ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

2027ರ ಚುನಾವಣೆಯಲ್ಲಿ 320ಕ್ಕೂ ಹೆಚ್ಚು ಸ್ಥಾನಗಳ ಗೆಲುವು ಖಚಿತ: ಸಿಎಂ ಯೋಗಿ ಆದಿತ್ಯನಾಥ್

On: November 19, 2026 9:49 AM
Follow Us:

ವಿರೋಧಿಗಳಿಗೆ ನೇರ ಸವಾಲು ಹಾಕಿದ ಉತ್ತರ ಪ್ರದೇಶ ಸಿಎಂ – ಬಿಜೆಪಿ ಗೆಲುವಿನ ಬಗ್ಗೆ ವಿಶ್ವಾಸದ ಮಾತು

ಲಖನೌ: ಚುನಾವಣೆಯ ರಣಕಹಳೆ ಮೊಳಗುವ ಮುನ್ನವೇ ಉತ್ತರ ಪ್ರದೇಶದ ರಾಜಕೀಯ ಅಖಾಡದಲ್ಲಿ ಗೆಲುವಿನ ಘೋಷಣೆ ಮೊಳಗಿದೆ. ಎದುರಾಳಿಗಳ ಲೆಕ್ಕಾಚಾರವನ್ನು ತಲೆಕೆಳಗಾಗಿಸುವ ವಿಶ್ವಾಸ, ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬುವ ಉತ್ಸಾಹದೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2027ರ ವಿಧಾನಸಭಾ ಚುನಾವಣೆಯ ಕುರಿತು ಭರ್ಜರಿ ಭವಿಷ್ಯ ನುಡಿದಿದ್ದಾರೆ. ‘ಡೌಟೇ ಇಲ್ಲ, 2027ರ ಚುನಾವಣೆಯಲ್ಲಿ 320ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂಬ ಅವರ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಉತ್ತರ ಪ್ರದೇಶದ 403 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 320ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಈ ಕುರಿತು ಲಖನೌನಲ್ಲಿ ನಡೆದ ‘ನ್ಯೂಸ್18 ರೈಸಿಂಗ್ ಭಾರತ್ ಶೃಂಗಸಭೆ: ನಾರ್ತ್ ಎಡಿಷನ್’ ಕಾರ್ಯಕ್ರಮದಲ್ಲಿ ನೆಟ್‌ವರ್ಕ್18 ಗ್ರೂಪ್ ಸಂಪಾದಕ ರಾಹುಲ್ ಜೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಯೋಗಿ ಆದಿತ್ಯನಾಥ್, ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಮಹಿಳೆಯರು, ಯುವಕರು, ವ್ಯಾಪಾರಿಗಳು ಹಾಗೂ ಬಡವರ ಬೆಂಬಲ ಸರ್ಕಾರಕ್ಕಿದೆ. ಅಭಿವೃದ್ಧಿಯನ್ನು ಬಯಸುವ ಜನರು ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕೆಂದು ಆಶಿಸುತ್ತಿದ್ದಾರೆ ಎಂದು ಯೋಗಿ ಹೇಳಿದರು.

ಅಭಿವೃದ್ಧಿಯನ್ನು ಇಷ್ಟಪಡದವರು ಹಾಗೂ ರಾಜ್ಯದಲ್ಲಿ ಅರಾಜಕತೆಯ ವಾತಾವರಣ ಇರಬೇಕೆಂದು ಬಯಸುವವರು ಚುನಾವಣೆಯಲ್ಲಿ ನಿರಾಶೆಗೊಳ್ಳಲಿದ್ದಾರೆ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.

ಉತ್ತರ ಪ್ರದೇಶದ ಹಿಂದಿನ ಆಡಳಿತ ಮತ್ತು ಈಗಿನ ಆಡಳಿತದ ನಡುವಿನ ವ್ಯತ್ಯಾಸವನ್ನು ಜನರ ಮುಂದಿಡುವುದೇ ಬಿಜೆಪಿಯ ಪ್ರಮುಖ ಚುನಾವಣಾ ಅಸ್ತ್ರವಾಗಲಿದೆ ಎಂದು ಯೋಗಿ ಹೇಳಿದರು.

ಹಿಂದಿನ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಗೂಂಡಾರಾಜ್, ಗಲಭೆ, ಕರ್ಫ್ಯೂ ಹಾಗೂ ಅರಾಜಕತೆ ಜನರನ್ನು ಕಾಡುತ್ತಿದ್ದವು ಎಂದು ಆರೋಪಿಸಿದರು.

ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದಾಗ ಮಾತ್ರ ಕೈಗಾರಿಕೆಗಳ ಸ್ಥಾಪನೆ, ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಸಾಧ್ಯ. ತಮ್ಮ ಸರ್ಕಾರ ಈ ನಿಟ್ಟಿನಲ್ಲಿ ಹಲವು ಬದಲಾವಣೆಗಳನ್ನು ತಂದಿದೆ ಎಂದು ಸಮರ್ಥಿಸಿಕೊಂಡರು.

ಕಳೆದ ಒಂದು ದಶಕದಲ್ಲಿ ತಮ್ಮ ಸರ್ಕಾರ 2.30 ಲಕ್ಷ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದೆ. ಮತ್ತಷ್ಟು 32,000 ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಯೋಗಿ ತಿಳಿಸಿದರು.

ಪೊಲೀಸ್ ತರಬೇತಿ ಸಾಮರ್ಥ್ಯವನ್ನು ಏಕಕಾಲದಲ್ಲಿ 6,000ರಿಂದ 60,000 ಸಿಬ್ಬಂದಿಗೆ ಹೆಚ್ಚಿಸಲಾಗಿದೆ. ರಾಜ್ಯದ 18 ವಿಭಾಗೀಯ ಕೇಂದ್ರಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. 75 ಜಿಲ್ಲೆಗಳಲ್ಲೂ ಸೈಬರ್ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗಿದ್ದು, 7 ಪ್ರಮುಖ ನಗರಗಳಲ್ಲಿ ಪೊಲೀಸ್ ಕಮಿಷನರೇಟ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ಮಾತನಾಡಿದ ಯೋಗಿ ಆದಿತ್ಯನಾಥ್, ಮತದಾರರ ಪಟ್ಟಿಯ ನಿಖರತೆ ಮತ್ತು ಶುದ್ಧತೆಯನ್ನು ಕಾಪಾಡಲು ಇದು ಅಗತ್ಯ ಕ್ರಮವಾಗಿದೆ ಎಂದು ಸಮರ್ಥಿಸಿಕೊಂಡರು.

ಮರಣ ಹೊಂದಿದವರ ಹಾಗೂ ಭಾರತೀಯ ನಾಗರಿಕರಲ್ಲದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಅದೇ ರೀತಿ ಅರ್ಹತೆ ಹೊಂದಿರುವ ಪ್ರತಿಯೊಬ್ಬ ಭಾರತೀಯ ನಾಗರಿಕರ ಹೆಸರೂ ಮತದಾರರ ಪಟ್ಟಿಯಲ್ಲಿ ಇರಬೇಕು ಎಂದು ಹೇಳಿದರು.

ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಬಿಜೆಪಿ ಕಾರ್ಯಕರ್ತರು ಸಹಕರಿಸಲಿದ್ದಾರೆ ಎಂದು ತಿಳಿಸಿದರು.

ಮತಗಳ್ಳತನ, ಇವಿಎಂ ಹಾಗೂ ಚುನಾವಣಾ ಆಯೋಗದ ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳನ್ನೂ ಯೋಗಿ ಟೀಕಿಸಿದರು. ಚುನಾವಣೆಯಲ್ಲಿ ಗೆದ್ದಾಗ ತಮ್ಮ ಸಾಧನೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಸೋತಾಗ ಇವಿಎಂ, ಮತದಾರರ ಪಟ್ಟಿ ಹಾಗೂ ಚುನಾವಣಾ ಆಯೋಗವನ್ನು ದೂಷಿಸುತ್ತದೆ ಎಂದು ವ್ಯಂಗ್ಯವಾಡಿದರು.

ರಾಹುಲ್ ಗಾಂಧಿ ಅವರು ಸಾಕ್ಷ್ಯಾಧಾರಗಳೊಂದಿಗೆ ಮಾತನಾಡಬೇಕು. ಪ್ರತಿಯೊಂದು ವಿಚಾರದಲ್ಲೂ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಶ್ನಿಸುವುದು ಸರಿಯಾದ ರಾಜಕೀಯವಲ್ಲ ಎಂದು ಟೀಕಿಸಿದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ರಾಜಕೀಯ ನಿಲುವುಗಳ ಬಗ್ಗೆಯೂ ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಯೋಗಿ ಪುನರುಚ್ಚರಿಸಿದ್ದಾರೆ. 2027ರ ಚುನಾವಣೆ ತಮ್ಮ ಸರ್ಕಾರದ ಆಡಳಿತದ ಸಾಧನೆಗಳನ್ನು ಜನರ ಮುಂದಿಡುವ ಮಹತ್ವದ ಅವಕಾಶವಾಗಲಿದೆ ಎಂಬ ಸಂದೇಶ ನೀಡಿದ್ದಾರೆ.

ಚುನಾವಣೆಗೆ ಇನ್ನೂ ಸಮಯವಿದ್ದರೂ ಉತ್ತರ ಪ್ರದೇಶದಲ್ಲಿ ರಾಜಕೀಯ ಸಮರದ ಕಾವು ಈಗಿನಿಂದಲೇ ಏರತೊಡಗಿದೆ. ಯೋಗಿ ಆದಿತ್ಯನಾಥ್ ಅವರ 320ಕ್ಕೂ ಹೆಚ್ಚು ಸ್ಥಾನಗಳ ಗುರಿ ಬಿಜೆಪಿ ಕಾರ್ಯಕರ್ತರಲ್ಲಿ ಎಷ್ಟು ಹುಮ್ಮಸ್ಸು ತುಂಬಲಿದೆ? ವಿರೋಧ ಪಕ್ಷಗಳು ಇದಕ್ಕೆ ಯಾವ ರೀತಿಯ ಪ್ರತಿತಂತ್ರ ರೂಪಿಸಲಿವೆ? ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

K.M.Sathish Gowda

Join WhatsApp

Join Now

Facebook

Join Now

Read more

ಏರ್‌ಪೋರ್ಟ್ ಸಂಪರ್ಕಕ್ಕೆ ಹೆಬ್ಬಾಳ ಮಾದರಿಯ ಹೊಸ ಫ್ಲೈಓವರ್ ನಿರ್ಮಾಣದ ಚಿಂತನೆ: ಸಿಎಂ ಡಿ.ಕೆ. ಶಿವಕುಮಾರ್

ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರಿಗೆ ಸಿಹಿ ಸುದ್ದಿ: ಅರವಣ ಪ್ರಸಾದಕ್ಕೆ ಕೊರತೆಯಿಲ್ಲ, ವೆಂಡಿಂಗ್ ಯಂತ್ರಗಳ ಮೂಲಕ ಸುಲಭ ವಿತರಣೆ

ಬೆಂಗಳೂರಿನ ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: 5 ಹೊಸ ಪೊಲೀಸ್ ಕಮಿಷನರೇಟ್‌ಗಳ ರಚನೆ, ಮುಖ್ಯ ಆಯುಕ್ತರಾಗಿ ಆರ್. ಹಿತೇಂದ್ರ ನೇಮಕ

ಮಹಿಳಾ ಮೋರ್ಚಾ ಸಂಘಟನೆಯನ್ನು ಬಲಪಡಿಸಿ, ಭವಿಷ್ಯದ ನಾಯಕತ್ವಕ್ಕೆ ಸಿದ್ಧರಾಗಿ: ರೂಪಾಕುಮಾರಿ ಚೌಧರಿ

ರೈತರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಸಾಧನೆಗಳ ಪಟ್ಟಿ ಕೊಡಿ; ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ: ಸಚಿವ ಮಧು ಬಂಗಾರಪ್ಪಗೆ ಸಂಸದ ಬಿ.ವೈ. ರಾಘವೇಂದ್ರ ತಿರುಗೇಟು

ಅಡಿಕೆ ತೋಟ ತೆರವು ಪ್ರಕರಣದಲ್ಲಿ ಬಿಜೆಪಿಯ ರಾಜಕೀಯ ಬಣ್ಣ ಬಯಲು: ಮಧು ಬಂಗಾರಪ್ಪ ವಾಗ್ದಾಳಿ

Leave a Comment