿದಂತೆ ಹಲವು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಅವರು ಪ್ರಸ್ತಾಪಿಸಿದರು.

ಸೆ.18ರಿಂದ 24ರವರೆಗೆ ‘ನಮೋ ಸೇವಾ ಗಾಥಾ’
ಸೆಪ್ಟೆಂಬರ್ 18ರಿಂದ 24ರವರೆಗೆ ‘ನಮೋ ಸೇವಾ ಗಾಥಾ’ ಹೆಸರಿನಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸದರು ತಿಳಿಸಿದರು.
ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಸೈಕಲ್ ಜಾಥಾ, ಮ್ಯಾರಥಾನ್ ಹಾಗೂ ಬೀದಿ ನಾಟಕ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಲಾಗಿದೆ.
ಮಹಿಳಾ ಮೋರ್ಚಾ, ಎಸ್‌ಸಿ ಮೋರ್ಚಾ, ಎಸ್‌ಟಿ ಮೋರ್ಚಾ, ಯುವ ಮೋರ್ಚಾ, ಓಬಿಸಿ ಮೋರ್ಚಾ ಸೇರಿದಂತೆ ಪಕ್ಷದ ವಿವಿಧ ಘಟಕಗಳು ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿವೆ ಎಂದು ಹೇಳಿದರು.

ಸೆ.25ರಂದು ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನ
ಸೆಪ್ಟೆಂಬರ್ 25ರಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆಯನ್ನು ಆಚರಿಸಲಾಗುವುದು. ಅವರ ‘ಅಂತ್ಯೋದಯ’ ಪರಿಕಲ್ಪನೆ ಹಾಗೂ ‘ಏಕಾತ್ಮ ಮಾನವತಾವಾದ’ದ ವಿಚಾರಗಳನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಘವೇಂದ್ರ ಹೇಳಿದರು.
ಬೂತ್ ಮಟ್ಟದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ದೇಶಭಕ್ತಿ ಗೀತೆಗಳ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಹಿರಿಯರನ್ನು ಆಹ್ವಾನಿಸಿ ಅವರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮಗಳನ್ನೂ ರೂಪಿಸಲಾಗಿದೆ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ
ಸೆಪ್ಟೆಂಬರ್ 25ರಿಂದ ಅಕ್ಟೋಬರ್ 6ರವರೆಗೆ ‘ಅಂಗನವಾಡಿಯಲ್ಲಿ ಉತ್ಸವ’ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಪೌಷ್ಟಿಕತೆ, ಆರೋಗ್ಯ, ಲಸಿಕೆ, ಮಹಿಳಾ ಕಲ್ಯಾಣ ಹಾಗೂ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಆರೋಗ್ಯ ತಪಾಸಣಾ ಶಿಬಿರ, ಮಕ್ಕಳ ತಜ್ಞರು ಹಾಗೂ ಪ್ರಸೂತಿ ತಜ್ಞರೊಂದಿಗೆ ಸಂವಾದ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲು ಯೋಜಿಸಲಾಗಿದೆ ಎಂದು ಹೇಳಿದರು.

ಅ.2ರಂದು ಮಹಾತ್ಮ ಗಾಂಧೀಜಿ ಜಯಂತಿ
ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು. ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಆದ್ಯತೆ ನೀಡುವುದರ ಜೊತೆಗೆ ‘ಲೋಕಲ್ ಫಾರ್ ವೋಕಲ್’ ಹಾಗೂ ಸ್ವದೇಶಿ ಪರಿಕಲ್ಪನೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿ ಮಂಡಲ ಮಟ್ಟದಲ್ಲಿ ನಾಟಕ ಪ್ರದರ್ಶನ ಆಯೋಜಿಸುವ ಉದ್ದೇಶವಿದ್ದು, ಇದಕ್ಕಾಗಿ ತಂಡಗಳನ್ನು ಸಿದ್ಧಪಡಿಸುವ ಕಾರ್ಯವೂ ನಡೆಯಲಿದೆ ಎಂದು ತಿಳಿಸಿದರು.
ಮಕ್ಕಳಿಗಾಗಿ ‘ಕನಸಿನ ಭಾರತ’ ಕಾರ್ಯಕ್ರಮ
ಅಕ್ಟೋಬರ್ 7ರಿಂದ 14ರವರೆಗೆ ಮಕ್ಕಳಲ್ಲಿ ವಿಕಸಿತ ಭಾರತದ ಪರಿಕಲ್ಪನೆ ಮೂಡಿಸುವ ಉದ್ದೇಶದಿಂದ ‘25 ಕೋಟಿ ಮಕ್ಕಳ ಕನಸಿನ ಭಾರತ’ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸಂಸದರು ಹೇಳಿದರು.
4ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆಶುಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಲು ಉದ್ದೇಶಿಸಲಾಗಿದೆ.
ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಆಡಳಿತ ಮಂಡಳಿಗಳ ಸಹಕಾರದೊಂದಿಗೆ ಈ ಕಾರ್ಯಕ್ರಮಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

25 ವರ್ಷಗಳ ಸಾರ್ವಜನಿಕ ಸೇವೆಯ ಕುರಿತು ಪ್ರಸ್ತಾಪ
ಪ್ರಧಾನಿ ನರೇಂದ್ರ ಮೋದಿ ಅವರು 2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2014ರ ಮೇ 26ರಂದು ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು, ನಂತರದ ಲೋಕಸಭಾ ಚುನಾವಣೆಗಳಲ್ಲಿ ಪ್ರಧಾನಮಂತ್ರಿಯಾಗಿ ಮುಂದುವರಿದಿದ್ದಾರೆ ಎಂದು ರಾಘವೇಂದ್ರ ಹೇಳಿದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದ ಪ್ರಧಾನಮಂತ್ರಿಯಾಗಿರುವ ಅವಧಿಯವರೆಗೆ ಅವರ ಆಡಳಿತದ ವಿವಿಧ ಕಾರ್ಯಕ್ರಮಗಳನ್ನು ಪಕ್ಷದ ಕಾರ್ಯಕರ್ತರು ಜನರಿಗೆ ತಿಳಿಸುವ ಪ್ರಯತ್ನ ಮಾಡಲಿದ್ದಾರೆ ಎಂದರು.
ಜನಧನ್ ಯೋಜನೆ, ಸ್ವಚ್ಛ ಭಾರತ್ ಮಿಷನ್, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್, ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿಯ ಬದಲಾವಣೆ, ಜಲಜೀವನ್ ಮಿಷನ್, ಪಿಎಂ ಕಿಸಾನ್ ಸಮ್ಮಾನ್ ನಿಧಿ, ಸೌರಶಕ್ತಿ ಆಧಾರಿತ ಯೋಜನೆಗಳು ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಜನರಿಗೆ ಪರಿಚಯಿಸಲಾಗುವುದು ಎಂದು ಹೇಳಿದರು.
ದೇಶದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಆದ್ಯತೆಯ ಕುರಿತು ಜನರಿಗೆ ಮಾಹಿತಿ ನೀಡುವ ಕಾರ್ಯವೂ ನಡೆಯಲಿದೆ ಎಂದರು.
1886 ಬೂತ್ಗಳಲ್ಲಿ ಅಭಿಯಾನ
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 1886 ಬೂತ್‌ಗಳಿದ್ದು, ಎಲ್ಲಾ ಬೂತ್‌ಗಳಲ್ಲೂ ಸೇವಾ ಸಂಕಲ್ಪ ಅಭಿಯಾನದ ಕಾರ್ಯಕ್ರಮಗಳನ್ನು ನಡೆಸಲು ಸಂಘಟನೆ ಸಿದ್ಧತೆ ಮಾಡಿಕೊಂಡಿದೆ ಎಂದು ಬಿ.ವೈ. ರಾಘವೇಂದ್ರ ತಿಳಿಸಿದರು.
ಹಿಂದೆ ಕ್ಷೇತ್ರದಲ್ಲಿ 1793 ಬೂತ್‌ಗಳಿದ್ದವು. ಕ್ಷೇತ್ರಗಳ ಮರುವಿಂಗಡಣೆ ಮತ್ತು ಹೊಸ ಬೂತ್‌ಗಳ ರಚನೆಯ ಹಿನ್ನೆಲೆಯಲ್ಲಿ ಇದೀಗ ಬೂತ್‌ಗಳ ಸಂಖ್ಯೆ 1886ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.
ಜಿಲ್ಲಾ ತಂಡ, ಮಂಡಲ ಪದಾಧಿಕಾರಿಗಳು ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ನಡೆಯಲಿರುವ ಒಂದು ತಿಂಗಳ ‘ಸೇವಾ ಸಂಕಲ್ಪ ಅಭಿಯಾನ’ವನ್ನು ಅನುಷ್ಠಾನಗೊಳಿಸಲಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನಡೆಯುವ ಕಾರ್ಯಕ್ರಮಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ವಿವಿಧ ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳ ಮೂಲಕ ಒಂದು ತಿಂಗಳ ಕಾಲ ಮುಂದುವರಿಯಲಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್.ಕೆ., ಶಾಸಕರಾದ ಚನ್ನಬಸಪ್ಪ (ಚೆನ್ನಿ), ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಕೆ.ಜಿ. ಕುಮಾರಸ್ವಾಮಿ, ಜಿಲ್ಲಾ ವಕ್ತಾರರಾದ ಜ್ಯೋತಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಹರಿಕೃಷ್ಣ, ಮಾಲತೇಶ್, ಬಳ್ಳೆಕೆರೆ ಸಂತೋಷ್, ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಎಸ್. ಹಾಗೂ ಸಹ ಪ್ರಮುಖ್ ಮಂಜುನಾಥ್ ಎನ್. ಶ್ರೀನಾಗ್ ಉಪಸ್ಥಿತರಿದ್ದರು.






