ಕೊಪ್ಪಳ: ಸ್ಥಳೀಯ ನಗರಸಭೆ ಆವರಣದಲ್ಲಿ ಕಳೆದ 220 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ “ಬಲ್ಡೋಟ ಹಠಾವೋ, ಕೊಪ್ಪಳ ಬಚಾವೋ” ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಪೂರ್ಣ ಬೆಂಬಲ ಘೋಷಿಸಿದೆ. ಇಂದು ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ ಅವರು ಬಂಡವಾಳಶಾಹಿಗಳ ಪರವಾಗಿ ನಿಲ್ಲುವ ಸರ್ಕಾರ ಹಾಗೂ ಅಧಿಕಾರಿಗಳ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು, ರಾಜಕಾರಣಿಗಳಿಗೆ ಕಾನೂನಿನ ಅರಿವಿಲ್ಲ: ಹೆಚ್.ಆರ್. ಬಸವರಾಜಪ್ಪ ಕಿಡಿ
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಆರ್. ಬಸವರಾಜಪ್ಪ, “ಪ್ರಸ್ತುತ ನಿಯಮಗಳ ಪ್ರಕಾರ ಸಾರ್ವಜನಿಕ ಕೆರೆಗಳು, ಬಿ-ಖರಾಬು ಜಮೀನುಗಳು ಹಾಗೂ ನಕಾಶೆಯಲ್ಲಿರುವ ದಾರಿಗಳನ್ನು ಯಾರಿಗೂ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಸಾಮಾನ್ಯ ಜನರಿಗೆ ಸಿಗದ ಈ ಸವಲತ್ತುಗಳು ಬಂಡವಾಳಶಾಹಿ ಉದ್ಯಮಿಗಳಿಗೆ ಮಾತ್ರ ತಕ್ಷಣವೇ ಮಂಜೂರಾಗುತ್ತಿವೆ. ಇದು ಯಾವ ನ್ಯಾಯ?” ಎಂದು ಪ್ರಶ್ನಿಸಿದರು.
“ಇಂದಿನ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಕಾನೂನಿನ ಕನಿಷ್ಠ ಅರಿವೂ ಇಲ್ಲದಂತೆ ವರ್ತಿಸುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಮಾನ್ಯ ರೈತರು ತಮ್ಮ ಹಕ್ಕುಗಳಿಗಾಗಿ ನ್ಯಾಯಾಲಯದ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಸಾರ್ವಜನಿಕರು ಸೂಕ್ತ ರೀತಿಯಲ್ಲಿ ಕಾನೂನು ಹೋರಾಟ ನಡೆಸಿ ನ್ಯಾಯಾಲಯದ ಮೆಟ್ಟಿಲೇರಿದರೆ, ಇಲ್ಲಿನ ಭ್ರಷ್ಟ ಅಧಿಕಾರಿಗಳು ಜೈಲು ಪಾಲಾಗುವುದು ಖಂಡಿತ,” ಎಂದು ಅವರು ಎಚ್ಚರಿಸಿದರು.

ಗಾಳಿ, ನೀರು ಕಲುಷಿತ: ನೇರ ಕಾರ್ಯಾಚರಣೆಗೆ ಕರೆ
ಜಿಲ್ಲೆಯಲ್ಲಿ ಪರಿಸರ ಮಾಲಿನ್ಯದ ಭೀತಿಯನ್ನು ಉಲ್ಲೇಖಿಸಿದ ಅವರು, “ಇವತ್ತು ಕೊಪ್ಪಳದಲ್ಲಿ ಕುಡಿಯುವ ನೀರು ಮತ್ತು ಗಾಳಿ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಜನರ ಆರೋಗ್ಯ ಮತ್ತು ಉತ್ತಮ ಪರಿಸರ ನಿರ್ಮಾಣದ ಪರವಾಗಿದೆಯೋ ಅಥವಾ ಬಂಡವಾಳಶಾಹಿಗಳ ಹಿತರಕ್ಷಣೆಯ ಪರವಾಗಿದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ,” ಎಂದು ಒತ್ತಾಯಿಸಿದರು.
ಧರಣಿಗೆ ಸೀಮಿತವಾಗದೆ ‘ನೇರ ಕಾರ್ಯಾಚರಣೆ’: ‘ಬಲ್ಡೋಟ ಹಠಾವೋ ಚಲೋ’ಗೆ ಕರೆ!
ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅಗತ್ಯವನ್ನು ಪ್ರತಿಪಾದಿಸಿದ ಬಸವರಾಜಪ್ಪ, “ಇನ್ನು ಮುಂದೆ ನಾವು ಕೇವಲ ಧರಣಿಗೆ ಸೀಮಿತವಾಗದೆ ‘ನೇರ ಕಾರ್ಯಾಚರಣೆ’ಯ ಹೋರಾಟವನ್ನು ರೂಪಿಸಬೇಕಾಗಿದೆ. ಇದಕ್ಕಾಗಿ ಜಿಲ್ಲೆಯ ಪ್ರತಿಯೊಂದು ಪ್ರಗತಿಪರ ಸಂಘಟನೆಗಳ ತುರ್ತು ಸಭೆ ಕರೆದು ಚರ್ಚಿಸಲಾಗುವುದು,” ಎಂದು ತಿಳಿಸಿದರು.
“ಶೀಘ್ರದಲ್ಲೇ ಬೃಹತ್ ಮಟ್ಟದ ‘ಬಲ್ಡೋಟ ಹಠಾವೋ ಚಲೋ’ ಚಳುವಳಿಯನ್ನು ಹಮ್ಮಿಕೊಳ್ಳಲಿದ್ದು, ನಮ್ಮ ಸಂಘಟನೆಯು ಸಂಪೂರ್ಣ ಶಕ್ತಿಯೊಂದಿಗೆ ಇದರಲ್ಲಿ ಭಾಗವಹಿಸಲಿದೆ” ಎಂದು ಅವರು ರಣಕಹಳೆ ಮೊಳಗಿಸಿದರು.

ಈ ಸಂದರ್ಭದಲ್ಲಿ ಚಳುವಳಿಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಪಾಟೀಲ್, ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಹೊನ್ನೂರು ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ನಜೀರ್ ಸಾಬ್ ಮೂಲಿಮನಿ, ಜಿಲ್ಲಾಧ್ಯಕ್ಷರಾದ ಗಣೇಶ್ ರೆಡ್ಡಿ, ಪ್ರಮುಖ ಮುಖಂಡರಾದ ಶರಣಯ್ಯ ಸೇರಿದಂತೆ ಹತ್ತಾರು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ರೈತ ಮುಖಂಡರು ಹಾಗೂ ನೂರಾರು ಸತ್ಯಾಗ್ರಹಿಗಳು ಉಪಸ್ಥಿತರಿದ್ದರು.







