ಬೆಂಗಳೂರು: ರಾಜಧಾನಿಯ ಐತಿಹಾಸಿಕ ಕಂಠೀರವ ಕ್ರೀಡಾಂಗಣವು ಶನಿವಾರದಂದು (ಮೇ 23) ಅಭೂತಪೂರ್ವ ಜನಸ್ತೋಮಕ್ಕೆ ಸಾಕ್ಷಿಯಾಯಿತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೇಂದ್ರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ‘ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು – 2026’ ರ ಉದ್ಘಾಟನಾ ಸಮಾರಂಭವು ಕೇವಲ ಕ್ರೀಡಾ ಉತ್ಸವವಾಗಿರದೆ, ಇಡೀ ರಾಜ್ಯದ ನೌಕರರ ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯನ್ನು ಪ್ರದರ್ಶಿಸುವ ಬೃಹತ್ ವೇದಿಕೆಯಾಗಿ ಮಾರ್ಪಟ್ಟಿತ್ತು. ಅದಕ್ಕೂ ಮಿಗಿಲಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಕಿಚ್ಚು ಮತ್ತು ಆ ಹೋರಾಟದ ಮುಂದಾಳತ್ವ ವಹಿಸಿರುವ ತಮ್ಮ ನಾಯಕ ಸಿ.ಎಸ್. ಷಡಾಕ್ಷರಿ ಅವರ ಮೇಲಿನ ಅತೀವ ಗೌರವ ಹಾಗೂ ನಂಬಿಕೆಯಿತ್ತು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದ 31 ಜಿಲ್ಲೆಗಳಿಂದ ಹಾಗೂ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಸಹಸ್ರಾರು ಸರ್ಕಾರಿ ನೌಕರರು, ಕ್ರೀಡಾಪಟುಗಳು ಮತ್ತು ಸಾಂಸ್ಕೃತಿಕ ಪ್ರತಿಭೆಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.

ಕ್ರೀಡಾ ಜ್ಯೋತಿ ಸ್ವಾಗತ ಮತ್ತು ವೈಭವದ ಚಾಲನೆ
ಕಾರ್ಯಕ್ರಮದ ಆರಂಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಂಚರಿಸಿ ಬಂದಿದ್ದ ಕ್ರೀಡಾ ಜ್ಯೋತಿಯನ್ನು ವೇದಿಕೆಗೆ ಅತ್ಯಂತ ಸೌಹಾರ್ದತೆಯಿಂದ ಬರಮಾಡಿಕೊಳ್ಳಲಾಯಿತು. ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಜ್ಯೋತಿಯನ್ನು ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಟಿ.ಹೆಚ್.ಎಂ. ಕುಮಾರ್ ರವರು ಆಗಮಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.


ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಟಿ.ಹೆಚ್.ಎಂ. ಕುಮಾರ್ ಚಾಲನೆ ನೀಡಿ ಮಾತನಾಡಿ ಅವರು, “ಸರ್ಕಾರಿ ನೌಕರರು ನಿರಂತರ ಸೇವಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅವರ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ಆತ್ಮವಿಶ್ವಾಸ ವೃದ್ಧಿಗೆ ಅತ್ಯಂತ ಪೂರಕವಾಗಿವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒತ್ತಡದ ಜೀವನಕ್ಕೆ ಕ್ರೀಡೆಯೇ ಸಂಜೀವಿನಿ: ಸಿ.ಎಸ್. ಷಡಾಕ್ಷರಿ
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು, ನೌಕರರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡಿದರು.
“ರಾಜ್ಯದ ಜನತೆಗೆ ದಿನದ 24 ಗಂಟೆಯೂ ನಿರಂತರ ಸೇವೆ ಸಲ್ಲಿಸುವ ನಮ್ಮ ಸರ್ಕಾರಿ ನೌಕರರು ತೀವ್ರವಾದ ಕೆಲಸದ ಒತ್ತಡದಲ್ಲಿರುತ್ತಾರೆ. ಈ ಒತ್ತಡದ ಜೀವನದಿಂದ ಹೊರಬಂದು, ನೌಕರರಲ್ಲಿ ಹೊಸ ಚೈತನ್ಯ, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಉಲ್ಲಾಸವನ್ನು ತುಂಬಲು ಈ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಒಂದು ಸಂಜೀವಿನಿಯಂತೆ ಕೆಲಸ ಮಾಡುತ್ತವೆ. ಇಲ್ಲಿ ಸೋಲು-ಗೆಲುವಿಗಿಂತಲೂ ನಾವೆಲ್ಲರೂ ಒಂದೇ ಕುಟುಂಬದವರಂತೆ ಭಾಗವಹಿಸುವುದು ಮತ್ತು ಇಲಾಖೆಗಳ ನಡುವೆ ಸೌಹಾರ್ದತೆಯನ್ನು ಬೆಳೆಸಿಕೊಳ್ಳುವುದು ಮುಖ್ಯ.”
— ಸಿ.ಎಸ್.ಷಡಾಕ್ಷರಿ

ಅಚಲ ನಾಯಕತ್ವದ ಸಾಕಾರಮೂರ್ತಿ
ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸುವ ಮೂಲಕ, ಸಿ.ಎಸ್. ಷಡಾಕ್ಷರಿ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರು ಕೇವಲ ಒಂದು ಸಂಘದ ಅಧ್ಯಕ್ಷರಲ್ಲ, ಬದಲಾಗಿ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರ ಪಾಲಿನ ಭರವಸೆಯ ಧ್ವನಿ. ಕ್ರೀಡಾಂಗಣದ ವೇದಿಕೆಯ ಮೇಲೆ ಅವರು ನಿಂತಾಗ, ಅಲ್ಲಿ ಮೌನಕ್ಕಿಂತ ಹೆಚ್ಚಾಗಿ ನೌಕರರ ಹೃದಯದ ಬಡಿತವೇ ಕೇಳಿಸುತ್ತಿತ್ತು. ಅವರ ಆವೇಶಭರಿತ ಭಾಷಣದಲ್ಲಿ ನೌಕರರ ಸಂಕಷ್ಟಗಳ ಅರಿವಿತ್ತು, ಹಕ್ಕುಗಳನ್ನು ಗೆಲ್ಲುವ ಛಲವಿತ್ತು ಮತ್ತು ಅತ್ಯಂತ ಮುಖ್ಯವಾಗಿ, ಅಖಂಡ ನೌಕರ ವರ್ಗವನ್ನು ಒಗ್ಗೂಡಿಸುವ ಕೌಶಲವಿತ್ತು.


ಕ್ರೀಡಾ ವೇದಿಕೆಯಲ್ಲಿ ಮೊಳಗಿದ ಪ್ರಮುಖ ಹಕ್ಕೊತ್ತಾಯಗಳು
ಈ ಬೃಹತ್ ಸಮಾವೇಶವನ್ನು ನೌಕರರ ನ್ಯಾಯಸಮ್ಮತ ಹಕ್ಕುಗಳ ಧ್ವನಿಯನ್ನಾಗಿ ಬಳಸಿಕೊಂಡ ರಾಜ್ಯಾಧ್ಯಕ್ಷರು, ವೇದಿಕೆಯ ಮುಖಾಂತರ ರಾಜ್ಯ ಸರ್ಕಾರಕ್ಕೆ ನೇರ ಸಂದೇಶ ರವಾನಿಸಿದರು.
- 7ನೇ ವೇತನ ಆಯೋಗದ ಜಾರಿ: ರಾಜ್ಯ ಸರ್ಕಾರಿ ನೌಕರರ ಸುದೀರ್ಘ ದಿನಗಳ ಬೇಡಿಕೆಯಾಗಿರುವ 7ನೇ ವೇತನ ಆಯೋಗದ ಶಿಫಾರಸುಗಳನ್ನು ಸರ್ಕಾರ ತಕ್ಷಣವೇ ಮತ್ತು ಯಥಾವತ್ತಾಗಿ ಜಾರಿಗೊಳಿಸಬೇಕು. ಆರ್ಥಿಕ ಸಂಕಷ್ಟಗಳ ನಡುವೆಯೂ ನೌಕರರ ಹಿತರಕ್ಷಣೆ ಕಾಯುವುದು ಸರ್ಕಾರದ ಕರ್ತವ್ಯ ಎಂದು ಒತ್ತಾಯಿಸಿದರು.
- ಹಳೇ ಪಿಂಚಣಿ ಯೋಜನೆ (OPS) ಮರುಜಾರಿ: ನೌಕರರ ನಿವೃತ್ತಿ ಜೀವನದ ಭದ್ರತೆಗೆ ಮಾರಕವಾಗಿರುವ ಎನ್.ಪಿ.ಎಸ್ (NPS) ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಜಿಪಿಎಫ್ ಆಧಾರಿತ ಹಳೇ ಪಿಂಚಣಿ ಯೋಜನೆಯನ್ನು (OPS) ಮರುಜಾರಿಗೊಳಿಸುವವರೆಗೂ ಸಂಘಟನೆಯ ಹೋರಾಟ ನಿಲ್ಲುವುದಿಲ್ಲ ಎಂದು ಸಿಂಹಗರ್ಜನೆ ಮಾಡಿದರು.

“ಒಗ್ಗಟ್ಟೇ ನಮ್ಮ ಶಕ್ತಿ” — ಕಂಠೀರವ ವೇದಿಕೆಯಲ್ಲಿ ನೌಕರರಲ್ಲಿ ಆತ್ಮವಿಶ್ವಾಸ ತುಂಬಿದ ಸಿ.ಎಸ್. ಷಡಾಕ್ಷರಿ
”ಇವತ್ತು ಕಂಠೀರವ ಕ್ರೀಡಾಂಗಣದಲ್ಲಿ ನೆರೆದಿರುವ ಈ ಜನಸಾಗರ ಕೇವಲ ಕ್ರೀಡೆಗಾಗಿ ಸೇರಿಲ್ಲ. ಇದು ಇಡೀ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಒಗ್ಗಟ್ಟು ಮತ್ತು ನಮ್ಮ ಸಂಘಟನಾ ಶಕ್ತಿಯನ್ನು ತೋರಿಸುವ ವೇದಿಕೆಯಾಗಿದೆ. ನಾವೆಲ್ಲರೂ ಜಾತಿ, ಭೇದ ಹಾಗೂ ಇಲಾಖೆಗಳ ತಾರತಮ್ಯ ಮರೆತು ಒಂದೇ ವೇದಿಕೆಯಡಿ ಒಗ್ಗಟ್ಟಾಗಿ ನಿಂತಿದ್ದೇವೆ. ಈ ಒಗ್ಗಟ್ಟಿನ ಬಲದಿಂದಲೇ ನಮ್ಮ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಿದ್ದೇವೆ,” ಎಂದು ಸಿ.ಎಸ್. ಷಡಾಕ್ಷರಿ ಅವರು ನೌಕರರಲ್ಲಿ ಆತ್ಮವಿಶ್ವಾಸ ತುಂಬಿದರು.
ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸಂಘದ ಎಲ್ಲಾ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು ಹಾಗೂ ಕ್ರೀಡಾಪಟುಗಳಿಗೆ ರಾಜ್ಯಾಧ್ಯಕ್ಷರು ವಿಶೇಷ ಅಭಿನಂದನೆ ಸಲ್ಲಿಸಿದರು. “ಸಂಘದ ಬಲವೇ ನೌಕರರ ಒಗ್ಗಟ್ಟು. ಈ ಐಕ್ಯತೆ ಇನ್ನಷ್ಟು ಗಟ್ಟಿಯಾಗಬೇಕು” ಎಂದು ಕರೆ ನೀಡಿದರು.

ಹಕ್ಕೊತ್ತಾಯದ ರಣಕಹಳೆ: ನೌಕರರ ಪಾಲಿನ ‘ಕವಚ’
7ನೇ ವೇತನ ಆಯೋಗದ ಜಾರಿ ಮತ್ತು ಹಳೇ ಪಿಂಚಣಿ ಯೋಜನೆ (OPS) ಮರುಜಾರಿಯಂತಹ ಜಟಿಲ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುವಾಗ, ಷಡಾಕ್ಷರಿ ಅವರು ತೋರಿದ ದೃಢತೆ ನಿಜಕ್ಕೂ ಶ್ಲಾಘನೀಯ. ಅವರು ವೇದಿಕೆಯ ಮೇಲೆ ನಿಂತು “ನಮ್ಮ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ವಿಶ್ರಮಿಸುವುದಿಲ್ಲ” ಎಂದು ಘರ್ಜಿಸಿದಾಗ, ಪ್ರತಿಯೊಬ್ಬ ನೌಕರನಲ್ಲೂ ಹೊಸ ಭರವಸೆ ಚಿಗುರಿತು. ಷಡಾಕ್ಷರಿ ಅವರ ಮೇಲಿರುವ ನಂಬಿಕೆ ಎಷ್ಟೆಂದರೆ, ಅವರ ಮಾತು ಅಂತಿಮ ತೀರ್ಪು ಎಂಬಷ್ಟು ಗೌರವ ನೌಕರರಿಗೆ ಅವರ ಮೇಲೆ ಇದೆ.

ಕ್ರೀಡಾ ಸ್ಫೂರ್ತಿಯಲ್ಲಿ ಸಾಂಸ್ಕೃತಿಕ ಕಲೆಗಾರಿಕೆ
ಒಂದೆಡೆ ಹಕ್ಕುಗಳ ಹೋರಾಟ, ಇನ್ನೊಂದೆಡೆ ನೌಕರರ ಮಾನಸಿಕ ಒತ್ತಡವನ್ನು ಹೋಗಲಾಡಿಸುವ ಕ್ರೀಡಾ ಕೂಟ, ಹೀಗೆ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವ ಷಡಾಕ್ಷರಿ ಅವರ ಕಾರ್ಯಕ್ಷಮತೆ ಅಸಾಧಾರಣವಾದುದು. ಸಂಘಟನೆಯ ಜವಾಬ್ದಾರಿಯ ನಡುವೆಯೂ ಕಲಾ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ವೇದಿಕೆ ಕಲ್ಪಿಸುವ ಅವರ ವಿಶಾಲ ಮನೋಭಾವ, ಸಂಘದ ಕ್ರೀಡಾಕೂಟವನ್ನು ಸಾಂಸ್ಕೃತಿಕ ಹಬ್ಬವನ್ನಾಗಿ ಪರಿವರ್ತಿಸಿದೆ.
ನೌಕರರ ಮನದಲ್ಲಿ ಶಾಶ್ವತ ನಾಯಕ ಸಿ.ಎಸ್. ಷಡಾಕ್ಷರಿ
ಈ ಕ್ರೀಡಾಕೂಟದ ಯಶಸ್ಸಿನ ಹಿಂದೆ ಸಿ.ಎಸ್. ಷಡಾಕ್ಷರಿ ಅವರ ಶ್ರಮ, ದೂರದೃಷ್ಟಿ ಮತ್ತು ಅವರ ಸಂಕಲ್ಪವಿದೆ. ಇಡೀ ರಾಜ್ಯದ ಸರ್ಕಾರಿ ನೌಕರರು ಇಂದು ಷಡಾಕ್ಷರಿ ಅವರ ಹಿಂದೆ ಒಂದು ಬಲಿಷ್ಠ ಶಕ್ತಿಯಾಗಿ ನಿಂತಿದ್ದಾರೆ. ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದಲ್ಲಿ ಸರ್ಕಾರಿ ನೌಕರರ ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ನೌಕರರ ಬಾಳು ಹಸನಾಗಲಿ ಎಂಬುದು ಪ್ರತಿಯೊಬ್ಬ ನೌಕರನ ಆಶಯ.


“ನಾಯಕನಾದವನು ನೌಕರನ ಕಣ್ಣೀರು ಒರೆಸಬೇಕು, ಅವರ ನಗುವಿನಲ್ಲಿ ಭಾಗಿಯಾಗಬೇಕು” ಎಂಬ ಮಾತನ್ನು ಅಕ್ಷರಶಃ ಪಾಲಿಸುತ್ತಿರುವ ಸಿ.ಎಸ್. ಷಡಾಕ್ಷರಿ, ನಿಜಕ್ಕೂ ಸರ್ಕಾರಿ ನೌಕರರ ಪಾಲಿನ ಆದರ್ಶ ನಾಯಕ.
ಕ್ರೀಡೆಯ ಮೂಲಕ ನೌಕರರ ಮನೋಸ್ಥೈರ್ಯ ಹೆಚ್ಚಿಸಿದ ಸಿ.ಎಸ್. ಷಡಾಕ್ಷರಿ
ಕೆಲಸದ ಒತ್ತಡದಲ್ಲಿ ನೊಂದಿರುವ ನೌಕರರಿಗೆ, “ನೀವೂ ಮನುಷ್ಯರೇ, ನಿಮಗೂ ಉಲ್ಲಾಸ ಬೇಕು” ಎಂದು ಅರಿತುಕೊಂಡು, ಈ ಬೃಹತ್ ಕ್ರೀಡಾಕೂಟದ ಮೂಲಕ ನೌಕರರ ಬದುಕಿನಲ್ಲಿ ನಗು ಮೂಡಿಸಿದ ಕೀರ್ತಿ ಸಿ.ಎಸ್. ಷಡಾಕ್ಷರಿ ಅವರದ್ದೇ. ಅವರು ಕ್ರೀಡಾಂಗಣದಲ್ಲಿ ನೌಕರರೊಂದಿಗೆ ಬೆರೆತ ರೀತಿ, ಒಬ್ಬ ನಾಯಕನಾಗಿ ಅವರ ಸಾತ್ವಿಕ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಗಿರಿಗೌಡ ಹೆಚ್, ರಾಜ್ಯ ಖಜಾಂಚಿಗಳಾದ ವಿ.ವಿ. ಶಿವರುದ್ರಯ್ಯ, ಗೌರವಾಧ್ಯಕ್ಷರಾದ ಎಸ್. ಬಸವರಾಜು, ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಳ್ಳಾರಿ, ಹಿರಿಯ ಉಪಾಧ್ಯಕ್ಷರಾದ ನಾಗರಾಜ ಜುಮ್ಮನವರ, ಸುರೇಶ್ ಶೆಡ್ಯಶಾಳ, ಆರ್. ಮೋಹನ್ ಕುಮಾರ್, ಶಂಭುಗೌಡ, ಹರ್ಷಾ, ಸದಾನಂದ, ವೇಣುಗೋಪಾಲ್, ಚೇತನ್ ಸೇರಿದಂತೆ ಅನೇಕ ಪ್ರಮುಖರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಾವಿರಾರು ಸರ್ಕಾರಿ ನೌಕರರು ಉಪಸ್ಥಿತರಿದ್ದರು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಮಹೋತ್ಸವವು ಸರ್ಕಾರಿ ನೌಕರರ ಐಕ್ಯತೆ, ಶಕ್ತಿ ಮತ್ತು ಹೋರಾಟದ ಮನೋಭಾವವನ್ನು ಮತ್ತೊಮ್ಮೆ ರಾಜ್ಯದ ಮುಂದಿಟ್ಟ ಐತಿಹಾಸಿಕ ಕಾರ್ಯಕ್ರಮವಾಗಿ ದಾಖಲಾಗಿತು.





