ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸ್ವಾರ್ಥದ ಬದುಕಿನಿಂದ ಸಮಾಜದ ಏಳಿಗೆ ಸಾಧ್ಯವಿಲ್ಲ; ಸತ್ಯ, ಶುದ್ಧತೆ ಮತ್ತು ಸದಾಚಾರದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಶ್ರೀ ರಂಭಾಪುರಿ ಜಗದ್ಗುರುಗಳು

On: July 6, 2026 10:57 PM
Follow Us:

ಕಲಬುರಗಿ, ಜುಲೈ 6: ವ್ಯಕ್ತಿಯ ಬದುಕಿನಲ್ಲಿ ನಂಬಿಕೆ, ವಿಶ್ವಾಸ, ಸತ್ಯ ಮತ್ತು ಸಂಸ್ಕಾರಗಳು ಗಟ್ಟಿಯಾಗಿ ಬೇರೂರಿದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯ. ಕೇವಲ ಬುದ್ಧಿಶಕ್ತಿ ಬೆಳೆದರೆ ಸಾಲದು, ಅದರೊಂದಿಗೆ ಮಾನವೀಯ ಮೌಲ್ಯಗಳು, ನೈತಿಕತೆ ಹಾಗೂ ಸಂಸ್ಕಾರಗಳೂ ಬೆಳೆಯಬೇಕು. ಸತ್ಯ, ಶುದ್ಧತೆ ಮತ್ತು ಸದಾಚಾರದ ನೆಲೆಯಲ್ಲಿ ರೂಪುಗೊಳ್ಳುವ ಸಂಸ್ಕಾರಗಳಿಂದಲೇ ಉತ್ತಮ ಸಂಸ್ಕೃತಿ ಬೆಳೆಯುತ್ತದೆ ಎಂದು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಕಲಬುರಗಿ ನಗರದ ಮುಕ್ತಾಂಪುರದಲ್ಲಿರುವ ಶ್ರೀ ಬಸವಣ್ಣ ದೇವಾಲಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಾಲಾಧಾರಿಗಳ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಂದಿನ ಸಮಾಜದಲ್ಲಿ ನೈತಿಕ ಮೌಲ್ಯಗಳ ಕುಸಿತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

“ಸ್ವಾರ್ಥದ ಬದುಕು ಬಿಟ್ಟು ಸಮಾಜಮುಖಿ ಜೀವನ ರೂಢಿಸಿಕೊಳ್ಳಿ”: ರಂಭಾಪುರಿ ಶ್ರೀಗಳು

ಇಂದಿನ ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಪ್ರಗತಿ ಮತ್ತು ಸ್ವಾರ್ಥದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದು, ದೇಶ, ಧರ್ಮ, ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಯ ಕಡೆಗೆ ತೋರಬೇಕಾದ ಬದ್ಧತೆ ಕುಗ್ಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಆದರ್ಶ ಜೀವನವನ್ನು ರೂಪಿಸಿಕೊಳ್ಳಲು ಮೌಲ್ಯಾಧಾರಿತ ಜೀವನಶೈಲಿ ಅನಿವಾರ್ಯವಾಗಿದೆ. ಸದ್ಗುಣಿಗಳ ಸಹವಾಸ ವ್ಯಕ್ತಿತ್ವವನ್ನು ರೂಪಿಸುತ್ತದೆ. ಸಂಸ್ಕಾರಯುತ ಜೀವನದಿಂದ ಕುಟುಂಬದಲ್ಲಿ ಸಾಮರಸ್ಯ, ಸಮಾಜದಲ್ಲಿ ಸೌಹಾರ್ದತೆ ಹಾಗೂ ರಾಷ್ಟ್ರದಲ್ಲಿ ಶಾಂತಿ ನೆಲೆಸುತ್ತದೆ ಎಂದು ಶ್ರೀಗಳು ತಿಳಿಸಿದರು.

“ಗುರುಭಕ್ತಿ, ಸಮಾಜಸೇವೆ ಮತ್ತು ಶಿಸ್ತಿನ ಬದುಕು ಸಮಾಜಕ್ಕೆ ಮಾದರಿ: ಶಿವಾಚಾರ್ಯರು”

ವೀರಶೈವ ಧರ್ಮವು ಸಮಸ್ತ ಮಾನವಕುಲದ ಒಳಿತನ್ನು ಬಯಸುವ ಧರ್ಮವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ಬೋಧಿಸಿದ ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸಂದೇಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ. ಗುರುಪರಂಪರೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರುನಾಮ ಸ್ಮರಣೆ, ಧರ್ಮಪ್ರಚಾರ ಮತ್ತು ಸಮಾಜಸೇವೆಯಲ್ಲಿ ತೊಡಗಿರುವ ರೇವಣಸಿದ್ಧೇಶ್ವರ ಮಾಲಾಧಾರಿಗಳ ಸೇವೆ ಶ್ಲಾಘನೀಯವಾಗಿದೆ. 25 ವರ್ಷಗಳ ಸೇವಾ ಪಯಣವನ್ನು ರಜತ ಮಹೋತ್ಸವವಾಗಿ ಆಚರಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಹೊನ್ನಕಿರಣಗಿ ಚಂದ್ರಗುಂಡ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧ್ಯಾತ್ಮಿಕ ಜ್ಞಾನ, ಗುರುಭಕ್ತಿ ಹಾಗೂ ಪರಿಶ್ರಮದಿಂದ ವ್ಯಕ್ತಿಯ ಜೀವನ ಸಾರ್ಥಕವಾಗುತ್ತದೆ. ಯಶಸ್ಸು ಸಾಧಿಸಲು ಶ್ರದ್ಧೆ, ಶಿಸ್ತು ಮತ್ತು ಸಾಧನೆಯ ಮಾರ್ಗವನ್ನು ಅನುಸರಿಸಬೇಕು. ಗುರುಪೀಠದ ಪರಂಪರೆಯ ಮೇಲಿನ ಮಾಲಾಧಾರಿಗಳ ನಿಷ್ಠೆ ಮತ್ತು ಭಕ್ತಿ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಬಾಳೆಹೊನ್ನೂರಿನ ಖಾಸಾ ಶಾಖಾ ಮಠದ ಶಿವಮೂರ್ತಿ ಶಿವಾಚಾರ್ಯರು ಹಾಗೂ ಗದ್ದುಗೆಮಠದ ಚರಲಿಂಗ ಸ್ವಾಮೀಜಿ ಗುರುಭಕ್ತಿ, ಸೇವಾ ಮನೋಭಾವ ಮತ್ತು ಧಾರ್ಮಿಕ ಜೀವನದ ಮಹತ್ವವನ್ನು ವಿವರಿಸಿದರು. ಶ್ರೀನಿವಾಸ ಸರಡಗಿಯ ಡಾ. ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಯೋಗ, ಧ್ಯಾನ ಹಾಗೂ ಆಧ್ಯಾತ್ಮಿಕ ಸಾಧನೆಯ ಮೂಲಕ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು. ಗುರುನಾಮ ಸ್ಮರಣೆ ಮತ್ತು ಗುರುಕೃಪೆಯೇ ಮಾನವ ಬದುಕಿನ ನಿಜವಾದ ಸಂಪತ್ತು ಎಂದು ಹೇಳಿದರು.

ಬಸವಣ್ಣ ಸೇವಾ ಸಮಿತಿಯ ಅಧ್ಯಕ್ಷ ಶಾಂತಕುಮಾರ ಬಳಗುಂದಿ, ನಾರಾಯಣ ಸಿಂಗಾಡೆ, ಶಿವಶರಣಪ್ಪ ಸಿರಿ, ಧರ್ಮಪ್ರಕಾಶ ಪಾಟೀಲ್, ಡಾ. ಜಗನ್ನಾಥ ಬಿಜಾಪುರ, ಶಿವಶಂಕರ್ ಎಸ್. ಹೊಸಗೌಡ, ಸಂಗಣ್ಣ ಧೂಳಗುಂಡಿ, ಸಿದ್ರಾಮಪ್ಪ ಎಸ್. ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಾಲಾಧಾರಿಗಳ ಸೇವಾ ಸಮಿತಿಯ ಅಧ್ಯಕ್ಷ ರೇಣುಕಾನಂದ ಚೌಧರಿ, ಉಪಾಧ್ಯಕ್ಷ ದೇವೇಂದ್ರಪ್ಪ ಹಾಲಪ್ಪಗೋಳ ಹಾಗೂ ಪದಾಧಿಕಾರಿಗಳು, ಸದಸ್ಯರು ಮತ್ತು ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಾಲಾ ಹಿರೇಮಠದ ಗುರುಮೂರ್ತಿ ಶಿವಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಿನೋದ ದುಡಗಿ ಸ್ವಾಗತಿಸಿದರು. ಸೈದಪ್ಪ ಸಪ್ಪನಗೋಳ ಮತ್ತು ತಂಡದವರಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಬಳಿಕ ಅನ್ನದಾಸೋಹ ಏರ್ಪಡಿಸಲಾಗಿತ್ತು.

K.M.Sathish Gowda

Join WhatsApp

Join Now

Facebook

Join Now

Read more

ಜಗಜ್ಯೋತಿ ಬಸವಣ್ಣ ಹಾಗೂ ಅಕ್ಕ ಮಹಾದೇವಿಯವರಿಗೆ ಅಗೌರವ: ಬ್ಯಾನರ್‌ನಲ್ಲಿ ಶರಣರ ಭಾವಚಿತ್ರಗಳನ್ನು ಕೆಳಭಾಗಕ್ಕೆ ತಳ್ಳಿದ ಶರಣ ಸಾಹಿತ್ಯ ಪರಿಷತ್ತಿನ ನಡೆಗೆ ಬಸವಭಕ್ತರ ತೀವ್ರ ಖಂಡನೆ

ಸಿದ್ಧಗಂಗಾ ಪುಣ್ಯಭೂಮಿಯಲ್ಲಿ ಜ್ಞಾನ-ಸಂಸ್ಕಾರದ ಅನಾವರಣ; “ಕೋಟಿ ಕೊಟ್ಟರೂ ಸಿಗದ ಸಂಸ್ಕಾರ ಶ್ರೀ ಮಠದಲ್ಲಿ ಉಚಿತ”: ಡಾ. ರಾಹುಲ್ ದೇವರಾಜ್

ರಾಜ್ಯದಿಂದ ರಾಷ್ಟ್ರಮಟ್ಟದವರೆಗೆ ವೀರಶೈವ-ಲಿಂಗಾಯತ ಸಮಾಜದ ಐಕ್ಯತೆಗೆ ಹೊಸ ದಿಕ್ಕು: ಪ್ರದೀಪ್ ಕಂಕಣವಾಡಿ ಅವರ ಸಂಘಟನಾ ಚತುರತೆಗೆ ವ್ಯಾಪಕ ಮೆಚ್ಚುಗೆ

ಬಸವಕೇಂದ್ರದಲ್ಲಿ ಫ.ಗು. ಹಳಕಟ್ಟಿ ಅವರ ಜನ್ಮದಿನೋತ್ಸವ ಆಚರಣೆ; ಸ್ವತಂತ್ರ ವಿಚಾರಧಾರೆಗೆ ಮುಕ್ತ ಅವಕಾಶ ಕಲ್ಪಿಸಿದ ಧರ್ಮವೇ ವಚನ ಧರ್ಮ: ಹಿರಿಯ ಸಾಹಿತಿ ಬಸವರಾಜ ಸಾದರ

ಕನ್ನಡಕ್ಕೆ ಮಹರ್ಷಿ ಅರವಿಂದರ ವಿಚಾರಧಾರೆ ಪರಿಚಯಿಸಿದವರು ಮಧುರಚೆನ್ನರು: ಡಾ.ಬಸವ ಮರುಳಸಿದ್ಧ ಸ್ವಾಮೀಜಿ

ಶಿಕ್ಷಣ, ಆರೋಗ್ಯ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಬೆರೆಸಬೇಡಿ; ಸದ್ಗುಣ ಮತ್ತು ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧವಾಗುತ್ತದೆ: ಶ್ರೀ ರಂಭಾಪುರಿ ಜಗದ್ಗುರುಗಳು

Leave a Comment