ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮಾಜಿ ಶಾಸಕರಿಗೆ ಗೌರವಯುತ ನಿವೃತ್ತಿ ಬದುಕು ಕಲ್ಪಿಸುವಲ್ಲಿ ಅವರ ಪಾತ್ರ ಅಪಾರ: ಚಂದ್ರಶೇಖರಪ್ಪನವರ ನೇರ ನಡೆ-ನುಡಿ ರಾಜಕಾರಣಕ್ಕೆ ಮಾದರಿ: ಆಯನೂರು ಮಂಜುನಾಥ್

On: October 2, 2026 10:46 PM
Follow Us:

ಶಿವಮೊಗ್ಗ: ವೀರಶೈವ ಲಿಂಗಾಯತ ಸಮಾಜದ ಹೆಮ್ಮೆಯ ರಾಜಕಾರಣಿಯಾಗಿ, ಶಿವಮೊಗ್ಗದಲ್ಲಿ ಸಮಾಜದ ಮೊದಲ ಶಾಸಕರಾಗಿ ಸೇವೆ ಸಲ್ಲಿಸಿದ ಹೆಚ್.ಎಂ. ಚಂದ್ರಶೇಖರಪ್ಪ ಅವರು ನೇರ ನಡೆ-ನುಡಿ ಹಾಗೂ ನಿಷ್ಠಾವಂತ ರಾಜಕಾರಣಕ್ಕೆ ಮಾದರಿಯಾಗಿದ್ದರು ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಹೇಳಿದರು.

ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ನಡೆದ ಹೆಚ್.ಎಂ. ಚಂದ್ರಶೇಖರಪ್ಪ ಮಾಜಿ ಶಾಸಕರ ಶಿವಗಣಾರಾಧನೆ ಹಾಗೂ ಸರ್ವಶರಣರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಚಂದ್ರಶೇಖರಪ್ಪ ಅವರ ರಾಜಕೀಯ ಮತ್ತು ಸಾಮಾಜಿಕ ಸೇವೆಯನ್ನು ಸ್ಮರಿಸಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮೀಜಿಗಳು ದೂರದೂರುಗಳಿಂದ ಆಗಮಿಸಿರುವ ಹಿನ್ನೆಲೆಯಲ್ಲಿ ಅವರ ಮಾತುಗಳಿಗೆ ಹೆಚ್ಚಿನ ಅವಕಾಶ ನೀಡುವುದು ಸೂಕ್ತ. ಆದರೂ ಚಂದ್ರಶೇಖರಪ್ಪ ಅವರೊಂದಿಗಿನ ತಮ್ಮ ಒಡನಾಟ ಮತ್ತು ಅವರ ವ್ಯಕ್ತಿತ್ವವನ್ನು ಸ್ಮರಿಸದೇ ಇರಲು ಸಾಧ್ಯವಿಲ್ಲ ಎಂದರು.

ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹೆಮ್ಮೆ ಚಂದ್ರಶೇಖರಪ್ಪ ಅವರಿಗೆ ಸಲ್ಲುತ್ತದೆ. ಸಮಾಜದ ಜನಸಂಖ್ಯೆ ದೊಡ್ಡದಾಗಿದ್ದರೂ ರಾಜಕೀಯ ಪಕ್ಷಗಳು ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ಚಂದ್ರಶೇಖರಪ್ಪ ಅವರು ಶಾಸಕರಾಗಿ ಆಯ್ಕೆಯಾಗಿ ಸಮಾಜದ ರಾಜಕೀಯ ಪ್ರಾತಿನಿಧ್ಯಕ್ಕೆ ಹೊಸ ಅಧ್ಯಾಯ ಬರೆದಿದ್ದರು ಎಂದು ಹೇಳಿದರು.

1999ರ ರಾಜಕೀಯ ಬೆಳವಣಿಗೆಗಳನ್ನು ಸ್ಮರಿಸಿದ ಆಯನೂರು ಮಂಜುನಾಥ್, ಆ ಸಂದರ್ಭದಲ್ಲಿ ತಾವು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆ ಸಂದರ್ಭದಲ್ಲಿ ಚಂದ್ರಶೇಖರಪ್ಪ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ರಾಜಕೀಯ ಜೀವನದಲ್ಲಿ ಎದುರಾದ ಹಲವು ಏಳು-ಬೀಳುಗಳನ್ನು ಅವರು ಸಹಜವಾಗಿ ಸ್ವೀಕರಿಸಿದ್ದರು ಎಂದರು.

ಚಂದ್ರಶೇಖರಪ್ಪ ಅವರ ವ್ಯಕ್ತಿತ್ವದ ಪ್ರಮುಖ ಗುಣವೆಂದರೆ ಮನಸ್ಸಿನಲ್ಲಿದ್ದುದನ್ನು ನೇರವಾಗಿ ಹೇಳುವ ಸ್ವಭಾವ. ಅವರಿಗೆ ಒಂದು ವಿಚಾರ ಸರಿಯೆನಿಸಿದರೆ ಅದನ್ನು ನೇರವಾಗಿ ಹೇಳುತ್ತಿದ್ದರು. ಯಾವುದೇ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಳಗೊಳಗೆ ಮಸೆಯುವ ಸ್ವಭಾವ ಅವರದ್ದಾಗಿರಲಿಲ್ಲ ಎಂದು ಆಯನೂರು ಹೇಳಿದರು.

ರಾಜಕಾರಣದಲ್ಲಿ ಇಂತಹ ನೇರ ಸ್ವಭಾವದ ವ್ಯಕ್ತಿಗಳು ಅಪರೂಪ. ತಮ್ಮ ಮುಂದೆ ಇರುವ ವ್ಯಕ್ತಿ ಮಾಡಿದ ಕೆಲಸ ಉತ್ತಮವಾಗಿದ್ದರೆ ಪ್ರಶಂಸಿಸುತ್ತಿದ್ದರು. ಕೆಲಸದಲ್ಲಿ ತಪ್ಪಿದ್ದರೆ ಅದನ್ನೂ ನೇರವಾಗಿ ಹೇಳುತ್ತಿದ್ದರು. ಪಕ್ಷ, ವ್ಯಕ್ತಿ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಧೈರ್ಯ ಅವರಲ್ಲಿತ್ತು ಎಂದು ಸ್ಮರಿಸಿದರು.

ಚಂದ್ರಣ್ಣನವರದ್ದು ಫಿಲ್ಟರ್ ಇಲ್ಲದ ವ್ಯಕ್ತಿತ್ವ. ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಿದ್ದರು. ಆದರೆ ಅವರ ಮಾತಿನ ಹಿಂದೆ ಯಾವುದೇ ಕಲ್ಮಷ ಇರಲಿಲ್ಲ. ಅವರ ಹೃದಯದಲ್ಲಿ ಯಾರ ಮೇಲೂ ದ್ವೇಷ ಇಟ್ಟುಕೊಳ್ಳುವ ಸ್ವಭಾವ ಇರಲಿಲ್ಲ, ಎಂದು ಆಯನೂರು ಮಂಜುನಾಥ್ ಹೇಳಿದರು.

2004ರ ಚುನಾವಣೆಯನ್ನು ಸ್ಮರಿಸಿದ ಅವರು, ಆ ಸಂದರ್ಭದಲ್ಲಿ ತಾವು ಲೋಕಸಭೆಗೆ ಹಾಗೂ ಚಂದ್ರಶೇಖರಪ್ಪ ಅವರು ವಿಧಾನಸಭೆಗೆ ಸ್ಪರ್ಧಿಸಿದ್ದರು. ಹಿಂದೆ ಅವರಿಗೆ ರಾಜಕೀಯ ಅವಕಾಶ ನೀಡಿದ್ದ ನಾಯಕರ ವಿರುದ್ಧವೇ ಸ್ಪರ್ಧಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ತಾವು ಕೂಡ ಪಕ್ಷ ಬದಲಿಸಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದೆ. ಆದರೆ ಜನರ ತೀರ್ಪು ಇಬ್ಬರ ಪರವಾಗಿರಲಿಲ್ಲ. ಇಬ್ಬರೂ ಚುನಾವಣೆಯಲ್ಲಿ ಸೋಲು ಕಂಡಿದ್ದೆವು ಎಂದರು.

ಆದರೆ ಸೋಲನ್ನು ಮನಸ್ಸಿಗೆ ತೆಗೆದುಕೊಂಡು ಕುಗ್ಗದೆ, ನಗುನಗುತ್ತಾ ಸಹಜವಾಗಿ ಸ್ವೀಕರಿಸಿ ಮತ್ತೆ ಜನರ ನಡುವೆ ಓಡಾಡಿದ ವ್ಯಕ್ತಿ ಚಂದ್ರಶೇಖರಪ್ಪ. ಅಧಿಕಾರ ಇದ್ದಾಗ ಮಾತ್ರ ಜನರ ನಡುವೆ ಇರುವ ರಾಜಕಾರಣಿಯಾಗಿರದೆ, ಅಧಿಕಾರ ಇಲ್ಲದ ಸಂದರ್ಭದಲ್ಲೂ ಜನರೊಂದಿಗೆ ಒಡನಾಟ ಉಳಿಸಿಕೊಂಡಿದ್ದರು ಎಂದು ಹೇಳಿದರು.

ಚಂದ್ರಶೇಖರಪ್ಪ ಅವರ ಮತ್ತೊಂದು ಪ್ರಮುಖ ಕೊಡುಗೆ ಮಾಜಿ ಶಾಸಕರ ಕಲ್ಯಾಣಕ್ಕೆ ಸಂಬಂಧಿಸಿದ್ದು ಎಂದು ಆಯನೂರು ಮಂಜುನಾಥ್ ತಿಳಿಸಿದರು.

ಮಾಜಿ ಶಾಸಕರು ನಿವೃತ್ತಿಯಾದ ನಂತರ ಅವರಿಗೆ ಸೂಕ್ತ ಆರ್ಥಿಕ ಭದ್ರತೆ ಹಾಗೂ ವೈದ್ಯಕೀಯ ಸೌಲಭ್ಯಗಳು ಇಲ್ಲದಿದ್ದ ಕಾಲದಲ್ಲಿ, ಶಾಸಕರನ್ನು ಒಗ್ಗೂಡಿಸಿ ಮಾಜಿ ಶಾಸಕರ ಸಂಘಟನೆ ಕಟ್ಟುವಲ್ಲಿ ಚಂದ್ರಶೇಖರಪ್ಪ ಪ್ರಮುಖ ಪಾತ್ರ ವಹಿಸಿದ್ದರು. ಮಾಜಿ ಶಾಸಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ಅವರಿಗೆ ಗೌರವಯುತ ನಿವೃತ್ತಿ ಜೀವನ ನಡೆಸಲು ಅಗತ್ಯವಾದ ಸೌಲಭ್ಯಗಳನ್ನು ದೊರಕಿಸಿಕೊಡುವ ಪ್ರಯತ್ನ ಮಾಡಿದ್ದರು ಎಂದರು.

ಪಿಂಚಣಿ, ವೈದ್ಯಕೀಯ ಭತ್ಯೆ ಸೇರಿದಂತೆ ಮಾಜಿ ಶಾಸಕರಿಗೆ ದೊರೆಯುತ್ತಿರುವ ಹಲವು ಸೌಲಭ್ಯಗಳ ಹಿಂದೆ ಚಂದ್ರಶೇಖರಪ್ಪ ಅವರ ಹೋರಾಟ ಮತ್ತು ಪ್ರಯತ್ನವನ್ನು ಸ್ಮರಿಸಬೇಕಾಗಿದೆ. ಎಲ್ಲಾ ಶಾಸಕರೂ ಆರ್ಥಿಕವಾಗಿ ಸದೃಢರಾಗಿರುವುದಿಲ್ಲ. ಅಧಿಕಾರ ಮುಗಿದ ನಂತರವೂ ಅವರು ಗೌರವಯುತವಾಗಿ ಬದುಕಲು ಅಗತ್ಯವಾದ ವ್ಯವಸ್ಥೆ ಇರಬೇಕು ಎಂಬ ದೃಷ್ಟಿಯಿಂದ ಅವರು ಕೆಲಸ ಮಾಡಿದ್ದರು ಎಂದು ಹೇಳಿದರು.

ಮಾಜಿ ಶಾಸಕರಿಗೆ ಗೌರವಯುತ ನಿವೃತ್ತಿ ಜೀವನ ಕಲ್ಪಿಸುವ ಪ್ರಯತ್ನದಲ್ಲಿ ಚಂದ್ರಣ್ಣನವರ ಪಾತ್ರ ಬಹಳ ದೊಡ್ಡದು. ರಾಜ್ಯದ ಮಾಜಿ ಶಾಸಕರು ಇಂದಿಗೂ ಅವರನ್ನು ಅತ್ಯಂತ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ, ಎಂದು ಆಯನೂರು ಮಂಜುನಾಥ್ ಹೇಳಿದರು.

ಚಂದ್ರಶೇಖರಪ್ಪ ಅವರು ಕೇವಲ ರಾಜಕಾರಣಕ್ಕೆ ಸೀಮಿತವಾಗಿರಲಿಲ್ಲ. ಸಮಾಜದ ಕಾರ್ಯಕ್ರಮಗಳು, ಮಠಗಳ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಸಮಾಜದ ಬಂಧುಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು ಎಂದು ಹೇಳಿದರು.

ನಮ್ಮೊಂದಿಗೆ ಸದಾ ಒಡನಾಟದಲ್ಲಿದ್ದ ಚಂದ್ರಣ್ಣ ಅವರು ಇದ್ದಕ್ಕಿದ್ದಂತೆ ನಮ್ಮ ಮಧ್ಯೆ ಇಲ್ಲದಿರುವುದು ವೈಯಕ್ತಿಕವಾಗಿ ನನಗೆ ದೊಡ್ಡ ನಷ್ಟ. ನಾನು ಒಬ್ಬ ಒಳ್ಳೆಯ ವ್ಯಕ್ತಿಯನ್ನು, ಆತ್ಮೀಯ ಸ್ನೇಹಿತನನ್ನು ಹಾಗೂ ವಿಶ್ವಾಸಾರ್ಹ ಸಹಪಾಠಿಯನ್ನು ಕಳೆದುಕೊಂಡಿದ್ದೇನೆ, ಎಂದು ಆಯನೂರು ಮಂಜುನಾಥ್ ಭಾವುಕರಾಗಿ ಸ್ಮರಿಸಿದರು.

ಚಂದ್ರಶೇಖರಪ್ಪ ಅವರ ಸ್ಮರಣಾರ್ಥ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಮಾಜದ ಬಂಧುಗಳು, ಸ್ನೇಹಿತರು ಹಾಗೂ ವಿವಿಧ ರಾಜಕೀಯ ಪಕ್ಷಗಳ ನಾಯಕರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿರುವುದು ಅವರ ಜನಪರ ಒಡನಾಟ ಮತ್ತು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದರು.

ಚಂದ್ರಶೇಖರಪ್ಪ ಅವರು ಅಧಿಕಾರದಲ್ಲಿದ್ದಾಗಲೂ, ಅಧಿಕಾರದಿಂದ ದೂರವಿದ್ದಾಗಲೂ ಸಮಾಜದೊಂದಿಗೆ ಹೊಂದಿದ್ದ ಸಂಬಂಧವನ್ನು ಉಳಿಸಿಕೊಂಡಿದ್ದರು. ಅವರ ಸರಳತೆ, ನೇರ ನಡೆ-ನುಡಿ, ರಾಜಕೀಯ ಬದ್ಧತೆ ಹಾಗೂ ಸಾಮಾಜಿಕ ಕಾಳಜಿ ಮುಂದಿನ ಪೀಳಿಗೆಗೆ ಸ್ಮರಣೀಯವಾಗಿರಲಿದೆ ಎಂದು ಆಯನೂರು ಮಂಜುನಾಥ್ ಹೇಳಿದರು.

ಚಂದ್ರಶೇಖರಪ್ಪ ಅವರ ಜೀವನ ಮತ್ತು ಸೇವೆಯನ್ನು ಸ್ಮರಿಸುವ ಇಂತಹ ಕಾರ್ಯಕ್ರಮಗಳು ಅವರ ಸಾಮಾಜಿಕ ಹಾಗೂ ರಾಜಕೀಯ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಲಿವೆ. ಅವರ ಆದರ್ಶಗಳನ್ನು ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಲಿದೆ ಎಂದರು.

K.M.Sathish Gowda

Join WhatsApp

Join Now

Facebook

Join Now

Read more

ರೈತರಿಗೆ ಬಿಜೆಪಿ ಬಲ; ಕಾಂಗ್ರೆಸ್ ಸರ್ಕಾರದಿಂದ ಸಂಕಷ್ಟ! ರೈತರ ವಿದ್ಯುತ್ ಸಂಪರ್ಕಕ್ಕೂ ಲಕ್ಷಾಂತರ ರೂಪಾಯಿ ಹೊರೆ! ಗ್ಯಾರಂಟಿ ಹೆಸರಲ್ಲಿ ರೈತಪರ ಯೋಜನೆಗಳಿಗೆ ಕತ್ತರಿ! ಕಾಂಗ್ರೆಸ್ ಆಡಳಿತದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರಿಗೆ ಪ್ರತಿಷ್ಠಿತ ‘ಬಸವ ಪುರಸ್ಕಾರ – 2026’ ಗೌರವ: ನೌಕರರ ಹಕ್ಕಿನ ಹೋರಾಟದಿಂದ ಸಮಾಜಸೇವೆಯವರೆಗೆ ಸಿ.ಎಸ್. ಷಡಾಕ್ಷರಿ ಅವರ ಸೇವಾ ಪಯಣ

ಸ್ವಚ್ಛ ಶಿಕಾರಿಪುರ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ; ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಅಭಿಯಾನ: ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ: ಬಿ.ವೈ. ರಾಘವೇಂದ್ರ

ಕುವೆಂಪು ವಿವಿಯಲ್ಲಿ ಡಿಜಿಟಲ್ ಮೌಲ್ಯಮಾಪನದ ಹೆಸರಿನಲ್ಲಿ ಅವ್ಯವಹಾರ ಆರೋಪ₹2.94 ಕೋಟಿ ಹೆಚ್ಚುವರಿ ವೆಚ್ಚ: ಅಂಕಪಟ್ಟಿ ಅಕ್ರಮದ ಕುರಿತು ಸಮಗ್ರ ತನಿಖೆಗೆ ಡಿ.ಎಸ್. ಅರುಣ್ ಆಗ್ರಹ

ಮಠಾಧೀಶರ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಖಂಡನೀಯ; ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಹೋರಾಟ: ಎಸ್.ಎಸ್. ಜ್ಯೋತಿಪ್ರಕಾಶ್

ಭ್ರಷ್ಟಾಚಾರ, ರೈತರ ನಿರ್ಲಕ್ಷ್ಯಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ; ಜನಾಕ್ರೋಶದ ನಡುವೆ ಬಿಜೆಪಿಗೆ ಮತ್ತೆ ಅಧಿಕಾರ: ಬಿ.ವೈ. ವಿಜಯೇಂದ್ರ

Leave a Comment