ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮೋದಿ ನಾಯಕತ್ವದಲ್ಲಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದ ಭಾರತ: ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದ ಸಮರ್ಥ ನಾಯಕ ಮೋದಿ: ಬಿ.ವೈ. ವಿಜಯೇಂದ್ರ

On: September 17, 2026 10:22 PM
Follow Us:

ಶಿವಮೊಗ್ಗ, ಸೆ.17: ಭಾರತಕ್ಕೆ ಉಜ್ವಲ ಭವಿಷ್ಯವಿದೆ. ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದ ಆಡಳಿತ ನೀಡುವುದರ ಜೊತೆಗೆ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿ, ಜಾಗತಿಕ ಮಟ್ಟದಲ್ಲಿ ಭಾರತ ತನ್ನದೇ ಆದ ಸ್ಥಾನ ಪಡೆದುಕೊಳ್ಳುವಂತೆ ಮಾಡಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಡಳಿತದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆಯೋಜಿಸಿದ್ದ ಆಶೀರ್ವಾದದ ದೀಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳ ಮಹತ್ವದ ಪಯಣವನ್ನು ಪೂರ್ಣಗೊಳಿಸಿದ್ದಾರೆ. ಅವರ ಸೇವಾ ಜೀವನ ಮತ್ತು ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ದೇಶದಾದ್ಯಂತ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಕೋಟ್ಯಂತರ ಜನರ ಆಶೀರ್ವಾದದ ಸಂಕೇತವಾಗಿ ದೀಪ ಪ್ರಜ್ವಲನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಮೋದಿ ಅವರ ನಾಯಕತ್ವದಲ್ಲಿ ಭಾರತ ಆರ್ಥಿಕ, ಸಾಮಾಜಿಕ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ಕಂಡಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅಲ್ಲಿನ ಅಭಿವೃದ್ಧಿ ಮಾದರಿಯನ್ನು ರೂಪಿಸಿದ ಅವರು, ನಂತರ ಪ್ರಧಾನಿಯಾಗಿ ದೇಶದಾದ್ಯಂತ ಅಭಿವೃದ್ಧಿಯ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಅಭಿವೃದ್ಧಿಯ ವೇಗ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜನಕೇಂದ್ರಿತ ಯೋಜನೆಗಳ ಮೂಲಕ ದೇಶದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಲವು ಪ್ರಮುಖ ಯೋಜನೆಗಳು ಪೂರ್ಣಗೊಳ್ಳಲು ದೀರ್ಘಕಾಲ ಬೇಕಾಗುತ್ತಿತ್ತು. ಆದರೆ ಮೋದಿ ಅವರ ಆಡಳಿತದಲ್ಲಿ ನಿರ್ಧಾರ ಕೈಗೊಳ್ಳುವ ವೇಗ ಮತ್ತು ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ದೊರೆತಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಇದಕ್ಕೆ ಒಂದು ಉದಾಹರಣೆಯಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿಯ ದೃಷ್ಟಿಕೋನ, ಸಂಸದ ಬಿ.ವೈ. ರಾಘವೇಂದ್ರ ಅವರ ಸಕ್ರಿಯ ಪ್ರಯತ್ನ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಕನಸು ಸಾಕಾರಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ನಂತರ ಉದ್ಘಾಟನೆಯನ್ನೂ ಮಾಡಿದ್ದಾರೆ. ಇದೇ ರೀತಿ ಸಿಗಂಧೂರು ಸೇತುವೆ ಸೇರಿದಂತೆ ಹಲವು ಪ್ರಮುಖ ಮೂಲಸೌಕರ್ಯ ಯೋಜನೆಗಳು ಜಿಲ್ಲೆಯಲ್ಲಿ ಸಾಕಾರಗೊಂಡಿವೆ ಎಂದು ಹೇಳಿದರು.

ಕೋವಿಡ್-19 ಸಾಂಕ್ರಾಮಿಕ ಸೇರಿದಂತೆ ಹಲವು ಜಾಗತಿಕ ಸವಾಲುಗಳು ಎದುರಾದ ಸಂದರ್ಭದಲ್ಲಿ ಭಾರತವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಕೇಂದ್ರ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ. ರಷ್ಯಾ-ಉಕ್ರೇನ್ ಸಂಘರ್ಷ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಬಿಕ್ಕಟ್ಟುಗಳ ನಡುವೆಯೂ ಭಾರತದ ಆರ್ಥಿಕತೆ ಮತ್ತು ಅಭಿವೃದ್ಧಿಯ ವೇಗವನ್ನು ಮುಂದುವರಿಸುವ ಪ್ರಯತ್ನ ನಡೆದಿದೆ ಎಂದು ವಿಜಯೇಂದ್ರ ಹೇಳಿದರು.

ಭಾರತ ಇಂದು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಯುವಶಕ್ತಿಯ ಸಾಮರ್ಥ್ಯವನ್ನು ಬಳಸಿಕೊಳ್ಳುವುದು, ಉದ್ಯಮಶೀಲತೆಗೆ ಉತ್ತೇಜನ ನೀಡುವುದು, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವುದು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶ ಮುನ್ನಡೆಯುತ್ತಿದೆ ಎಂದರು.

ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಹಿತಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅವರ ತಾಯಿ ನಿಧನರಾದ ಸಂದರ್ಭದಲ್ಲಿ ವೈಯಕ್ತಿಕ ದುಃಖದ ನಡುವೆಯೂ ಕರ್ತವ್ಯಕ್ಕೆ ಮರಳಿದ ರೀತಿ ಅವರ ಸಾರ್ವಜನಿಕ ಜೀವನದ ಬದ್ಧತೆಯನ್ನು ತೋರಿಸುತ್ತದೆ ಎಂದು ವಿಜಯೇಂದ್ರ ಹೇಳಿದರು.

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಧ್ಯೇಯದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಪ್ರಯೋಜನ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಯುವಜನರ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ದೇಶದ ಅಭಿವೃದ್ಧಿಯಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡಲಾಗುತ್ತಿದೆ ಎಂದರು.

ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ ನಡೆಸಲಾಗುತ್ತಿದೆ. ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸುವ ಉದ್ದೇಶ ಹೊಂದಲಾಗಿದೆ. ಪ್ರಧಾನಿ ಅವರ ಸಾರ್ವಜನಿಕ ಜೀವನ ಮತ್ತು ಸೇವಾ ಬದ್ಧತೆಯನ್ನು ಸ್ಮರಿಸುವ ಸಂಕೇತವಾಗಿ ದೀಪ ಪ್ರಜ್ವಲನ ಮಾಡಲಾಗುತ್ತಿದೆ ಎಂದು ಹೇಳಿದರು.

ಇಡೀ ವಿಶ್ವದ ಗಮನ ಭಾರತದತ್ತ ಮತ್ತು ನರೇಂದ್ರ ಮೋದಿ ಅವರ ನಾಯಕತ್ವದತ್ತ ನೆಟ್ಟಿದೆ. ದೇಶ ಇನ್ನಷ್ಟು ಅಭಿವೃದ್ಧಿ ಸಾಧಿಸಿ ಹೊಸ ಎತ್ತರಕ್ಕೆ ತಲುಪಲಿ ಎಂಬುದು ಪ್ರತಿಯೊಬ್ಬ ಭಾರತೀಯನ ಆಶಯವಾಗಬೇಕು ಎಂದು ವಿಜಯೇಂದ್ರ ಹೇಳಿದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಲಿ

ರಾಜ್ಯದ ಹಲವು ಭಾಗಗಳಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ವಿದ್ಯುತ್ ಮತ್ತು ನೀರಿನ ಸಮಸ್ಯೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ. ಇದರಿಂದ ರೈತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಳೆಗಳಿಗೆ ಅಗತ್ಯವಾದ ನೀರು ಹಾಗೂ ವಿದ್ಯುತ್ ದೊರೆಯದೆ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಇತ್ತೀಚೆಗೆ ನಡೆಸಿದ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಉದ್ದೇಶವೂ ಸರ್ಕಾರದ ಗಮನವನ್ನು ಜನರು ಮತ್ತು ರೈತರ ಸಮಸ್ಯೆಗಳತ್ತ ಸೆಳೆಯುವುದಾಗಿತ್ತು. ಸರ್ಕಾರದ ಗಮನಕ್ಕೆ ಹಲವು ವಿಚಾರಗಳನ್ನು ತಂದಿದ್ದೇವೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಬಿಜೆಪಿ ನಿರಂತರ ಹೋರಾಟ ನಡೆಸುತ್ತಿದೆ ಎಂದರು.

ಮುಖ್ಯಮಂತ್ರಿ ಇದುವರೆಗೆ ಬೆಂಗಳೂರಿಗೆ ಸೀಮಿತವಾಗಿದ್ದರು ಎಂಬ ಟೀಕೆಗಳಿದ್ದವು. ಇದೀಗ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಆದರೆ ಪ್ರವಾಸ ಕೇವಲ ಸಭೆಗಳಿಗೆ ಸೀಮಿತವಾಗದೆ, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯವಾಗಬೇಕು ಎಂದು ವಿಜಯೇಂದ್ರ ಹೇಳಿದರು.

ಮುಖ್ಯಮಂತ್ರಿಗಳು ಮಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ನೀಡಬೇಕು. ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಕರಾವಳಿ ಭಾಗಕ್ಕೆ ನೀಡಿರುವ ಕೊಡುಗೆ ಏನು ಎಂಬುದನ್ನು ಜನರ ಮುಂದೆ ಸ್ಪಷ್ಟಪಡಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ರಸ್ತೆ, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಈಗಿನ ಸರ್ಕಾರವೂ ಕರಾವಳಿ ಭಾಗದ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಬೇಕು ಎಂದರು.

ಕೇವಲ ಸಚಿವ ಸಂಪುಟ ಸಭೆ ನಡೆಸಿ, ಬಳಿಕ ಛಾಯಾಚಿತ್ರಗಳಿಗೆ ಸೀಮಿತವಾಗುವ ಕಾರ್ಯವಾಗಬಾರದು. ನೆಲಮಟ್ಟದಲ್ಲಿ ಕಾಮಗಾರಿಗಳು ನಡೆಯಬೇಕು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ರಸ್ತೆ ಅಭಿವೃದ್ಧಿಗೆ ತಲಾ ₹200 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕಸ್ತೂರಿರಂಗನ್ ವರದಿ ಕುರಿತು ಮಾತನಾಡಿದ ವಿಜಯೇಂದ್ರ, ಈ ವರದಿ ಕೇಂದ್ರದ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಸ್ತಾಪಗೊಂಡ ವಿಚಾರವಾಗಿದೆ ಎಂದು ಹೇಳಿದರು. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಗಾಡ್ಗೀಳ್ ವರದಿ ಹಾಗೂ ಕಸ್ತೂರಿರಂಗನ್ ವರದಿಗಳ ಬಗ್ಗೆ ಹಿಂದಿನ ಸರ್ಕಾರಗಳ ಅವಧಿಯಲ್ಲಿಯೇ ಚರ್ಚೆ ನಡೆದಿತ್ತು. ಇದೀಗ ಈ ವಿಚಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪ ಮಾಡುವ ಬದಲು ಕಾಡಂಚಿನ ಜನರು ಮತ್ತು ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದರು.

ಕಸ್ತೂರಿರಂಗನ್ ವರದಿ ಜಾರಿಯ ಕುರಿತು ಕಾಡಂಚಿನ ರೈತರು ಹಾಗೂ ಗ್ರಾಮೀಣ ಪ್ರದೇಶದ ಜನರಲ್ಲಿ ಆತಂಕವಿದೆ. ಅವರ ಬದುಕು, ಕೃಷಿ ಚಟುವಟಿಕೆ ಹಾಗೂ ಆಸ್ತಿಯ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಮಗ್ರ ಚರ್ಚೆ ಅಗತ್ಯ. ಸರ್ಕಾರ ಈ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸದೆ, ರೈತರ ಹಿತವನ್ನು ಕೇಂದ್ರವಾಗಿಟ್ಟುಕೊಂಡು ಮುಂದುವರಿಯಬೇಕು ಎಂದು ಹೇಳಿದರು.

ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಈ ಕುರಿತು ಸಮಗ್ರ ಚರ್ಚೆ ನಡೆಸಲು ಬಿಜೆಪಿ ಸಿದ್ಧವಿದೆ. ಕಾಡಂಚಿನ ರೈತರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಜನರಲ್ಲಿ ಗೊಂದಲ ಮೂಡಿಸುವ ಬದಲು ವಾಸ್ತವಾಂಶಗಳನ್ನು ಮುಂದಿಟ್ಟು ಚರ್ಚೆ ನಡೆಸಬೇಕು ಎಂದು ವಿಜಯೇಂದ್ರ ಹೇಳಿದರು.

ಬಿಜೆಪಿ ನಡೆಸಿದ ಹೋರಾಟಗಳ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ಅಧಿವೇಶನ ಕರೆಯಲು ಮುಂದಾಗಿದೆ. ಈ ಅಧಿವೇಶನದಲ್ಲಿ ರಾಜ್ಯದ ಬರ ಪರಿಸ್ಥಿತಿ, ರೈತರ ಸಂಕಷ್ಟ ಹಾಗೂ ಕಸ್ತೂರಿರಂಗನ್ ವರದಿ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಬರಗಾಲದಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು. ನೀರು, ವಿದ್ಯುತ್, ಬೆಳೆ ನಷ್ಟ ಸೇರಿದಂತೆ ರೈತರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರದ ಆದ್ಯತೆಯಾಗಬೇಕು. ಜನರ ಸಮಸ್ಯೆಗಳ ಕುರಿತು ಸದನದಲ್ಲಿ ರಚನಾತ್ಮಕ ಚರ್ಚೆ ನಡೆಸಿ, ಅಗತ್ಯ ಪರಿಹಾರ ಕಂಡುಕೊಳ್ಳಲು ಬಿಜೆಪಿ ಸಹಕಾರ ನೀಡಲಿದೆ ಎಂದು ವಿಜಯೇಂದ್ರ ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಕೆ.ಜಿ. ಕುಮಾರಸ್ವಾಮಿ, ಅಶೋಕ್ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಎನ್.ಕೆ., ಪಕ್ಷದ ಮುಖಂಡರಾದ ವೆಂಕಟೇಶ್ ನಾಯಕ್, ಶಿವಕುಮಾರ್, ವಿರೂಪಾಕ್ಷ, ನಾಗರಾಜು, ಮಾಧ್ಯಮ ಪ್ರಮುಖ್ ಚಂದ್ರಶೇಖರ್, ಮಂಜುನಾಥ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಹನಸವಾಡಿಯಲ್ಲಿ ಸೆ.19ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ: ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಹಾಗೂ ತುಂಗಾ ಪ್ರೌಢಶಾಲಾ ಸಮಿತಿ ಹನಸವಾಡಿ ವತಿಯಿಂದ ಆಯೋಜನೆ

ವಿಶ್ವಕರ್ಮ ಮಹೋತ್ಸವ ಆಚರಣೆಯಲ್ಲಿ ಸಮಾಜದ ಸಂಘ-ಸಂಸ್ಥೆಗಳಿಗೆ ಆದ್ಯತೆ ನೀಡದ ಆರೋಪ!: ಜಿಲ್ಲಾಡಳಿತದ ಧೋರಣೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಕ್ರೀಡೆಯಲ್ಲಿ ನಿಯಮ, ಶಿಸ್ತು ಮತ್ತು ಪ್ರಾಮಾಣಿಕತೆಗೆ ಆದ್ಯತೆ ಇರಲಿ: ಎಸ್.ಕೆ. ಗಜೇಂದ್ರಸ್ವಾಮಿ

ಕಸ್ತೂರಿ ರಂಗನ್ ವರದಿಗೆ ಮಲೆನಾಡಿನ ಪ್ರತಿರೋಧ: ವರದಿ ವಿರುದ್ಧದ ಹೋರಾಟಕ್ಕೆ ಧ್ವನಿ ಬಲಪಡಿಸಿದ ಸಚಿವ ಮಧು ಬಂಗಾರಪ್ಪ

ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ತಿಂಗಳ ಸೇವಾ ಸಂಕಲ್ಪ ಅಭಿಯಾನಕ್ಕೆ ಚಾಲನೆ: ದೇಶದ ಅಭಿವೃದ್ಧಿಗೆ ಮೋದಿ ಅವರಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ವಿಶೇಷ ಪೂಜೆ: ಸಂಸದ ಬಿ.ವೈ. ರಾಘವೇಂದ್ರ

GAVS 2026 ಉದ್ಘಾಟನೆಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಆಹ್ವಾನ: ಕರ್ನಾಟಕ ಆರ್ಯವೈಶ್ಯ ಮಹಾಸಭಾ ನಿಯೋಗದೊಂದಿಗೆ ಡಿ.ಎಸ್. ಅರುಣ್ ಭೇಟಿ

Leave a Comment