ಬಾಂಗ್ಲಾದೇಶಿ ವಲಸಿಗರ ರಕ್ಷಣೆಗೆ ಕಾಂಗ್ರೆಸ್ ಸಂಚು; ವಿಶೇಷ ಮತದಾರರ ಪರಿಷ್ಕರಣೆ (SIR) ಪ್ರಕ್ರಿಯೆ ಬುಡಮೇಲು ಮಾಡಲು ಯತ್ನ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ
ನವದೆಹಲಿ: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರ ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡಲು ಸಂಚು ರೂಪಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಆಯುಕ್ತರನ್ನು ಭೇಟಿ ಮಾಡಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಿಯೋಗ ಅಧಿಕೃತ ದೂರು ಸಲ್ಲಿಸಿದೆ.
ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ, “ನಮ್ಮ ಮನವಿಯನ್ನು ಚುನಾವಣಾ ಆಯೋಗವು ಕೂಲಂಕಷವಾಗಿ ಪರಿಶೀಲಿಸಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ” ಎಂದು ತಿಳಿಸಿದರು.

ನಿಯಮಾವಳಿಗಳನ್ನು ಗಾಳಿಗೆ ತೂರಿದ ಕಾಂಗ್ರೆಸ್ ಸರ್ಕಾರ
ಕರ್ನಾಟಕದಲ್ಲಿ ಮೊದಲು ವಿಶೇಷ ಮತದಾರರ ಪರಿಷ್ಕರಣೆ (SIR) ಆರಂಭವಾದಾಗ ಅದನ್ನು ವಿರೋಧಿಸಿದ್ದ ಕಾಂಗ್ರೆಸ್, ಈಗ ಅಧಿಕಾರಕ್ಕೆ ಬಂದ ಮೇಲೆ ಇಡೀ ಪ್ರಕ್ರಿಯೆಯಲ್ಲೇ ತನಗೆ ಬೇಕಾದಂತೆ ಅಕ್ರಮಗಳನ್ನು ಎಸಗುತ್ತಿದೆ ಎಂದು ಜೋಶಿ ದೂರಿದರು.
“ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಬಿಎಲ್ಒಗಳು (ಮತಗಟ್ಟೆ ಮಟ್ಟದ ಅಧಿಕಾರಿಗಳು) ಮನೆ ಮನೆಗೆ ತೆರಳಿ ಎನ್ಯೂಮರೇಷನ್ ಫಾರಂಗಳನ್ನು ಹಂಚಬೇಕು. ಒಂದು ಮನೆಗೆ ಕನಿಷ್ಠ ಮೂರು ಬಾರಿಯಾದರೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು. ಆದರೆ, ಕರ್ನಾಟಕದಲ್ಲಿ ಮದರಸಾ, ಮಸೀದಿ, ದರ್ಗಾ, ಸಮುದಾಯ ಭವನ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರ ಮನೆಗಳಲ್ಲಿ ಜನರನ್ನು ಒಟ್ಟಿಗೆ ಸೇರಿಸಿ ಅರ್ಜಿಗಳನ್ನು ತುಂಬಿಸಲಾಗುತ್ತಿದೆ. ಇದು ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಹಾಳುಮಾಡುತ್ತಿದ್ದು, ಗೊಂದಲ ಸೃಷ್ಟಿಸಿದೆ” ಎಂದು ಅವರು ವಿವರಿಸಿದರು.

ಮೃತರ ಹೆಸರನ್ನೂ ತೆಗೆಯದಂತೆ ಮೌಖಿಕ ಆದೇಶ!
ಸಾಮೂಹಿಕವಾಗಿ ಇಷ್ಟು ತರಾತುರಿಯಲ್ಲಿ ಮತಪಟ್ಟಿ ಪರಿಷ್ಕರಣೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, “ಯಾವುದೇ ಮತದಾರ ಮೃತಪಟ್ಟಿದ್ದರೂ ಅವರ ಹೆಸರನ್ನು ಮತಪಟ್ಟಿಯಿಂದ ಸದ್ಯಕ್ಕೆ ಡಿಲೀಟ್ ಮಾಡಬಾರದು ಎಂಬ ಮೌಖಿಕ ಸೂಚನೆ ಮೇಲಿಂದ ಬಂದಿದೆ” ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಬಿಎಲ್ಎಗಳಿಗೆ (ಬುತ್ ಮಟ್ಟದ ಏಜೆಂಟರು) ಯಾವುದೇ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಜೋಶಿ ಆರೋಪಿಸಿದರು.
ನಕಲಿ ಸಂಬಂಧಗಳ ಸೃಷ್ಟಿ
ಚುನಾವಣಾ ಆಯೋಗದ ನಿಯಮದ ಪ್ರಕಾರ, ಹಳೆಯ ಮತಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಈಗ ಹೊಸದಾಗಿ ಅರ್ಜಿ ಸಲ್ಲಿಸಲು ತಂದೆ, ತಾಯಿ, ಅಜ್ಜ ಅಥವಾ ಅಜ್ಜಿಯಂತಹ ರಕ್ತಸಂಬಂಧಿಕರ ದಾಖಲೆಗಳನ್ನು ನೀಡಬೇಕು. ಆದರೆ, ಕರ್ನಾಟಕದಲ್ಲಿ ಸೋದರಮಾವ, ಕಾಕಾ ಮುಂತಾದ ಸಿಕ್ಕಸಿಕ್ಕವರ ಸಂಬಂಧಗಳನ್ನು ತೋರಿಸಿ ಕಾನೂನುಬಾಹಿರವಾಗಿ ಫಾರಂ ತುಂಬಿಸಲಾಗುತ್ತಿದೆ. ಈ ಎಲ್ಲ ಸಾಕ್ಷ್ಯಗಳನ್ನು ಆಯೋಗದ ಗಮನಕ್ಕೆ ತರಲಾಗಿದೆ ಎಂದರು.
ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ ಮತದಾನದ ಹಕ್ಕು?
ಹುಬ್ಬಳ್ಳಿ, ಧಾರವಾಡ, ಮೈಸೂರು ಮತ್ತು ಬೆಂಗಳೂರಿನ ಪ್ರಮುಖ ವಾರ್ಡ್ಗಳಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಮತಪಟ್ಟಿಗೆ ಸೇರಿಸುವ ದೊಡ್ಡ ಷಡ್ಯಂತ್ರ ನಡೆದಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, “ಕರ್ನಾಟಕದಲ್ಲಿ 20 ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿಯರು ಇದ್ದಾರೆ ಎಂದು ಸ್ವತಃ ಸಚಿವರೇ ಒಪ್ಪಿಕೊಂಡಿದ್ದಾರೆ. ಅಂತಹವರಿಗೆ ಆಧಾರ್ ಕಾರ್ಡ್, ವೋಟರ್ ಐಡಿ ನೀಡಿ ರಾಜ್ಯ ಸರ್ಕಾರವೇ ರಕ್ಷಣೆ ನೀಡುತ್ತಿದೆ. ಇವರನ್ನು ಪತ್ತೆಹಚ್ಚಿ ಮತಪಟ್ಟಿಯಿಂದ ಹೊರಹಾಕಬೇಕು” ಎಂದು ಆಯೋಗಕ್ಕೆ ಒತ್ತಾಯಿಸಿರುವುದಾಗಿ ತಿಳಿಸಿದರು. ಜೊತೆಗೆ, ಈ ಅಕ್ರಮಗಳಿಗೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳನ್ನೊಳಗೊಂಡ ಪೆನ್ಡ್ರೈವ್ ಅನ್ನು ಆಯೋಗಕ್ಕೆ ಹಸ್ತಾಂತರಿಸಲಾಗಿದೆ ಎಂದರು.
”ನಮ್ಮ ಬೇಡಿಕೆ ಯಾವುದೇ ಒಂದು ನಿರ್ದಿಷ್ಟ ಸಮುದಾಯದ ಹೆಸರನ್ನು ಮತಪಟ್ಟಿಯಿಂದ ಹೊರಗಿಡಬೇಕೆಂಬುದಲ್ಲ. ಆಯೋಗದ ಮಾರ್ಗಸೂಚಿಗಳು ಸರಿಯಾಗಿ ಪಾಲನೆಯಾಗಬೇಕು ಮತ್ತು ದೇಶದ ಭದ್ರತೆಗೆ ಕುತ್ತು ತರುವ ಅಕ್ರಮ ನುಸುಳುಕೋರರಿಗೆ ಮತದಾನದ ಹಕ್ಕು ಸಿಗಬಾರದು ಎಂಬುದಷ್ಟೇ ನಮ್ಮ ಒತ್ತಾಯ” ಎಂದು ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು. ಕೆಲವು ಕಡೆಗಳಲ್ಲಿ ಬಿಎಲ್ಒಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಬದಲು ಕಾಂಗ್ರೆಸ್ ಪಕ್ಷದ ಕರಪತ್ರಗಳನ್ನು ಹಂಚುತ್ತಿದ್ದಾರೆ ಎಂದು ಅವರು ದೂರಿದರು.
ನಿಯೋಗದಲ್ಲಿದ್ದ ಪ್ರಮುಖ ನಾಯಕರು
ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ ಈ ಉನ್ನತ ಮಟ್ಟದ ನಿಯೋಗದಲ್ಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಸಂಸದ ಮಲ್ಲೇಶ್ ಬಾಬು ಹಾಗೂ ಹಿರಿಯ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.







