ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿಕ್ಷಣ, ಆರೋಗ್ಯ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಬೆರೆಸಬೇಡಿ; ಸದ್ಗುಣ ಮತ್ತು ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧವಾಗುತ್ತದೆ: ಶ್ರೀ ರಂಭಾಪುರಿ ಜಗದ್ಗುರುಗಳು

On: July 1, 2026 11:04 PM
Follow Us:

ಹೊನ್ನಾಳಿ: “ಯಾವ ಸಂಪತ್ತಿಗಾಗಿ ಜೀವ ಜಗತ್ತು ಬದುಕುತ್ತಿದೆಯೋ, ಆ ಸಂಪತ್ತಿನ ಪ್ರಾಪ್ತಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಾಗುತ್ತದೆ. ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಯಶಸ್ಸನ್ನು ಸಂಪಾದಿಸಲು ಸಾಧ್ಯ. ಮನುಷ್ಯನ ವ್ಯಕ್ತಿತ್ವ ಎತ್ತರಕ್ಕೆ ಏರಬೇಕಾದರೆ ಆದರ್ಶ ಗುಣಗಳು ಅತ್ಯಂತ ಮುಖ್ಯ. ಸದ್ಗುಣ ಮತ್ತು ಸಚ್ಚಾರಿತ್ರ್ಯದಿಂದ ಮಾತ್ರ ಮಾನವನ ಬದುಕು ಸಮೃದ್ಧಗೊಳ್ಳುತ್ತದೆ” ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ನಗರದ ಹಿರೇಕಲ್ಮಠದಲ್ಲಿ ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರ 91ನೇ ಜನ್ಮ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಜನ ಜಾಗೃತಿ ಸಮಾರಂಭ’ದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗುಣವಂತರ ಜೊತೆ ಭಗವಂತನಿರುತ್ತಾನೆ: ರಂಭಾಪುರಿ ಶ್ರೀಗಳು

ಆಶೀರ್ವಚನ ನೀಡಿದ ಶ್ರೀಗಳು, “ಹಣದ ಜೊತೆಗೆ ಜನ ಇರಬಹುದು, ಆದರೆ ಒಳ್ಳೆಯ ಗುಣಗಳ ಜೊತೆಗೆ ಭಗವಂತ ಸದಾ ಇರುತ್ತಾನೆ. ಜೀವನದಲ್ಲಿ ಏನೇ ಮರೆತರೂ ನಾವು ನಡೆದು ಬಂದ ದಾರಿಯನ್ನು ಎಂದಿಗೂ ಮರೆಯಬಾರದು. ಸೂರ್ಯನ ಕಿರಣಗಳು ಕೊಳಕು ಇರುವ ಜಾಗಕ್ಕೆ ಹೋದರೂ ಅವು ಕೊಳಕಾಗುವುದಿಲ್ಲ. ಅದೇ ರೀತಿ ಮನುಷ್ಯ ಸಮಾಜದಲ್ಲಿ ಯಾರ ಜೊತೆಗಿದ್ದರೂ ತನ್ನತನವನ್ನು ಕಾಯ್ದುಕೊಳ್ಳಬೇಕೇ ಹೊರತು ತಾನು ಕೊಳಕಾಗಬಾರದು.”

“ಲಿಂಗೈಕ್ಯ ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು ನುಡಿ ಮತ್ತು ನಡೆಯನ್ನು ಒಂದಾಗಿಸಿ ಸಮಾಜಕ್ಕೆ ಬೆಳಕು ತೋರಿದವರು. ಅವರು ಇಂದು ಬದುಕಿದ್ದರೆ 91ನೇ ಜನ್ಮ ಜಯಂತ್ಯುತ್ಸವವು ಅವರ ಸಮ್ಮುಖದಲ್ಲೇ ನಡೆಯುತ್ತಿತ್ತು. ಇಂದಿನ ಡಾ. ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಈ 91ನೇ ಜನ್ಮ ದಿನೋತ್ಸವದ ನೆನಪಿಗಾಗಿ ಹಲವಾರು ಶಾಲಾ ಕಟ್ಟಡ, ಆರೋಗ್ಯ ಘಟಕ, ವಸತಿ ನಿಲಯ ಮತ್ತು ಗೋ ಸಂವರ್ಧನಾ ಕೇಂದ್ರದ ಕಟ್ಟಡಗಳಿಗೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಕೈಗೊಂಡ ಕಾರ್ಯಗಳು ತೀವ್ರವಾಗಿ ನಡೆದು ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆಗೊಳ್ಳಲಿ. ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಯಾರೂ ರಾಜಕೀಯ ಬೆರೆಸಬಾರದು” ಎಂದು ಕಿವಿಮಾತು ಹೇಳಿದರು.

ಉಜ್ಜಯಿನಿ ಮತ್ತು ಕಾಶಿ ಶ್ರೀಗಳ ಆಶೀರ್ವಚನ:

• ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು: ಸಮಾರಂಭದ ಸಾನಿಧ್ಯ ವಹಿಸಿದ್ದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ, “ಹುಟ್ಟು ಎಷ್ಟು ಸಹಜವೋ ಅಷ್ಟೇ ಮರಣವೂ ನಿಶ್ಚಿತ. ಆದರೆ ಹುಟ್ಟು-ಸಾವುಗಳ ಮಧ್ಯದ ಬದುಕನ್ನು ಸಾರ್ಥಕಪಡಿಸಿಕೊಂಡವರು ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು” ಎಂದರು.

• ಶ್ರೀ ಮದ್ಕಾಶಿ ಡಾ. ಚಂದ್ರಶೇಖರ ಜಗದ್ಗುರುಗಳು: ಮತ್ತೊಂದು ಸಾನಿಧ್ಯ ವಹಿಸಿದ್ದ ಶ್ರೀ ಮದ್ಕಾಶಿ ಡಾ. ಚಂದ್ರಶೇಖರ ಜಗದ್ಗುರುಗಳು ಮಾತನಾಡಿ, “ಸಕಲ ಜೀವಾತ್ಮರಿಗೂ ಒಳಿತನ್ನೇ ಬಯಸುವ ವೀರಶೈವ ಸಿದ್ಧಾಂತವನ್ನು ಭೂಮಂಡಲದಲ್ಲಿ ಸ್ಥಾಪಿಸಿದ ಕೀರ್ತಿ ಪರಮ ಪಂಚಾಚಾರ್ಯರಿಗೆ ಸಲ್ಲುತ್ತದೆ. ಲಿಂಗೈಕ್ಯ ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ಸಿದ್ಧಾಂತವನ್ನು ಜನಮಾನಸಕ್ಕೆ ಮುಟ್ಟಿಸಿದ ಧೀಮಂತರು” ಎಂದು ಶ್ಲಾಘಿಸಿದರು.

• ಶ್ರೀ ಕಾಶಿ ಪೀಠದ ನೂತನ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು: ತಮ್ಮ ಆಶೀರ್ವಚನದಲ್ಲಿ, “ಆಧುನಿಕ ಯುಗದಲ್ಲಿ ಮನುಷ್ಯ ಯಂತ್ರದಂತೆ ದುಡಿದರೂ ಅವನಿಗೆ ಸುಖ-ಶಾಂತಿ ಇಲ್ಲದಂತಾಗಿದೆ. ಧರ್ಮದ ಪರಿಪಾಲನೆ ಮತ್ತು ಸದ್ವರ್ತನೆಯಿಂದ ಮಾತ್ರ ನೆಮ್ಮದಿ ಪಡೆಯಲು ಸಾಧ್ಯ. ಶಾಂತಿಪ್ರಿಯರಾದ ಲಿಂಗೈಕ್ಯ ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯರ ಸರಳ ವ್ಯಕ್ತಿತ್ವ ಹಾಗೂ ಉದಾತ್ತ ಚಿಂತನೆಗಳು ಜನಮನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ” ಎಂದರು.

ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, “ಜಗತ್ತಿನ ಕತ್ತಲೆ ಕಳೆಯಲು ಸೂರ್ಯ ಬೇಕು, ಮನದ ಕತ್ತಲೆ ಕಳೆಯಲು ಗುರು ಬೇಕು. ಪರಶಿವನ ಸಾಕಾರ ರೂಪವೇ ಶ್ರೀ ಗುರು. ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಶುಭಾಗಮನದಿಂದ ಈ ಭಾಗದ ಭಕ್ತರು ಧನ್ಯರಾಗಿದ್ದಾರೆ. ಲಿಂಗೈಕ್ಯ ಶ್ರೀ ಒಡೆಯರ್ ಚಂದ್ರಶೇಖರ ಶ್ರೀಗಳವರ ಜೀವನದ ಸಿದ್ಧಿ-ಸಾಧನೆಗಳು ಒಂದಲ್ಲ, ಹಲವಾರು. ಅವರ ಕಾರುಣ್ಯ ಎಲ್ಲರ ಮೇಲಿರಲಿ” ಎಂದು ಪ್ರಾರ್ಥಿಸಿದರು.

  • ಶಾಸಕ ಡಿ.ಜಿ. ಶಾಂತನಗೌಡ್ರು: ‘ಶ್ರೀ ಚನ್ನಪ್ಪ ಸ್ವಾಮಿ ವೃತ್ತ’ವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, “ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯ ಸಂಪತ್ತು. ಚಿನ್ನವಿಲ್ಲದೆಯೂ ಬದುಕಬಹುದು, ಆದರೆ ಅನ್ನವಿಲ್ಲದೆ ಬದುಕಲು ಸಾಧ್ಯವಿಲ್ಲ. ಲಿಂಗೈಕ್ಯ ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು ಭೌತಿಕ ಬದುಕಿಗೆ ಆಧ್ಯಾತ್ಮದ ಅರಿವು ನೀಡಿ, ಜನರನ್ನು ಸನ್ಮಾರ್ಗಕ್ಕೆ ಕರೆತಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ” ಎಂದರು.
  • ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ: ‘ಶ್ರೀ ಒಡೆಯರ್ ಚಂದ್ರಶೇಖರ್ ವೃತ್ತ’ವನ್ನು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಅತ್ಯಂತ ವೈಭವದಿಂದ ಉದ್ಘಾಟಿಸಿದರು.
  • ದಾವಣಗೆರೆ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು : ನೂತನ ಶಾಲಾ ಕಟ್ಟಡಗಳ ವಿದ್ಯಾಲಯಕ್ಕೆ ಭೂಮಿ ಪೂಜೆ ನೆರವೇರಿಸಿ, ಶಿಲಾಫಲಕವನ್ನು ಅನಾವರಣಗೊಳಿಸಿದರು.

ಈ ಅಪೂರ್ವ ಸಮಾರಂಭದಲ್ಲಿ ನಾಡಿನ ವಿವಿಧ ಭಾಗಗಳ 25ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು. ರಾಜಕೀಯ ಧುರೀಣರು ಹಾಗೂ ದಾನಿಗಳಿಗೆ ಶ್ರೀ ಜಗದ್ಗುರುಗಳ ಸಮ್ಮುಖದಲ್ಲಿ ‘ಗುರುರಕ್ಷೆ’ ನೀಡಿ ಶುಭ ಹಾರೈಸಲಾಯಿತು. ಸಮಾರಂಭದ ಮುಕ್ತಾಯದ ನಂತರ ಸಾರ್ವಜನಿಕರಿಗೆ ಬೃಹತ್ ಅನ್ನ ದಾಸೋಹ ನಡೆಯಿತು.

K.M.Sathish Gowda

Join WhatsApp

Join Now

Facebook

Join Now

Leave a Comment