ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನಂದಿನಿ, ಮೈಸೂರು ಸ್ಯಾಂಡಲ್ ಮಾದರಿಯಲ್ಲಿ ಸಫಲ್ ಬ್ರ್ಯಾಂಡ್ ಬೆಳೆಸಲು ಕರೆ; ಸಹಕಾರಿ ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿ: ಸಿಎಂ ಡಿ.ಕೆ. ಶಿವಕುಮಾರ್

On: October 29, 2026 11:15 PM
Follow Us:

ಬೆಂಗಳೂರು, ಅ.29: ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಲು ಸಹಕಾರಿ ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ನಂದಿನಿ ಮತ್ತು ಮೈಸೂರು ಸ್ಯಾಂಡಲ್ ಬ್ರ್ಯಾಂಡ್‌ಗಳಂತೆ ಸಫಲ್ ಕೂಡ ಜನರ ವಿಶ್ವಾಸ ಗಳಿಸಬೇಕು. ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರರಾಜ್ಯಗಳಲ್ಲಿಯೂ ಸಫಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಫಲ್ ಬ್ರ್ಯಾಂಡ್‌ನ ನೂತನ ವಿನ್ಯಾಸದ ಪ್ಯಾಕೆಟ್‌ಗಳು ಹಾಗೂ ಲೋಗೋ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

1984ರಲ್ಲಿ ಆರಂಭವಾದ ಸಫಲ್ ಬ್ರ್ಯಾಂಡ್‌ಗೆ ಹೊಸ ರೂಪ ನೀಡುವ ಮೂಲಕ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ. ಗುಣಮಟ್ಟ ಮತ್ತು ಪರಿಶುದ್ಧತೆಗೆ ಆದ್ಯತೆ ನೀಡಿ ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸಫಲ್‌ನ ಯಶಸ್ಸು ಕೇವಲ ಒಂದು ಕಂಪನಿ ಅಥವಾ ಒಕ್ಕೂಟಕ್ಕೆ ಸೀಮಿತವಾಗಿಲ್ಲ. ಸಹಕಾರ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡುವುದರ ಜತೆಗೆ ಗ್ರಾಹಕರಲ್ಲಿ ವಿಶ್ವಾಸ ಮೂಡಿಸುವ ಮಹತ್ವದ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.

ರೈತರು ಬೆಳೆಯುವ ಎಣ್ಣೆಕಾಳುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು ಹಾಗೂ ಅವುಗಳಿಂದ ತಯಾರಿಸಿದ ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವುದು ಸಫಲ್ ಬ್ರ್ಯಾಂಡ್‌ಗೆ ಹೊಸ ರೂಪ ನೀಡಿರುವ ಪ್ರಮುಖ ಉದ್ದೇಶವಾಗಿದೆ ಎಂದರು.

ಇಂದಿನ ದಿನಗಳಲ್ಲಿ ಗ್ರಾಹಕರು ಆನ್‌ಲೈನ್ ಮೂಲಕವೇ ಅನೇಕ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಸಫಲ್ ಉತ್ಪನ್ನಗಳನ್ನು ರಾಜ್ಯದ ಪ್ರತಿಯೊಂದು ಮನೆಗೂ ತಲುಪಿಸುವ ಪ್ರಯತ್ನವಾಗಬೇಕು. ಸಹಕಾರಿ ಸಂಸ್ಥೆಗಳು ಉತ್ಪಾದನೆಗೆ ಮಾತ್ರ ಸೀಮಿತವಾಗದೆ, ಮಾರುಕಟ್ಟೆ ವಿಸ್ತರಣೆ, ಆನ್‌ಲೈನ್ ಮಾರಾಟ ಮತ್ತು ಗ್ರಾಹಕರ ವಿಶ್ವಾಸ ಗಳಿಸುವತ್ತಲೂ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕರ್ನಾಟಕವು ದೇಶದ ಪ್ರಮುಖ ಕೃಷಿ ರಾಜ್ಯಗಳಲ್ಲಿ ಒಂದಾಗಿದೆ. ಇಲ್ಲಿ ಕಡಲೆಕಾಯಿ, ಸೂರ್ಯಕಾಂತಿ ಸೇರಿದಂತೆ ಹಲವು ಬಗೆಯ ಎಣ್ಣೆಕಾಳುಗಳನ್ನು ಬೆಳೆಯಲಾಗುತ್ತಿದೆ. ತೆಂಗು ಕೂಡ ಖಾದ್ಯ ತೈಲ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ, ರೈತರಿಗೆ ಉತ್ತಮ ಬೆಲೆ ದೊರೆಯುವಂತೆ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಹೇಳಿದರು.

ಮನುಷ್ಯನ ದೈನಂದಿನ ಬದುಕಿನಲ್ಲಿ ಎಣ್ಣೆ ಮಹತ್ವದ ಸ್ಥಾನ ಹೊಂದಿದೆ. ದೀಪ ಬೆಳಗಿಸುವುದರಿಂದ ಹಿಡಿದು ಅಡುಗೆ ಮತ್ತು ಇತರ ಬಳಕೆಗಳವರೆಗೆ ಎಣ್ಣೆಯ ಅಗತ್ಯವಿದೆ. ಹೀಗಾಗಿ ರೈತರು ಬೆಳೆದ ಎಣ್ಣೆಕಾಳುಗಳಿಂದ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ರೂಪಿಸಬೇಕು ಎಂದು ತಿಳಿಸಿದರು.

ನಾನು ಕಡಲೆಕಾಯಿ ಬೆಳೆಯುವ ಪ್ರದೇಶದಿಂದ ಬಂದವನಾಗಿದ್ದು, ಎಣ್ಣೆ ತೆಗೆಯಲು ರೈತರು ಪಡುವ ಶ್ರಮದ ಅರಿವಿದೆ. ತೆಂಗಿನಕಾಯಿಯಿಂದ ಎಣ್ಣೆ ಉತ್ಪಾದಿಸುವ ಪ್ರಕ್ರಿಯೆಯ ಬಗ್ಗೆಯೂ ತಿಳಿದಿದೆ. ರೈತರು ಶ್ರಮಪಟ್ಟು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುವಂತೆ ಮಾಡುವುದು ಅತ್ಯಂತ ಮುಖ್ಯ ಎಂದು ಹೇಳಿದರು.

1983ರಲ್ಲಿ ಕನಕಪುರದಲ್ಲಿ ಸಹಕಾರ ಕ್ಷೇತ್ರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅಂದಿನಿಂದ ಸಹಕಾರ ಕ್ಷೇತ್ರದೊಂದಿಗೆ ದೀರ್ಘಕಾಲದ ನಂಟು ಹೊಂದಿದ್ದೇನೆ. ಒಟ್ಟಾಗಿ ಸೇರುವುದು, ಚರ್ಚಿಸುವುದು, ಒಗ್ಗಟ್ಟಿನಿಂದ ಕೆಲಸ ಮಾಡುವುದು ಹಾಗೂ ಸಾಮೂಹಿಕ ಪ್ರಯತ್ನದ ಮೂಲಕ ಯಶಸ್ಸು ಸಾಧಿಸುವುದೇ ಸಹಕಾರದ ಮೂಲ ಆಶಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಹಕಾರಿ ಸಂಸ್ಥೆಗಳು ರೈತರ ಬೆನ್ನೆಲುಬಾಗಿವೆ. ಖಾಸಗಿ ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುತ್ತಿದ್ದ ಸಂದರ್ಭಗಳಲ್ಲಿ ಸಹಕಾರಿ ಬ್ಯಾಂಕುಗಳು ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ನೆರವಾಗಿವೆ. ಇಂತಹ ಸಂಸ್ಥೆಗಳನ್ನು ಉಳಿಸಿ, ಬೆಳೆಸಿ ಮತ್ತಷ್ಟು ಬಲಪಡಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ಸಹಕಾರಿ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸುವುದು ಸುಲಭದ ಕೆಲಸವಲ್ಲ. ಆಡಳಿತ, ನಿರ್ವಹಣೆ, ಹಣಕಾಸು ಮತ್ತು ಮಾರುಕಟ್ಟೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೂ ಆಡಳಿತ ಮಂಡಳಿಗಳು, ಸದಸ್ಯರು ಹಾಗೂ ಸಂಬಂಧಪಟ್ಟ ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಸಾಧ್ಯ ಎಂದು ಹೇಳಿದರು.

ಕೃಷಿ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವುದರಿಂದ ರೈತರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಕೀಟನಾಶಕಗಳು ಮತ್ತು ಕೃಷಿ ಕಾರ್ಮಿಕರ ಕೂಲಿ ಸೇರಿದಂತೆ ವಿವಿಧ ವೆಚ್ಚಗಳು ಏರಿಕೆಯಾಗಿವೆ. ಮತ್ತೊಂದೆಡೆ, ಬೆಳೆದ ಬೆಳೆಗಳಿಗೆ ನಿರೀಕ್ಷಿತ ಬೆಲೆ ಸಿಗದಿರುವುದು ರೈತರ ಸಂಕಷ್ಟವನ್ನು ಹೆಚ್ಚಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರನ್ನು ಸಂಕಷ್ಟದಿಂದ ಪಾರು ಮಾಡಿ, ಅವರ ಬದುಕಿಗೆ ಭದ್ರತೆ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ರೈತರಿಗೆ ನೆರವಾಗಲು ವಿದ್ಯುತ್ ಸಬ್ಸಿಡಿಗಾಗಿ ಸುಮಾರು ₹30,000 ಕೋಟಿ ವೆಚ್ಚ ಮಾಡುತ್ತಿದೆ. ನೀರಾವರಿ ಮತ್ತು ಕೃಷಿಗೆ ಅಗತ್ಯವಾದ ನೆರವು ಒದಗಿಸುವ ಮೂಲಕ ರೈತರ ಬದುಕನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ರೈತರ ಹಿತದೃಷ್ಟಿಯಿಂದ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ನಿರ್ಧಾರಗಳನ್ನು ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ. ರೈತರ ಬದುಕಿನಲ್ಲಿ ಎಷ್ಟೇ ಸವಾಲುಗಳು ಎದುರಾದರೂ ಅವರ ನೆರವಿಗೆ ನಿಲ್ಲಲು ಸರ್ಕಾರ ಬದ್ಧವಾಗಿದೆ. ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು, ಮೌಲ್ಯವರ್ಧನೆಗೆ ಉತ್ತೇಜನ ನೀಡುವುದು ಹಾಗೂ ಅವರ ಆದಾಯ ಹೆಚ್ಚಿಸುವ ಪ್ರಯತ್ನಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

K.M.Sathish Gowda

Join WhatsApp

Join Now

Facebook

Join Now

Read more

ಸಕ್ರೆಬೈಲು ಆನೆಗಳ ಆರೋಗ್ಯ, ಸೋಮಣ್ಣನ ಆಯ್ಕೆ, ವೈದ್ಯಕೀಯ ತಪಾಸಣೆ ಹಾಗೂ ದುರ್ಘಟನೆಯ ಹೊಣೆಗಾರಿಕೆ ಕುರಿತು ಅರಣ್ಯ ಇಲಾಖೆಗೆ 10 ಪ್ರಶ್ನೆಗಳನ್ನು ಮುಂದಿಟ್ಟ ಮಲೆನಾಡು ವನ್ಯಜೀವಿ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ

ಖಜಾನೆ ಖಾಲಿ, ರೈತರಿಗೆ ಪರಿಹಾರವಿಲ್ಲ; ಪಿಂಚಣಿಯೂ ಸ್ಥಗಿತ! ಕಾಂಗ್ರೆಸ್ ಸರ್ಕಾರದ ವಿರುದ್ಧ ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಹಿಂಸಾತ್ಮಕವಾಗಿ ಆಡಳಿತ ಬದಲಾವಣೆಗೆ ಯತ್ನಿಸಿದರೆ ಸರ್ಕಾರಿ ಉದ್ಯೋಗಕ್ಕೆ ಕೊಕ್! ಉತ್ತರ ಪ್ರದೇಶ ಸರ್ಕಾರದಿಂದ ನೇಮಕಾತಿ ನಿಯಮ ಮತ್ತಷ್ಟು ಬಿಗಿ

ಮೀಸಲಾತಿ ವಿಚಾರವಾಗಿ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ಮನವಿ; ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ಒತ್ತಾಯ

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಸ್ವಿಟ್ಜರ್‌ಲ್ಯಾಂಡ್‌ಗೆ ಆಹ್ವಾನ; ರಾಜ್ಯದಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಸ್ವಿಸ್ ಕಂಪನಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚಿಸಿ, ಫಲಾನುಭವಿಗಳೊಂದಿಗೆ ಸಂಪರ್ಕ ಬೆಳೆಸಿ: ಸಿಎಂ ಡಿ.ಕೆ. ಶಿವಕುಮಾರ್

Leave a Comment