ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಆದರ್ಶಗಳು ಸಮಾಜಕ್ಕೆ ಸದಾ ದಾರಿದೀಪ: ಗುರುಗಳ ಸ್ಮರಣೆ ಕೇವಲ ಮಾತಿಗಲ್ಲ, ಅವರ ತೋರಿದ ದಾರಿಯಲ್ಲಿ ನಡೆಯುವುದೇ ನಿಜವಾದ ಶ್ರದ್ಧಾಂಜಲಿ: ಡಾ. ರಂಗಸ್ವಾಮಿ ಬಿ.ಇ

On: September 23, 2026 12:11 PM
Follow Us:

ಸಿರಿಗೆರೆ: ಶ್ರೀಮದ್ ಸದ್ಧರ್ಮ ಸಿಂಹಾಸನಾಧೀಶ, ತರಳಬಾಳು ಜಗದ್ಗುರು 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ ಸಮಾರಂಭವು ಬೃಹನ್ಮಠ ಸಿರಿಗೆರೆಯಲ್ಲಿ ಭಕ್ತಿಭಾವದಿಂದ ನಡೆಯಿತು. ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ರಂಗಸ್ವಾಮಿ ಬಿ.ಇ. ಮಾತನಾಡಿ, ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಜೀವನ, ಸೇವೆ, ಆದರ್ಶ ಮತ್ತು ಸಮಾಜಮುಖಿ ಚಿಂತನೆಗಳು ಇಂದಿಗೂ ಜನರಿಗೆ ದಾರಿದೀಪವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪವಿತ್ರ ಸ್ಮರಣೆಯ ಸಂದರ್ಭದಲ್ಲಿ ಮಾತನಾಡಿದ ಡಾ. ರಂಗಸ್ವಾಮಿ, ಸಿರಿಗೆರೆಯ ಪವಿತ್ರ ನೆಲದಲ್ಲಿ ನಿಂತು ಇಂತಹ ಮಹಾನ್ ಗುರುಗಳನ್ನು ಸ್ಮರಿಸುವುದು ತಮ್ಮ ಪಾಲಿಗೆ ಅತ್ಯಂತ ಭಾವನಾತ್ಮಕ ಹಾಗೂ ಪವಿತ್ರ ಕ್ಷಣವಾಗಿದೆ ಎಂದರು.

ಶ್ರೀಮಠದ ಭಕ್ತನಾಗಿ ಹಲವು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತನಾಗಿ ಅಥವಾ ಸಭಿಕನಾಗಿ ಭಾಗವಹಿಸಿದ್ದ ತಮಗೆ, ಇದೀಗ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ತಂದೆ-ತಾಯಿಗಳ ಪುಣ್ಯ ಹಾಗೂ ಪರಮಪೂಜ್ಯರ ಆಶೀರ್ವಾದದ ಫಲ ಎಂದು ಅವರು ಹೇಳಿದರು.

ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರೊಂದಿಗಿನ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಡಾ. ರಂಗಸ್ವಾಮಿ, ತಮ್ಮ ತಾಯಿ ಶಿವನಿಯ ಸಮೀಪದ ಚೀರನಹಳ್ಳಿಯವರಾಗಿದ್ದು, ಸ್ವಾಮೀಜಿಯವರು ಚೀರನಹಳ್ಳಿಗೆ ಆಗಾಗ್ಗೆ ಆಗಮಿಸುತ್ತಿದ್ದರು. ಸ್ವಾಮೀಜಿ ಗ್ರಾಮಕ್ಕೆ ಬರುತ್ತಾರೆ ಎಂದರೆ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು ಎಂದು ಸ್ಮರಿಸಿದರು.

ತಾವು ಮೂರನೇ ಅಥವಾ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಸ್ವಾಮೀಜಿಯವರ ಆಗಮನಕ್ಕಾಗಿ ಕಾಯುತ್ತಿದ್ದೆ. ಅವರು ಗ್ರಾಮಕ್ಕೆ ಬಂದಾಗ ಅವರ ಹಿಂದೆ ಸುತ್ತಾಡುತ್ತಿದ್ದೆ. ಇದನ್ನು ಗಮನಿಸಿದ್ದ ಸ್ವಾಮೀಜಿಯವರು ತಮ್ಮನ್ನು ಪ್ರೀತಿಯಿಂದ ‘ನಕ್ಷತ್ರಿಕ’ ಎಂದು ಕರೆಯುತ್ತಿದ್ದರು ಎಂದು ಅವರು ನೆನಪಿಸಿಕೊಂಡರು.

1992ರಲ್ಲಿ ತಮ್ಮ ಪದವಿ ಶಿಕ್ಷಣ ಪೂರ್ಣಗೊಳಿಸಿದ ಸಂದರ್ಭದಲ್ಲಿ ನಡೆದ ಮೊದಲ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿಯೂ ಕಾರ್ಯಕರ್ತನಾಗಿ ಭಾಗವಹಿಸಿದ್ದೆ. ಸಾಣೇಹಳ್ಳಿಯಲ್ಲಿ ನಡೆದ ದೊಡ್ಡ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡು ಬೆಳಗ್ಗೆಯಿಂದ ಸಂಜೆವರೆಗೆ ಸೇವೆ ಸಲ್ಲಿಸಿದ್ದ ಅನುಭವವೂ ಇದೆ ಎಂದು ಅವರು ಹೇಳಿದರು.

ಒಬ್ಬ ವ್ಯಕ್ತಿಯ ಸಾಧನೆಗಳನ್ನು ವಿವರಿಸಬಹುದು. ಆದರೆ ಒಬ್ಬ ಮಹಾತ್ಮರು ಇಡೀ ಸಮಾಜದ ಬದುಕನ್ನೇ ರೂಪಿಸಿದಾಗ ಅವರ ಸೇವೆಯ ವ್ಯಾಪ್ತಿಯನ್ನು ಕೇವಲ ಮಾತುಗಳಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಡಾ. ರಂಗಸ್ವಾಮಿ ಹೇಳಿದರು.

ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಚಿಂತನೆ, ಆದರ್ಶ, ಸೇವಾ ಮನೋಭಾವ ಮತ್ತು ಅವರು ತೋರಿದ ಸನ್ಮಾರ್ಗಗಳು ಭಕ್ತರ ನಡುವೆ ಜೀವಂತವಾಗಿವೆ. ಅವರ ಜೀವನವೇ ಒಂದು ಸಂದೇಶವಾಗಿದ್ದು, ಆದರ್ಶಗಳು ದಾರಿದೀಪವಾಗಿವೆ. ಸೇವಾ ಪರಂಪರೆ ಸಮಾಜಕ್ಕೆ ನಿರಂತರ ಪ್ರೇರಣೆಯಾಗಿದೆ ಎಂದರು.

ದಾರಿ ತಪ್ಪಿದವರಿಗೆ ಸರಿದಾರಿ ತೋರಿಸುವುದು, ಅಜ್ಞಾನದಲ್ಲಿದ್ದವರಿಗೆ ಜ್ಞಾನದ ಬೆಳಕು ನೀಡುವುದು, ಹಸಿದವರಿಗೆ ಅನ್ನ, ಅಸಹಾಯಕರಿಗೆ ಆಶ್ರಯ, ಯುವಜನತೆಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವುದು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಬದುಕಿಗೆ ಸ್ಪಂದಿಸಿದ ಮಹಾನ್ ಚೇತನವಾಗಿದ್ದರು ಎಂದು ಬಣ್ಣಿಸಿದರು.

ಅನ್ನದಾಸೋಹ, ಜ್ಞಾನದಾಸೋಹ, ಅಕ್ಷರದಾಸೋಹ, ಜಲದಾಸೋಹ, ಸಾಂಸ್ಕೃತಿಕ ದಾಸೋಹ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಇಂದು ಕಾಣುತ್ತಿರುವ ಸೇವಾ ಚಟುವಟಿಕೆಗಳಿಗೆ ಲಿಂಗೈಕ್ಯ ಗುರುಗಳೇ ಬಲವಾದ ಮುನ್ನುಡಿ ಹಾಕಿಕೊಟ್ಟವರು. ಅವರ ಸೇವಾ ಪರಂಪರೆಯನ್ನು ಪ್ರಸ್ತುತ ಜಗದ್ಗುರುಗಳು ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದರು.

ಶಿಕ್ಷಣ ಎಂದರೆ ಕೇವಲ ಪದವಿ ಅಥವಾ ಉದ್ಯೋಗ ಪಡೆಯುವುದಲ್ಲ. ಶಿಕ್ಷಣದ ಜತೆಗೆ ಮಾನವೀಯತೆ, ವಿನಯ, ಶಿಸ್ತು, ಸೇವಾ ಮನೋಭಾವ ಮತ್ತು ಸಾಮಾಜಿಕ ಹೊಣೆಗಾರಿಕೆ ಬೆಳೆಬೇಕು ಎಂದು ಡಾ. ರಂಗಸ್ವಾಮಿ ಹೇಳಿದರು.

ಇಂದಿನ ಯುವಜನರಲ್ಲಿ ಜ್ಞಾನ ಮತ್ತು ಪ್ರತಿಭೆ ಸಾಕಷ್ಟಿದೆ. ಆದರೆ ಜ್ಞಾನಕ್ಕೆ ಸಂಸ್ಕಾರ ಮತ್ತು ವಿನಯ ಸೇರ್ಪಡೆಯಾದಾಗ ಮಾತ್ರ ಅದು ಸಮಾಜಕ್ಕೆ ಉಪಯುಕ್ತವಾಗುತ್ತದೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಜ್ಞಾನವಂತರ ಜೊತೆಗೆ ಸಂಸ್ಕಾರಯುತ ಹಾಗೂ ಸಾಮಾಜಿಕ ಹೊಣೆಗಾರಿಕೆಯುಳ್ಳ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿವೆ ಎಂದರು.

ಯುವಕರು ಕೇವಲ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಷ್ಟೇ ಅಲ್ಲ, ಸಮಾಜ ಮತ್ತು ರಾಷ್ಟ್ರದ ಭವಿಷ್ಯ ನಿರ್ಮಾಣದಲ್ಲಿಯೂ ತಮ್ಮ ಪಾತ್ರವನ್ನು ಅರಿತುಕೊಳ್ಳಬೇಕು. ಶಿಕ್ಷಣವನ್ನು ಉದ್ಯೋಗಕ್ಕಾಗಿ ಮಾತ್ರ ಬಳಸದೆ ಉತ್ತಮ ವ್ಯಕ್ತಿತ್ವ, ಉತ್ತಮ ಸಮಾಜ ಮತ್ತು ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಬಳಸಬೇಕು ಎಂದು ಕರೆ ನೀಡಿದರು.

ಗುರುಗಳಿಗೆ ನಮಸ್ಕರಿಸುವುದಕ್ಕಿಂತ ಅವರು ತೋರಿದ ದಾರಿಯಲ್ಲಿ ನಡೆಯುವುದು ದೊಡ್ಡ ಗೌರವ. ಗುರುಗಳ ಹೆಸರನ್ನು ಸ್ಮರಿಸುವುದಕ್ಕಿಂತ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ನಿಜವಾದ ಶ್ರದ್ಧಾಂಜಲಿ ಎಂದು ಡಾ. ರಂಗಸ್ವಾಮಿ ಹೇಳಿದರು.

ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಸ್ಮರಿಸುವಾಗ ಕೇವಲ ಕಣ್ಣೀರು ಹಾಕುವುದಲ್ಲ; ಅವರ ಸೇವಾ ಆದರ್ಶಗಳನ್ನು ಮುಂದುವರಿಸುವ ಸಂಕಲ್ಪ ಮಾಡಬೇಕು. ಸಮಾಜದ ಒಳಿತಿಗಾಗಿ ನಮ್ಮಿಂದ ಸಾಧ್ಯವಾದ ಕೊಡುಗೆ ನೀಡಬೇಕು. ‘ಶ್ರೀಮಠಕ್ಕೆ ಮತ್ತು ಸಮಾಜಕ್ಕೆ ನಾವು ಏನು ಕೊಡುಗೆ ನೀಡಿದ್ದೇವೆ?’ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ತಮ್ಮೊಳಗೆ ಕೇಳಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಕೆಲವರು ತಮ್ಮಗಾಗಿ, ಕೆಲವರು ಕುಟುಂಬಕ್ಕಾಗಿ ಬದುಕುತ್ತಾರೆ. ಆದರೆ ತಮ್ಮ ಬದುಕನ್ನೇ ಸಮಾಜದ ಒಳಿತಿಗಾಗಿ ಸಮರ್ಪಿಸಿಕೊಂಡು ಅಸಂಖ್ಯಾತ ಜನರ ಬದುಕಿಗೆ ಬೆಳಕಾಗುವವರು ಅತ್ಯಂತ ವಿರಳ. ಅಂತಹ ವಿರಳ ಮಹಾನ್ ಚೇತನ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಎಂದು ಹೇಳಿದರು.

ಲಿಂಗೈಕ್ಯ ಗುರುಗಳು ಹಾಕಿಕೊಟ್ಟ ಮಹಾನ್ ಮಾರ್ಗವನ್ನು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಶ್ರದ್ಧೆ, ಬದ್ಧತೆ ಹಾಗೂ ದೂರದೃಷ್ಟಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ಡಾ. ರಂಗಸ್ವಾಮಿ ಹೇಳಿದರು.

ಹಿರಿಯ ಗುರುಗಳ ಆಶಯಗಳನ್ನು ಕೇವಲ ಸ್ಮರಿಸುವುದಷ್ಟೇ ಅಲ್ಲದೆ, ಅವುಗಳನ್ನು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ರೂಪಿಸಿ ಶಿಕ್ಷಣ, ಕೃಷಿ, ಗ್ರಾಮೀಣಾಭಿವೃದ್ಧಿ, ಸಮಾಜ ಸೇವೆ ಹಾಗೂ ಯುವಜನರ ಸಬಲೀಕರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಚಿಂತನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.

ಹಿರಿಯ ಗುರುಗಳು ಬಿತ್ತಿದ ಆದರ್ಶದ ಬೀಜವನ್ನು ಇಂದಿನ ಜಗದ್ಗುರುಗಳು ಪೋಷಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಿದ್ದಾರೆ. ಇದೇ ಗುರುಪರಂಪರೆಯ ನಿರಂತರತೆ ಹಾಗೂ ಶ್ರೀಮಠದ ಶಕ್ತಿಯಾಗಿದೆ ಎಂದು ಹೇಳಿದರು.

ತರಳಬಾಳು ಬೃಹನ್ಮಠ ಕೇವಲ ಧಾರ್ಮಿಕ ಕೇಂದ್ರವಲ್ಲ. ಅದು ಶಿಕ್ಷಣ, ಸಂಸ್ಕಾರ, ಸೇವೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಕೇಂದ್ರವಾಗಿದೆ ಎಂದು ಡಾ. ರಂಗಸ್ವಾಮಿ ಹೇಳಿದರು.

ನರ್ಸರಿಯಿಂದ ಇಂಜಿನಿಯರಿಂಗ್ ಶಿಕ್ಷಣದವರೆಗೆ ಹಲವು ವಿದ್ಯಾಸಂಸ್ಥೆಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವ ಶ್ರೀಮಠ, ವಿದ್ಯಾರ್ಥಿಗಳಿಗಾಗಿ ವಸತಿ ವ್ಯವಸ್ಥೆ ಸೇರಿದಂತೆ ವಿವಿಧ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಶಿಕ್ಷಣದ ಜತೆಗೆ ಸಂಸ್ಕಾರ ಬೆಳೆಸುವ ಕಾರ್ಯವೂ ನಡೆಯುತ್ತಿರುವುದು ಶ್ರೀಮಠದ ಸೇವಾ ಪರಂಪರೆಯ ವಿಶೇಷತೆಯಾಗಿದೆ ಎಂದರು.

ಗ್ರಾಮೀಣ ಪ್ರದೇಶದ ರೈತರು ಮತ್ತು ಜನಸಾಮಾನ್ಯರಲ್ಲಿ ಶ್ರೀಮಠ ಹಾಗೂ ಜಗದ್ಗುರುಗಳ ಬಗ್ಗೆ ಇರುವ ವಿಶ್ವಾಸವನ್ನು ಉಲ್ಲೇಖಿಸಿದ ಡಾ. ರಂಗಸ್ವಾಮಿ, ತಮ್ಮ ಬಿದರಿಕೆರೆ ಸುತ್ತಮುತ್ತಲಿನ 10–12 ಗ್ರಾಮಗಳ ಜನರು ತಮ್ಮ ಊರಿನ ಕೆರೆಗಳಿಗೆ ನೀರು ಒದಗಿಸುವ ಕುರಿತು ಜಗದ್ಗುರುಗಳ ಬಳಿ ಮನವಿ ಸಲ್ಲಿಸುವಂತೆ ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದರು.

ಇಂದು ರಾಜ್ಯದ ವಿವಿಧ ಭಾಗಗಳ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಂದ ಜಗದ್ಗುರುಗಳತ್ತ ಮುಖ ಮಾಡುತ್ತಿದ್ದಾರೆ. ವಿಶೇಷವಾಗಿ ರೈತರು ಮತ್ತು ಗ್ರಾಮೀಣ ಜನರಲ್ಲಿ ಶ್ರೀಮಠದ ಮೇಲೆ ಇಂತಹ ವಿಶ್ವಾಸ ಮೂಡಿರುವುದು ಅದರ ಸಾಮಾಜಿಕ ಸೇವೆಯ ಪ್ರತಿಫಲವಾಗಿದೆ. ರೈತರ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಸ್ಪಂದಿಸುವಂತೆ ಜಗದ್ಗುರುಗಳಲ್ಲಿ ಅವರು ಮನವಿ ಮಾಡಿದರು.

ತಾವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಿದ್ದ ಘಟನೆಯನ್ನು ಡಾ. ರಂಗಸ್ವಾಮಿ ಸ್ಮರಿಸಿದರು.

ಆ ಸಂದರ್ಭದಲ್ಲಿ ಜಗದ್ಗುರುಗಳ ಉಪನ್ಯಾಸವನ್ನು ಆಲಿಸಿದ ವಿಶ್ವವಿದ್ಯಾಲಯದ ಹಲವು ಪ್ರಾಧ್ಯಾಪಕರು ತಮಗೆ ಗೊತ್ತಿರದ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದೇವೆ ಎಂದು ಹೇಳಿದ್ದರು. ಸಂಶೋಧನೆ ಹಾಗೂ ಆಧುನಿಕ ತಂತ್ರಜ್ಞಾನ ಕುರಿತ ಜಗದ್ಗುರುಗಳ ಆಳವಾದ ಜ್ಞಾನವನ್ನು ಕಂಡು ತಾವು ಸಹ ಆಶ್ಚರ್ಯಗೊಂಡಿದ್ದಾಗಿ ಅವರು ಹೇಳಿದರು.

ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ಕ್ಷೇತ್ರಗಳ ಕುರಿತು ಜಗದ್ಗುರುಗಳು ಹೊಂದಿರುವ ಆಸಕ್ತಿ ಮತ್ತು ಅಧ್ಯಯನಶೀಲತೆ ಶ್ರೀಮಠದ ಪರಂಪರೆ ಕಾಲಕ್ಕೆ ತಕ್ಕಂತೆ ಹೊಸತನವನ್ನು ಅಳವಡಿಸಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಇಂದಿನ ಯುವಕರು ತಮ್ಮ ವಿದ್ಯೆ ಮತ್ತು ಪ್ರತಿಭೆಯನ್ನು ಕೇವಲ ವೈಯಕ್ತಿಕ ಅಭಿವೃದ್ಧಿಗೆ ಸೀಮಿತಗೊಳಿಸದೆ ರಾಷ್ಟ್ರ ನಿರ್ಮಾಣಕ್ಕೆ ಬಳಸಬೇಕು. ಶಿಕ್ಷಣ ಪಡೆದು ಉದ್ಯೋಗ ಪಡೆಯುವುದು ಜೀವನದ ಒಂದು ಭಾಗ ಮಾತ್ರ. ಉತ್ತಮ ವ್ಯಕ್ತಿತ್ವ, ಉತ್ತಮ ಸಮಾಜ ಮತ್ತು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳುವುದೇ ಶಿಕ್ಷಣದ ಅಂತಿಮ ಸಾರ್ಥಕತೆ ಎಂದು ಡಾ. ರಂಗಸ್ವಾಮಿ ಹೇಳಿದರು.

ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಜೀವನದಿಂದ ‘ನಾವು ಎಷ್ಟು ಪಡೆದಿದ್ದೇವೆ ಎನ್ನುವುದಕ್ಕಿಂತ ಸಮಾಜಕ್ಕೆ ಎಷ್ಟು ನೀಡಿದ್ದೇವೆ ಎಂಬುದೇ ಬದುಕಿನ ನಿಜವಾದ ಅಳತೆ’ ಎಂಬ ಮಹತ್ವದ ಪಾಠವನ್ನು ಕಲಿಯಬೇಕು ಎಂದರು.

ಮಹಾನ್ ವ್ಯಕ್ತಿಗಳ ದೇಹ ಕಾಲಕ್ರಮೇಣ ಮರೆಯಾಗಬಹುದು. ಆದರೆ ಅವರು ಬಿಟ್ಟುಹೋದ ಆದರ್ಶಗಳು, ಚಿಂತನೆಗಳು ಮತ್ತು ಸೇವಾ ಪರಂಪರೆ ಕಾಲವನ್ನು ಮೀರಿ ಜೀವಂತವಾಗಿರುತ್ತವೆ. ಅಂತಹ ಮಹಾನ್ ಗುರುಗಳ ಸ್ಮರಣೆ ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಬೇಕು ಎಂದು ಹೇಳಿದರು.

ಕೊನೆಯಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪವಿತ್ರ ಸ್ಮರಣೆ ಸದಾ ನಮ್ಮ ಹೃದಯದಲ್ಲಿ ಜೀವಂತವಾಗಿರಲಿ, ಅವರ ಸೇವಾ ಪರಂಪರೆ ನಿರಂತರವಾಗಿ ಮುಂದುವರಿಯಲಿ ಎಂದು ಪ್ರಾರ್ಥಿಸಿದ ಡಾ. ರಂಗಸ್ವಾಮಿ ಅವರು, ಇಂತಹ ಮಹಾನ್ ಗುರುಗಳ ಸ್ಮರಣೆಗೆ ಭಕ್ತಿಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಒಗ್ಗಟ್ಟಿನ ಸಂಕಲ್ಪಕ್ಕೆ ಶಿವಸಂಕಲ್ಪದ ಹೆಜ್ಜೆ! 50 ವರ್ಷ ದಾಂಪತ್ಯ ಪೂರೈಸಿದ ಹಿರಿಯ ದಂಪತಿಗಳಿಗೆ ಗೌರವ: ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ, ಸಮಾಜದೊಳಗೆ ಹೊಸ ಚೈತನ್ಯ ಮೂಡಿಸಿದ ವಿಶ್ವಾಸ್.ಈ ನೇತೃತ್ವ

ಜಗತ್ತಿನಾದ್ಯಂತ ಇರುವ ಹಳೆಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರಲು ‘ತರಳಬಾಳು ಅಲುಮ್ನಿ ಪೋರ್ಟಲ್’ ಆರಂಭ: ಹಳೆಯ ವಿದ್ಯಾರ್ಥಿಗಳ ಸಾಧನೆಗೆ ಗುರುಗಳ ಶಿಕ್ಷಣ ಸೇವೆಯೇ ಬುನಾದಿ: ಶ್ರೀ ತರಳಬಾಳು ಜಗದ್ಗುರು

ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ ಭಾವಚಿತ್ರ ಹೊತ್ತ ಸಾರೋಟಿನಲ್ಲಿ ಅದ್ಧೂರಿ ಮೆರವಣಿಗೆ: ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಸಿರಿಗೆರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮ

ಅಂಕಗಳಿಗಿಂತ ವ್ಯಕ್ತಿತ್ವ ನಿರ್ಮಾಣವೇ ತರಳಬಾಳು ಶಿಕ್ಷಣದ ವೈಶಿಷ್ಟ್ಯ: ವಚನ, ಸಂಸ್ಕಾರ, ಬದುಕಿನ ಕೌಶಲ್ಯ ಕಲಿಸಿದ ತರಳಬಾಳು ವಿದ್ಯಾಸಂಸ್ಥೆಯ ನೆನಪು ಮೆಲುಕು ಹಾಕಿದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ಶ್ರೀ ವೀರಭದ್ರೇಶ್ವರ ಜಯಂತಿಯಲ್ಲಿ ಮೊಳಗಿದ ಧರ್ಮಜಾಗೃತಿ ಮಂತ್ರ! 150ಕ್ಕೂ ಹೆಚ್ಚು ಮಂದಿಗೆ ಲಿಂಗದೀಕ್ಷೆ: ಲಿಂಗಧಾರಣೆಯ ಚಳವಳಿ ಜಿಲ್ಲಾದ್ಯಂತ ವಿಸ್ತರಿಸಲಿ: ಧರ್ಮಜಾಗೃತಿ, ಸಮಾಜದ ಒಗ್ಗಟ್ಟಿಗೆ ಶ್ರೀ ಶೈಲ ಜಗದ್ಗುರುಗಳ ಕರೆ

ಶರಣ ಪರಂಪರೆಯ ಸಂರಕ್ಷಣೆಯಲ್ಲಿ ಅಕ್ಕನಾಗಮ್ಮನ ಕೊಡುಗೆ ಸ್ಮರಣೀಯ: ವೈಯಕ್ತಿಕ ಸಂಕಟಗಳನ್ನು ಮೀರಿ ವಚನ ಸಾಹಿತ್ಯದ ರಕ್ಷಣೆಗೆ ಶ್ರಮಿಸಿದ ಮಹಾತಾಯಿ: ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ

Leave a Comment