ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹಿರಿಯೂರು ಕ್ಷೇತ್ರಕ್ಕೆ ಅಭಿವೃದ್ಧಿಯ ಲಕ್ಷ್ಮಿಯನ್ನು ಕರೆತಂದಿದ್ದೇವೆ: ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ ₹2,200 ಕೋಟಿ ಮೊತ್ತದ ಯೋಜನೆಗಳಿಗೆ ಮಂಜೂರಾತಿ: ಸಿಎಂ ಡಿ.ಕೆ. ಶಿವಕುಮಾರ್

On: November 3, 2026 6:33 PM
Follow Us:

ಹಿರಿಯೂರು, ನ.03: ಹಿರಿಯೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ನಾನು ಹಾಗೂ ಸಚಿವರು ಈ ಕ್ಷೇತ್ರಕ್ಕೆ ಬರಿಗೈಯಲ್ಲಿ ಬಂದಿಲ್ಲ. ವಿವಿಧ ಇಲಾಖೆಗಳ ಮೂಲಕ ಸುಮಾರು ₹2,200 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾತಿ ನೀಡುವ ಮೂಲಕ ಕ್ಷೇತ್ರಕ್ಕೆ ಅಭಿವೃದ್ಧಿಯ ಲಕ್ಷ್ಮಿಯನ್ನು ಕರೆತಂದಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರದಲ್ಲಿ ಮಂಗಳವಾರ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಹಿರಿಯೂರು ಕ್ಷೇತ್ರದ ಅಭಿವೃದ್ಧಿ, ರೈತರ ಸಮಸ್ಯೆಗಳ ಪರಿಹಾರ, ನೀರಾವರಿ ಸೌಲಭ್ಯ, ವಸತಿ, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಸರ್ಕಾರ ಕೈಗೊಂಡಿರುವ ವಿವಿಧ ಯೋಜನೆಗಳನ್ನು ವಿವರಿಸಿದರು.

ಹಿರಿಯೂರು ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಮೂಲಕ ಸುಮಾರು ₹2,200 ಕೋಟಿ ಮೊತ್ತದ ಕಾಮಗಾರಿಗಳಿಗೆ ಆದೇಶ ಹೊರಡಿಸಲಾಗಿದೆ. ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಗಮನಹರಿಸಿದ್ದಾರೆ. ಪ್ರತಿ ಗ್ರಾಮದಲ್ಲಿ ಯಾವ ರಸ್ತೆ ಅಭಿವೃದ್ಧಿಯಾಗಬೇಕು, ಯಾವ ಮೂಲಸೌಕರ್ಯ ಕಲ್ಪಿಸಬೇಕು ಎಂಬುದರ ಕುರಿತು ಪಟ್ಟಿ ಸಿದ್ಧಪಡಿಸಿ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಅವರ ಪತಿ ಶ್ರೀನಿವಾಸ್ ಅವರು ಕ್ಷೇತ್ರದ ಜನರ ವಿಶ್ವಾಸ ಗಳಿಸಿ ಕೆಲಸ ಮಾಡಿದ್ದಾರೆ. ಅವರ ಕುಟುಂಬದೊಂದಿಗೆ ನನಗೆ ಹಿಂದಿನಿಂದಲೂ ಆತ್ಮೀಯ ಸಂಬಂಧವಿದೆ. ಅವರು ಈ ಹಿಂದೆ ಬೇರೆ ಪಕ್ಷದಿಂದ ಸ್ಪರ್ಧಿಸಿದ್ದರೂ, ರಾಜ್ಯದ ಭವಿಷ್ಯ ಕಾಂಗ್ರೆಸ್ ಪಕ್ಷದೊಂದಿಗೆ ಮಾತ್ರ ಸಾಧ್ಯ ಎಂಬ ನಂಬಿಕೆಯಿಂದ ಕಾಂಗ್ರೆಸ್ ಸೇರ್ಪಡೆಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಇಂದಿನ ಕಾರ್ಯಕ್ರಮಕ್ಕೆ ನಾನು ಬಹಳ ದುಃಖದಿಂದ ಬಂದಿದ್ದೇನೆ. ನನ್ನ ಆತ್ಮೀಯ ಸ್ನೇಹಿತ ಸುಧಾಕರ್ ಇಂದು ಬದುಕಿದ್ದರೆ, ನಾನು ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ನಿಂತಿರುವುದನ್ನು ಕಂಡು ಅತ್ಯಂತ ಸಂತೋಷಪಡುತ್ತಿದ್ದ. ಆತ ನನ್ನ ಮೇಲೆ ಇಟ್ಟಿದ್ದ ಪ್ರೀತಿ, ವಿಶ್ವಾಸ ಮತ್ತು ಸ್ನೇಹವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ನಾನು ಸಚಿವನಾಗಿರದಿದ್ದರೂ ಪರವಾಗಿಲ್ಲ, ನನ್ನ ಸ್ನೇಹಿತ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಸುಧಾಕರ್ ಹೇಳುತ್ತಿದ್ದ. ಅವರು ನಿಧನರಾಗುವ ಎರಡು ತಿಂಗಳ ಮುಂಚೆಯೂ ಈ ಮಾತನ್ನು ಹೇಳಿದ್ದರು. ಅವರ ಕನಸು, ಜನರ ಮೇಲಿದ್ದ ಪ್ರೀತಿ ಹಾಗೂ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹೊಂದಿದ್ದ ಕಾಳಜಿ ಅಪಾರವಾಗಿತ್ತು. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ವ್ಯಕ್ತಿತ್ವ ಅವರದ್ದಾಗಿತ್ತು. ಇಂದು ಅವರ ಆತ್ಮೀಯ ಸ್ನೇಹಿತನಾಗಿ ಹಾಗೂ ಪ್ರಜಾಸೇವಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಭಾವುಕರಾದರು.

ಸಮಾಜ ಕಲ್ಯಾಣ ಇಲಾಖೆಯ ಮೂಲಕ ಎಲ್ಲ ಜಾತಿ ಮತ್ತು ಸಮುದಾಯಗಳಿಗೆ ಸಮುದಾಯ ಭವನಗಳನ್ನು ನಿರ್ಮಿಸಲು ಸರ್ಕಾರ ಆದೇಶ ನೀಡಿದೆ. ಶಾಸಕ ಬಾಲಕೃಷ್ಣ ಅವರು ಕ್ಷೇತ್ರದ ಬೇಡಿಕೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಒಕ್ಕಲಿಗರ ಸಮುದಾಯ ಭವನ ನಿರ್ಮಾಣಕ್ಕೆ ₹5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಗೊಲ್ಲರ ಸಮುದಾಯ ಭವನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಕನಕ ಭವನ ನಿರ್ಮಾಣಕ್ಕೂ ಅಗತ್ಯ ಅನುದಾನ ಒದಗಿಸಲಾಗುವುದು.

ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಕಲ್ಪಿಸುವುದು ಸರ್ಕಾರದ ಉದ್ದೇಶ. ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ಸಮುದಾಯವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಈ ಸರ್ಕಾರಕ್ಕೆ ಜನರು ಇನ್ನಷ್ಟು ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ಈ ವರ್ಷ ರಾಜ್ಯದ ನಿವೇಶನರಹಿತ ಕುಟುಂಬಗಳಿಗೆ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ಸಚಿವರಾದ ಜಮೀರ್ ಅಹಮದ್ ಖಾನ್ ಹಾಗೂ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಂಡಿವೆ. ಸರ್ಕಾರಿ ಜಮೀನು ಲಭ್ಯವಿರುವ ಕಡೆಗಳಲ್ಲಿ ನಿವೇಶನ ನೀಡಲಾಗುವುದು. ಸರ್ಕಾರಿ ಜಮೀನು ಇಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲಾಗುವುದು.

ಚಿತ್ರದುರ್ಗ ಜಿಲ್ಲೆಯಲ್ಲಿ ಲಭ್ಯವಿರುವ ಸರ್ಕಾರಿ ಜಮೀನುಗಳ ವಿವರವನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಪ್ರಜಾಸೇವಾ ಅಭಿಯಾನದಡಿ ಜನರು ತಮ್ಮ ಸಮಸ್ಯೆಗಳನ್ನು ಅರ್ಜಿಗಳ ಮೂಲಕ ಸರ್ಕಾರದ ಗಮನಕ್ಕೆ ತಂದರೆ ಅವುಗಳಿಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು.

ಅಲ್ಲದೆ, ಭೂಮಿ ಗ್ಯಾರಂಟಿ ಯೋಜನೆಯ ಮೂಲಕ ಜನರ ಆಸ್ತಿ ದಾಖಲೆಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಿದೆ. ಸಣ್ಣ ನಿವೇಶನ ಹೊಂದಿರುವವರಿಗೂ ಸೂಕ್ತ ದಾಖಲೆಗಳನ್ನು ಒದಗಿಸುವ ಉದ್ದೇಶದಿಂದ ಫೋಟೋ ಸಹಿತ ದಾಖಲೆ ಸಿದ್ಧಪಡಿಸುವುದು, ಪೋಡಿ ಕಾರ್ಯ ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ.

ವಿಜಯನಗರ ಜಿಲ್ಲೆಯಲ್ಲಿ 1.11 ಲಕ್ಷ ಬುಡಕಟ್ಟು ಜನರಿಗೆ ಅವರ ಜಮೀನಿನ ಹಕ್ಕುಪತ್ರಗಳನ್ನು ಉಚಿತವಾಗಿ ವಿತರಿಸಲಾಗಿದೆ. ಜನರ ಆಸ್ತಿ ಹಕ್ಕುಗಳನ್ನು ಖಚಿತಪಡಿಸುವ ಇಂತಹ ಕೆಲಸಗಳನ್ನು ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರದ 10 ಸಚಿವರು ತಮ್ಮ ತಮ್ಮ ಇಲಾಖೆಗಳ ಮೂಲಕ ಹಿರಿಯೂರು ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತಿದ್ದಾರೆ. ಸುಧಾಕರ್ ಅವರನ್ನು ಆಯ್ಕೆ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ಗೆ 136 ಸ್ಥಾನಗಳನ್ನು ನೀಡಿದ ಜನರ ಋಣ ತೀರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.

ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಸಲು ಸರ್ಕಾರ ವಾರ್ಷಿಕವಾಗಿ ಸುಮಾರು ₹22 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಈ ವರ್ಷ ಬರ ಪರಿಸ್ಥಿತಿಯಿಂದಾಗಿ ರೈತರು ಹೆಚ್ಚಿನ ವಿದ್ಯುತ್ ಬಳಸಿರುವ ಹಿನ್ನೆಲೆಯಲ್ಲಿ ಈ ವೆಚ್ಚ ₹30 ಸಾವಿರ ಕೋಟಿಗೆ ತಲುಪುವ ನಿರೀಕ್ಷೆಯಿದೆ. ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರೈತರ ಕಷ್ಟಗಳು ನಮಗೆ ಅರ್ಥವಾಗುತ್ತವೆ. ಅವರ ಜಮೀನುಗಳಿಗೆ ನೀರು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ.

ಹಿರಿಯೂರು ಭಾಗದ ನೀರಾವರಿ ಅಭಿವೃದ್ಧಿಗೆ ದಿವಂಗತ ಸುಧಾಕರ್ ಅವರು ವಿಶೇಷ ಆಸಕ್ತಿ ಹೊಂದಿದ್ದರು. ಮಾಜಿ ಸಚಿವ ಜಯಚಂದ್ರ ಅವರು ಕೂಡ ಈ ಭಾಗದ ನೀರಾವರಿ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಚಿಂತನೆ ನಡೆಸುತ್ತಿದ್ದಾರೆ. ಮಾಜಿ ಸಚಿವ ಎಚ್. ಆಂಜನೇಯ ಅವರು ಜಿಲ್ಲೆಯ ಜನರ ಬದುಕು ಸುಧಾರಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಧರ್ಮಪುರದಲ್ಲಿ ₹3.5 ಕೋಟಿ ವೆಚ್ಚದಲ್ಲಿ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಭಾಗದ ನೀರಾವರಿ ಯೋಜನೆಗಳ ಕುರಿತು ಜನರು ಸಲ್ಲಿಸಿರುವ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದ್ದು, ಯೋಜನೆಗಳಿಗೆ ಮಂಜೂರಾತಿ ನೀಡಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯವೂ ನಡೆದಿದೆ.

ನಾನು ಕೇವಲ ಭರವಸೆಗಳನ್ನು ನೀಡುವ ವ್ಯಕ್ತಿಯಲ್ಲ. ಕೊಟ್ಟ ಮಾತನ್ನು ಕಾರ್ಯರೂಪಕ್ಕೆ ತರುವುದರಲ್ಲಿ ನಂಬಿಕೆ ಇಟ್ಟಿದ್ದೇನೆ. ಅಕ್ಬರ್ ಮತ್ತು ಬೀರಬಲ್ ನಡುವಿನ ಸತ್ಯ ಹಾಗೂ ಸುಳ್ಳಿನ ವ್ಯತ್ಯಾಸದ ಕುರಿತಾದ ಪ್ರಸಂಗವನ್ನು ಉಲ್ಲೇಖಿಸಿದ ಅವರು, ಕಣ್ಣಾರೆ ಕಂಡದ್ದು ಸತ್ಯ, ಕಿವಿಯಿಂದ ಕೇಳಿದ್ದೆಲ್ಲವೂ ಸತ್ಯವಾಗಬೇಕೆಂದಿಲ್ಲ ಎಂಬ ಅರ್ಥದಲ್ಲಿ ಜನರು ಅಭಿವೃದ್ಧಿ ಕಾರ್ಯಗಳನ್ನು ಗಮನಿಸಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಅನೇಕರು ಟೀಕೆ ಮಾಡಿದ್ದರು. ಈ ಯೋಜನೆಗಳನ್ನು ಜಾರಿಗೊಳಿಸುವುದು ಅಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಹೇಳಿದ್ದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದರೆ ಅವರು ದಾರಿ ತಪ್ಪುತ್ತಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದರು.

ಆದರೆ, ನಮ್ಮ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2 ಸಾವಿರ, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ಹಾಗೂ ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆಯ ಮೂಲಕ ನೆರವು ನೀಡಲಾಗುತ್ತಿದೆ.

ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಆಡಳಿತಾವಧಿಯಲ್ಲಿ ಇಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತೇ ಎಂದು ಪ್ರಶ್ನಿಸಿದರು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ ಎಂಬ ಮಾತಿನ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಅಧಿಕಾರದ ಮಹತ್ವವನ್ನು ವಿವರಿಸಿದರು.

ಧರ್ಮಪುರ ಹೋಬಳಿಯ ಕೆರೆಗಳನ್ನು ತುಂಬಿಸಿ ಈ ಭಾಗದ ರೈತರ ಬದುಕಿನಲ್ಲಿ ಬದಲಾವಣೆ ತರಲು ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಜನರು ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ನನಗೆ ಕನಕಪುರ ಕ್ಷೇತ್ರ ಎಷ್ಟು ಮುಖ್ಯವೋ, ಹಿರಿಯೂರು ಕ್ಷೇತ್ರವೂ ಅಷ್ಟೇ ಮುಖ್ಯ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ನನ್ನ ಜವಾಬ್ದಾರಿ. ನಿಮ್ಮ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ. ಯಾರೇ ಅಭ್ಯರ್ಥಿಯಾಗಿ ಬಂದರೂ ಕ್ಷೇತ್ರದ ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಬದ್ಧವಾಗಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಈ ಕ್ಷೇತ್ರದ ಜನರ ಬದುಕಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಜನರು ಪ್ರಶ್ನಿಸಬೇಕು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5,400 ಕೋಟಿ ಅನುದಾನ ಘೋಷಿಸಲಾಗಿತ್ತು. ಆದರೆ, ಇಂದಿನವರೆಗೂ ಆ ಅನುದಾನ ಬಿಡುಗಡೆಯಾಗಿಲ್ಲ. ರಾಜ್ಯದ ರೈತರಿಗೆ ಅನುಕೂಲವಾಗಬೇಕಿದ್ದ ಮಹತ್ವದ ನೀರಾವರಿ ಯೋಜನೆಗೆ ಹಣ ನೀಡದೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ. ಹೀಗಿರುವಾಗ ಬಿಜೆಪಿ ನಾಯಕರು ಯಾವ ನೈತಿಕತೆಯ ಆಧಾರದ ಮೇಲೆ ಬಂದು ಜನರಲ್ಲಿ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರ ಜನರೊಂದಿಗೆ ನಿಂತಿದೆ. 14 ಗ್ರಾಮಗಳಿಗೆ ಸಮುದಾಯ ಭವನಗಳ ನಿರ್ಮಾಣ ಹಾಗೂ ₹7 ಕೋಟಿ ಮೊತ್ತದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಒದಗಿಸಲಾಗಿದೆ. ರಾಜಕೀಯದಲ್ಲಿ ನಾನು ಎಂದಿಗೂ ಕೊಟ್ಟ ಮಾತಿನಿಂದ ಹಿಂದೆ ಸರಿದಿಲ್ಲ ಎಂದು ಹೇಳಿದರು.

ಎನ್‌ಡಿಎ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಗೋವಿಂದ ಕಾರಜೋಳ ಹಾಗೂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಯಾರೇ ನಾಯಕರು ಪ್ರಚಾರಕ್ಕೆ ಬಂದರೂ ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆಗಳ ಬಗ್ಗೆ ಜನರು ಪ್ರಶ್ನಿಸಬೇಕು.

ದಿವಂಗತ ಸುಧಾಕರ್ ಅವರ ಸೇವೆಯನ್ನು ಕ್ಷೇತ್ರದ ಜನರು ಮರೆಯಬಾರದು. ಈ ಹೋಬಳಿಯ ಜನರು ಹಿಂದೆ ಸುಮಾರು 6 ಸಾವಿರ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿದ್ದೀರಿ. ಅವರ ಆತ್ಮೀಯ ಸ್ನೇಹಿತನಾಗಿ ಇಂದು ನಾನು ಮುಖ್ಯಮಂತ್ರಿಯಾಗಿದ್ದೇನೆ. ಅವರ ಮೇಲಿದ್ದ ಪ್ರೀತಿ ಮತ್ತು ವಿಶ್ವಾಸವನ್ನು ಗೌರವಿಸಿ ಈ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ.

ಆದ್ದರಿಂದ ಮುಂಬರುವ ಉಪಚುನಾವಣೆಯಲ್ಲಿ ಧರ್ಮಪುರ ಹೋಬಳಿಯಿಂದ ಕನಿಷ್ಠ 15 ಸಾವಿರ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡುವ ಮೂಲಕ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಧರ್ಮಪುರ ಭಾಗದ ಜನರು ಪ್ರತ್ಯೇಕ ತಾಲೂಕು ರಚನೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಈ ಬೇಡಿಕೆಯ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಲಿದೆ. ಯಾವ ಯಾವ ಹೋಬಳಿಗಳನ್ನು ಸೇರಿಸಬೇಕು, ಎಷ್ಟು ಜನಸಂಖ್ಯೆ ಇರಬೇಕು ಹಾಗೂ ಆಡಳಿತಾತ್ಮಕವಾಗಿ ತಾಲೂಕು ರಚನೆ ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಗಳನ್ನು ಉಲ್ಲೇಖಿಸಿದ ಅವರು, ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರ ಪುತ್ರನನ್ನು ಕಣಕ್ಕಿಳಿಸಲಾಗಿತ್ತು. ಆದರೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಸುಮಾರು 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಪುತ್ರನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಗೆಲುವು ಸಾಧಿಸಿದರು. ಇದರಿಂದ ಜನರು ಕುಟುಂಬ ರಾಜಕಾರಣಕ್ಕಿಂತ ಜನರ ಪರವಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡುತ್ತಾರೆ ಎಂಬುದು ಸಾಬೀತಾಗಿದೆ ಎಂದರು.

2028ರಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಹಿಂದಿನ ಆಡಳಿತಾವಧಿಯಲ್ಲಿ ಕ್ಷೇತ್ರಕ್ಕೆ ಅಭಿವೃದ್ಧಿ ನೀಡದವರು ಈಗ ಅಧಿಕಾರದಲ್ಲಿಲ್ಲದ ಸಂದರ್ಭದಲ್ಲಿ ಏನು ಮಾಡಲು ಸಾಧ್ಯ ಎಂದು ಜನರು ಪ್ರಶ್ನಿಸಬೇಕು ಎಂದು ಹೇಳಿದರು.

ನಾನು ಕೇವಲ ಚುನಾವಣೆ ಬಂದಾಗ ಮಾತ್ರ ಕ್ಷೇತ್ರಕ್ಕೆ ಬಂದು ಹೋಗುವವನಲ್ಲ. ನಿಮ್ಮೊಂದಿಗೆ ನಿಂತು ನಿಮ್ಮ ಸೇವೆ ಮಾಡುವ ಸಂಕಲ್ಪ ಮಾಡಿದ್ದೇನೆ. ಬರಗಾಲದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಇದುವರೆಗೆ ಯಾವುದೇ ನೆರವು ದೊರೆತಿಲ್ಲ. ಆದರೂ ನಮ್ಮ ಸರ್ಕಾರ ಕೆರೆಗಳಿಗೆ ನೀರು ತುಂಬಿಸುವಂತೆ ಕ್ರಮ ಕೈಗೊಂಡಿದೆ. ರೈತರು ಸಲ್ಲಿಸಿರುವ ಪಟ್ಟಿಯಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸಲಾಗುವುದು.

ಉಪಚುನಾವಣೆಯಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬುದರ ಕುರಿತು ಈಗಾಗಲೇ ನಾಲ್ಕು ಸಮೀಕ್ಷೆಗಳನ್ನು ನಡೆಸಿದ್ದೇನೆ. ನಾನು ಪ್ರಸ್ತುತ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿಲ್ಲದಿದ್ದರೂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮಾಹಿತಿ ಸಂಗ್ರಹಿಸಿದ್ದೇನೆ. ನಿಮ್ಮ ಅಭ್ಯರ್ಥಿಯಾಗಿ ನಾನೇ ಇದ್ದೇನೆ ಎಂದು ಭಾವಿಸಿ. ಡಿ.ಕೆ. ಶಿವಕುಮಾರ್ ನಿಮ್ಮ ಅಭ್ಯರ್ಥಿ ಇದ್ದಂತೆ.

ಧರ್ಮಪುರದ ಜನರು ಧರ್ಮ ಮತ್ತು ನ್ಯಾಯವನ್ನು ಕಾಪಾಡುವವರು. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಹಾಗೂ ಜನರ ಸೇವೆಗೆ ಬದ್ಧವಾಗಿರುವ ಪಕ್ಷವನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಟಿ. ರಘುಮೂರ್ತಿ, ಕೆ.ಎಸ್. ಬಸವಂತಪ್ಪ, ಈಶ್ವರ್ ಖಂಡ್ರೆ, ಕೆ.ಎಚ್. ಮುನಿಯಪ್ಪ, ಜಮೀರ್ ಅಹಮದ್ ಖಾನ್, ಡಾ. ಅಜಯ್ ಧರ್ಮಸಿಂಗ್, ಎಚ್.ಸಿ. ಬಾಲಕೃಷ್ಣ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಬಿ.ಜಿ. ಗೋವಿಂದಪ್ಪ, ವೀರೇಂದ್ರ ಪಪ್ಪಿ, ಡಾ. ಕುಣಿಗಲ್ ರಂಗನಾಥ್, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ದ್ರಾಕ್ಷಿ ಮಂಡಳಿ ಅಧ್ಯಕ್ಷ ಜಿ. ಯೋಗೇಶ್ ಬಾಬು, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಟಿ. ಮಂಜಪ್ಪ, ಭೋವಿ ನಿಗಮದ ಅಧ್ಯಕ್ಷ ರಾಮಪ್ಪ, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಸುಹಾಸ್ ಸುಧಾಕರ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಬರ ಮುಕ್ತ ಹಿರಿಯೂರು; ದಿವಂಗತ ಸುಧಾಕರ್ ಅವರ ಕನಸನ್ನು ನನಸು ಮಾಡೋಣ: ಸಿಎಂ ಡಿ.ಕೆ. ಶಿವಕುಮಾರ್

ಅಕ್ಷರಗಳ ಮೂಲಕ ಅರಳಿದ ಪ್ರತಿಭೆಗೆ ರಾಜ್ಯೋತ್ಸವದ ಗೌರವ! ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯದ ಕೃಷಿ; 14 ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ ಸಂತೋಷ್ ಬಿದರಗಡ್ಡೆ ಅವರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ 71ನೇ ಕನ್ನಡ ರಾಜ್ಯೋತ್ಸವ ಆಚರಣೆ; ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ ಸಂಭ್ರಮ

ಗುರುತತ್ತ್ವದ ಎತ್ತರ ಅರಿಯದೆ ಗುರುಸೇವೆಯನ್ನು ಅಳೆಯಲು ಸಾಧ್ಯವೇ? ನ್ಯಾಯದಾಸೋಹದಿಂದ ಜಲಸಂರಕ್ಷಣೆಯವರೆಗೆ… ಟೀಕೆಗಳಾಚೆ ನಿಂತಿರುವ ಶ್ರೀ ತರಳಬಾಳು ಜಗದ್ಗುರುಗಳ ಬಹುಮುಖ ಸಾಧನೆಗಳು!

ಕನ್ನಡವೇ ಉಸಿರು, ಕನ್ನಡವೇ ಬದುಕು; ಕರ್ನಾಟಕವೇ ಭಾರತದ ಭವಿಷ್ಯ! ಕನ್ನಡದ ಅಸ್ಮಿತೆಗೆ ನಾಡಧ್ವಜದ ಅಧಿಕೃತ ಮಾನ್ಯತೆಯ ಚಿಂತನೆ; ಶಿಕ್ಷಣ, ಉದ್ಯೋಗ, ಕೃಷಿ ಮತ್ತು ಕ್ರೀಡಾ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ. ಶಿವಕುಮಾರ್

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಮೈತ್ರಿಕೂಟದ ಆರು ಗಂಭೀರ ಆರೋಪ: ವಜಾಗೊಳಿಸಲು ಆಗ್ರಹ, ದೇಶದ್ರೋಹದ ವಿಚಾರಣೆಗೂ ಒತ್ತಾಯ!

Leave a Comment