ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಅಂಕಗಳಿಗಿಂತ ವ್ಯಕ್ತಿತ್ವ ನಿರ್ಮಾಣವೇ ತರಳಬಾಳು ಶಿಕ್ಷಣದ ವೈಶಿಷ್ಟ್ಯ: ವಚನ, ಸಂಸ್ಕಾರ, ಬದುಕಿನ ಕೌಶಲ್ಯ ಕಲಿಸಿದ ತರಳಬಾಳು ವಿದ್ಯಾಸಂಸ್ಥೆಯ ನೆನಪು ಮೆಲುಕು ಹಾಕಿದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ

On: September 23, 2026 4:45 PM
Follow Us:

ಸಿರಿಗೆರೆ: ಒಂದು ಕಾಲದಲ್ಲಿ ಗ್ರಾಮೀಣ ಭಾಗದ ಮಕ್ಕಳ ಕೈಗೆ ಪುಸ್ತಕ ಸಿಗುವುದೇ ದೊಡ್ಡ ಸಾಧನೆಯಾಗಿತ್ತು. ಶಿಕ್ಷಣ ನಗರಗಳ ಗಡಿಯಲ್ಲಿ ಸೀಮಿತವಾಗಿದ್ದ ಸಂದರ್ಭದಲ್ಲಿ, ಹಳ್ಳಿಗಳ ಮನೆ-ಮನೆಗೂ ವಿದ್ಯೆಯ ಬೆಳಕು ಕೊಂಡೊಯ್ದು, ಶಿಕ್ಷಣದ ಜತೆಗೆ ಸಂಸ್ಕಾರ, ಜೀವನ ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿದ ಅಪರೂಪದ ಶಿಕ್ಷಣ ಪರಂಪರೆಯಾಗಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಬೆಳೆದಿದೆ. ಆ ಸಂಸ್ಥೆಯ ತರಗತಿಗಳಲ್ಲಿ ಕುಳಿತು ವಿದ್ಯೆ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದು, ಅವರ ಬದುಕಿನ ಹಿಂದಿರುವ ಶಿಕ್ಷಣ-ಸಂಸ್ಕಾರದ ನೆನಪುಗಳು ಸಿರಿಗೆರೆಯಲ್ಲಿ ಮತ್ತೊಮ್ಮೆ ಜೀವಂತವಾದವು.

ಶ್ರೀಮದ್ ಸದ್ಧರ್ಮ ಸಿಂಹಾಸನಾಧೀಶ, ತರಳಬಾಳು ಜಗದ್ಗುರು 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ ಅಂಗವಾಗಿ ಬೃಹನ್ಮಠ ಸಿರಿಗೆರೆಯಲ್ಲಿ ಬುಧವಾರ ನಡೆದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರ ಸಮಾವೇಶದಲ್ಲಿ ಶ್ರೀ ಬಸವತತ್ತ್ವ ಪೀಠ, ಚಿಕ್ಕಮಗಳೂರು ಹಾಗೂ ಬಸವಕೇಂದ್ರ, ಶಿವಮೊಗ್ಗದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ಆಶೀರ್ವಚನ ನೀಡಿದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ಕಲಿತ ಪ್ರತಿಯೊಬ್ಬರೂ ಆ ಸಂಸ್ಥೆಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತಮ್ಮ ಬದುಕಿನ ಮೂಲಕ ಸಮಾಜದ ವಿವಿಧ ಭಾಗಗಳಿಗೆ ಕೊಂಡೊಯ್ದವರು. ಫಲಭರಿತ ವೃಕ್ಷದಿಂದ ಫಲ ಪಡೆದು ಅದರ ಬೀಜವನ್ನು ಮತ್ತೊಂದು ಕಡೆ ಬಿತ್ತಿ ಹೊಸ ಮರ ಬೆಳೆಸುವಂತೆ, ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ತಮ್ಮ ಕ್ಷೇತ್ರಗಳಲ್ಲಿ ಸಂಸ್ಥೆಯ ಮೌಲ್ಯಗಳನ್ನು ಪಸರಿಸುತ್ತಿದ್ದಾರೆ ಎಂದು ಹೇಳಿದರು.

ತಾವು ದಾವಣಗೆರೆ ತಾಲ್ಲೂಕಿನ ಕಂದಗಲ್ಲಿನ ಹೆಚ್. ಸಿದ್ದವೀರಪ್ಪ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಿಕ್ಷಣ ಪಡೆದ ಅನುಭವವನ್ನು ಅವರು ನೆನಪಿಸಿಕೊಂಡರು.

9ನೇ ತರಗತಿಯಲ್ಲಿ ಓದುತ್ತಿದ್ದಾಗ ಹಿರಿಯ ತರಳಬಾಳು ಜಗದ್ಗುರುಗಳು ಬರೆದಿದ್ದ ‘ಆತ್ಮನಿವೇದನೆ’ ಕೃತಿಯನ್ನು ಓದುವ ಅವಕಾಶ ದೊರೆತಿತ್ತು. ಆಗ ಅದರಲ್ಲಿದ್ದ ಎಲ್ಲ ವಿಚಾರಗಳು ಅರ್ಥವಾಗದಿದ್ದರೂ, ಕೆಲವು ಮಾತುಗಳು ಮನಸ್ಸಿನಲ್ಲಿ ಆಳವಾಗಿ ಉಳಿದವು.

ಗುರುಗಳಾಗುವುದು ಎಂದರೆ ನಾಟಕದಲ್ಲಿ ಪಾರ್ಟ್ ಮಾಡಿದ ಹಾಗಲ್ಲ’ ಎಂಬ ಮಾತು ಹಾಗೂ ‘ದೇವ, ಈ ಜಗತ್ತಿನಲ್ಲಿ ನಿನ್ನನ್ನು ಹೊರತುಪಡಿಸಿ ನೆನಪಿಡುವಂತದ್ದು ಯಾವುದೂ ನನಗಿಲ್ಲ’ ಎಂಬ ಭಾವನೆ ಇಂದಿಗೂ ನೆನಪಿನಲ್ಲಿ ಉಳಿದಿದೆ ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.

ಸಣ್ಣ ವಯಸ್ಸಿನಲ್ಲೇ ಆ ಕೃತಿಯ ಓದು ತಮ್ಮೊಳಗೆ ಓದುವ ಆಸಕ್ತಿ ಹಾಗೂ ಚಿಂತನೆಯ ಅಭ್ಯಾಸವನ್ನು ಬೆಳೆಸಿತು. ಪುಸ್ತಕದ ವಿಷಯ ಸಂಪೂರ್ಣ ಅರ್ಥವಾಗದಿದ್ದರೂ, ಅದರಲ್ಲಿದ್ದ ಮೌಲ್ಯಗಳು ಮುಂದೆ ಬದುಕಿನಲ್ಲಿ ಅರ್ಥವಾಗುತ್ತವೆ ಎಂಬುದಕ್ಕೆ ತಮ್ಮ ಅನುಭವವೇ ಸಾಕ್ಷಿ ಎಂದು ತಿಳಿಸಿದರು.

ಇಂದಿನ ಸಂದರ್ಭದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವರ್ಷಕ್ಕೆ ₹50,000ದಿಂದ ₹1 ಲಕ್ಷದವರೆಗೆ ಶುಲ್ಕ ಪಾವತಿಸಬೇಕಾಗಬಹುದು. ಆದರೆ ತಮ್ಮಂತಹ ಗ್ರಾಮೀಣ ವಿದ್ಯಾರ್ಥಿಗಳಿಗೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡಿತು. ಕೆಲವೊಮ್ಮೆ ವರ್ಷಕ್ಕೆ ₹50 ಕೂಡ ಶುಲ್ಕ ಪಾವತಿಸದಷ್ಟು ಕಡಿಮೆ ವೆಚ್ಚದಲ್ಲಿ ಶಿಕ್ಷಣ ದೊರೆಯುತ್ತಿತ್ತು ಎಂದು ಶ್ರೀಗಳು ನೆನಪಿಸಿದರು.

ಶಿಕ್ಷಣವೆಂದರೆ ಕೇವಲ ಪುಸ್ತಕದ ಜ್ಞಾನ, ಪರೀಕ್ಷೆಯ ಅಂಕಗಳು ಮತ್ತು ಪ್ರಮಾಣಪತ್ರ ಪಡೆಯುವುದಲ್ಲ. ವ್ಯಕ್ತಿತ್ವ ರೂಪಿಸುವುದು, ಜೀವನದ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಬೆಳೆಸುವುದು ಹಾಗೂ ಬದುಕಿನಲ್ಲಿ ಹಲವು ದಾರಿಗಳಿವೆ ಎಂಬ ಭರವಸೆ ಮೂಡಿಸುವುದೇ ನಿಜವಾದ ಶಿಕ್ಷಣ. ಈ ರೀತಿಯ ಸಮಗ್ರ ಶಿಕ್ಷಣವನ್ನು ತರಳಬಾಳು ವಿದ್ಯಾಸಂಸ್ಥೆ ಹಲವು ದಶಕಗಳ ಹಿಂದೆಯೇ ನೀಡುತ್ತಿತ್ತು ಎಂದು ಹೇಳಿದರು.

ತಾವು ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗ ವಿದ್ಯಾರ್ಥಿಗಳನ್ನು ಶಾಲೆಯ ತೋಟಕ್ಕೆ ಕರೆದೊಯ್ಯಲಾಗುತ್ತಿತ್ತು. ತೆಂಗಿನ ಗಿಡಗಳಿಗೆ ಗುಂಡಿ ತೆಗೆಯುವುದು, ಗೊಬ್ಬರ ಹಾಕುವುದು, ತೆಂಗಿನಕಾಯಿ ಕೀಳುವುದು, ಹೊಲದಲ್ಲಿದ್ದ ಗರಿಗಳನ್ನು ತೆರವುಗೊಳಿಸುವುದು, ಕಾಯಿಗಳನ್ನು ಸುಲಿದು ಎಣಿಸಿ ರಾಶಿ ಮಾಡುವುದು ಸೇರಿದಂತೆ ವಿವಿಧ ಕೆಲಸಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸಲಾಗುತ್ತಿತ್ತು.

ಆಗ ‘ಮನೆಗೂ ಕೆಲಸ ಮಾಡಬೇಕು, ಶಾಲೆಗೂ ಬಂದರೆ ಕೆಲಸ ಮಾಡಬೇಕು’ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದರು. ಆದರೆ ಶಿಕ್ಷಕರು, ‘ಇದರ ಮಹತ್ವ ಈಗ ನಿಮಗೆ ಅರ್ಥವಾಗುವುದಿಲ್ಲ. ವಿದ್ಯೆ ಕೈಕೊಟ್ಟರೂ ಜೀವನ ಕೌಶಲ್ಯದ ಮೂಲಕ ಬದುಕು ಕಟ್ಟಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲಿರಬೇಕು ಎಂಬ ಉದ್ದೇಶದಿಂದ ಈ ಕೆಲಸ ಮಾಡಿಸಲಾಗುತ್ತಿದೆ’ ಎಂದು ಹೇಳುತ್ತಿದ್ದರು. ಆ ಮಾತಿನ ಅರ್ಥ ಮುಂದೆ ಬದುಕಿನಲ್ಲಿ ಅರಿವಾಯಿತು ಎಂದು ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ವಚನಗಳ ಸಣ್ಣ ಪುಸ್ತಕಗಳನ್ನು ಸಿದ್ಧಪಡಿಸಿ, ಮೂರು ವರ್ಷಗಳ ಕಾಲ ವಚನ ಪರೀಕ್ಷೆಗಳನ್ನು ನಡೆಸುತ್ತಿದ್ದರು. ಆಗ ವಿದ್ಯಾರ್ಥಿಗಳಿಗೆ ಅದರ ಉದ್ದೇಶ ಸಂಪೂರ್ಣವಾಗಿ ಅರ್ಥವಾಗುತ್ತಿರಲಿಲ್ಲ.

ಆದರೆ ಶಿಕ್ಷಕರು, ‘ಅರ್ಥವಾಗಲಿ, ಬಿಡಲಿ, ವಚನಗಳನ್ನು ಓದಿ ನೆನಪಿಟ್ಟುಕೊಳ್ಳಿ. ಯಾವತ್ತೋ ಒಂದು ದಿನ ಅವು ನಿಮ್ಮ ಬದುಕಿಗೆ ಬೆಳಕು ನೀಡುತ್ತವೆ’ ಎಂದು ಹೇಳುತ್ತಿದ್ದರು. ನಂತರದ ಬದುಕಿನಲ್ಲಿ ವಚನಗಳ ಸಾತ್ವಿಕತೆ, ಕನ್ನಡ ಸಾಹಿತ್ಯದ ಮೇಲಿನ ಆಸಕ್ತಿ ಹಾಗೂ ಚಿಂತನೆಯ ಬೆಳವಣಿಗೆಗೆ ಆ ಅಧ್ಯಯನವೇ ಕಾರಣವಾಯಿತು ಎಂದು ಅವರು ಹೇಳಿದರು.

ಇಂದಿನ ಶಿಕ್ಷಣದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಕೌಶಲ್ಯಗಳಿಗೆ ಮಹತ್ವ ನೀಡಲಾಗುತ್ತಿದೆ. ಆದರೆ ವ್ಯಕ್ತಿ ತಾನು ಯಾರು, ತನ್ನ ಸಾಮರ್ಥ್ಯ ಏನು, ತನ್ನ ಗುರಿ ಏನು ಎಂಬುದನ್ನು ಅರಿತುಕೊಳ್ಳುವ ಅಗತ್ಯವಿದೆ. ಈ ಆತ್ಮಪರಿಚಯ ಮತ್ತು ಮೌಲ್ಯಾಧಾರಿತ ಚಿಂತನೆಗೆ ತತ್ತ್ವಜ್ಞಾನ ಸಹಕಾರಿಯಾಗುತ್ತದೆ. ಈ ಅಂಶವನ್ನು ತರಳಬಾಳು ವಿದ್ಯಾಸಂಸ್ಥೆ ಬಹಳ ಹಿಂದಿನಿಂದಲೇ ತನ್ನ ಶಿಕ್ಷಣದ ಭಾಗವನ್ನಾಗಿ ಮಾಡಿಕೊಂಡಿತ್ತು ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.

ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಕಾರ್ಯವನ್ನು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗಿ ನೋಡಬಾರದು. ವಚನ ಸಾಹಿತ್ಯವನ್ನು ತಂತ್ರಜ್ಞಾನಕ್ಕೆ ಅಳವಡಿಸುವ ಕೆಲಸವನ್ನು 1990ರ ದಶಕದಲ್ಲೇ ಆರಂಭಿಸಲಾಗಿತ್ತು. ವಚನಗಳನ್ನು ಗಣಕೀಕರಣಗೊಳಿಸುವ ಪ್ರಯತ್ನದ ಜತೆಗೆ ಪಾಣಿನಿಯ ವ್ಯಾಕರಣ ಗ್ರಂಥವನ್ನು ಆಧರಿಸಿ ‘ಗಣಕಾಷ್ಟಾಧ್ಯಾಯಿ’ಯಂತಹ ತಂತ್ರಜ್ಞಾನ ಆಧಾರಿತ ಕಾರ್ಯಗಳನ್ನು ಕೈಗೊಳ್ಳಲಾಯಿತು ಎಂದು ಅವರು ವಿವರಿಸಿದರು.

ಇಂದು ವಚನ ಸಾಹಿತ್ಯವನ್ನು ತಂತ್ರಜ್ಞಾನದ ಮೂಲಕ ಸುಲಭವಾಗಿ ಅಧ್ಯಯನ ಮಾಡಲು ಸಾಧ್ಯವಾಗಿರುವುದರ ಹಿಂದೆ ಆ ದೂರದೃಷ್ಟಿಯ ಪ್ರಯತ್ನಗಳಿವೆ. ಧರ್ಮ, ಸಾಹಿತ್ಯ, ಶಿಕ್ಷಣ ಮತ್ತು ತಂತ್ರಜ್ಞಾನವನ್ನು ಒಟ್ಟಿಗೆ ಕೊಂಡೊಯ್ಯುವ ಅಪರೂಪದ ಪ್ರಯತ್ನ ಇದಾಗಿದೆ ಎಂದರು.

ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮಗುರು ಮಾತ್ರವಲ್ಲ. ಆಡಳಿತಗಾರ, ಸಾಹಿತಿ, ಶಿಕ್ಷಕ, ತಂತ್ರಜ್ಞಾನ ಪ್ರೇಮಿ ಹಾಗೂ ಸಮಾಜಮುಖಿ ಚಿಂತಕರಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಕಾರ್ಯ ಮಾಡಿದ್ದಾರೆ. ಅವರು ದೀರ್ಘಕಾಲ ಆಶೀರ್ವಚನ ನೀಡಿದರೂ ವಿದ್ಯಾರ್ಥಿಗಳು ಆಸಕ್ತಿಯಿಂದ ಕುಳಿತು ಕೇಳುತ್ತಾರೆ. ಇದು ಅವರ ಬೋಧನಾ ಸಾಮರ್ಥ್ಯ ಮತ್ತು ವಿಷಯವನ್ನು ಸರಳವಾಗಿ ಮನಮುಟ್ಟುವಂತೆ ಹೇಳುವ ಶಕ್ತಿಗೆ ಸಾಕ್ಷಿ ಎಂದು ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಬಸವಣ್ಣನವರ ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ವಚನದ ಕುರಿತು ಸಮಾಜದಲ್ಲಿ ಹಲವು ರೀತಿಯ ಅರ್ಥೈಸುವಿಕೆಗಳಿವೆ. ಈ ವಚನದ ತಾತ್ವಿಕ ಹಿನ್ನೆಲೆಯನ್ನು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಲೇಖನಗಳ ಮೂಲಕ ಅಧ್ಯಯನ ಮಾಡಿದಾಗ ಹಲವು ಗೊಂದಲಗಳಿಗೆ ಸ್ಪಷ್ಟತೆ ದೊರೆಯಿತು ಎಂದು ಶ್ರೀಗಳು ಹೇಳಿದರು.

ಸ್ಥಾವರ ಎಂದರೆ ಕ್ರಿಯಾಶೀಲವಲ್ಲದ್ದು, ಜಂಗಮ ಎಂದರೆ ಕ್ರಿಯಾಶೀಲವಾದದ್ದು ಎಂಬ ಸರಳವಾದ ತಾತ್ವಿಕ ಅರ್ಥವನ್ನು ಗ್ರಹಿಸಬಹುದು. ಈ ರೀತಿಯಾಗಿ ಗಂಭೀರವಾದ ತಾತ್ವಿಕ ವಿಚಾರಗಳನ್ನೂ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸುವ ಲೇಖನಗಳನ್ನು ಜಗದ್ಗುರುಗಳು ನೀಡಿದ್ದಾರೆ ಎಂದರು.

ತಮ್ಮದೇ ಪರಂಪರೆಯ ಬಗ್ಗೆ ಕಠಿಣವಾದ ದೃಷ್ಟಿಕೋನ ಹೊಂದಿದ್ದ ದಿನಗಳನ್ನು ನೆನಪಿಸಿಕೊಂಡ ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ನಡೆ-ನುಡಿಗಳನ್ನು ಗಮನಿಸಿದ ನಂತರ ತಮ್ಮ ಚಿಂತನೆಯಲ್ಲೂ ಬದಲಾವಣೆ ಉಂಟಾಯಿತು ಎಂದು ಹೇಳಿದರು.

ಜಗತ್ತಿನ ವಿವಿಧ ದಾರ್ಶನಿಕ ಪರಂಪರೆಗಳು ಮನುಷ್ಯನ ಅಂತರಂಗದಲ್ಲಿರುವ ಅಜ್ಞಾನ, ಅಹಂಕಾರ ಮತ್ತು ದುರ್ಗುಣಗಳನ್ನು ದೂರ ಮಾಡುವ ಪ್ರಯತ್ನ ಮಾಡುತ್ತವೆ. ಬೇರೆ ಬೇರೆ ದಾರ್ಶನಿಕ ಪರಂಪರೆಗಳನ್ನು ಮನುಷ್ಯನ ಹೃದಯದಲ್ಲಿರುವ ಕಸವನ್ನು ಗುಡಿಸುವ ‘ಪರಕೆ’ಗಳಿಗೆ ಹೋಲಿಸಬಹುದು. ಪರಕೆಗಳು ಬೇರೆಬೇರೆ ಆಗಿರಬಹುದು; ಆದರೆ ಅವುಗಳ ಕೆಲಸ ಕಸ ಗುಡಿಸುವುದೇ. ಅದೇ ರೀತಿ ವಿವಿಧ ದಾರ್ಶನಿಕ ಪರಂಪರೆಗಳ ಉದ್ದೇಶವೂ ಮಾನವ ಬದುಕನ್ನು ಶುದ್ಧಗೊಳಿಸುವುದಾಗಿದೆ ಎಂಬ ವಿಶಾಲ ಮನೋಭಾವವನ್ನು ಜಗದ್ಗುರುಗಳ ನಡೆ-ನುಡಿಗಳಿಂದ ಕಲಿಯಬಹುದು ಎಂದರು.

ತರಳಬಾಳು ವಿದ್ಯಾಸಂಸ್ಥೆಯಲ್ಲಿ ಕಲಿತವರು ಕೇವಲ ಹಳೆಯ ವಿದ್ಯಾರ್ಥಿಗಳಾಗಿ ಉಳಿಯದೆ, ಅವರ ಪ್ರತಿಭೆ ಮತ್ತು ಅನುಭವವನ್ನು ಸಮಾಜದ ಒಳಿತಿಗೆ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಹಿರಿಯ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರ ಸಮಾವೇಶ ಆಯೋಜಿಸಲಾಗಿದೆ. ಇದರ ಮುಂದುವರಿದ ಹೆಜ್ಜೆಯಾಗಿ ‘ತರಳಬಾಳು ಅಲ್ಯೂಮ್ನಿ’ ಆಪ್ ಹಾಗೂ ಜಾಲತಾಣವನ್ನು ಪರಿಚಯಿಸಿರುವುದು ಮಹತ್ವದ ಉಪಕ್ರಮವಾಗಿದೆ ಎಂದು ಅವರು ಹೇಳಿದರು.

ಈ ಮೂಲಕ ತರಳಬಾಳು ವಿದ್ಯಾಸಂಸ್ಥೆಯಲ್ಲಿ ಕಲಿತವರು ದೇಶ-ವಿದೇಶಗಳಲ್ಲಿ ಎಲ್ಲಿದ್ದರೂ ಪರಸ್ಪರ ಸಂಪರ್ಕ ಸಾಧಿಸಲು ಹಾಗೂ ತಮ್ಮ ಅನುಭವ, ಜ್ಞಾನ ಮತ್ತು ಪ್ರತಿಭೆಯನ್ನು ಸಮಾಜಮುಖಿಯಾಗಿ ಬಳಸಿಕೊಳ್ಳಲು ಅವಕಾಶ ದೊರೆಯಲಿದೆ. ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವುದರ ಜತೆಗೆ ಸಂಸ್ಥೆಯೊಂದಿಗೆ ಅವರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸ ಇದರಿಂದ ಸಾಧ್ಯವಾಗಲಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಅವಕಾಶಗಳು ಸೀಮಿತವಾಗಿದ್ದ ಕಾಲದಲ್ಲಿ ಹಿರಿಯ ತರಳಬಾಳು ಜಗದ್ಗುರುಗಳು ಗ್ರಾಮೀಣ ಭಾಗಗಳಲ್ಲಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಕ್ರಾಂತಿಗೆ ಕಾರಣರಾದರು. ಸರ್ಕಾರಕ್ಕೆ ಸಾಧ್ಯವಾಗದ ಸಂದರ್ಭದಲ್ಲಿ ಗ್ರಾಮೀಣ ಭಾಗಗಳಲ್ಲಿ ಶಾಲೆಗಳನ್ನು ಸ್ಥಾಪಿಸುವ ಸಂಕಲ್ಪ ಮಾಡಿ, ನೂರಾರು ಶಿಕ್ಷಣ ಸಂಸ್ಥೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯ ಅವಕಾಶ ಕಲ್ಪಿಸಿದರು.

ಮಧ್ಯ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಸಾಕ್ಷರತೆ ಹೆಚ್ಚಲು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕೊಡುಗೆ ಮಹತ್ವದ್ದಾಗಿದೆ. ಹಿರಿಯ ಜಗದ್ಗುರುಗಳು ಆರಂಭಿಸಿದ ಶಿಕ್ಷಣ ಪರಂಪರೆಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಮುನ್ನಡೆಸುವ ಕಾರ್ಯವನ್ನು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾಡುತ್ತಿದ್ದಾರೆ ಎಂದು ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಹಿರಿಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಅವರನ್ನು ಸಂಘಟಿಸಿ, ಸಮಾಜದ ಒಳಿತಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಸಮಾವೇಶ ಹಾಗೂ ‘ತರಳಬಾಳು ಅಲ್ಯೂಮ್ನಿ’ ಉಪಕ್ರಮ ಹೊಸ ದಿಕ್ಕು ತೋರಿಸುತ್ತಿದೆ. ಜಗದ್ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನ ಸದಾ ಸಮಾಜದ ಮೇಲೆ ಇರಲಿ ಎಂದು ಪ್ರಾರ್ಥಿಸಿದ ಅವರು, ಎಲ್ಲರಿಗೂ ಶುಭ ಹಾರೈಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಒಗ್ಗಟ್ಟಿನ ಸಂಕಲ್ಪಕ್ಕೆ ಶಿವಸಂಕಲ್ಪದ ಹೆಜ್ಜೆ! 50 ವರ್ಷ ದಾಂಪತ್ಯ ಪೂರೈಸಿದ ಹಿರಿಯ ದಂಪತಿಗಳಿಗೆ ಗೌರವ: ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ, ಸಮಾಜದೊಳಗೆ ಹೊಸ ಚೈತನ್ಯ ಮೂಡಿಸಿದ ವಿಶ್ವಾಸ್.ಈ ನೇತೃತ್ವ

ಜಗತ್ತಿನಾದ್ಯಂತ ಇರುವ ಹಳೆಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರಲು ‘ತರಳಬಾಳು ಅಲುಮ್ನಿ ಪೋರ್ಟಲ್’ ಆರಂಭ: ಹಳೆಯ ವಿದ್ಯಾರ್ಥಿಗಳ ಸಾಧನೆಗೆ ಗುರುಗಳ ಶಿಕ್ಷಣ ಸೇವೆಯೇ ಬುನಾದಿ: ಶ್ರೀ ತರಳಬಾಳು ಜಗದ್ಗುರು

ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ ಭಾವಚಿತ್ರ ಹೊತ್ತ ಸಾರೋಟಿನಲ್ಲಿ ಅದ್ಧೂರಿ ಮೆರವಣಿಗೆ: ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಸಿರಿಗೆರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮ

ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಆದರ್ಶಗಳು ಸಮಾಜಕ್ಕೆ ಸದಾ ದಾರಿದೀಪ: ಗುರುಗಳ ಸ್ಮರಣೆ ಕೇವಲ ಮಾತಿಗಲ್ಲ, ಅವರ ತೋರಿದ ದಾರಿಯಲ್ಲಿ ನಡೆಯುವುದೇ ನಿಜವಾದ ಶ್ರದ್ಧಾಂಜಲಿ: ಡಾ. ರಂಗಸ್ವಾಮಿ ಬಿ.ಇ

ಶ್ರೀ ವೀರಭದ್ರೇಶ್ವರ ಜಯಂತಿಯಲ್ಲಿ ಮೊಳಗಿದ ಧರ್ಮಜಾಗೃತಿ ಮಂತ್ರ! 150ಕ್ಕೂ ಹೆಚ್ಚು ಮಂದಿಗೆ ಲಿಂಗದೀಕ್ಷೆ: ಲಿಂಗಧಾರಣೆಯ ಚಳವಳಿ ಜಿಲ್ಲಾದ್ಯಂತ ವಿಸ್ತರಿಸಲಿ: ಧರ್ಮಜಾಗೃತಿ, ಸಮಾಜದ ಒಗ್ಗಟ್ಟಿಗೆ ಶ್ರೀ ಶೈಲ ಜಗದ್ಗುರುಗಳ ಕರೆ

ಶರಣ ಪರಂಪರೆಯ ಸಂರಕ್ಷಣೆಯಲ್ಲಿ ಅಕ್ಕನಾಗಮ್ಮನ ಕೊಡುಗೆ ಸ್ಮರಣೀಯ: ವೈಯಕ್ತಿಕ ಸಂಕಟಗಳನ್ನು ಮೀರಿ ವಚನ ಸಾಹಿತ್ಯದ ರಕ್ಷಣೆಗೆ ಶ್ರಮಿಸಿದ ಮಹಾತಾಯಿ: ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ

Leave a Comment